BENGALURU SEP 27
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಸಾಲಿನಿಂದಲೇ ಅನುಷ್ಠಾನಗೊಳಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ತಯಾರಿ ಮಾಡಿಕೊಂಡಿದ್ದು, ಐಐಟಿ ಮತ್ತು ಎನ್ಐಟಿ ಗೆ ಸರಿಸಮಾನವಾದ ಎಂಜಿನಿಯರಿಂಗ್ ಕೋರ್ಸ್ ಗಳನ್ನು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಪಠ್ಯಕ್ರಮಕ್ಕೆ ಸರಿಹೊಂದುವ ಬಿ.ಎಸ್ಸಿ. ಕೋರ್ಸ್ ಗಳನ್ನು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಎನ್ಇಪಿ ಅನುಷ್ಠಾನಕ್ಕಾಗಿ ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಚರ್ಚಿಸಲು ಸೋಮವಾರ ಕರೆದಿದ್ದ ವರ್ಚುವಲ್ ಸಭೆಯಲ್ಲಿ ಸಚಿವರು ಈ ಸಲಹೆಗಳನ್ನು ನೀಡಿದ್ದು, ಅವುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ವಿಟಿಯು ಕುಲಪತಿ ಪ್ರೊ.ಕರಿಸಿದ್ಧಪ್ಪ ಅವರು ಸಭೆಗೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದ ಮೇಲೆ ಎಂಜಿನಿಯರಿಂಗ್ ಆವಿಷ್ಕಾರಗಳು ಹೆಚ್ಚಿನ ಪ್ರಭಾವ ಬೀರುತ್ತಿವೆ. ಇದನ್ನು ಗಮನಿಸಿ, ‘ಬಯಾಲಜಿ ಫಾರ್ ಎಂಜಿನಿಯರ್ಸ್’ ಎಂಬ ಕೋರ್ಸ್ ಅನ್ನು 4ನೇ ಸೆಮಿಸ್ಟರ್ ನಲ್ಲಿ ಅಳವಡಿಸುವುದು ಸೂಕ್ತ. ಸುಸ್ಥಿರ ಪರಿಸರದ ಬಗ್ಗೆ ಒತ್ತು ನೀಡುವುದಕ್ಕಾಗಿ ‘ಎನ್ವಿರಾನ್ ಮೆಂಟಲ್ ಸ್ಟಡೀಸ್’ ಅನ್ನು ಸೇರಿಸಬೇಕು. ಪಠ್ಯಕ್ರಮ ಮತ್ತು ಪ್ರಾಯೋಗಿಕ ಕಲಿಕೆ ಎರಡಕ್ಕೂ ಸಮಾನ ಪ್ರಾಮುಖ್ಯ ಕೊಡಬೇಕು. ಹಾಗೆಯೇ ಸಂಗೀತದ ಬಗ್ಗೆ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ‘ಮ್ಯೂಸಿಕ್ ಅಂಡ್ ಮೆಕ್ಯಾನಿಕಲ್ ವೈಬ್ರೇಷನ್ಸ್’ ಎಂಬ ವಿಷಯ ಸೇರಿಸಬೇಕು ಎಂದು ಸಚಿವರೊಂದಿಗಿನ ಸಭೆಯಲ್ಲಿ ನಿರ್ಧರಿಸಲಾಯಿತು.
“ವಿದ್ಯಾರ್ಥಿಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಲು ಸಾಮರ್ಥ್ಯ ಸಂವಧರ್ನಾ ಕೋರ್ಸ್ ಗಳನ್ನು ಸೇರಿಸಲಾಗುತ್ತದೆ. ಆರೋಗ್ಯ-ಸ್ವಾಸ್ಥ್ಯದ ಬಗ್ಗೆ ಜಾಗೃತಿ ಮೂಡಿಸಲು ‘ಸೈಂಟಿಫಿಕ್ ಫೌಂಡೇಷನ್ಸ್ ಆಫ್ ಹೆಲ್ತ್’ ಎಂಬ ವಿಷಯವನ್ನು, ಸಾಮಾಜಿಕ ಜವಾಬ್ದಾರಿಯ ಅರಿವು ಬೆಳೆಸಲು ‘ಸೋಷಿಯಲ್ ಕನೆಕ್ಟ್ ಅಂಡ್ ರೆಸ್ಪಾನ್ಸಿಬಿಲಿಟಿ’ ಎಂಬ ವಿಷಯವನ್ನು ಪಠ್ಯಕ್ರಮದ ಭಾಗವನ್ನಾಗಿಸಲು ಸಭೆ ತೀರ್ಮಾನಿಸಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
‘ಓಪನ್ ಎಲೆಕ್ಟ್ರೀವ್ಸ್ ನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳು ಸಿಗುವಂತೆ ಮಾಡಲಾಗುತ್ತದೆ. ಕೆಲವು ಡಿಜೈನ್ ಕೋರ್ಸ್ ಗಳಲ್ಲಿ ತೆರೆದ ಪುಸ್ತಕ ಮಾದರಿಯ ಪರೀಕ್ಷಾ ಪದ್ಧತಿ ಜಾರಿಗೊಳಿಸಲಾಗುತ್ತದೆ. ಅಧ್ಯಯನ ಮಂಡಳಿಗಳಿಗೆ (ಬಿಒಎಸ್)ಗೆ ಇರುವ ಕಟ್ಟುಪಾಡುಗಳನ್ನು ಸಡಿಲಿಸಿ ‘ಓಪನ್ ಎಲೆಕ್ಟ್ರೀವ್’ ಗಳನ್ನು ಹೆಚ್ಚು ಚಲನಶೀಲಗೊಳಿಸಲಾಗುತ್ತದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಚಿವರು ಹೇಳಿದರು.
24 ವಾರಗಳ ಇಂಟರ್ನ್ ಷಿಪ್ ಕಡ್ಡಾಯಗೊಳಿಸಲಾಗುತ್ತದೆ. ಪಠ್ಯಕ್ರಮವನ್ನು ರಾಷ್ಟ್ರೀಯ ಕೌಶಲ ರೂಪುರೇಷೆಗೆ ಅನುಗುಣವಾಗಿ ರಚಿಸಲಾಗುತ್ತದೆ ಎಂದೂ ಅವರು ತಿಳಿಸಿದರು.
ರಾಜ್ಯ ಉನ್ನತ ಶಿಕ್ಷಣ ಪರಿಷತ್ ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಷಿ, ವಿ.ಟಿ.ಯು. ದ ದೇಶಪಾಂಡೆ, ಪ್ರೊ.ಹಾಲಬಾವಿ, ಹರೀಶ್ ಮತ್ತಿತರರು ಇದ್ದರು.