26.6 C
Karnataka
Friday, November 22, 2024

    ಗೆದ್ದು ಸೋಲುವುದಕ್ಕಿಂತ ಸೋತು ಗೆಲ್ಲಿ

    Must read

     ಸುಮಾವೀಣಾ

    ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು-ದೇವೇಂದ್ರನ ಸಭೆಯಲ್ಲಿ ವಿಶ್ವಾಮಿತ್ರ ಮತ್ತು ವಸಿಷ್ಠರೆಂಬ  ನಡುವೆ  ನಡೆದ ಕಲಹ ಹರಿಶ್ಚಂದ್ರನ  ಪಾಲಿಗೆ ಸಂಕಟದ ಬಿರುಗಾಳಿಯಾಗುತ್ತದೆ . “ಹರಿಶ್ಚಂದ್ರ ಭೂನಾಥನೊಳಗ ಸತ್ಯವನು  ಕಾಣಿಸಲು  ಬಲ್ಲರು ಧಾತ್ರಿಯೊಳು ಮುನ್ನ ಹುಟ್ಟಿದವರಿಲ್ಲ” ಎಂಬ ವಸಿಷ್ಠರ ಮಾತು ವಿಶ್ವಾಮಿತ್ರರನ್ನು ಕೆರಳಿಸಿ ಹರಿಶ್ಚಂದ್ರನನ್ನು  ಅಸತ್ಯನನ್ನಾಗಿ ಮಾಡುವೆನೆಂಬ ಪ್ರತಿಜ್ಞೆಯನ್ನು ಮಾಡುವಷ್ಟು ವಿಕಟ ಹಠವನ್ನು ಹುಟ್ಟಿಸುತ್ತದೆ.

    ಆ ಸಂದರ್ಭದಲ್ಲಿ ಹರಿಶ್ಚಂದ್ರನ ಕಷ್ಟ ತಾಪತ್ರಯಗಳಿಗೆ ಮುನ್ನುಡಿಯೆಂಬಂತೆ ರಾಘವಾಂಕ  ತನ್ನ ‘ಹರಿಶ್ಚಂದ್ರ ಕಾವ್ಯ’ದ ‘ಮೃಗಯಾಪ್ರಸಂಗ’ದ ಆರಂಭದಲ್ಲಿಯೇ ‘ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು’ ಎಂಬ ಮಾತನ್ನು ಹೇಳುತ್ತಾನೆ.

    ಬಲಿಷ್ಠ ಕೋಣಗಳೆರಡು  ನಾ ಸೋಲೆನು, ನಾ ಬಿಡೆನು ಎಂದು ಇದ್ದೆಲ್ಲಾ ಶಕ್ತಿ ಸಂಚಯಿಸಿಕೊಂಡು  ಹೋರಾಟ ಮಾಡಿದರೆ ಅವುಗಳಿಗೆ ಪೆಟ್ಟಾಗುವುದಕ್ಕೆ ಮೊದಲು ಅವುಗಳು ಹೋರಾಡುವ ಸ್ಥಳದಲ್ಲಿದ್ದ ಗಿಡಗಳಿಗೆ ಮೊದಲು ಹಾನಿಯಾಗುತ್ತದೆ. ಇನ್ಯಾರದೋ ಸಂಕಟಕ್ಕೆ  ಇನ್ಯಾರೋ ಕಷ್ಟ  ಅನುಭವಿಸಬೇಕಾಗುತ್ತದೆ.

    ಇದೇ ಮಾತನ್ನು ವನಮಾಲಾ  ವಿಶ್ವನಾಥ್ ರವರು  Two mighty bulls lock horns; it spells death to plant”.  ಎಂಬುದಾಗಿ THE LIFE OF HARISHCHANDRA  ಪುಸ್ತಕದಲ್ಲಿ ಅನುವಾದಿಸಿದ್ದಾರೆ.

    ಈ ಸಂದರ್ಭಕ್ಕೆ ಅಪ್ಪ ಅಮ್ಮಂದಿರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯನ್ನು  ಸಂವಾದಿಯಾಗಿ ತೆಗೆದುಕೊಳ್ಳಬಹುದು.  ನಾ ಮೇಲು, ನೀ ಕೀಳು ,ನಾನೆ ಅಂತಿಮ,   ನಾ ಹೇಳಿದಂತೆಯೇ ಎಲ್ಲವೂ ನಡೆಯಬೇಕು,   ಇತ್ಯಾದಿ ನಾನು  ನನ್ನದು  ಎನ್ನುವ ಅಹಮಿಕೆಯ ಮದ ತಲೆಗೇರಿದರೆ, ದರ್ಪದ  ಪೊರೆ ಕಣ್ಣನ್ನು ಆವರಿಸಿದರೆ  ಸಂಸಾರ ಅನ್ನುವುದು ನಿತ್ಯ ನರಕವೇ ಸರಿ! 

    ತಾರ್ಕಿಕತೆ ಸಂಯಮ ಅನ್ನುವ ಬಿಡುಗಣ್ಣುಗಳು  ಇಲ್ಲದೆ ಇದ್ದರೆ     ಮಕ್ಕಳು ಮೊದಲಿಗೆ ಬಲಿಪಶುಗಳಾಗುತ್ತಾರೆ.  ಸಂಕಟ ಅನುಭವಿಸುತ್ತಾರೆ ಯಾರು ಸರಿ  ಯಾರು ತಪ್ಪು ಎಂಬ ತೀರ್ಮಾನಕ್ಕೆ ಬರಲಾರದೆ   ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.  ‘‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು’’ ಎಂಬಂತೆ ಪ್ರತಿಷ್ಠೆ , ಹೆಸರಿನ ಹಂಬಲ,  ಸೋಲಿನ ಭೀತಿಯಲ್ಲಿ ತೋರಿಸುವ ದರ್ಪ  ಪರೋಕ್ಷವಾಗಿ ನಿರಪರಾಧಿಗಳನ್ನು ಬಲಿತೆಗೆದುಕೊಳ್ಳುತ್ತದೆ.  ಎದುರಿಗಿರುವವರನ್ನು ಮಣಿಸಿಯೇ ತೀರಬೇಕೆಂಬ ಛಲದ ಬದಲು ಅವರನ್ನು ಒಪ್ಪಿಕೊಳ್ಳುವ, ಶ್ಲಾಘಿಸುವ  ಸಹೃದಯತೆ ಎಲ್ಲರಲ್ಲಿಯೂ ಇರಬೇಕು.  ಮನುಷ್ಯನ ಸಾಂಘಿಕ ಬದುಕಿನ   ಅತ್ಯಗತ್ಯ   ಲಕ್ಷಣ ಇದು.

    ನಮ್ಮ  ಗೆಲುವಿನ ಬರದಲ್ಲಿ  ಅಮಾಯಕರನ್ನು ಬಲಿಪಶುಗಳನ್ನಾಗಿಸುವುದು  ದುರುಳತನ   ಅಲ್ಲವೆ!  ತಿರಸ್ಕೃತಿ ಯಾರಲ್ಲಿಯೂ ಇರಬಾರದು.ಸೋಲು ಗೆಲುವುಗಳು ಒಂದೇ ನಾಣ್ಯದ ಎರಡು ಮುಖಗಳು . ಗೆದ್ದು ಸೋಲುವುದಕ್ಕಿಂತ ಸೋತು ಗೆಲ್ಲುವುದು  ಸೌಧರ್ಮಿಕೆ ಎಂಬ  ಅಂತಃಸತ್ವ   “ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು” ಎಂಬ ಮಾತಿನಲ್ಲಿ ಅಡಕವಾಗಿದೆ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆಇವರನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!