20.6 C
Karnataka
Sunday, September 22, 2024

    ನೂತನ ಲೋಕಸಭಾ ಕಟ್ಟಡಕ್ಕೆ ಅನುಭವ ಮಂಟಪದ ಹೆಸರಿಡಲು ಸಭಾಪತಿ ಬಸವರಾಜ ಹೊರಟ್ಟಿ ಮನವಿ

    Must read

    BENGALURU SEP 25
    ನವದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮಹತ್ವಾಕಾಂಕ್ಷೆಯ ಲೋಕಸಭಾ ನೂತನ ಸಂಕೀರ್ಣದ ಕಟ್ಟಡವೊಂದಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡುವಂತೆ ವಿಧಾನ ಪರಿಷತ್ ಸಭಾಪತಿ ಮಾನ್ಯ ಬಸವರಾಜ ಹೊರಟ್ಟಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಆದ್ಯತಾಪೂರ್ವಕ ಮನವಿ ಮಾಡಿದ್ದಾರೆ.

    ಈ ಕುರಿತು ವಿಧಾನ ಸೌಧದಲ್ಲಿಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಮನವಿಯೊಂದನ್ನು ಸಲ್ಲಿಸಿರುವ ಸಭಾಪತಿ ಬಸವರಾಜ ಹೊರಟ್ಟಿ12ನೇ ಶತಮಾನದಲ್ಲಿ ಅಲ್ಲಮಪ್ರಭು ಮತ್ತು ಬಸವಾದಿ ಶರಣರು ನಿರ್ಮಿಸಿದ ಅನುಭವ ಮಂಟಪ ಇಡೀ ವಿಶ್ವದ ಪ್ರಪ್ರಥಮ ಶಾಸನ ಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಸಮಾನತೆಯನ್ನು ತೊಡೆದು ಹಾಕಿ “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬ ಸಂದೇಶ ಸಾರುವ ಸಾರ್ವಕಾಲಿಕ ವಿಚಾರಧಾರೆಯ ಅಡಿಯಲ್ಲಿ ನಿರ್ಮಾಣಗೊಂಡಿದ್ದ ಅನುಭವ ಮಂಟಪ ಪ್ರಜಾಪ್ರಭುತ್ವ ಪರಿಕಲ್ಪನೆಗೆ ಮೂಲ ಅಡಿಪಾಯ ಹಾಗೂ ಆಶಯವಾಗಿದೆ. ಶ್ರೇಷ್ಠ ಸಮಾಜ ಸುಧಾರಕ, ದಾರ್ಶನಿಕ ಹಾಗೂ ಅತ್ಯತ್ತಮ ಆಡಳಿತಗಾರರಾಗಿದ್ದ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಸಬಲೀಕರಣ, ಸೌಹಾರ್ದತೆ, ಸಹೋದರತ್ವ ಹಾಗೂ ಸಮಾನತೆ ಕುರಿತು ಇಡೀ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಒಳಗೊಳ್ಳುವಿಕೆ ಕುರಿತು ಬೋಧಿಸಿರುವ ಬಸವಣ್ಣನವರು ಲಿಂಗ ಸಮಾನತೆ ಬಗ್ಗೆ ೧೨ನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಚಳವಳಿ ಮೂಲಕ ಇಡೀ ಮನುಕುಲಕ್ಕೆ ಮಾನವೀಯತೆಯ ಸಂದೇಶ ಸಾರಿದ್ದಾರೆ. ಅಂತಹ ಮಹಾನ್ ಪುರುಷರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ನಿರ್ಮಿಸಿದ್ದ ಅನುಭವ ಮಂಟಪ ಸರ್ವ ಜಾತಿ, ಜನಾಂಗ ಸಮುದಾಯ ಹಾಗೂ ಲಿಂಗಗಳಿಗೆ ಪ್ರಾತಿನಿಧ್ಯ ನೀಡಿ ಪ್ರಜಾಸತ್ತಾತ್ಮಕ ಮೌಲ್ಯಗಳ ವರ್ಧನೆಯ ಬೀಜಾಂಕುರ ಮಾಡಿದ್ದಾರೆ. ಬಸವಾದಿ ಶರಣರು ರಚಿಸಿರುವ ಅಸಂಖ್ಯಾತ ವಚನಗಳೇ ಇಂದಿನ ಸಂವಿಧಾನದ ಅನುಚ್ಛೇದಗಳಾಗಿ ರೂಪುಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಇಡೀ ಜಗತ್ತಿಗೇ ಮಾನವೀಯತೆಯ ಹಾಗೂ ಪ್ರಜಾಸತ್ತಾತ್ಮಕ ಸಂದೇಶ ಸಾರುವ ಅನುಭವ ಮಂಟಪದ ಹೆಸರನ್ನು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ನೂತನ ಲೋಕಸಭಾ ಸಂಕೀರ್ಣದ ಕಟ್ಟಡವೊಂದಕ್ಕೆ ನಾಮಕರಣ ಮಾಡುವ ಮೂಲಕ ಕಾಯಕವೇ ಕೈಲಾಸವೆಂದು ಇಡೀ ಜಗತ್ತಿಗೆ ಕಾಯಕನಿಷ್ಠೆಯ ಗೌರವ ಹೆಚ್ಚಿಸಿರುವ ಮಹಾತ್ಮಾ ಬಸವೇಶ್ವರರ ಹೆಸರನ್ನು ಅಜರಾಮರವಾಗಿಸುವ ಮೂಲಕ ಮುಂದಿನ ಪೀಳಿಗೆಗೆ ಜ್ಞಾನದಾಸೋಹಕ್ಕೆ ದೃಢ ಸಂಕಲ್ಪ ಕೈಗೊಳ್ಳಲು ತಾವು ಮುಂದಡಿ ಇಡಬೇಕೆಂದು ಕೋರುವುದಾಗಿ ಮಾನ್ಯ ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!