ಸಾಮಾನ್ಯವಾಗಿ ಹೂಡಿಕೆದಾರರು ಒಂದು ಕಂಪನಿಯ ಷೇರಿನ ಬೆಲೆ ಗಗನಕ್ಕೆ ಚಿಮ್ಮಿದಾಗ, ಇನ್ನಷ್ಟು ಏರಿಕೆ ಕಾಣಬಹುದೆಂಬ ನಿರೀಕ್ಷೆಯಿಂದ, ಆಶಾಭಾವನೆಯಿಂದ ಪ್ರೇರಿತರಾಗಿ ಖರೀದಿಸಲು ಮುಂದಾಗುತ್ತಾರೆ. ಇಂತಹ ನಿರ್ಧಾರಗಳಲ್ಲಿ ಹೆಚ್ಚಿನವರು ನಿರಾಶೆಗೊಳಗಾಗುವ ಪರಿಸ್ಥಿತಿಯೇ ಅಧಿಕ. ಕಾರಣ ಒಂದು ಷೇರಿನ ಬೆಲೆ ಗರಿಷ್ಠಮಟ್ಟಕ್ಕೆ ಏರಿಕೆ ಕಂಡಾಗ ಅದನ್ನು ಲಾಭದ ನಗದೀಕರಣಕ್ಕೆ ಬಳಸಿಕೊಳ್ಳುವ ಮೂಲಕ ಬಂಡವಾಳವನ್ನು ಸುರಕ್ಷಿತಗೊಳಿಸಿಕೊಂಡು ಬೆಳೆಸುವ ಹವ್ಯಾಸ ಅಳವಡಿಸಿಕೊಳ್ಳಬೇಕು.
ಈಚಿನ ದಿನಗಳಲ್ಲಿ ಪೇಟೆಗಳು ಗರಿಷ್ಠದಲ್ಲಿದ್ದು, ಷೇರಿನ ಬೆಲೆಗಳು ಗಗನಕ್ಕೆ ಏರಿಕೆಯಾದ ಕಾರಣ, ಈ ಅಲ್ಪ ಬಡ್ಡಿಯುಗದಲ್ಲಿ ಅನಿರೀಕ್ಷಿತ ಮಟ್ಟದ ಲಾಭ ಗಳಿಕೆಯು ಮಾರಾಟಕ್ಕೆ ಪ್ರೇರಣೆಯಾಗಿದೆ. ಈ ರಭಸದ ಏರಿಳಿತಗಳು ಯಾವ ಮಟ್ಟದಲ್ಲಿರುತ್ತದೆ ಎಂದರೆ ಕೇವಲ ಕೆಲವೇ ತಿಂಗಳುಗಳಲ್ಲಿ ಹಣ ದುಪ್ಪಟ್ಟು, ಮೂರು ಪಟ್ಟು ಹೆಚ್ಚಾದರೂ ಮಾರಾಟಕ್ಕೆ ಮನಸಾಗದು. ಇನ್ನೂ ಹೆಚ್ಚು ಏರಿಕೆಯಾಗಬಹುದು ಎಂಬ ಅಪೇಕ್ಷೆ- ನಿರೀಕ್ಷೆ, ನಂತರ ನಿರಾಶೆ.
ಐ ಆರ್ ಸಿ ಟಿ ಸಿ ಲಿಮಿಟೆಡ್:IRCTC
ಈ ಕಂಪನಿಯ ಷೇರಿನ ಬೆಲೆಯು ಕಳೆದ ಒಂದು ತಿಂಗಳಿನಲ್ಲಿ ರೂ.2,800 ರ ಸಮೀಪದಿಂದ ರೂ.4,900 ರ ವರೆಗೂ ಏರಿಕೆ ಕಂಡಿದೆ. ಆದರೆ ಈಗಲೂ ಅನೇಕ ಹೂಡಿಕೆದಾರರಿಗೆ ಮಾರಾಟ ಮಾಡುವ ಮನಸ್ಸಿಲ್ಲ. ಕಾರಣ ಈ ಷೇರು ಈ ಮಾಸಾಂತ್ಯದ 29 ರಂದು ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲು ನಿಗದಿತ ದಿನವನ್ನಾಗಿಸಿದೆ. ಏನಿದು ಮುಖಬೆಲೆ ಸೀಳಿಕೆ ಎಂದರೆ ಅದು ಹತ್ತು ರೂಪಾಯಿ ನೋಟನ್ನು ಚಿಲ್ಲರೆ ಮಾಡಿಸಿದ ಹಾಗೆ. ಅಂದರೆ ಹರಿದಾಡಬಹುದಾದ ಚಿಲ್ಲರೆ ಹೆಚ್ಚಾಗಿದ್ದರೂ, ಎಲ್ಲಾ ನಾಣ್ಯಗಳ ಮೊತ್ತವು ರೂ.10 ರ ನೋಟಿಗೆ ಸಮನಾಗಿರುತ್ತದೆ. ಅಂತರ್ಗತವಾಗಿ ಅಡಕವಾಗಿರುವ ಮೌಲ್ಯದಲ್ಲಿ ಬದಲಾವಣೆ ಇಲ್ಲದಿದ್ದರೂ, ಪೇಟೆಯಲ್ಲಿ ವಹಿವಾಟುದಾರರು ನೋಡುವ ದೃಷ್ಠಿಕೋನ ಬೇರೆಯಾಗಿದೆ.
ಈ ರೀತಿಯ ಏರಿಕೆಗೆ ಮೂಲ ಕಾರಣ ಈ ಷೇರನ್ನು ಕಳೆದ ಮಾರ್ಚ್ ನಿಂದ ಮೂಲಾಧಾರಿತ ಪೇಟೆಯ ಪಟ್ಟಿಯಲ್ಲಿ( F & O) ಸೇರಿಸಿದ್ದಾಗಿದೆ. ಈ ವರ್ಷದ ಜನವರಿಯಲ್ಲಿ ರೂ.1,420 ರಲ್ಲಿದ್ದ ಷೇರು, ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ರೂ.1,290 ರಲ್ಲಿತ್ತು. ಜನವರಿಯಲ್ಲಿ ಈ ಕಂಪನಿಯನ್ನು ಇತರೆ ಕಂಪನಿಗಳಾದ ಆಲ್ಕೆಮ್ ಲ್ಯಾಬೋರೇಟೆರೀಸ್, ದೀಪಕ್ ಫರ್ಟಿಲೈಸರ್ಸ್, ನಿಪ್ಪಾನ್ ಲೈಫ್ ಇಂಡಿಯಾ ಅಸೆಟ್ ಮ್ಯಾನೇಜ್ ಮೆಂಟ್, ಎ ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳೊಂದಿಗೆ ಮೂಲಾಧಾರಿತ ಪೇಟೆಗೆ ಸೇರ್ಪಡೆಯಾಗುವ ಪ್ರಕಟಣೆ ಹೊರಬಂದಾಗ ಷೇರಿನ ಬೆಲೆ ರೂ.1,450 ರಲ್ಲಿದ್ದು ಕೇವಲ 9 / 10 ತಿಂಗಳುಗಳಲ್ಲಿ ಸುಮಾರು ಮೂರು ಪಟ್ಟು ಏರಿಕೆ ಕಂಡಿದೆ.
ವಿಸ್ಮಯಕಾರಿ ಸಂಗತಿ ಎಂದರೆ ಏಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಶೇ.35 ರಿಂದ 37 ರ ಪ್ರಮಾಣದಷ್ಠು ಹೊರತುಪಡಿಸಿದರೆ, ಉಳಿದೆಲ್ಲಾ ತಿಂಗಳುಗಳಲ್ಲಿ ವಿಲೇವಾರಿಯಾದ ಷೇರುಗಳ ಪ್ರಮಾಣವು ಕೇವಲ ಶೇ.22 ರಿಂದ 27 ಮಾತ್ರ. ಅಂದರೆ ಈ ಷೇರಿನಲ್ಲಿ ನಡೆಯುತ್ತಿರುವ ಸ್ಪೆಕ್ಯುಲೇಟಿವ್ ವಹಿವಾಟಿನ ಬಗ್ಗೆ ಅರಿವಾಗುತ್ತದೆ.
ಮುಖಬೆಲೆ ಸೀಳಿಕೆಯ ನಂತರದ ಪರಿಸ್ಥಿತಿ ಹೇಗಿರಬಹುದು?
ಈಗಿನ ಬೆಲೆಯಲ್ಲಿ ಮುಖಬೆಲೆ ಸೀಳಿಕೆಯ ನಂತರ ರೂ.970 ರ ಸಮೀಪದ ಬೆಲೆಯಾಗುತ್ತದೆ. 2020 ರ ಜನವರಿಯಲ್ಲಿ ಈ ಷೇರಿನ ಬೆಲೆ ರೂ.888 ರ ಕನಿಷ್ಠ ಬೆಲೆಯಲ್ಲಿತ್ತು. ಅದೇ ಮಾರ್ಚ್ ತಿಂಗಳ ಕೊರೋನಾ ಮೊದಲ ಅಲೆಯ ಸಮಯದಲ್ಲಿ ರೂ.780 ರಲ್ಲಿತ್ತು. ಈಗ ಅದು ಸುಮಾರು 6 ಪಟ್ಟು ಹೆಚ್ಚಿದೆ. ಹೂಡಿಕೆಗೆ ಇದಕ್ಕಿಂತ ಎಂತಹ ಲಾಭದ ಇಳುವರಿ ಬೇಕಾಗಿದೆ. ಟೈಡ್ ವಾಟರ್ ಹೌಸ್ ಎಂಬ ಜುಲೈನಲ್ಲಿ 1:1 ರ ಬೋನಸ್ ಮತ್ತು ರೂ.5 ರಿಂದ ರೂ.2 ಕ್ಕೆ ಸೀಳಿದ ಮೇಲೆ ರೂ.3,500 ರ ಸಮೀಪದಿಂದ ಆರಂಭವಾಗಿ ರೂ.1,765 ರವರೆಗೂ ತಲುಪಿ ಈಗ ರೂ.1,840 ರ ಸಮೀಪ ವಹಿವಾಟಾಗುತ್ತಿದೆ. ಅಂದರೆ ಮುಖಬೆಲೆ ಸೀಳಿಕೆ ನಂತರ ತಿರಸ್ಕರಿಸಲ್ಪಟ್ಟ ಪರಿಸ್ಥಿತಿಗೆ ತಲುಪಿದೆ. ಇದೇ ಪ್ರವೃತ್ತಿ ಎಲ್ಲಾ ಸಮಯದಲ್ಲೂ ಸಾಧ್ಯವೆಂದಲ್ಲವಾದರೂ, ಸ್ವಯಂ ರಕ್ಷಣೆ ಉತ್ತಮವಲ್ಲವೇ? ಕಂಪನಿಯ ಆಂತರಿಕ ಸಾಧನೆಯು ಉತ್ತಮವಾದಲ್ಲಿ ಆ ಷೇರಿನ ಬೆಲೆ ಪುಟಿದೇಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಒಂದು ಕಂಪನಿಗೆ ಅನ್ವಯಿಸುವ ಶೈಲಿಯೇ ಮತ್ತೊಂದು ಕಂಪನಿಗೆ ಅನ್ವಯಿಸುವುದು ಎಂದೇನಿಲ್ಲ. ಹಾಗಾಗಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲೇಬೇಕು ಆಗಲೇ ಹೂಡಿಕೆಯು ಯಶಸ್ಸು ಕಾಣಲು ಸಾಧ್ಯ.
ಷೇರುಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಕೇವಲ ಪೇಟೆಯಲ್ಲಿ ಹೆಚ್ಚು ವಹಿವಾಟಿನಿಂದ ಏರಿಳಿತ ಪ್ರದರ್ಶಿಸುತ್ತಿರುವ ಕಂಪನಿಗಳನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಕಂಪನಿಗಳ ಆಂತರಿಕ ಅಂಶಗಳನ್ನು, ಷೇರಿನ ಮುಖಬೆಲೆ, ಕಂಪನಿಯ ಬಂಡವಾಳ, ಡಿವಿಡೆಂಡ್ ಪ್ರಮಾಣ ಮತ್ತು ಷೇರಿನ ದರಗಳನ್ನು ಪರಿಶೀಲಿಸಿ ನಿರ್ಧರಿಸುವುದು ಸೂಕ್ತ.
ಕಲ್ಯಾಣ್ ಜುವೆಲ್ಲರ್ಸ್ ಇಂಡಿಯಾ ಲಿಮಿಟೆಡ್: KALYAN JEWELLERS
ಕಲ್ಯಾಣ್ ಜುವೆಲ್ಲರ್ಸ್ ಷೇರಿನಲ್ಲಿ ಹೂಡಿಕೆ ಮಾಡಬಹುದೇ ಎಂಬುದು ಓದುಗರ ಪ್ರಶ್ನೆಯಾಗಿದೆ. ಕಳೆದ ಮಾರ್ಚ್ ನಲ್ಲಿ ಪ್ರತಿ ಷೇರಿಗೆ ರೂ.87 ರಂತೆ ಐಪಿಒ ಮೂಲಕ ವಿತರಿಸಿದ ಈ ಕಂಪನಿ ಲಿಸ್ಟಿಂಗ್ ಆದ ನಂತರ ರೂ.56 ರ ಸಮೀಪಕ್ಕೆ ಕುಸಿದು ನಂತರ ಚೇತರಿಕೆಯಿಂದ ರೂ.89 ನ್ನು ತಲುಪಿ ಮತ್ತೆ ಇಳಿಕೆಗೊಳಪಟ್ಟು, ಕಳೆದ ಒಂದು ತಿಂಗಳಿನಿಂದ ರೂ.66 ರಿಂದ ರೂ.81 ನ್ನು ತಲುಪಿ ಸಧ್ಯ ರೂ.78 ರ ಸಮೀಪವಿದೆ. ಈ ಕಂಪನಿಯ ಷೇರಿನ ಮುಖಬೆಲೆ ರೂ.10 ಇದ್ದು, ಶೇ.60.54 ರಷ್ಠು ಪ್ರವರ್ತಕರು ಹೊಂದಿದ್ದಾರೆ. ಕಳೆದ ಜೂನ್ ತ್ರೈಮಾಸಿಕದಲ್ಲಿ ರೂ.42 ಕೋಟಿಯ ಹಾನಿ ಅನುಭವಿಸಿದರೂ, ಕಂಪನಿಯ ಸೇಲ್ಸ್ ಗಾತ್ರವು ರೂ.1,274 ಕೋಟಿಯಾಗಿದೆ. ಇದು ರೂ.1 ರ ಮುಖಬೆಲೆಯ ರಾಜೇಶ್ ಎಕ್ಸ್ ಪೋರ್ಟ್ಸ್ ನ ರೂ.1,472 ಕೋಟಿಗೆ ಸಮನಾಗಿದೆ.
ಈಗ ಸೆನ್ಸೆಕ್ಸ್ ನ ಅಂಗವಾಗಿರುವ ಟೈಟಾನ್ ಕಂಪನಿಯ ಷೇರಿನ ಬೆಲೆ ರೂ. 1 ರ ಮುಖಬೆಲೆ ಷೇರು ರೂ.2,400 ನ್ನು ತಲುಪಿರುವುದು, ವಲಯದ ಕಂಪನಿಗಳ ಮೇಲೆ ಹೂಡಿಕೆ / ವಹಿವಾಟುದಾರರ ಆಸಕ್ತಿ ಕೆರಳಿಸಿದೆ. ಸೆಪ್ಟೆಂಬರ್ ತಿಂಗಳ ತ್ರೈಮಾಸಿಕದಲ್ಲಿ ಕಂಪನಿಯು ಶೇ.60 ರಷ್ಟು ರೆವೆನ್ಯು ಗಳಿಕೆ ಹೆಚ್ಚಾಗಿದೆ ಎಂದು ಕಂಪನಿಯು ಪ್ರಕಟಿಸಿದೆ. ಅಂದ ಮೇಲೆ ರೂ.10 ರ ಮುಖಬೆಲೆಯ ಷೇರು ರೂ.80 ರ ಸಮೀಪ ಉತ್ತಮ ಹೂಡಿಕೆಯಾಗಬಲ್ಲುದಲ್ಲವೇ? ಒಂದು ಬ್ರಾಂಡೆಡ್ ಕಂಪನಿ ರೂ.10 ರ ಮುಖಬೆಲೆ ಷೇರು ರೂ.80 ರ ಸಮೀಪವಿದ್ದರೆ, ಮತ್ತೊಂದು ರೂ.1 ರ ಮುಖಬೆಲೆ ಷೇರು ರೂ.2,400 ರಲ್ಲಿ, ಇನ್ನೊಂದು ರೂ.617 ರ ಸಮೀಪವಿದೆ. ಇವುಗಳಲ್ಲಿ ಯಾವುದರಲ್ಲಿ ಹೆಚ್ಚಿನ ಲಾಭ ಗಳಿಕೆಗೆ ಅವಕಾಶ ದೊರೆಯಬಹುದು ಎಂಬುದನ್ನು ಪರಿಶೀಲಿಸಿ ನಿರ್ಧರಿಸಿರಿ.
ಯುಕೋ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್: UCO BANK and YES BANK
ಯೆಸ್ ಬ್ಯಾಂಕ್ ನ 75% ಷೇರುಗಳನ್ನು ಚಲಾವಣೆಯಿಂದ 3 ವರ್ಷದ ಕಾಲ ಸ್ಥಗಿತಗೊಳಿಸಲಾಗಿದ್ದು ಈಗಾಗಲೇ ಸುಮಾರು ಅರ್ಧ ಸಮಯ ಮುಗಿದಿದೆ. ಮುಂದೆ ಈ ಷೇರುಗಳು ಪೇಟೆಗೆ ಪ್ರವೇಶಿಸಿದಾಗ ಅಂದಿನ ಪರಿಸ್ಥಿತಿಯಾಧರಿಸಿ ಬದಲಾವಣೆ ಕಾಣಬಹುದು. ಹಾಗಾಗಿ ಹೂಡಿಕೆಗೆ ಮುನ್ನ ಈ ಅಂಶವನ್ನು ಗಮನಿಸಲೇಬೇಕು. ಯೆಸ್ ಬ್ಯಾಂಕ್ ಷೇರಿನ ಮುಖಬೆಲೆ ರೂ.2.
ಯೂಕೋ ಬ್ಯಾಂಕ್ ಇತ್ತೀಚೆಗೆ ಆರ್ ಬಿ ಐ ನ ಪಿಸಿಎ (Prompt Corrective Action) ವ್ಯಾಪ್ತಿಯಿಂದ ಹೊರಬಂದಿದ್ದು, ಕಳೆದ ಎರಡು ತ್ರೈಮಾಸಿಕದಲ್ಲೂ ಉತ್ತಮ ಸಾಧನೆಯನ್ನು ಪ್ರದರ್ಶಿಸಿದೆ. ಕಳೆದ ವರ್ಷದ ಸಾಧನೆಯೂ ಸಕಾರಾತ್ಮಕವಾಗಿದ್ದು ಬ್ಯಾಂಕ್ ಅಭಿವೃದ್ಧಿಯ ಪಥದಲ್ಲಿರುವಂತೆ ತೋರುತ್ತದೆ. ರೂ.10 ರ ಮುಖಬೆಲೆ ಷೇರು ರೂ.14 ರ ಸಮೀಪವಿರುವುದು ಹೂಡಿಕೆಗೆ ಉತ್ತಮವೆನ್ನಬಹುದಲ್ಲವೇ?
ಬ್ಯಾಂಕಿಂಗ್ ವಲಯದ ಕೋಷ್ಠಕವನ್ನು ಪರಿಶೀಲಿಸಿರಿ:
Bank | S B I | HDFC BANK | UCO BANK | P N B | YES BANK |
Sales | 65,564.43 | 30,482.97 | 3,569.57 | 18,920.92 | 4,525.42 |
PAT | 6,504.00 | 7,729.64 | 101.79 | 1,023.46 | 206.84 |
Equity | 892.46 | 552.67 | 11,956.96 | 2,202.20 | 5,010.98 |
FACEVLAUE | 1 | 1 | 10 | 2 | 2 |
MARKET PRICE | 458 | 1,602 | 14.70 | 40.30 | 13.20 |
DIVIDEND | 4.00 | 6.50 | —- | —– | —– |
ಇಲ್ಲಿ ಹೆಸರಿಸಿರುವ ಕಂಪನಿಗಳು ಮತ್ತು ಅವುಗಳ ವಿಚಾರಗಳು ಹೂಡಿಕೆದಾರರ ಮಾಹಿತಿಗಾಗಿಯಷ್ಠೆ. ಹೂಡಿಕೆಗೆ ಮುನ್ನ ಅಂದಿನ ಪರಿಸ್ಥಿತಿಯನ್ನರಿತು ನಿರ್ಧರಿಸಿರಿ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.