BENGALURU SEP 29
ರಾಜ್ಯದ 4 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಸಾಲಿನಿಂದಲೇ ಕನ್ನಡದಲ್ಲಿ ಬೋಧನೆ- ಕಲಿಕೆ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕದ ವಿಚಾರವಾಗಿ ವಿಕಾಸಸೌಧದಲ್ಲಿ ಬುಧವಾರ ಸಭೆ ನಡೆಸಿದ ಮೇಲೆ ಸುದ್ದಿಗಾರರ ಜೊತೆ ಮಾತನಾಡಿದ ಸಂದರ್ಭದಲ್ಲಿ ಅವರು ಇದನ್ನು ಹೇಳಿದರು.
ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ (ಸಿವಿಲ್), ಚಿಕ್ಕಬಳ್ಳಾಪುರದ ಎಸ್.ಜೆ.ಸಿ. ತಾಂತ್ರಿಕ ಮಹಾವಿದ್ಯಾಲಯ (ಸಿವಿಲ್), ಮೈಸೂರಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ (ಮೆಕ್ಯಾನಿಕಲ್) ಮತ್ತು ವಿಜಯಪುರದ ಬಿ.ಎಲ್.ಡಿ.ಇ.ಎ. ವಿ.ಪಿ.ಡಾ.ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು (ಮೆಕ್ಯಾನಿಕಲ್)ಗಳಲ್ಲಿ ಕನ್ನಡದಲ್ಲಿ ಎಂಜಿನಿಯರಿಂಗ್ ಬೋಧನೆಗೆ ತಯಾರಿ ನಡೆದಿದೆ. ಈ ಕಾಲೇಜುಗಳಲ್ಲಿ ತಲಾ 30 ವಿದ್ಯಾರ್ಥಿಗಳನ್ನು ಈ ಕೋರ್ಸ್ ಗಳಿಗೆ ತೆಗೆದುಕೊಳ್ಳಬಹುದು ಎಂದು ಸಚಿವರು ಹೇಳಿದರು.
ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್.ಬಿ.ಎ.) ಮಾನ್ಯತೆ ಪಡೆದಿರುವ ಕಾಲೇಜುಗಳಿಗೆ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಬೋಧಿಸಲು ಅವಕಾಶ ನೀಡಲಾಗಿದೆ ಎಂದರು.