23.2 C
Karnataka
Friday, November 22, 2024

    Sarva Pitru Amavasya- ಪಿತೃಗಳ ಸ್ಮರಣೆಯ ಮಹಾಲಯ ಅಮಾವಾಸ್ಯೆ

    Must read

    ಎಂ.ವಿ.ಶಂಕರಾನಂದ

    ನಮ್ಮ ಭಾರತೀಯ ಪರಂಪರೆಯಲ್ಲಿ ದೇವರು ಹಿರಿಯರ ಮೂಲಕ,
    ಪಿತೃವರ್ಗದ ಮೂಲಕ ಹರಸುತ್ತಾನೆ ಎಂಬ ಪ್ರತೀತಿ ಇದೆ.
    ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಮಹಾಲಯ ಅಮಾವಾಸ್ಯೆ-Sarva Pitru Amavasya – ಎಂದೂ, ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ
    ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ.

    ಈ ದಿನದಂದು ನಮ್ಮನ್ನು ಅಗಲಿದ ಹಿರಿಯರಿಗೆ ವಂದಿಸಿ, ಅವರಿಗೆ ಇಷ್ಟವಾದ ಪದಾರ್ಥಗಳನ್ನು ಮಾಡಿ ತಿಲ ತರ್ಪಣವನ್ನು,
    ಜಲ ತರ್ಪಣವನ್ನು ಹಾಗೂ ಪಿಂಡವನ್ನು ನೀಡಲಾಗುವುದು.

    ಇದರಿಂದ ನಮ್ಮ ಪಿತೃಗಳು ತೃಪ್ತರಾಗಿ ಮುಂದಿನ ಪೀಳಿಗೆಗೆ
    ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂಬುವುದು ನಂಬಿಕೆ.

    ಆಧುನಿಕ ಯುಗದ ಭರಾಟೆಯಲ್ಲಿ ನಮ್ಮ ಶಾಸ್ತ್ರ , ಆಚರಣೆ, ಸಂಪ್ರದಾಯ, ರೀತಿ, ನೀತಿಗಳ ಸರಿಯಾದ ಅರಿವೂ ಇಲ್ಲದೇ ಮುಖ್ಯವಾಗಿ ಯುವಜನತೆ ಸಂದಿಗ್ಧದಲ್ಲಿದ್ದಾರೆ.

    ಮಹಾಲಯ ಅಥವಾ ಪಿತೃಪಕ್ಷದಂತಹ ಆಚರಣೆ
    ಗಳನ್ನು ನಮ್ಮ ಪೂರ್ವಜರನ್ನು ಹಿರಿಯರನ್ನು ಕೃತಜ್ಞತೆಯಿಂದ
    ನಾವು ಸ್ಮರಿಸುವ ಸಮಯ ಎಂಬ ಅರಿವು ಯುವಜನತೆಗೆ ಉಂಟಾದರೆ ಆಚರಣೆ, ಸಂಪ್ರದಾಯಗಳಲ್ಲಿ ಶ್ರದ್ಧೆ , ಭಕ್ತಿ, ಆನಂದ ಹೆಚ್ಚುತ್ತದೆ.

    ಪಿತೃಗಳಿಗೆ ತಿಲವೇಕೆ ?

    ಪಿತೃಗಳ ಲೋಕ ಚಂದ್ರಲೋಕದ ಮೇಲ್ಭಾಗದಲ್ಲಿದೆ ಎಂಬ ನಂಬಿಕೆ ಇದೆ. ‘ತಿಲ'(ಎಳ್ಳು) ಇದರ ಅಭಿಮಾನಿ ಗ್ರಹ ಸೋಮ (ಚಂದ್ರ). ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲುಗಳಾಗುವಂತೆ ಪಿತೃಲೋಕದ ಸೂರ್ಯನ ಚಲನೆಯೇ ರಾತ್ರಿ ಹಗಲುಗಳಿಗೆ ಕಾರಣವಾಗಿದೆ ಎನ್ನುತ್ತಾರೆ.

    ಭೂಮಿಯಲ್ಲಿ 24 ಗಂಟೆಗೆ ಒಂದು ದಿನವಾಗುವಂತೆ, ಚಂದ್ರನಲ್ಲಿ 15 ದಿನ ಹಾಗೂ 15 ರಾತ್ರಿಯಾದರೆ 1 ದಿನವಾಗುವುದು. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುವುದು. ಬಿಸಿಲಿನ ತಾಪ ಹೆಚ್ಚಾಗಿರುತ್ತದೆ.

    ಪಿತೃಗಳಿಗೆ ಎಳ್ಳು ಬಹು ಪ್ರೀತಿಕರವಾದ ಆಹಾರ. ಹೇಗೆಂದರೆ ಎಳ್ಳು ಗರ್ಭಕೋಶದ ಶುದ್ಧಿಗೆ – ರಕ್ತ ಶುದ್ಧಿಗೆ ಅತ್ಯುತ್ತಮ ಪದಾರ್ಥ. ಸ್ತ್ರೀಯು ಪ್ರಥಮ ಬಾರಿ ರಜಸ್ವಲೆಯಾದಾಗ ಆಕೆಗೆ ಎಳ್ಳಿನ ಚಿಗಳಿ ತಿನ್ನಿಸುವುದು ಶುದ್ಧಿಗಾಗಿಯೇ. ತನ್ನ ವಂಶ ಸದ್ವಂಶವಾಗಬೇಕೆಂದು ಪಿತೃಗಳ ಹಿರಿಯಾಸೆ. ಆದ್ದರಿಂದ ತಿಲತರ್ಪಣ ಪಿತೃಗಳಿಗೆ ಅತ್ಯಂತ ಪ್ರಿಯ.

    ಮಹಾಲಯ ಅಮಾವಾಸ್ಯೆ ಕತ್ತಲೆಯ ಸಂಕೇತವಾದರೆ , ಅದರ ಮರುದಿನ ಕತ್ತಲನ್ನು ಹರಿಸುವ ನವರಾತ್ರಿ ಆರಂಭವಾಗುತ್ತದೆ. ಮನೆ, ಕರ್ಮಭೂಮಿ, ನದಿತೀರದಲ್ಲಿ ಮಾಡುವದಕ್ಕಿಂತ ಸಂಗಮಗಳಲ್ಲಿ ಮಾಡುವ ಪಿತೃಕಾರ್ಯ ಶ್ರೇಷ್ಠವಾಗಿರುತ್ತದೆ.

    ಪಿತೃಶಾಪಕ್ಕೆ ಗುರಿಯಾದರೆ ಕಷ್ಟತಪ್ಪಿದಲ್ಲ ದೈವಶಾಪವನ್ನಾದರು ತಡೆದುಕೊಳ್ಳಬಹುದು , ಆದರೆ ಪಿತೃಶಾಪಕ್ಕೆ ಗುರಿಯಾದರೆ ಕಷ್ಟತಪ್ಪಿದಲ್ಲ , ಆವರ ಒಲುಮೆ ಸದಾ ನಮ್ಮ ಮೇಲಿರಬೇಕು ಎನ್ನುವುದು ಶಾಸ್ತ್ರವಚನ.

    ನಮ್ಮ ಬಾಳನ್ನು ರೂಪಿಸುವಲ್ಲಿ ಪೂರ್ವಜರು ಮಾಡಿದ ತ್ಯಾಗ ಅಪಾರ. ಅವರಿಂದು ಸ್ಥೂಲ ಶರೀರ ರೂಪದಲ್ಲಿ ನಮ್ಮ ಕಣ್ಣ ಮುಂದೆ ಇಲ್ಲವಾದರೂ ಸೂಕ್ಷ್ಮ ಶರೀರದಿಂದ ಪರೋಕ್ಷವಾಗಿ ನಮ್ಮ ಕರ್ತವ್ಯ ಕರ್ಮಗಳನ್ನು ವೀಕ್ಷಿಸುತ್ತ ಇರುತ್ತಾರೆ.

    ಪಿತೃದೇವತೆಗಳ ಆರ್ಶೀವಾದದಿಂದಲೇ ಸಂತಾನ , ಸುಖ , ಧನಲಾಭಗಳು ಉಂಟಾಗುತ್ತದೆ. ಅವರಿಗೆ ನೀಡುವ ತರ್ಪಣದಿಂದ ಸಂತೃಪ್ತರಾಗಿ ನಮ್ಮನು ಹರಸುತ್ತಾರೆ. ಮಾತೃದೇವೋಭವ , ಪಿತೃದೇವೋಭವ ಎಂದು ಪಠಿಸದರಷ್ಟೇ ಸಾಲದು , ಆ ಭಾವವು ನಮ್ಮೊಳಗೆ ಹಾಸುಹೊಕ್ಕಾಗಬೇಕು, ಪಿತೃದೇವತೆಗಳ ಋಣ ತೀರಿಸುವ ಪರ್ವವೇ ಮಹಾಲಯ.

    ಪಿತೃಕ್ರಿಯೆಗಳಿಗೆ ಅಮಾವಾಸ್ಯೆ ಪ್ರಶಸ್ತ

    ಇದು ವೈಜ್ಞಾನಿಕತೆಯ ಆಧಾರದಲ್ಲಿ ನೆಲೆನಿಂತಿದೆ. ಪಿತೃಲೋಕವು ಚಂದ್ರನ ಮೇಲ್ಭಾಗದಲ್ಲಿದೆ. ಶುಕ್ಲ ಪಕ್ಷದಲ್ಲಿ ಚಂದ್ರನು ಸೂರ್ಯನಿಂದ ದೂರಸರಿಯುತ್ತಾನೆ. ಆಗ ಪಿತೃಗಳಿಗೆ ರಾತ್ರಿ, ಕೃಷ್ಣಪಕ್ಷದಲ್ಲಿ ಸೂರ್ಯನು ದಿನದಿಂದ ದಿನಕ್ಕೆ ಚಂದ್ರಗೋಳದ ಹತ್ತಿರ ಬಂದು ಅಮಾವಾಸ್ಯೆಯಂದು ಒಂದೇ ಕಕ್ಷೆಯಲ್ಲಿ( ಸರಳ ರೇಖೆಯಲ್ಲಿ) ಸೇರಿದಾಗ ಪಿತೃಗಳಿಗೆ ಮಧ್ಯಾಹ್ನ ಕಾಲ ,ಆಗ ಪಿತೃಗಳಿಗೆ ತೈಲ ಧಾನ್ಯವಾದ ಎಳ್ಳಿನಿಂದ ತರ್ಪಣ ಕೊಡುವುದರಿಂದ ವಸು ರುದ್ರ ಆದಿತ್ಯ ರೂಪದ ಪಿತೃಗಳು ಕೃತಕೃತ್ಯರಾಗುವ ಮಹತ್ವಪೂರ್ಣ ಪಕ್ಷವಾಗಿ ಆಚರಿಸಲಾಗುತ್ತದೆ.

    ಪ್ರತಿ ದಿನ ಪ್ರಾತಃಕಾಲದಲ್ಲಿ ದೇವತಾ ಸ್ಮರಣೆ, ಪೂಜೆ , ಮಧ್ಯಾಹ್ನ ಅತಿಥಿ ಅಭ್ಯಾಗತ ಸತ್ಕಾರ , ಅಪರಾಹ್ನದಲ್ಲಿ ಪಿತೃಗಳ ಆರಾಧನೆ ಮಾಡಬೇಕು . ಮಕ್ಕಳಿಗಾಗಿ ಮಾತಾಪಿತೃಗಳು ಮಾಡಿದ ತ್ಯಾಗ , ಕರ್ತವ್ಯಗಳ ಋಣದ ಭಾರವನ್ನು ಹಗುರ ಮಾಡಿಕೊಳ್ಳಲು ಮನುಷ್ಯ ಕಂಡು ಕೊಂಡ ಸುಲಭ ಮಾರ್ಗವೇ ಈ ಪಿತೃಕಾರ್ಯವೆಂದರೂ ತಪ್ಪಲ್ಲ .

    ಪಿತೃಕಾರ್ಯಗಳು ಪುನರ್ ಜನ್ಮಸಿದ್ದಾಂತ ವನ್ನು ಸಮರ್ಥಿಸುತ್ತದೆ. ಅಲ್ಲದೆ ಜನ್ಮಾಂತರ ಶರೀರ ನಿರ್ಮಾಣಕಾರ್ಯಕ್ಕೆ ಸಹಕಾರಿಯಾಗಿದೆ. ಅದಕ್ಕಾಗಿಯೇ ಪಿತೃಕಾರ್ಯಗಳನ್ನು ಶ್ರದ್ಧೆಯಿಂದ ನಿಯಮಾನುಸಾರವಾಗಿ ಶಾಸ್ರ್ತಬಧ್ದವಾಗಿ ಮಾಡಬೇಕು ಎನ್ನಲಾಗುತ್ತದೆ.

    ಪಿತೃ ಪಕ್ಷ ಪೂಜೆಯ ಮಹತ್ವ:

    ಪುರಾತನ ಸಂಪ್ರದಾಯದ ಪ್ರಕಾರ ಕುಟುಂಬದ ಸದಸ್ಯರು ಎಳ್ಳು ಮತ್ತು ಅಕ್ಕಿಯನ್ನು ತೆಗೆದುಕೊಂಡು ತಮ್ಮ ಪೂರ್ವಜರನ್ನು ಪ್ರಾರ್ಥಿಸುತ್ತಾ ‘ನೀವು ತೃಪ್ತರಾಗಿರಬಹುದು, ನೀವು ತೃಪ್ತರಾಗಿರಬಹುದು, ನೀವು ತೃಪ್ತರಾಗಬಹುದು’. ಇದನ್ನು ಮೂರು ಬಾರಿ ಹೇಳಿ ಮತ್ತು ನಂತರ ಅವರು ಸ್ವಲ್ಪ ಎಳ್ಳಿನ ಕಾಳುಗಳನ್ನು ನೀರಿನಲ್ಲಿ ಬಿಡುತ್ತಾರೆ.

    ಈ ಆಚರಣೆಯ ಮಹತ್ವವೆಂದರೆ ಅಗಲಿದವರಿಗೆ ಹೇಳುವುದು – ನಿಮ್ಮ ಮನಸ್ಸಿನಲ್ಲಿ ಇನ್ನೂ ಕೆಲವು ಆಸೆಗಳಿದ್ದರೆ, ಅವು ಎಳ್ಳಿನಂತೆ ಎಂದು ತಿಳಿಯಿರಿ. ಅವು ಗಮನಾರ್ಹವಲ್ಲ, ಅವುಗಳನ್ನು ಬಿಡಿ. ನಾವು ನಿಮಗಾಗಿ ಅವುಗಳನ್ನು ನೋಡಿಕೊಳ್ಳುತ್ತೇವೆ. ನೀವು ಮುಕ್ತ, ಸಂತೋಷ ಮತ್ತು ತೃಪ್ತರಾಗಿರುತ್ತೀರಿ ಎಂದು ಹೇಳುವ ಪದ್ಧತಿ ಇದೆ. ತರ್ಪಣ ಎಂದರೆ ಅಗಲಿದವರಿಗೆ ತೃಪ್ತಿಯನ್ನು ತರುವುದು. ಅವರಿಗೆ ತೃಪ್ತಿ ಮತ್ತು ಮುಂದೆ ಸಾಗುವಂತೆ ಹೇಳಲು ಇದನ್ನು ಮಾಡಲಾಗುತ್ತದೆ. ನೀರು ಪ್ರೀತಿಯ ಸಂಕೇತ. ಯಾರಿಗಾದರೂ ನೀರು ಕೊಡುವುದು ಎಂದರೆ ಪ್ರೀತಿಯನ್ನು ನೀಡುವುದು.

    ಮಹಾಲಯ ಅಮಾವಾಸ್ಯೆಯ ಮಹತ್ವ:
    ಮಹಾಲಯ ಅಮವಾಸ್ಯೆಯು ಪಿತೃ ಪಕ್ಷದ ಅಂತ್ಯ ಎನ್ನಲಾಗುತ್ತದೆ. ಇದು ಸರ್ವಪತ್ರಿ ಅಮಾವಾಸ್ಯೆ ಅಥವಾ ಸರ್ವಪಿತೃ ಮೋಕ್ಷ ಅಮವಾಸ್ಯೆ ಎಂದೂ ಕರೆಯಲ್ಪಡುವ ಪ್ರಮುಖ ದಿನವಾಗಿದೆ. ಈ ದಿನದಂದು ದುರ್ಗಾ ದೇವಿಯು ಭೂಮಿಗೆ ಇಳಿಯುತ್ತಾಳೆ ಎಂದು ನಂಬಲಾಗಿದೆ. ಪೂರ್ವಜರ ಸಾವಿನ ಸಮಯ, ದಿನಾಂಕ ಮತ್ತು ಸ್ವಭಾವವನ್ನು ಲೆಕ್ಕಿಸದೆ ಶ್ರಾದ್ಧವನ್ನು ಮಾಡುವ ಮೂಲಕ ಒಬ್ಬನು ತನ್ನ ಪೂರ್ವಜರಿಗೆ ಕರ್ತವ್ಯವನ್ನು ಪೂರೈಸುವ ದಿನ ಇದು.

    ಇದು ಒಂದು ರೀತಿಯ ಪರ್ವಾಣ ಶ್ರಾದ್ಧ. ಈ ದಿನ ಶ್ರಾದ್ಧ, ತರ್ಪಣವನ್ನು ಮಾಡಲಾಗುತ್ತದೆ. ಈ ದಿನವು ಎಲ್ಲಾ ಪೂರ್ವಜರು ಅಥವಾ ಕುಟುಂಬದ ಸದಸ್ಯರಿಗೆ ಅಪರಾ ಕರ್ಮವನ್ನು ಮಾಡಲು ಸೂಕ್ತವಾಗಿದೆ. ಒಂದು ವೇಳೆ ಪಿತೃಪಕ್ಷದ ಇತರ ಎಲ್ಲ ದಿನಗಳಲ್ಲಿ ಆಚರಣೆಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಮಹಾಲಯ ಅಮಾವಾಸ್ಯೆಯಂದು ಇದನ್ನು ಮಾಡಬಹುದು. ಕೆಲವರು ಕುಟುಂಬ ಸದಸ್ಯರು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಸ್ವಚ್ಛಗೊಳಿಸುವುದು ಮತ್ತು ಪಿತೃ ಪಕ್ಷ ಪೂಜೆ ಮಾಡುವುದು ಮತ್ತು ಆ ದಿನ ಮೃತರನ್ನು ಸಮಾಧಾನಪಡಿಸಲು ವಿವಿಧ ಆಹಾರ ಪದಾರ್ಥಗಳನ್ನು ನೀಡುವುದು ಸಾಮಾನ್ಯವಾಗಿದೆ.
    ಈ ಮಹಾಲಯ ಅಮಾವಾಸ್ಯೆ ದಿನ ನಿಮ್ಮ ಅಗಲಿದ ಹಿರಿಯರ ನೆನೆಪು ಮಾಡಿಕೊಂಡು, ಅವರಿಗೆ ತರ್ಪಣ ನೀಡಿ, ಅವರ ಆಶೀರ್ವಾದಗಳಿಗೆ ಪಾತ್ರರಾಗಿ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!