BENGALURU OCT 7
ಬಡವರಿಗೆ ರಿಯಾಯಾತಿ ದರದಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಮಲ್ಲೇಶ್ವರಂನಲ್ಲಿ ಹೈಟೆಕ್ ಡಯಾಗ್ನಾಸ್ಟಿಕ್ ಕೇಂದ್ರ ಸ್ಥಾಪಿಸಲು ಬಿಬಿಎಂಪಿ ಮತ್ತು ಮಣಿಪಾಲ್ ಆಸ್ಪತ್ರೆ ನಡುವೆ ಗುರುವಾರ ಒಡಂಬಡಿಕೆಗೆ (ಎಂಒಯು) ಸಹಿ ಹಾಕಲಾಯಿತು.
ಮಲ್ಲೇಶ್ವರಂ ಶಾಸಕರೂ ಆದ ಐಟಿ/ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಗುರುವಾರ ಒಡಂಬಡಿಕೆಗೆ (ಎಂಒಯು) ಸಹಿ ಹಾಕಲಾಯಿತು.
ಈ ಒಡಂಬಡಿಕೆ ಪ್ರಕಾರ, ಮಲ್ಲೇಶ್ವರಂನ ಚಂದ್ರಶೇಖರ್ ಆಜಾದ್ ಮೈದಾನದ ಬಳಿಯ ಬೆಂಗಳೂರು ಒನ್ ಕಟ್ಟಡದ ಮೊದಲ ಮಹಡಿಯಲ್ಲಿ 45 ದಿನಗಳಲ್ಲಿ ಸ್ಥಾಪನೆಯಾಗಿರುವ ಈ ಲ್ಯಾಬ್ 140 ವಿವಿಧ ವೈದ್ಯಕೀಯ ಪರೀಕ್ಷೆಗಳ ಸೌಲಭ್ಯ ಹೊಂದಿದ್ದು, ದರವು ಬೇರೆ ಕಡೆಗಳಿಗಿಂತ ಶೇ 30ರಷ್ಟು ಕಡಿಮೆ ಇರುತ್ತದೆ. ಇದರ ಜೊತೆಗೆ, ಬಿಪಿಎಲ್ ಕಾರ್ಡುದಾರರಿಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ಹಾಗೂ ಎಪಿಎಲ್ ಕಾರ್ಡುದಾರರಿಗೆ ಶೇ 40ರಷ್ಟು ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಅಥವಾ ಸರ್ಕಾರಿ ಆಸ್ಪತ್ರೆಯ ಅಧಿಕೃತ ಸಲಹೆ ಪಡೆದು ಬರುವವರಿಗೂ ಈ ರಿಯಾಯಿತಿ ಸಿಗಲಿದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.
ಸರ್ಕಾರಿ- ಖಾಸಗಿ ಸಹಭಾಗಿತ್ವದ (ಪಿಪಿಪಿ) ಈ ಲ್ಯಾಬ್ ನಲ್ಲಿ ಎಕ್ಸ್ ರೇ, ಅಲ್ಟ್ರಾಸೌಂಡ್, ಇಸಿಜಿ, ಪಿ.ಎಫ್.ಟಿ ಸೇರಿದಂತೆ 140 ಬೇರೆ ಬೇರೆ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಈ ಲ್ಯಾಬ್ ಗೆ ಕಟ್ಟಡದ ಜಾಗವನ್ನು ಬಿಬಿಎಂಪಿ ಒದಗಿಸಲಿದ್ದು, ಉಳಿದ ವ್ಯವಸ್ಥೆಗಳನ್ನೆಲ್ಲಾ ಮಣಿಪಾಲ್ ಹೆಲ್ತ್ ಮಾಡಿಕೊಳ್ಳಲಿದೆ. ಈ ಲ್ಯಾಬ್ ನ ಯಶಸ್ಸನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ನಗರದ ಬೇರೆ ಕಡೆಗಳಲ್ಲೂ ಇಂತಹ ಹೈಟೆಕ್ ಲ್ಯಾಬ್ ಗಳನ್ಜು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ವಿಶೇಷ ಆಯುಕ್ತ ರಣದೀಪ್, ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ, ಮಣಿಪಾಲ್ ಹೆಲ್ತ್ ನ ಪ್ರಾದೇಶಿಕ ಮುಖ್ಯ ನಿರ್ವಹಣಾಧಿಕಾರಿ ದೀಪಕ್ ವೇಣುಗೋಪಾಲನ್, ಕ್ಲಿನಿಕಲ್ ಆಪರೇಷನ್ ಮುಖ್ಯಸ್ಥರಾದ ಡಾ.ಮುರಳಿ ಅವರು ಇದ್ದರು.