ಬೆಂಗಳೂರು ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿ ಈ ವಾರ ಅಭೂತಪೂರ್ವ ಕಲಾ ಪ್ರದರ್ಶನವೊಂದಕ್ಕೆ ಸಾಕ್ಷಿ ಆಯಿತು. ನಾಡಿನ ಹೆಸರಾಂತ 75 ಕಲಾವಿದರು ಒಂದೆಡೆ ಸೇರಿ ಅನಿಶ್ಚತತೆ – ವುಡ್ ಕಟ್ ಪ್ರಿಂಟ್ ಶೀರ್ಷಿಕೆ ಅಡಿ ಒಂದೇ ಅಳತೆಯಲ್ಲಿ ರಚಿಸಿದ ಬೃಹತ್ ಕಲಾ ಪ್ರದರ್ಶನ ನಾಡಿನ ಕಲಾಸಕ್ತರನ್ನು ರಂಜಿಸಿತು. ಇಡೀ ಭಾರತದಲ್ಲಿ ಇಂಥ ಪ್ರದರ್ಶನ ನಡೆದಿದ್ದು ಇದೇ ಮೊದಲು.
ಕರ್ನಾಟಕದ 75 ಕಲಾವಿದರು ಒಂದೇ ವಸ್ತು ವಿಷಯದಲ್ಲಿ , ಒಂದೇ ಬೃಹತ್ ಅಳತೆಯಲ್ಲಿ , ಒಂದೇ ಗ್ಯಾಲರಿಯಲ್ಲಿ ತಮ್ಮ ಕಲಾಕೃತಿಗಳನ್ನು ಪ್ರಸ್ತುತ ಪಡಿಸಿದ ರೀತಿ ಕಲಾ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿ ಆಯಿತು.
ಈ ಕಲಾ ಪ್ರದರ್ಶನಕ್ಕೆ ಅನಿಶ್ಚತತೆ ಎಂದು ಹೆಸರಿಟ್ಟಿರುವುದರ ಹಿನ್ನಲೆ ಅರಿತಾಗ ಈ ಕಲಾ ಪ್ರದರ್ಶನದ ಸ್ವಾರಸ್ಯ ಮತ್ತಷ್ಟು ಹೆಚ್ಚುತ್ತದೆ. ಕ್ರಿಯಾತ್ಮಕವಾಗಿ ಬದುಕು ಕಟ್ಟಿಕೊಳ್ಳುವ ಮಾನವರಾದ ನಾವು ನಿಶ್ಚಿತ ಜೀವನವನ್ನು ಬಯಸುತ್ತೇವೆ.ನಮ್ಮದೇ ಶಿಸ್ತಿನ ಜೀವನ ಕ್ರಮದ ಮೂಲಕ ಪ್ರಪಂಚದ ಕ್ರಮದ ಮೇಲೆ ಹಿಡಿತ ಸಾಧಿಸಿ ನಮಗೆ ಬೇಕಾದ ರೀತಿಯ ಜೀವನ ವಿನ್ಯಾಸ ಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಚಲನ ಶೀಲ ಪ್ರಪಂಚದ ಕ್ರಮ ಅನಿಶ್ಚತತೆಯಿಂದ ಕೂಡಿರುತ್ತದೆ.ಹೀಗಾಗಿ ಪ್ರಪಂಚದ ಆರ್ಥಿಕ,ಸಾಮಾಜಿಕ, ರಾಜಕೀಯ, ಖಾಸಗಿ ಸಂಗತಿಗಳ ಪ್ರಭಾವ ಭಿನ್ನ ವಯಸ್ಸಿನ ಕಲಾವಿದರಲ್ಲಿ ಭಿನ್ನ ಆಲೋಚನೆಯನ್ನು ಹುಟ್ಟು ಹಾಕುತ್ತದೆ. ಅದು ಇಲ್ಲಿ ಅಭಿವ್ಯಕ್ತಿಗೊಂಡಿದೆ.
75 ಕಲಾವಿದರು ಒಂದೇ ವಸ್ತು ವಿಷಯದಡಿ ಅಭಿ್ವ್ಯಕ್ತಿಸಿದ 75 ಸೃಜನಾತ್ಮಕತೆಯನ್ನು,75 ಯೋಚನಾ ಲಹರಿಯನ್ನು,75 ಅಭಿವ್ಯಕ್ತಿಯನ್ನು, 75 ಮನಸ್ಥಿತಿಯನ್ನು ಅರಿಯುವ ಅವಕಾಶವನ್ನು ಈ ಪ್ರದರ್ಶನ ಮಾಡಿಕೊಟ್ಟಿತು.ಕಲಾ ವಿದ್ಯಾರ್ಥಿಗಳಿಗಂತೂ ಈ ಪ್ರದರ್ಶನ ಒಂದು ಕಲಾ ಪಾಠವಾಯಿತು. ಇಲ್ಲಿ ಪ್ರದರ್ಶನಗೊಂಡು ಗ್ರಾಫಿಕ್ ಪ್ರಿಂಟ್ ಗಳು ನೈಜ ಮತ್ತು ಅಮೂರ್ತ ಆಕಾರಗಳನ್ನು ಬಳಸಿಕೊಂಡು ರೂಪಿಸಿರುವ ಕಲಾಕೃತಿಗಳಾಗಿವೆ. ಮುಕ್ಕಾಲು ಪ್ರಿಂಟ್ ಗಳು ಕಪ್ಪು ಬಿಳಪು ನೆಲೆಯಲ್ಲಿದ್ದರೂ ಆಕರ್ಷಣೆಗೇನೂ ಕೊರತೆ ಇರಲಿಲ್ಲ.
ಪ್ರದರ್ಶನದಲ್ಲಿ ಭಾಗವಹಿಸಿರುವ ಬಹುತೇಕ ಕಲಾವಿದರು ಹೇಳುವಂತೆ ಈ ಬೃಹತ್ ಅಳತೆಯಲ್ಲಿ ಗ್ರಾಫಿಕ್ಸ್ ಪ್ರಿಂಟ್ ಮಾಡಿರುವುದು ಇದೇ ಮೊದಲ ಬಾರಿ . ಆದರೆ ಅದರ ಅನುಭವ ವೀಕ್ಷಕರ ಅರಿವಿಗೆ ಬಾರದಂತೆ ಕಲಾವಿದರು ತಮ್ಮ ಕಲಾಕೃತಿಗಳನ್ನು ಉತ್ತಮ ನೆಲೆಯಲ್ಲಿ ಅಭಿವ್ಯಕ್ತಿಸಿದ್ದಾರೆ . ಎಲ್ಲಾ ಕಲಾಕೃತಿಗಳು ಸುಂದರವಾಗಿದ್ದರೂ ಕೆ ಆರ್ ಸತೀಶ್ , ಶಿವಶಂಕರ ಐ ಸುತರ್, ವಿ ಜಿ ವೇಣುಗೋಪಾಲ್,ಕೆ ಎಸ್. ಬಸವರಾಜ್, ಕೆ ಆರ್ ಬಸವರಾಜಚಾರ್,ಎಚ್ ಕೆ ಆರತಿ , ವಿ ಎನ್ ಕೃಷ್ಣಪ್ಪ. ಡಿ ಜಗದೀಶ, ಸುಬ್ರಯ್ ಎನ್ ಸಿದ್ಧಿ, ಕೆ ಟಿ ಶಿವಪ್ರಸಾದ್, ವಸುಧಾ ಭಟ್, ಪಿ ಅಲಕಾರಾವ್, ಚಂದ್ರಹಾಸ್ ವೈ ಜಾಲಿಹಾಳ್, ರಾಯಲ್ ಕ್ರಿಷ್ ಮತ್ತು ಜೆ. ಪವನಕುಮಾರ್ ಅವರ ಕಲಾಕೃತಿಗಳು ಗಮನ ಸೆಳೆದವು.
‘ಒಮ್ಮೆ ಬಂದವರು ಮತ್ತೆ ಮತ್ತೆ ಬಂದು ವೀಕ್ಷಿಸುತ್ತಿದ್ದಾರೆ.ಕಲಾವಿದರ ಜೊತೆ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದು ಕಲಾ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ’ ಎಂದು ಆಯೋಜಕರಲ್ಲಿ ಒಬ್ಬರಾದ ಮನು ಚಕ್ರವರ್ತಿ ಕನ್ನಡಪ್ರೆಸ್.ಕಾಮ್ ಗೆ ತಿಳಿಸಿದ್ದಾರೆ,
ಈ ಕೋವಿಡ್ ಸಂಕಟದಲ್ಲಿ ಕಲಾ ಪ್ರದರ್ಶನಗಳು ಏರ್ಪಾಡು ಆಗುವುದೇ ವಿರಳ ವಾಗಿರುವ ಸಂದರ್ಭದಲ್ಲಿ 75 ಕಲಾವಿದರನ್ನು ಒಂದೆಡೆ ಸೇರಿಸಿ ಬೃಹತ್ ಕಲಾ ಪ್ರದರ್ಶನಕ್ಕೆ ಕಾರಣೀಕರ್ತರಾದ ಚಿತ್ರಕಲಾ ಪರಿಷತ್ ಮತ್ತು ಆಯೋಜಕರಾದ ಅರ್ಪಿತಾ, ಅನಿತಾ ಮತ್ತು ಮನು ಚಕ್ರವರ್ತಿ ಅವರ ಶ್ರಮ ಸಾರ್ಥಕವಾಗಿದೆ.
ಚಂದ್ರಹಾಸ ವೈ ಜಾಲಿಹಾಳ್ ನನ್ನ ಷಡ್ಕ. ತುಂಬಾ ಸುಂದರವಾದ ಚಿತ್ರ ಪ್ರದರ್ಶನ.