26.2 C
Karnataka
Thursday, November 21, 2024

    2023 ವಿಧಾನಸಭೆ ಚುನಾವಣೆ: ಸಂಕ್ರಾಂತಿಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

    Must read

    BIDADI SEP 28

    ಜನವರಿ ತಿಂಗಳ ಸಂಕ್ರಾಂತಿ ದಿನವೇ  2023ರ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಪ್ರಕಟಿಸಿದರು.

    ಜನತಾ ಪರ್ವ 1.O ಹಾಗೂ ಮಿಷನ್ 123 ಗುರಿಯೊಂದಿಗೆ ಬಿಡದಿಯ ತಮ್ಮ ತೋಟದಲ್ಲಿ ಹಮ್ಮಿಕೊಂಡಿದ್ದ 4 ದಿನಗಳ ಕಾರ್ಯಗಾರದ 2ನೇ ದಿನದ ಕೊನೆಯಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

    ಇಂದಿನ ಕಾರ್ಯಾಗಾರದಲ್ಲಿ ಮುಂದಿನ ಅಭ್ಯರ್ಥಿಗಳಿಗೆ  30 ಅಂಶಗಳ ಅಜೆಂಡಾ ನೀಡಿದ್ದೇವೆ. ಆ ಅಜೆಂಡಾ ಪ್ರಕಾರ ಅವರು ಕೆಲಸ ಮಾಡಿ ತೋರಿಸಬೇಕು. ಅವರೆಲ್ಲರೂ 3 ತಿಂಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನ ಮಾಡಬೇಕು‌. ಯಶಸ್ವಿಯಾಗಿ ಅನುಷ್ಠಾನ ಮಾಡುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಾಗುವುದು ಎಂದರು ಅವರು.

    ನಿಗದಿತ ಅವಧಿಯೊಳಗೆ ಈ ಅಜೆಂಡಾವನ್ನು  ಗ್ರಾಮ ಪಂಚಾಯ್ತಿ ಮಟ್ಟಕ್ಕೆ ಅನುಷ್ಠಾನ ಮಾಡಲೆಬೇಕು ಹಾಗೂ ಇದನ್ನು ಪರಿವೇಕ್ಷಣೆ ಮಾಡಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಪ್ರತಿನಿತ್ಯ ಇದರ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಅವರು ಮಾಹಿತಿ ನೀಡಿದರು.

    ಇಂದು ವೇಳೆ ಈ 30 ಅಂಶಗಳ ಕಾರ್ಯಕ್ರಮ ಅನುಷ್ಠಾನ ಮಾಡದಿದ್ದರೆ ಅಂತಹ ಅಭ್ಯರ್ಥಿಗಳ ಹೆಸರುಗಳನ್ನು ತಡೆ ಹಿಡಿಯುತ್ತೇವೆ. ಅಲ್ಲಿ ಮತ್ತೊಬ್ಬರನ್ನು ಹಾಕುತ್ತೇವೆ. ಇದರಲ್ಲಿ ಯಾವುದೇ ರಾಜಿ ಪ್ರಶ್ನೆ ಇಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ನೀರಾವರಿ ಬಗ್ಗೆ ಬಿಜೆಪಿಗೆ ಬದ್ದತೆ ಇಲ್ಲ:

    ಮೇಕೆದಾಟು ಸೇರಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯ ಸರಕಾರಕ್ಕೆ ಹಾಗೂ ಬಿಜೆಪಿಗೆ ಯಾವ ಬದ್ಧತೆಯೂ ಇಲ್ಲ. ಹೊಸ ಮುಖ್ಯಮಂತ್ರಿಗೆ ಕೂಡ ಬದ್ಧತೆ ಇಲ್ಲ. ಮೇಕೆದಾಟು ಯೋಜನೆ ಕೇಂದ್ರ ಸರಕಾರದ ಮುಂದೆಯೇ ಇಲ್ಲ. ರಾಜ್ಯ ರಾಜ್ಯಗಳ ನಡುವೆ ಬಿಕ್ಕಟ್ಟಿದೆ ಎನ್ನುವ ಕಾರಣಕ್ಕೆ ಕೇಂದ್ರ ಹಿಂಜರಿಯುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

    ಹೀಗಾಗಿ. ನೀರಾವರಿ ಯೋಜನೆಗಳ ಬಗ್ಗೆ ಜೆಡಿಎಸ್ ಹೋರಾಟ ಮಾಡಲಿದೆ. ಮುಂಬರುವ ದಿನಗಳಲ್ಲಿ ದೊಡ್ಡ ಹೋರಾಟ ರೂಪಿಸುತ್ತೇವೆ. ಕೇಂದ್ರ ಸರ್ಕಾರದ ವಿರುದ್ದವೂ ಹೋರಾಟ ಮಾಡುತ್ತೇವೆ. ಭಾಷೆ, ನೆಲ, ನೀರಿನ ವಿಚಾರದಲ್ಲಿ ನಾಡಿನ ಹಿತ ಕಾಪಾಡಲು ಜೆಡಿಎಸ್ ಕೆಲಸ ಮಾಡುತ್ತದೆ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ರಾಜ್ಯದಲ್ಲಿ ಜನರು ಎರಡು ರಾಷ್ಟ್ರೀಯ ಪಕ್ಷಗಳನ್ನು  ‌ನೋಡಿದ್ದಾರೆ. ಹೀಗಾಗಿ ಅವರ ವರ್ತನೆಗಳು ಏನು ಅನ್ನುವುದು ಗೊತ್ತಿದೆ. ಹೀಗಾಗಿ ಈ ಬಾರಿ ಜನ ನಮ್ಮ ಜತೆ ಇಇರುತ್ತಾರೆ ಅನ್ನೋ ವಿಶ್ವಾಸ ಇದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು ಎಚ್ಡಿಕೆ ಅವರು.

    ಪಂಚರತ್ನ ಯೋಜನೆ ಘೋಷಣೆ:

    ಪಂಚರತ್ನ ಯೋಜನೆಗಳಾದ ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿಗೆ ವಿಶೇಷ ಯೋಜನೆ ನೀಡುತ್ತೇವೆ. ಈ ಬಗ್ಗೆ ನನ್ನ ಪರಿಕಲ್ಪನೆಯ ಕಾರ್ಯಕ್ರಮಗಳು ಜಾರಿ ಆಗುತ್ತವೆ. ಈ ಎಲ್ಲ ಸಂಗತಿಗಳನ್ನು ಜನರಿಗೆ ಮನದಟ್ಟು ಮಾಡಲಾಗುವುದು.

    ಅಲ್ಲದೆ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು, ಸಮಸ್ಯೆ ಪರಿಹಾರ ನೀಡುವ ಕೆಲಸ ಮಾದುತ್ತೇವೆ. ವಿಧವಾ ವೇತನಾ, ಹಿರಿಯ ನಾಗರೀಕರು, ಯುವಕ ಸಮಸ್ಯೆಗೆ ಬೇಕಾದ ಹಲವು ಯೋಜನೆ ಪ್ರಾರಂಭಿಸುತ್ತೇವೆ. ಮುಂದಿನ 17 ತಿಂಗಳು ಈ ಕಾರ್ಯಕ್ರಮಗಳನ್ನ ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.

    ಏನಿದು ಪಂಚರತ್ನ ಯೋಜನೆ?

    1.ವಸತಿ ಇಲ್ಲದ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ ಉಚಿತವಾಗಿ ವಸತಿ ನೀಡುವುದು ವಸತಿ ಆಸರೆ.

    2.ಉತ್ತಮ ಗುಣಮಟ್ಟದ ಹಾಗೂ ವ್ಯವಸ್ಥಿತ ಶಿಕ್ಷಣವನ್ನು ಉಚಿತವಾಗಿ ನೀಡುವ ಯೋಜನೆ ಶಿಕ್ಷಣವೇ ಆಧುನಿಕ ಶಕ್ತಿ.

    3.ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 24×7 ಕಾರ್ಯ ನಿರ್ವಹಿಸುವ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣ ಆರೋಗ್ಯ ಸಂಪತ್ತು.

    4.ಆಧುನಿಕ ತಂತ್ರಜ್ಞಾನದ ಕೃಷಿ ಪದ್ದತಿ ಅಳವಡಿಕೆ, ಸರಿಯಾದ ಬೆಳೆ ಶೇಖರಣಾ ವ್ಯವಸ್ಥೆ ಹಾಗೂ ಲಾಭದಾಯಕವಾದ ಮಾರುಕಟ್ಟೆ ವ್ಯವಸ್ಥೆ ರೈತ ಚೈತನ್ಯ.

    5.ಯುವ ಜನತೆ ಹಾಗೂ ಮಹಿಳೆಯರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ.

    ಜನತಾ ಪರ್ವ ಮಾಸ್ಟರ್ ಮೈಂಡ್ ನಾನೇ ಎಂದ ಕುಮಾರಸ್ವಾಮಿ

    ಇವತ್ತು ನಾನು ನಮ್ಮ ಪಕ್ಷಕ್ಕಾಗಿ ಶಿಕ್ಷಕ ಆಗಿದ್ದೆ. ನಮ್ಮ ಶಾಸಕರು, ಮುಂದಿನ ಚುನಾವಣೆಯ ಅಭ್ಯರ್ಥಿಗಳಿಗೆ ಪಾಠ ಮಾಡಿದ್ದು ವಿಶೇಷ ಅನುಭವ. ಅಲ್ಲದೆ, ಇಂದಿನ ಪಿಪಿಟಿ ಪ್ಲ್ಯಾನ್ ಕೂಡಾ ನನ್ನದೆ. ಕಂಟೆಂಟ್ ಕೂಡ ನನ್ನದೇ ಎಂದು ಹೆಚ್ಡಿಕೆ ಅವರು ಹೇಳಿದರು.

    ಕಾಲೇಜು ದಿನಗಳಲ್ಲಿ ನಾನು ಕೊನೆ ಬೇಂಚ್ ವಿದ್ಯಾರ್ಥಿ ಆಗಿದ್ದೆ. ಇಂದು ಅಭ್ಯರ್ಥಿಗಳಿಗೆ ಪಕ್ಷದ ವಿಚಾರಗಳು ತಿಳಿಸಲು ವಿದ್ಯಾರ್ಥಿ ಆಗೋಕ್ಕಿಂತ ಶಿಕ್ಷಕನಂತೆ ಆಗಿ ಶಾಸಕರಿಗೆ ತಿಳಿ ಹೇಳಿದ್ದೇನೆ. ಅಭ್ಯರ್ಥಿಗಳು ಶಿಸ್ತಿನ ವಿಧ್ಯಾರ್ಥಿಗಳಾಗಿ ಕುಳಿತು ಕೇಳಿದ್ದಾರೆ. ಇಡೀ ಕಾರ್ಯಾಗಾರದ ಸಂಪೂರ್ಣ ಪರಿಕಲ್ಪನೆ ನನ್ನದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

    ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!