MYSURU OCT 3
ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಆನೆಗಳ ವಿಸ್ಮಯ ಲೋಕದ ಕುರಿತು ರಚಿಸಿರುವ ನಾಲ್ಕು ಕೃತಿಗಳು ವನ್ಯಜೀವಿ ಸಪ್ತಾಹದ ವಿಶೇಷವಾಗಿ ಅಕ್ಟೋಬರ್ 4 ರಂದು ಲೋಕಾರ್ಪಣೆಯಾಗಲಿವೆ.ಅಭಿಮನ್ಯು ದಿ ಗ್ರೇಟ್’,
ಕುಶಾ ಕೀ ಕಹಾನಿ-ಎ ಟ್ರೂ ಲವ್ ಸ್ಟೋರಿ’, ಆನೆ ಲೋಕದ ವಿಸ್ಮಯ’ ಹಾಗೂ ಇದರ ಇಂಗ್ಲಿಷ್ ಅನುವಾದ
ದಿ ಟಾಕಿಂಗ್ ಎಲಿಫೆಂಟ್’ ಕೃತಿಗಳು ಹೊರಬರುತ್ತಿವೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಕರ್ನಾಟಕ ಅರಣ್ಯ ಇಲಾಖೆ, ವೈಲ್ಡ್ಲೈಫ್ ಕನ್ಸರ್‌ವೇಷನ್ ಫೌಂಡೇಷನ್ ಹಾಗೂ ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನದ ಸಹಯೋಗದಲ್ಲಿ ಕಾರ್ಯಕ್ರಮ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಶ್ರೀ ವಿಜಯಕುಮಾರ್ ಗೋಗಿ (ಐಎಫ್‌ಎಸ್) ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಸಂಸದ ಪ್ರತಾಪ್ ಸಿಂಹ, ಮೈಸೂರು ಸಿಸಿಎಫ್ ಹೀರಾಲಾಲ್, ಚಾಮರಾಜನಗರ ಸಿಸಿಎಫ್ ಮನೋಜ್‌ಕುಮಾರ್, ವೈಲ್ಡ್ ಲೈಫ್ ಕನ್ಸರ್‌ವೇಷನ್ ಫೌಂಡೇಷನ್‌ನ ರಾಜ್‌ಕುಮಾರ್ ಅರಸ್ ಕೃತಿ ಬಿಡುಗಡೆ ಮಾಡಲಿದ್ದಾರೆ. ಕೃತಿ ಕುರಿತು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನೋದ್ ಕುಮಾರ್ ನಾಯ್ಕ್ ಮಾತನಾಡಲಿದ್ದಾರೆ. ಈ ಸಂದರ್ಭ ಅಭಿಮನ್ಯು ಮಾವುತ ವಸಂತ್ ಹಾಗೂ ಫೊಟೊ ಜರ್ನಲಿಸ್ಟ್ ನಾಗೇಶ್ ಪಾಣತ್ತಲೆ ಅವರನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‌ಗೌಡ ಸನ್ಮಾನಿಸಲಿದ್ದಾರೆ.
ಕೃತಿಯ ಕುರಿತು:ಅಭಿಮನ್ಯು ದಿ ಗ್ರೇಟ್’: ಅಭಿಮನ್ಯು ಅರಣ್ಯ ಇಲಾಖೆಯ ಅಷ್ಟೇ ಏಕೆ, ರಾಜ್ಯದ ಆನೆ ರಾಯಭಾರಿ. ದೇಶ ವಿದೇಶದಲ್ಲಿಯೂ ಈತ ಖ್ಯಾತ ಗಳಿಸಿದ್ದಾನೆ. ಯಾವ ಆನೆಗೂ ಇಲ್ಲದ ಗುಣ ವಿಶೇಷತೆಗಳಿವೆ. ಈತನ ಬಗ್ಗೆ ಎಲ್ಲರಿಗೂ ತಣಿಯದ ಕುತೂಹಲ. ಆನೆಯೊಂದು ಈ ಪರಿಯಲ್ಲಿ ಜನರಿಗೆ ಆಪ್ತವಾಗಬಹುದೇ ಎನ್ನುವಷ್ಟು ಅಚ್ಚರಿ ಮೂಡಿಸಿದ್ದಾನೆ.
ಈತ ಆನೆ, ಹುಲಿ ಕಾರ್ಯಾಚರಣೆ, ಅಂಬಾರಿ ಹೊರುವುದಕ್ಕಷ್ಟೇ ಸೀಮಿತವಾಗಿಲ್ಲ. ಮನುಷ್ಯರ ಭಾವನೆಯನ್ನು ಅರ್ಥ ಮಾಡಿಕೊಳ್ಳಬಲ್ಲದ್ದು. ಅದರಲ್ಲಿಯೂ ಅಭಿಮನ್ಯು ಹಾಗೂ ಮಾವುತ ವಸಂತನ ಸಂಬAಧವಿದೆಯಲ್ಲ; ಅದು ಆನೆ-ಮಾನವ ಎಂಬ ಭೇದವನ್ನೇ ಬದಿಗಿರಿಸಿದೆ. ಇವರಿಬ್ಬರು ಬಾಲ್ಯದ ಗೆಳೆಯರು. ಕಣ್ಣಿನಲ್ಲಿಯೇ ಮಾತನಾಡಿಕೊಳ್ಳುವಷ್ಟು ಆಪ್ತರು. ಇವರಿಬ್ಬರು ಮುಂದಡಿಯಿಟ್ಟರೆ ಎಂತಹ ಕಾರ್ಯಾಚರಣೆಯಲ್ಲಿಯೂ ಹುಲಿ, ಕಾಡಾನೆಗಳ ಹೆಡೆಮುರಿ ಕಟ್ಟಬಲ್ಲರು. ಇವರಿಗೆ ಇವರೇ ಸಾಟಿ. ಈ ಕುರಿತು ಕೃತಿಯಲ್ಲಿ ಸ್ವಾರಸ್ಯಕರ ವಿಷಯಗಳಿವೆ.
ಕುಶಾ ಕೀ ಕಹಾನಿ’ : ದುಬಾರೆ ಆನೆ ಶಿಬಿರದ ಸದಸ್ಯನಾಗಿದ್ದ ಕುಶಾ ಆನೆಯ ಲವ್ ಸ್ಟೋರಿಯನ್ನು ಆಧಾರಿಸಿ ರಮೇಶ್ ಉತ್ತಪ್ಪ ಕುಶಾ ಕೀ ಕಹಾನಿ- ಎ ಟ್ರೂ ಲವ್ ಸ್ಟೋರಿ’ ರಚಿಸಿದ್ದಾರೆ. ಇದಕ್ಕೆ ಪ್ರೇಮಕವಿ ಎಂದೇ ಖ್ಯಾತಿ ಗಳಿಸಿರುವ ಸಿನಿಮಾ ಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಆಕರ್ಷಕ ಮುನ್ನುಡಿ ಬರೆದಿದ್ದಾರೆ.
ಇಂತಹ ಕೃತಿಯೊಂದು ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಪ್ರಾಣಿಗಳು ಕೂಡ ಪ್ರೀತಿಸುತ್ತವೆ. ಅವುಗಳಿಗೆ ಮನಸ್ಸಿದೆ ಎನ್ನುವುದನ್ನು ಕೃತಿಯಲ್ಲಿ ಆಕರ್ಷಕವಾಗಿ ಚಿತ್ರಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿರುವ ಅವರು, ಕೃತಿಯನ್ನು ಬಹುವಾಗಿ ಮೆಚ್ಚಿದ್ದಾರೆ. ಇದೊಂದು ಥೇಟ್ ಸಿನಿಮಾ ಕಥೆಯಾಗಬಹುದು’ ಎಂದು ಹೇಳಿದ್ದಾರೆ.
ಆನೆಲೋಕದ ವಿಸ್ಮಯ’: ನಾವು ಮನುಷ್ಯರ ಸಾಧನೆಗಳನ್ನು ಬಣ್ಣಿಸುತ್ತೇವೆ. ಅವರ ಕುರಿತು ಆತ್ಮಚರಿತ್ರೆ, ಡಾಕ್ಯುಮೆಂಟರಿ, ಸಿನಿಮಾಗಳನ್ನು ಮಾಡುತ್ತೇವೆ. ಆದರೆ, ಆನೆ ಹೀರೋಗಳ ಬಗ್ಗೆ? ಈ ಕಾರಣಕ್ಕೆ ವಿಶ್ವದಲ್ಲಿ ಸಾಧನೆ ಮಾಡಿದ, ಖ್ಯಾತಿಗಳಿಸಿದ ಆನೆಗಳ ವೈಯಕ್ತಿಕ ಸ್ಟೋರಿಗಳಿವೆ. ವಿಭಿನ್ನ ವಸ್ತುವನ್ನು ಹೊಂದಿದೆ.
`ದಿ ಟಾಕಿಂಗ್ ಎಲಿಫೆಂಟ್’: ಆನೆ ಲೋಕದ ವಿಸ್ಮಯದ ಇಂಗ್ಲಿಷ್ ಅನುವಾದ. ಅತ್ಯುತ್ತಮ ಗುಣಮಟ್ಟದಲ್ಲಿ ಉತ್ತಮ ಚಿತ್ರಗಳೊಂದಿಗೆ ಕೃತಿ ಮುದ್ರಣವಾಗಿದೆ. ಖ್ಯಾತ ಬರಹಗಾರ್ತಿ ಪ್ರೇಮಲತಾ ಕೆ.ಆರ್ ಅವರು ಅನುವಾದಿಸಿದ್ದಾರೆ. ಲೇಖಕರ ಮೊ.ನಂ: 9483049005