1980 ರ ದಶಕದಿಂದಲೂ ವಿವಿಧ ವಲಯಗಳ ಕಂಪನಿಗಳು ಐ ಪಿ ಒ ಮೂಲಕ ಪೇಟೆ ಪ್ರವೇಶಿಸಿ, ಆರಂಭಿಕ ದಿನಗಳಲ್ಲಿ ಉತ್ತಮ ಏರಿಕೆಯಿಂದ ವಿಜೃಂಭಿಸಿ ನಂತರದ ವರ್ಷಗಳಲ್ಲಿ ಕಣ್ಮರೆಯಾಗಿವೆ. ಅನೇಕ ಲೀಸಿಂಗ್ ವಲಯದ ಕಂಪನಿಗಳು ಸಹ ಕಣ್ಮರೆಯಾಗಿವೆ.
ನಾಗಾರ್ಜುನ ಫೈನಾನ್ಸ್ ಲಿ, ಇಂಡಿಯನ್ ಸೀಮ್ ಲೆಸ್ ಫೈನಾನ್ಶಿಯಲ್ ಸರ್ವಿಸಸ್ ಲಿ, ಆಪಲ್ ಕ್ರೆಡಿಟ್ ಕಾರ್ಪೊರೇಷನ್ ಲಿ, ರಾಕ್ ಲ್ಯಾಂಡ್ ಲೀಸಿಂಗ್, ಜಾಲಿ ಮರ್ಚಂಡೈಸಿಂಗ್, ವತ್ಸ ಕಾರ್ಪೊರೇಷನ್, ಫಸ್ಟ್ ಫೈನಾನ್ಶಿಯಲ್ ಸರ್ವಿಸಸ್, ಕರಣ್ ಫೈನಾನ್ಸ್, ಮೌಲಿಕ್ ಫೈನಾನ್ಸ್ & ರೆಸಾರ್ಟ್ಸ್, ಸ್ಯಾಮ್ ಲೀಸ್ ಕೊ, ಅಪೆಕ್ಸ್ ಕ್ಯಾಪಿಟಲ್ ಮಾರ್ಕೆಟ್ಸ್ ಲಿ, ತಿಲಕ್ ಫೈನಾನ್ಸ್, ಇನ್ ಕ್ಯಾಪ್ ಫೈನಾನ್ಶಿಯಲ್ ಸರ್ವಿಸಸ್, ರಿಯಲ್ ಟೈಮ್ ಫಿನ್ಲೀಸ್, ಎಂ ಎಸ್ ಸೆಕ್ಯುರಿಟೀಸ್, ಪ್ರಮಾದ ಫಿನ್ ಇನ್ವೆಸ್ಟ್, ಫ್ರಂಟ್ ಲೈನ್ ಫೈನಾನ್ಶಿಯಲ್ ಸರ್ವಿಸಸ್, ಕುಬೇರ್ ಆಟೋ ಫೈನಾನ್ಸ್ & ಲೀಸಿಂಗ್, ಹೀಗೆ ಅನೇಕ ಲೀಸಿಂಗ್, ಫೈನಾನ್ಸ್ ವಲಯದ ಕಂಪನಿಗಳು ಒಂದು ಸಮಯದಲ್ಲಿ ವಿಜೃಂಭಿಸಿ, ಚುರುಕಾದ ಚಟುವಟಿಕೆಯಲ್ಲಿದ್ದು, ಸಣ್ಣ ಹೂಡಿಕೆದಾರರನ್ನು ಸೆಳೆದು, ಅವರಿಗರಿವಿಲ್ಲದೆಯೇ ಕಣ್ಮರೆಯಾಗಿ ಅಪಾರವಾದ ಹಾನಿಗೊಳಪಡಿಸಿದವು. ಅಮಾನತುಗೊಂಡಿರುವ ಕಂಪನಿಗಳ ಈ ಪಟ್ಟಿಯು ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಕಂಪನಿಗಳನ್ನು ಹೊಂದಿದೆ.
ಎಫ್ ಸಿ ಸಿ ಬಿ ಪ್ರಮಾದ :ಹತ್ತು ವರ್ಷಗಳ ಹಿಂದೆ ಪೇಟೆಯು ಚುರುಕಾದ ವಾತಾವರಣದಲ್ಲಿದ್ದು ವಿಜೃಂಭಿಸುತ್ತಿದ್ದಾಗ ಅನೇಕ ಕಂಪನಿಗಳು ಫಾರಿನ್ ಕರೆನ್ಸಿ ಕನ್ವರ್ಟಬಲ್ ಬಾಂಡ್ಸ್ ಗಳನ್ನು, ಕೆಲವು ವರ್ಷಗಳ ನಂತರ ಪೂರ್ವ ನಿಗದಿತ ಬೆಲೆಯಲ್ಲಿ ಷೇರಾಗಿ ಪರಿವರ್ತಿಸುವ ಒಪ್ಪಂದದೊಂದಿಗೆ ವಿತರಿಸಿದವು. ಆ ಬೆಲೆಗಳು ಯಾವ ರೀತಿ ಇದ್ದವೆಂದರೆ ಅವು ಕಾರ್ಪೊರೇಟ್ ಗಳ ದುರಾಸೆಯ ಮಟ್ಟಕ್ಕೆ ಹಿಡಿದ ಕನ್ನಡಿಯಾಗಿತ್ತು.
ಆ ಸಮಯದಲ್ಲಿ ತುಲಿಪ್ ಟೆಲಿ ಕಂಪನಿಯು ಕನ್ವರ್ಷನ್ ದರ ಪ್ರತಿ ಷೇರಿಗೆ ರೂ.2,274 ಎಂದು ನಿಗದಿಪಡಿಸಿತು. ಈ ಕಂಪನಿ 2005 ರಲ್ಲಿ ಪ್ರತಿ ಷೇರಿಗೆ ರೂ.120 ರಂತೆ ಐ ಪಿ ಒ ಮೂಲಕ ವಿತರಣೆ ಮಾಡಿತ್ತು. 2012 ರಲ್ಲಿ ಎಫ್ ಸಿ ಸಿ ಬಿ ಗಳ ಬಾಕಿ 140 ದಶ ಲಕ್ಷ ಅಮೇರಿಕನ್ ಡಾಲರ್ ಮೌಲ್ಯ ಮೊತ್ತವನ್ನು ಹಿಂದಿರುಗಿಸಲು ವಿಫಲವಾಯಿತು. 2014 ರ ವೇಳೆಗೆ ಸುಮಾರು ರೂ.85 ಕೋಟಿ ಹಾನಿಗೊಳಗಾಗಿ, ನಂತರ ತನ್ನ ಅಸ್ಥಿತ್ವವನ್ನೇ ಉಳಿಸಿಕೊಳ್ಳಲು ವಿಫಲವಾಗಿ ಪೇಟೆಯಿಂದ ನಿರ್ಗಮಿಸಿತು.
ರೋಲ್ಟಾ ಇಂಡಿಯಾ ಸಹ 2012 ರ ಸಮಯದಲ್ಲಿ ಎಫ್ ಸಿ ಸಿ ಬಿ ಮೂಲಕ ಪ್ರತಿ ಷೇರಿನ ಪರಿವರ್ತನೆಯ ದರವನ್ನು ರೂ.368.50 ಯಂತೆ ನಿಗದಿಪಡಿಸಿತಾದರೂ, ಷೇರಿನ ದರದಲ್ಲಿ ಉಂಟಾದ ಭಾರಿ ಕುಸಿತದ ಕಾರಣ ಬಾಂಡ್ ಗಳ ಮೊತ್ತವನ್ನು ಹಿಂದಿರುಗಿಸಬೇಕಾಯಿತು. ಆ ಸಮಯದಲ್ಲಿ ಸುಮಾರು ರೂ.765 ಕೋಟಿ ಹಣವನ್ನು ಹಿಂದಿರುಗಿಸಲು ಯಶಸ್ವಿಯಾಯಿತು. ಆದರೆ ಈ ಆಘಾತದಿಂದ ಚೇತರಿಕೆ ಕಾಣಲು ಸಾಧ್ಯವಾಗಲಿಲ್ಲ.
ಬಜಾಜ್ ಹಿಂದೂಸ್ಥಾನ್ ಶುಗರ್ಸ್ ಲಿ ಕಂಪನಿ ಫೆಬ್ರವರಿ 2011 ತಿಂಗಳಲ್ಲಿ ಪ್ರತಿ ಷೇರಿಗೆ ರೂ.465 ರಂತೆ ಪರಿವರ್ತನಾ ಬೆಲೆಯನ್ನಾಗಿ ನಿಗಧಿಪಡಿಸಿತ್ತು.ನಂತರ ಪೇಟೆಯಲ್ಲಿ ಷೇರಿನ ಬೆಲೆ ಕುಸಿತಕ್ಕೊಳಗಾಗಿ ಷೇರಿನ 2014 ರಲ್ಲಿ ಬೆಲೆ ರೂ.12 ರವರೆಗೂ ಕುಸಿಯಿತು. ಆದರೂ ಕಂಪನಿಯು ಪ್ರೀಮಿಯಂನೊಂದಿಗೆ ಹಿಂದಿರುಗಿಸಿತು. ಆದರೆ ಷೇರಿನ ಬೆಲೆಯ ಮೇಲೆ ಹೆಚ್ಚಿನ ಒತ್ತಡ ಬಿದ್ದು 2018, 2019 ರಲ್ಲಿ ರೂ.5 ರವರೆಗೂ ಕುಸಿಯಿತು, 2020 ರಲ್ಲಿ ರೂ.2.35 ರವರೆಗೂ ಕುಸಿದು ಈ ವರ್ಷ ಚೇತರಿಸಿಕೊಂಡು ಜುಲೈನಲ್ಲಿ ರೂ.24 ರವರೆಗೂ ಜಿಗಿದು ಸಧ್ಯ ರೂ.14 ರ ಸಮೀಪವಿದೆ. ಪೇಟೆಯಲ್ಲಿ ರೂ.300 / 400 ರಲ್ಲಿ ಖರೀದಿಸಿದವರ ಪರಿಸ್ಥಿತಿ ಕಲ್ಪನಾತೀತವಾಗಿದೆ.
ರಿಲಯನ್ಸ್ ಕಮ್ಯುನಿಕೇಶನ್ ಕಂಪನಿಯು ತಾನು ವಿತರಿಸಿದ ಎಫ್ ಸಿ ಸಿ ಬಿ ಗಳನ್ನು 2012 ರ ಮಾರ್ಚ್ ನಲ್ಲಿ ಪರಿವರ್ತನಾ ಬೆಲೆಯನ್ನು ರೂ.661 ರಂತೆ ನಿಗದಿಪಡಿಸಿತ್ತು. 2008 ರಲ್ಲಿ ರೂ.840 ರ ಸಮೀಪವಿದ್ದ ಷೇರಿನ ಬೆಲೆ ನಿರಂತರವಾದ ಕುಸಿತ ಕಂಡಿತು. 2019 ರಲ್ಲಿ ಷೇರಿನ ಬೆಲೆ 55 ಪೈಸೆಗಳಿಗೆ ಜಾರಿ ಈಗ ರೂ.3.15 ರ ಸಮೀಪವಿದೆ.
ಇದೇ ರೀತಿ ಈಗ ವಹಿವಾಟಿನಿಂದ ಅಮಾನತುಗೊಂಡಿರುವ ಆಮ್ ಟೆಕ್ ಆಟೋ ರೂ.210 ರಂತೆ, ಭಾರತಿ ಶಿಪ್ ಯಾರ್ಡ್ ಪ್ರತಿ ಷೇರಿಗೆ ರೂ.498 ರಂತೆ ಪರಿವರ್ತಿಸುವ ಬೆಲೆಯನ್ನು ನಿಗದಿಪಡಿಸಿದ್ದವು. ಈಗ ರೂ.45 ರ ಸಮೀಪ ವಹಿವಾಟಾಗುತ್ತಿರುವ ಅಬ್ಬಾನ್ ಆಫ್ ಷೋರ್ ಪ್ರತಿ ಷೇರಿಗೆ ರೂ.2,789 ರಂತೆ ಪರಿವರ್ತನೆಯ ಬೆಲೆ ನಿಗದಿಪಡಿಸಿ ಅನಿವಾರ್ಯವಾಗಿ 2011 ರಲ್ಲಿ ಹಿಂದಿರುಗಿಸಿತಾದರೂ, ಮತ್ತೆ 2013 ರಲ್ಲಿ ರೂ.2,200 ಕೋಟಿ ಮೌಲ್ಯದ ಎಫ್ ಸಿ ಸಿ ಬಿ ವಿತರಿಸಲು ಪ್ರಯತ್ನಿಸಿತು.
ಈ ಎಫ್ ಸಿ ಸಿ ಬಿ ಗೊಂದಲದಲ್ಲಿ ಹೆಚ್ಚು ತೊಂದರೆಗೊಳಗಾದವೆಂದರೆ ಮಧ್ಯಮ ಮತ್ತು ಕೆಳಮಧ್ಯಮ ವಲಯದ ಕಂಪನಿಗಳೆಂಬುದು ಗಮನಾರ್ಹ. ಹಾಗೆಂದು ಎಲ್ಲಾ ಎಫ್ ಸಿ ಸಿ ಬಿ ವಿತರಿಸಿದ ಎಲ್ಲಾ ಕಂಪನಿಗಳೂ ವಿಫಲವಾಗಿವೆ ಎಂದಲ್ಲ. ಯಶಸ್ಸು ಕಂಡ ಕಂಪನಿಗಳು ಇವೆ. ಒಟ್ಟಿನಲ್ಲಿ ಅಯಾ ಸಂದರ್ಭದಲ್ಲಿರುವ ಪರಿಸ್ಥಿತಿಯನ್ನಾಧರಿಸಿ ವಿಶ್ಲೇಷಿಸಲಾಗುವುದು. ಹೂಡಿಕೆ ನಿರ್ಧಾರ ಮಾಡುವಾಗ ನಮ್ಮ ಸ್ವಂತ ತೀರ್ಮಾನ ಅತ್ಯವಶ್ಯಕ.
ಸಧ್ಯ ಹೆಚ್ಚಿನ ಕಂಪನಿಗಳು ಫಂಡ್ ರೈಸಿಂಗ್ ನ್ನು ವಿದೇಶಿ ವಿನಿಮಯದ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಿರುವುದು ಮುಳುವಾಗದಿರಲಿ ಎಂದು ಬಯಸೋಣ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.