BENGALURU SEP 24
ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡುವ ನಿರ್ಧಾರವನ್ನು ರಾಜ್ಯದಲ್ಲಿನ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ತಜ್ಞರ ಸಮಿತಿ ಸಭೆ ತೆಗೆದುಕೊಂಡಿದೆ.
ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ, ಕಂದಾಯ ಸಚಿವ ಆರ್ ಅಶೋಕ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪಾಸಿಟಿವಿಟಿ ದರ ಶೇಕಡ 1ಕ್ಕಿಂತ ಹೆಚ್ಚಾದರೆ ಶೇ. 50 ರಷ್ಟು ಭರ್ತಿಗೆ ಹಾಗೂ ಶೇ. 2 ಕ್ಕಿಂತ ಹೆಚ್ಚಾದರೆ ಚಿತ್ರಮಂದಿರ ಬಂದ್ ಮಾಡಲಾಗುವುದು. ರಾಜ್ಯದಲ್ಲಿ ಪ್ರಸ್ತುತ ಸರಾಸರಿ ವಾಸಿಟಿವಿಟಿ ದರ 0.66 % ಇದೆ.
ಆದರೆ ಸಿನಿಮಾ ನೋಡಲು ಹೋಗುವವರು ಕನಿಷ್ಠ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಪ್ರವೇಶ ಅವಕಾಶ ಇರುವುದಿಲ್ಲ.
ರಾತ್ರಿ ಕರ್ಪ್ಯೂವನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ರ ವರೆಗೆ ನಿಗದಿ ಪಡಿಸಲಾಗುವುದು. 6ರಿಂದ 12ನೇ ತರಗತಿ ವರೆಗೆ ಶೇ 100 ರಷ್ಟು ಹಾಜರಾತಿಗೆ ಅವಕಾಶ ಕಲ್ಪಿಸಲಾಗುವುದು. ವಾರದಲ್ಲಿ ಐದು ದಿನ ಶಾಲಾ ಕಾಲೇಜುಗಳನ್ನು ನಡೆಸಲು ನಿರ್ಧರಿಸಲಾಯಿತು. ದಸರಾ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಸಭೆ ನಿರ್ಧರಿಸಿತು.
ಯಾದಗಿರಿ, ರಾಯಚೂರು, ಕಲಬುರಗಿ, ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲು, ಜನರಲ್ಲಿ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಲಾಯಿತು.