ಸುಮಾವೀಣಾ
ಮನದೊಳಗೆ ಸತ್ತು ಹುಟ್ಟುತ್ತಿರ್ಪಳು- ಕರುಣಾರಸಕಕ್ಕೆಂದೇ ಮೀಸಲಾಗಿರುವ ಕಾವ್ಯ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’. ರಾಜ್ಯ -ಕೋಶಗಳನ್ನು ಕಳೆದುಕೊಂಡು ಬ್ರಾಹ್ಮಣನ ಮನೆಯ ಆಳುಗಳಾಗಿ ಚಂದ್ರಮತಿ ಮತ್ತು ಲೋಹಿತಾಶ್ವರು ಇದ್ದಾಗ ಲೋಹಿತಾಶ್ವ ಹುಲುಹುಳ್ಳಿ ತರಲೆಂದು ಹೋದವನು ಸಂಜೆಯಾದರೂ, ರಾತ್ರಿಯಾದರೂ ಮನೆಗೆ ಬರುವುದೇ ಇಲ್ಲ. ಮಗ ಇನ್ನು ಮನೆಗೆ ಬಂದಿಲ್ಲ ಎಂಬ ಅಳಲಿನಿಂದ ಬೇರೆ ಯಾರಲ್ಲಿಯೂ ತನ್ನ ಮನದ ಭಾದೆಯನ್ನು ಹೇಳಿಕೊಳ್ಳಲಾಗದೆ ತೀವ್ರ ದುಃಖವನ್ನು ಅನುಭವಿಸುತ್ತಿದ್ದಳು ಎಂಬಲ್ಲಿ ಪ್ರಸ್ತುತ ಮಾತು ಬಂದಿದೆ. ಕರುಳಕುಡಿಯ ಬರುವಿಕೆಯ ನಿರೀಕ್ಷೆ ಕುರಿತ ಕನವರಿಕೆಗಳು ತಾಯಿಯಲ್ಲಿ ಹೇಗಿರುತ್ತವೆ ಎಂಬುದನ್ನು ರಾಘವಾಂಕ ಮಾರ್ಮಿಕವಾಗಿ ಹೇಳಿದ್ದಾನೆ.
ತೀವ್ರ ಆತಂಕ ಇದ್ದಾಗ ಆಡುವ ಮಾತಿದು. ‘ಸತ್ತು ಸತ್ತು ಹುಟ್ಟಿದೆ’, ‘ಬಾಲ್ ಬಾಲ್ ಬಚೆ’ ಈ ಮಾತುಗಳನ್ನು ಇಲ್ಲಿ ತೆಗೆದುಕೊಳ್ಳಬಹುದು. ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಸೋಂಕಿಗೊಳಗಾಗಿ ತೀವ್ರತರದ ಅನಾರೋಗ್ಯ ಸಮಸ್ಯೆ ಅನುಭವಿಸಿ ಚೇತರಿಸಿಕೊಂಡವರು ಬಹುಶಃ ಈ ಮಾತನ್ನು ಹೇಳಿಯೇ ಹೇಳುತ್ತಾರೆ ಎಂದು ನನ್ನನಿಸಿಕೆ .
‘ಕುತ್ತಿಗೆಗೆ ಬಂತು’, ‘ಪ್ರಾಣಕ್ಕೆ ಬಂತು’ ಎನ್ನುತ್ತಾರಲ್ಲ ಹಾಗೆ! ಈ ಮಾತನ್ನು ಕೇವಲ ಆರೋಗ್ಯ ದೃಷ್ಟಿಯಿಂದ ಹೇಳಲಾಗದು , ಯಾವುದೇ ಸಮಸ್ಯೆಯಲ್ಲಿ ಸಿಲುಕಿ ಅದರಿಂದ ಬಿಡಿಸಿಕೊಂಡ ನಂತರ ಈ ತೆರನಾದ ಮಾತುಗಳು ಬಂದೇ ಬರುತ್ತವೆ. ಸುಖ ಬಂದಾಗ ಮನಸ್ಸು ಹಿಗ್ಗುತ್ತದೆ ಸಮಯ ಕಳೆಯುವುದು ತಿಳಿಯುವುದೇ ಇಲ್ಲ. ಆದರೆ ದುಃಖ ಬಂದಾಗ ಹೊತ್ತು ಹೋಗುವುದಿಲ್ಲ ಅನ್ನುವ ಮಾತಿದು ಅಂದರೆ ಅದು ಮನಸ್ಸಿನ ಮೇಲೆ ಗಾಢ ಪ್ರಭಾವವನ್ನು ಬೀರಿರುತ್ತದೆ. ಒಳ ಮನಸ್ಸಿನ ಮಡಿಕೆಯೊಳಗೆ ದುಃಖ ಆತಂಕಗಳು ಮನೆ ಮಾಡಿಕೊಂಡು ಮತ್ತೆ ಮತ್ತೆ ನೆನಪು ತರಿಸಿ ಕನಲಿಸುತ್ತವೆ. ಇದು ವ್ಯಕ್ತಿಗಳ ಮಾನಸಿಕ ತಾಳುವಿಕೆಯ ಕ್ಷಮತೆಯನ್ನು ಆಧರಿಸಿರುತ್ತದೆ. ಇತರರು ಧೈರ್ಯ -ಸಮಾಧಾನಗಳನ್ನು ಹೇಳಬಹುದೇ ವಿನಃ ಆ ನೋವನ್ನು ತೆಗೆದುಕೊಳ್ಳಲಾಗದು.
ಸವಿದವರಿಗೆ ಮಾತ್ರ ಬೆಲ್ಲದ ಸವಿ ತಿಳಿಯುವಂತೆ ನೋವು- ಸಂಕಟಗಳ ತೀವ್ರತೆ ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತದೆ. ನೋವನ್ನು ಅನುಭವಿಸುವ ಮಾನಸಿಕ ತೊಳಲಾಟ- ತಹತಹಗಳನ್ನು ಪರಿಣಾಮಕಾರಿಯಾಗಿ ಇತರರಿಗೆ ಅರ್ಥೈಸಲು ‘ಮನದೊಳಗೆ ಸತ್ತು ಹುಟ್ಟುತ್ತಿರ್ಪಳು’ ಎಂಬ ಮಾತನ್ನು ಕವಿ ಇಲ್ಲಿ ಸಮಯೋಚಿತವಾಗಿ ಬಳಸಿದ್ದಾನೆ ಎನ್ನಬಹುದು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.