BENGALURU SEP 24
ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದರೂ ಅದಕ್ಕೆ ಸ್ಪಂದಿಸದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಟಾಂಗಾ ಜಾಥಾ ನಡೆಸುವ ಮೂಲಕ ಶುಕ್ರವಾರ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ಹಿಂದೆ ಎತ್ತಿನ ಗಾಡಿ, ಸೈಕಲ್ ಜಾಥಾ ನಡೆಸಿದ್ದ ಕಾಂಗ್ರೆಸ್ ಇಂದು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾ ಜಾಥಾ ನಡೆಸಿತು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ‘ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿ ಸರ್ಕಾರಗಳು ಜನರನ್ನು ಪಿಕ್ ಪಾಕೆಟ್ ಮಾಡುತ್ತಿವೆ. ಇದು ದಪ್ಪ ಚರ್ಮದ ಸರ್ಕಾರ. ಅವರಿಗೆ ಜನರ ನೋವು, ಭಾವನೆ ಅರ್ಥವಾಗುತ್ತಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲ. ಹೀಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಹೋರಾಟವಲ್ಲ. ಇದು ಜನರ ಹೋರಾಟ, ಎಲ್ಲ ವರ್ಗದ ಜನರ ನೋವಿನ ಪ್ರತಿಧ್ವನಿ. ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.
ಅಕ್ಟೋಬರ್ ತಿಂಗಳಲ್ಲಿ ಪ್ರತಿ ಪಂಚಾಯ್ತಿ ಹಾಗೂ ವಾರ್ಡ್ ನಲ್ಲೂ ನಮ್ಮ ಕಾರ್ಯಕರ್ತರು ಬೆಲೆ ಏರಿಕೆ ವಿಚಾರದಲ್ಲಿ ಜನರ ಧ್ವನಿಯಾಗಲು ಕಾರ್ಯಕ್ರಮ ರೂಪಿಸಲಾಗಿದೆ. ಮಾನ ಮರ್ಯಾದೆ ಇಲ್ಲದ ಈ ಸರ್ಕಾರ ಜನರೇ ತೆಗೆಯಬೇಕು. ರಾಜ್ಯದಲ್ಲಿ ಕೋವಿಡ್ ನಿಂದ ಲಕ್ಷಾಂತರ ಮಂದಿ ಸತ್ತಿರುವುದನ್ನು ನೋಡಿದ್ದೇವೆ. ಯಾರಿಗೂ ಈ ಸರ್ಕಾರ ಸಹಾಯ ಮಾಡಿಲ್ಲ. 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿದರೂ ಒಬ್ಬರಿಗೂ ಸಹಾಯವಾಗಿಲ್ಲ. ಚಾಲಕರು, ಸವಿತಾ ಸಮಾಜದವರು ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವವರು, ರೈತರು ಸೇರಿದಂತೆ ಯಾರಿಗೂ ಸಹಾಯ ಮಾಡಿಲ್ಲ. ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಕೆಲಸ ಸಿಗುವಂತೆ ಮಾಡಬೇಕು. ಸರಕಾರ ತೆರಿಗೆ ಹಾಕಿ ಜನರನ್ನು ಹಿಂಡುತ್ತಿದ್ದು, ಅವರ ರಕ್ಷಣೆಗೆ ಹೋರಾಟ ಮಾಡುತ್ತೇವೆ. ಜನ ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ನಾವು ಈ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.