ಕೆಂಗೇರಿ ಚಕ್ರಪಾಣಿ
ಇಂದು ದುರ್ಗಾಷ್ಟಮಿ. ದುರ್ಗೆಯು ಪಾರ್ವತಿಯ ಮತ್ತೊಂದು ರೂಪ . ಶಕ್ತಿ ಸ್ವರೂಪಿಣಿಯಾದ ಪಾರ್ವತಿಯನ್ನು ದುರ್ಗೆ, ಚಾಮುಂಡೇಶ್ವರಿ, ಕಾಳಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.ಕರ್ನಾಟಕದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ನಿರ್ಮಾಣವಾದ ಮಹಿಷಮರ್ದಿನಿಯರ ಶಿಲ್ಪಗಳ ಬಗ್ಗೆ ತಿಳಿದುಕೊಳ್ಳೋಣ.
ಆಶ್ವಯುಜ ಮಾಸದ ಶುದ್ಧ ಪಾಡ್ಯದಿಂದ ದಶಮಿವರೆಗೆ ಆಚರಿಸುವ ಹಬ್ಬಕ್ಕೆ ದಶಹರ ,ದಶರಾತ್ರಿ ಅಥವಾ ದಸರ ಎಂದು ಹೆಸರು .ಕೆಲವು ಪ್ರದೇಶಗಳಲ್ಲಿ ಈ ಹಬ್ಬವನ್ನು ಒಂಬತ್ತು ದಿನಗಳು ಮಾತ್ರ ಆಚರಿಸುವುದರಿಂದ ನವರಾತ್ರಿ ಎಂದೂ ಕರೆಯುತ್ತಾರೆ.ದೇವತೆಗಳಿಗೂ ದಾನವರಿಗೂ ನಡೆದ ಸಮರದಲ್ಲಿ ದೇವತೆಗಳು ದಾನವರನ್ನು ಸಂಹರಿಸಿ ವಿಜಯ ಪಡೆದುದರ ಪ್ರತೀಕವಾಗಿ ಈ ಹಬ್ಬವನ್ನು ಅನಾದಿಕಾಲದಿಂದಲೂ ಆಚರಿಸುತ್ತಾ ಬಂದಿರುವುದನ್ನು ಗುರುತಿಸಬಹುದು.
ನವರಾತ್ರಿಯಲ್ಲಿ ಆಶ್ವಯುಜ ಅಷ್ಟಮಿಯಂದು ದುರ್ಗೆಯ ಆರಾಧನೆಯನ್ನು ಮಾಡುತ್ತಾರೆ.ದುರ್ಗೆಯು ಪಾರ್ವತಿಯ ಮತ್ತೊಂದು ರೂಪ .ಶಕ್ತಿ ಸ್ವರೂಪಿಣಿಯಾದ ಪಾರ್ವತಿಯನ್ನು ದುರ್ಗೆ, ಚಾಮುಂಡೇಶ್ವರಿ, ಕಾಳಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.ಆಕೆಯು ಮಹಿಷನನ್ನು ಸಂಹರಿಸಿದುದರಿಂದ ಮಹಿಷಮರ್ದಿನಿಯಾದಳು.
ದುರ್ಗೆಯು ಮಹಿಷಾಸುರನನ್ನು ಮೈಸೂರಿನಲ್ಲಿ ಕೊಂದಳೆಂಬ ಐತಿಹ್ಯವಿದೆ.ಈ ಐತಿಹ್ಯಕ್ಕೆ ಪೂರಕವೆನ್ನು ವಂತೆ ರಾಜ್ಯದ ಹಲವಾರು ದೇವಾಲಯಗಳಲೆಲ್ಲಾ ಸುಂದರವಾದ ಮಹಿಷಮರ್ದಿನಿಯರ ವಿಗ್ರಹಗಳಿವೆ.
ರಾಜ್ಯದ ಬೇರೆ ಊರುಗಳಲ್ಲಿ ವಿವಿಧ ಕಾಲಘಟ್ಟಗಳಲ್ಲಿ ನಿರ್ಮಾಣವಾದ ಮಹಿಷಮರ್ದಿನಿಯರ ಶಿಲ್ಪಗಳು ಇಲ್ಲಿವೆ.
1 ಐಹೊಳೆಯ ಮಹಿಷಮರ್ದಿನಿ
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿಗೆ ಸೇರಿರುವ ಐಹೊಳೆಯ ದುರ್ಗಾ ದೇವಾಲಯದ ಹೊರಭಿತ್ತಿಯಲ್ಲಿರುವ ದೇವಕೋಷ್ಠದಲ್ಲಿ ಈ ವಿಗ್ರಹವಿದೆ.ತಿಳಿಹಳದಿಬಣ್ಣದ ಮರಳುಗಲ್ಲಿನಿಂದ ನಿರ್ಮಿಸಲಾಗಿರುವ ಬಾದಾಮಿ ಚಾಲುಕ್ಯ ಶೈಲಿಯ ಈ ವಿಗ್ರಹವು ಪ್ರಾಚೀನತೆಯ ದೃಷ್ಟಿಯಿಂದ ಮಹತ್ವ ಪೂರ್ಣವಾಗಿದ್ದು ಸುಮಾರು ಏಳನೆಯ ಶತಮಾನಕ್ಕೆ ಸೇರುವುದು.ಅಷ್ಠಭುಜಗಳ ದೇವಿಯು ತನ್ನೆಡಗಾಲನ್ನು ಮಹಿಷನ ಮೇಲಿಟ್ಟು ತುಳಿದು,ಬಲಗೈಯಲ್ಲಿರುವ ತ್ರಿಶೂಲ ದಿಂದ ತಿವಿಯುತ್ತಿರುವಳು.ಆಕೆಯ ವಾಹನವಾದ ಸಿಂಹವು ದೇವಿಯ ಬಲಪಾದದ ಬಳಿ ಇದೆ.
2.ಹಳೇಆಲೂರಿನ ವಿಜಯಕಾಳಿ
ಚಾಮರಾಜನಗರ ಜಿಲ್ಲೆ ಹಾಗೂ ಅದೇತಾಲ್ಲೂಕಿನ ಸುವರ್ಣನದಿ( ಹೊನ್ನ ಹೊಳೆ) ತೀರದಲ್ಲಿರುವ ಒಂದು ಗ್ರಾಮ ಹಳೆಆಲೂರು. ಚಾಮರಾಜನಗರ – ಯಳಂದೂರು ರಸ್ತೆಯಲ್ಲಿ,ಚಾಮರಾಜನಗರದಿಂದ ಸುಮಾರು ಒಂಬತ್ತು ಕಿ.ಮೀ.ದೂರದಲ್ಲಿದೆ.ಇಲ್ಲಿ ಹತ್ತನೆಯ ಶತಮಾನಕ್ಕೆ ಸೇರುವ ಆರ್ಕೇಶ್ವರ ದೇವಾಲಯವಿದೆ. ಈ ದೇವಾಲಯದ ಆವರಣದಲ್ಲಿ ಇಲ್ಲಿ ದೊರೆತ ಹಲವಾರುಶಿಲ್ಪಗಳನ್ನು ಪುರಾತತ್ವ ಇಲಾಖೆಯವರು ಬಹಳ ಅಚ್ಚು ಕಟ್ಟಾಗಿ ಜೋಡಿಸಿರುವರು.
ಇಲ್ಲಿರುವ ಚಾಮುಂಡಿಯ ಶಿಲ್ಪವು ಬಹಳ ಭಿಭತ್ಸವಾಗಿದೆ. ಕೋರೆದಾಡೆ,ಕೆದರಿದ ಕೂದಲು,ಕೆಂಡದಂತ ಕಣ್ಣುಗಳು ,ರೌದ್ರತೆಯನ್ನು ಸೂಸುತ್ತಿರುವ ಈ ಅಷ್ಟಭುಜೆ ದುರ್ಗೆಯ ಶಿಲ್ಪವನ್ನು ವಿದ್ವಾಂಸರುಗಳು ಬಾಳರೆತ್ತ ಬಟಾರಿ ಎಂತಲೂ ಇದನ್ನು ವಿಜಯಕಾಳಿಯ ಶಿಲ್ಪವೆಂತಲೂ ಕರೆದಿರುವರು.ಕಣ ಶಿಲೆಯಲ್ಲಿ ಮಾಡಿರುವ ಈ ದೇವಿಯು ಸುಮಾರು ಒಂಬತ್ತನೆಯ ಶತಮಾನಕ್ಕೆ ಸೇರಿದ್ದು ತನ್ನ ರೌದ್ರತೆಯಿಂದ ಗಮನ ಸೆಳೆಯುತ್ತದೆ.
3.ಕೂಡಲೂರಿನ ವೈಷ್ಣವಿದುರ್ಗೆ
ರಾಮನಗರ ಜಿಲ್ಲೆ,ಚನ್ನಪಟ್ಣಣ ತಾಲ್ಲೂಕು,ಕೂಡ್ಲೂರು ಗ್ರಾಮವು ಚನ್ನಪಟ್ಟಣದಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ.ಇಲ್ಲಿ ಹಲವಾರು ದೇವಾಲಯಗಳಿವೆ.ಇವುಗಳಲ್ಲಿ ಬಹಳ ದೇವಾಲಯಗಳು ಗಂಗರಸರ ಕಾಲಕ್ಕೆ ಸೇರುವುದು. ಕೂಡ್ಲೂರಿನ ಕಲ್ಯಾಣಿಯ ಸಮೀಪ ಒಂದು ಸುಂದರ ದುರ್ಗೆಯ ಶಿಲ್ಪವಿದೆ ,ಕಣ ಶಿಲೆಯಿಂದ ಮಾಡಿದ ದುರ್ಗೆಯು ಬಹಳ ಸತ್ವಶಾಲಿಯಾಗಿದೆ.ದುರ್ಗೆಯು ಅತ್ಯಂತ ಮನೋಹರವಾಗಿ ಅಷ್ಟಭುಜೆಯಾಗಿದ್ದು ಹಸನ್ಮುಖಳಾಗಿರುವಳು. ದೇವಿಯ ಮೇಲಿನ ಕೈಗಳಲ್ಲಿ ಶಂಖ ,ಚಕ್ರಗಳನ್ನು ಹಿಡಿದಿರುವಳು. ಈಕೆಯು ಧರಿಸಿರುವ ವಸ್ತ್ರಗಳು ,ಆಯುಧಗಳು ಗಮನ ಸೆಳೆಯುವುದು.ಕೂಡ್ಲೂರಿನ ದುರ್ಗೆಯು ಸುಮಾರು ಒಂಬತ್ತು- ಹತ್ತನೆಯ ಶತಮಾನಕ್ಕೆ ಸೇರುವಳು.
4. ಕುಣಿಗಲ್ಲಿನ ದುರ್ಗೆ
ತುಮಕೂರು ಜಿಲ್ಲೆಗೆ ಸೇರಿದ ತಾಲ್ಲೂಕು ಕೇಂದ್ರವಾದ ಕುಣಿಗಲ್ಲಿನ ಸೋಮೇಶ್ವರ ದೇವಾಲಯದಲ್ಲಿರುವ ಈ ವಿಗ್ರಹವು ಗಂಗರ ಶೈಲಿಯಲ್ಲಿರುವ ಒಂದು ಅತ್ಯುತ್ತಮ ವಿಗ್ರಹವೆಂದು ಹೇಳಬಹುದು. ಚತುರ್ಭುಜಗಳ ದೇವಿಯು ಚಕ್ರ,ಶಂಖ,ಬಿಲ್ಲು ಹಾಗೂ ಖಡ್ಗಗಳನ್ನು ಧರಿಸಿದ್ದಾಳೆ.ಕತ್ತರಿಕಾಲನ್ನು ಹಾಕಿಕೊಂಡು ತ್ರಿಭಂಗಿಯಲ್ಲಿ ಮಹಿಷನ ಮೇಲೆ ನಿಂತಿರುವ ದೇವಿಯ ಎಡಬಲಗಳಲ್ಲಿ ಜಿಂಕೆ ಹಾಗೂ ಸಿಂಹಗಳಿವೆ.ಇದುಕ್ರಿ.ಶ.ಸುಮಾರು ಒಂಬತ್ತನೆಯ ಶತಮಾನದ ವಿಗ್ರಹವಾಗಿದೆ.
5. ಮುನವಳ್ಳಿಯ ಮಹಿಷಮರ್ದಿನಿ
ಮುನವಳ್ಳಿಯು ಬೆಳಗಾವಿ ಜಿಲ್ಲೆ ,ಸವದತ್ತಿ ತಾಲ್ಲೂಕಿನಲ್ಲಿದ್ದು ಸವದತ್ತಿಯಿಂದ ೧೪ ಕಿ.ಮೀ ದೂರದಲ್ಲಿ ಮಲಪ್ರಭಾ ದಂಡೆಯ ಮೇಲಿರುವ ಗ್ರಾಮ .ಶಾಸನಗಳಲ್ಲಿ ಮುನಿಪುರ,ಮುನೀಂದ್ರವಳ್ಳಿ ಮುನೋಳಿ ಎಂದು ಕರೆದಿರುವ ಮುನವಳ್ಳಿಯಲ್ಲಿ ಸುಂದರವಾದ ಪಂಚಲಿಂಗೇಶ್ವರ ದೇವಾಲಯವಿದೆ.ಬಹು ದೊಡ್ಡ ಆವರಣ ಹೊಂದಿರುವ ಮುನವಳ್ಳಿಯ ಪಂಚಲಿಂಗೇಶ್ವರ ದೇವಾಲಯದ ನವರಂಗದಲ್ಲಿ ಹನ್ನೊಂದನೆಯ ಶತಮಾನಕ್ಕೆ ಸೇರುವ ಚಾಮುಂಡೇಶ್ವರಿಯ ಮೂರ್ತಿಯಿದೆ.ಅಷ್ಟಭುಜಗಳನ್ನು ಹೊಂದಿರುವ ದೇವಿಯು ಸುಮಾರು ನಾಲ್ಕು ಅಡಿ ಎತ್ತರದಲ್ಲಿದ್ದು ಕೈಗಳಲ್ಲಿ ಶಂಖ,ಚಕ್ರ,ಬಿಲ್ಲು ಬಾಣ ಮುಂತಾದ ಆಯುಧಗಳನ್ನು ಧರಿಸಿದ್ದು ಸಿಂಹವಾಹನೆಯಾಗಿರುವಳು.ಕೋಣದ ತಲೆಯಿಂದ ಹೊರಬರುತ್ತಿರುವ ಮಹಿಷನನ್ನು ಒಂದು ಕೈನಲ್ಲಿ ಅದುಮಿಕೊಂಡು ಮತ್ತೊಂದು ಕೈಯಲ್ಲಿರುವ ತ್ರಿಶೂಲದಿಂದ ಚುಚ್ಚಿಕೊಲ್ಲುತ್ತಿರುವಳು.
ಮುನವಳ್ಳಿಯ ಚಾಮುಂಡೇಶ್ವರಿಯ ಕಾಲವು ಸುಮಾರು ಹನ್ನೊಂದನೆಯ ಶತಮಾನದ ಕಲ್ಯಾಣಿಚಾಲುಕ್ಯರ ಕಾಲಕ್ಕೆ ಸೇರುವುದು.
6. ಅಘಲಯದ ಮಹಿಷಮರ್ದಿನಿ
ಮಂಡ್ಯ ಜಿಲ್ಲೆ ,ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯದಲ್ಲಿ ಹೊಯ್ಸಳರು ನಿರ್ಮಿಸಿದ ಸುಂದರ ಮಲ್ಲೇಶ್ವರ ದೇವಾಲಯ ವಿದೆ.ದೇವಾಲಯವು ಮೂರು ಗರ್ಭಗೃಹವನ್ನು ಹೊಂದಿದ್ದು ಪ್ರತಿ ಗರ್ಭಗೃಹಗಳಲ್ಲಿ ಶಿವಲಿಂಗಗಳಿವೆ. ಗರ್ಭಗೃಹಗಳ ಮುಂದಿರುವ ನವರಂಗದ ಇಕ್ಕಡೆಗಳಲ್ಲಿ ತಲಾ ಒಂದು ಗಣಪತಿ ಹಾಗೂ ಮಹಿಷಮರ್ದಿನಿಯರ ಸುಂದರ ಮೂರ್ತಿಗಳಿವೆ.ಹೊಯ್ಸಳ ಶೈಲಿಯ ಬಳಪದ ಕಲ್ಲಿನ ಈ ವಿಗ್ರಹವು ಅಷ್ಟಭುಜಗಳನ್ನು ಹೊಂದಿದ್ದು ಅತ್ಯದ್ಭುತ ಶಿಲ್ಪವಾಗಿ ಕಲಾತ್ಮಕ ವಾಗಿದೆ.ತನ್ನ ಎಡಗಾಲಿನಲ್ಲಿ ಮಹಿಷಾಸುರನನ್ನು ತುಳಿದಾಗ ಕೂಡಲೆ ಹೊರಬಂದು ತನ್ನ ನಿಜರೂಪಧಾರಣೆ ಮಾಡಿರುವ ರಕ್ಕಸನನ್ನು ಎಡಗೈಯಲ್ಲಿ ಹಿಡಿದು ತ್ರಿಶೂಲದಿಂದ ಇರಿದಿದ್ದಾಳೆ ದೇವಿ.ರಕ್ಕಸನ ಜೊತೆಗಾರನನ್ನು ತನ್ನ ಖಡ್ಗದಿಂದ ತಿವಿದು ಸಂಹಾರ ಮಾಡಿರುವಳು.ಹೊಯ್ಸಳ ಶೈಲಿಯ ಅತ್ಯಂತ ಸುಂದರವಾದ ಈ ವಿಗ್ರಹವು ೧೩ ನೆಯ ಶತಮಾನದ್ದಾಗಿದೆ.
7.ಯಳಂದೂರಿನ ಮಹಿಷಮರ್ದಿನಿ
ಚಾಮರಾಜನಗರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾದ ಯಳಂದೂರಿನಲ್ಲಿ ಗೌರೀಶ್ವರ ದೇವಾಲಯವಿದೆ.
ಈ ದೇವಾಲಯದ ವಿಶೇಷವಿರುವುದೇ ಇಲ್ಲಿಯ ಸುಂದರವಾದ ಮುಖ ಮಂಟಪ. ಕ್ರಿ.ಶ.೧೬೫೪ ಹದಿನಾಡು ಪ್ರಾಂತ್ಯದ ದೊರೆ ಮುದ್ದುಭೂಪಾಲನಿಂದ ಈ ಕಲಾತ್ಮಕ ಮುಖಮಂಟಪ ಸ್ಥಾಪಿಸಲ್ಪಟ್ಟಿತು.ಸುಮಾರು ಹನ್ನೆರಡು ಅಡಿ ಎತ್ತರದ ಪ್ರವೇಶ ದ್ವಾರದಲ್ಲಿರುವ ಮಹಿಷಮರ್ದಿನಿಯ ಶಿಲ್ಪವು ಬಹಳ ಸೊಗಸಾಗಿದೆ. ಹಲವಾರು ಬಾಹುಗಳಲ್ಲಿ ಆಯುಧಗಳನ್ನು ಧರಿಸಿರುವ ದೇವಿಯು ಕೋಣದಿಂದ ಹೊರಬಂದ ಮಹಿಷನನ್ನು ಸಂಹರಿಸುತ್ತಿರುವಳು. ದೇವಿಯು ರಕ್ಕಸನನ್ನು ಚುಚ್ಚಿದ ಕತ್ತಿಯು ದೇಹದಿಂದ ಹೊರಬಂದಂತೆ ಹಾಗೂ ಈಕೆಯ ವಾಹನವಾದ ಸಿಂಹವು ಒಬ್ಬ ರಕ್ಕಸನ ಕಾಲನ್ನು ಕಚ್ಚಿಹಿಡಿದಂತೆ ನೈಜವಾಗಿ ಚಿತ್ರಿಸಲಾಗಿದೆ. ಶಿಲ್ಪದಲ್ಲಿ ಚಲನಶೀಲತೆಯನ್ನು ಗುರುತಿಸಬಹುದು.
8. ನಂಜನಗೂಡಿನ ಚಾಮುಂಡೇಶ್ವರಿ
ಮೈಸೂರು ಜಿಲ್ಲೆಯ ನಂಜನಗೂಡುನಲ್ಲಿ ಕಪಿಲ ನದಿ ತೀರದಲ್ಲಿ ಒಂದು ಚಾಮುಂಡೇಶ್ವರಿಯ ದೇವಾಲಯ ವಿದೆ.ಮೈಸೂರಿನ ಚಾಮುಂಡೇಶ್ವರಿ ದೇವಾಲಯದಷ್ಟೇ ಪ್ರಸಿದ್ಧವಾದ ಈ ದೇವಾಲಯವು ಮೂಲತಃ ಮೈಸೂರು ಒಡೆಯರ ಕಾಲದಲ್ಲಿ ನಿರ್ಮಾಣವಾಗಿದ್ದು ಇತ್ತೀಚೆಗೆ ಪುನರುತ್ಥಾನಗೊಂಡಿದೆ. ಅಷ್ಟಭುಜಗಳನ್ನು ಹೊಂದಿರುವ ಮಹಿಷಮರ್ದಿನಿಯು ಸಿಂಹವಾಹಿನಿಯಾಗಿರುವಳು.ದೇವಿಯು ನಾಲ್ಕು ಅಡಿ ಪೀಠದ ಮೇಲೆ ಆಸೀನಳಾಗಿರುವಳು.ಮಹಿಷಮರ್ದಿನಿಗೆ ವಿಜಯದಶಮಿಯ ಶುಭದಿನ ಬಹಳ ವಿಶೇಷ. ನವರಾತ್ರಿಯ ಹತ್ತೂ ದಿನವು ವಿಶೇಷ ಅಲಂಕಾರಗಳನ್ನು ಮಾಡುತ್ತಾರೆ. ಸಪ್ತಮಿಯ ದಿನದ ಕಾಳರಾತ್ರಿಯ ಅಲಂಕಾರ ಬಹಳ ಭವ್ಯವಾಗಿರುತ್ತದೆ.ಮೈಸೂರಿನ ಚಾಮುಂಡೇಶ್ವರಿ ತೇರಿನ ದಿನವೆ ಇಲ್ಲಿ ಸಂಜೆ ದೀವಿಗೆ ರಥೋತ್ಸವ ಬಹಳ ವೈಭವವಾಗಿ ಜರುಗುತ್ತದೆ.ನಂಜನಗೂಡಿನ ನಂಜುಂಡೇಶ್ವರನಿಗೆ ನಡೆಯುವ ಎಲ್ಲಾ ರಥಗಳು ಈ ಚಾಮುಂಡೇಶ್ವರಿಯ ದೇವಾಲಯದ ಮುಂದೆ ಹಾದು ಹೋಗಿ ದೇವಿಯ ಪೂಜೆ ಸಲ್ಲಿಸಿ ಮುಂದೆಸಾಗುವುದು ಇಲ್ಲಿಯ ಸಂಪ್ರದಾಯ.
9. ಬೆಂಗಳೂರು ನಗರ್ತರ ಪೇಟೆಯ ಚಾಮುಂಡೇಶ್ವರಿ
ಬೆಂಗಳೂರಿನ ಕೇಂದ್ರದಲ್ಲಿರುವ ನಗರ್ತರ ಪೇಟೆಯಲ್ಲಿ ಅನೇಕ ದೇವಾಲಯಗಳಿವೆ.ಇಲ್ಲಿರುವ ಚಾಮುಂಡೇಶ್ವರಿ ದೇವಾಲಯವೂ ಸಹಾ ಅಪಾರ ಸಂಖ್ಯೆಯ ಭಕ್ತ ವೃಂದವನ್ನು ಹೊಂದಿರುವುದು .ಸುಮಾರು ೨೫೦ ವರ್ಷಗಳ ಹಿಂದಿನ ದೇವಿಯು ಎಂಟು ಬಾಹುಗಳನ್ನು ಹೊಂದಿದ್ದು ದೇವಿಯ ಬಲಗಡೆ ಆಕೆಯ ವಾಹನ ಸಿಂಹವಿದೆ.ಇಲ್ಲಿ ಕೋಣವು ದೇವಿಯ ವಿರುದ್ಧ ದಿಕ್ಕಿನಡೆ ಮುಖಮಾಡಿರುವುದು ವಿಶೇಷ.
ಕೆಂಗೇರಿ ಚಕ್ರಪಾಣಿ ಅವರು ನಾಡಿನ ಹಿರಿಯ ಛಾಯಗ್ರಾಹಕರು ಹಾಗೂ ಇತಿಹಾಸ ಸಂಶೋಧಕರು. ಸಹಪಾಠಿ ಮುನಿ ಅಂಜನಪ್ಪನವರ ಪ್ರೇರಣೆಯಿಂದ ಛಾಯಾಗ್ರಹಣವನ್ನು ಹವ್ಯಾಸವಾಗಿ ಬೆಳೆಸಿಕೊಂಡ ಚಕ್ರಪಾಣಿ ಅದನ್ನು ದೇವಾಲಯಗಳ ಚಿತ್ರೀಕರಣಕ್ಕೆ ಬಳಸಿಕೊಂಡರು. ಇತಿಹಾಸ ತಜ್ಞ ಡಾ.ಎಚ್. ಎಸ್ .ಗೋಪಾಲರಾವ್. ಡಾ. ದೇವರಕೊಂಡಾರೆಡ್ಡಿ, ಡಾ. ಪಿ.ವಿ .ಕೃಷ್ಣಮೂರ್ತಿ,ಡಾ. ಕೆ. ಆರ್. ಗಣೇಶ್ ಅವರ ಮಾರ್ಗದರ್ಶನದಿಂದ ದೇವಾಲಯಗಳ ಇತಿಹಾಸ ಅಧ್ಯಯನದಲ್ಲಿ ಆಸಕ್ತಿ ಬೆಳೆಯಿತು. ದೂರಸಂಪರ್ಕ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಹೋದ್ಯೋಗಿಗಳ ಒತ್ತಾಸೆಯಂತೆ ತಾವು ಸೆರೆಹಿಡಿದ ಛಾಯಚಿತ್ರಗಳ ಪ್ರದರ್ಶನ ಏರ್ಪಡಿಸಲು ಆರಂಭಿಸಿದರು. ಈಗ ಅವರ ಬಳಿ 2000ಕ್ಕೂ ಹೆಚ್ಚು ಛಾಯಚಿತ್ರಗಳ ಸಂಗ್ರಹ ಇದೆ. ನಾಡಿನಾದ್ಯಂತ ಈ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗವನ್ನು ಕಟ್ಟಿಕೊಂಡು ಅದರ ಮೂಲಕ ಮಿತ್ರರನ್ನು ಪುರಾತನ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಪರಿಚಯಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪುರಾತನ ದೇವಾಲಯಗಳ ಜೀರ್ಣೋದ್ಧಾರದಲ್ಲಿ ತೊಡಗಿಕೊಂಡಿರುವ ಧರ್ಮಸ್ಥಳದ ಶ್ರೀ ಮಂಜುನಾಥ ಧರ್ಮೋತ್ಥಾನ ಟ್ರಸ್ಟ್ ಇವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ.
ಲೇಖನ ಅಧ್ಭುತ…..ಈ ಸಂದರ್ಭಕ್ಕೆ ಪ್ರಸ್ತುತವಾಗಿದೆ….ಚಿತ್ರಗಳು ಲೇಖನಕ್ಕೆ ಮೆರಗು….ಶುಭವಾಗಲಿ …ನಾಡಹಬ್ಬ ವಿಜಯದಶಮಿಯ ಶುಭಕಾಮನೆಗಳು.
ಧನ್ಯವಾದಗಳು ಸರ್
Extremely well researched article backed with relevant pics, absolute delight to know about some unknown facets about the DEVI Temples & statutes within Karnataka during these virtual festival phase ! Thank you Chakrapani & KannadaPress
ಧನ್ಯವಾದಗಳು ಮೇಡಂ.
ಅದ್ಬುತ ಸಂಗ್ರಹ ಪ್ರತ್ಯಕ್ಷ ಲೇಖನ
ಧನ್ಯವಾದಗಳು ಸರ್.
ನವ ದುರ್ಗೆಯರ ಬಗ್ಗೆ ಈ ನವರಾತ್ರಿಯ ಸಮಯದಲ್ಲಿನ ಈ ಲೇಖನ ಓದಿದಾಗ, ದೇವಿಯರ ವಿಗ್ರಹವನ್ನು ನೋಡಿದಾಗ ನಾವು ಪ್ರತ್ಯಕ್ಷ ನೋಡಿದ ಅನುಭವ ಆಯಿತು. ವಂದನೆಗಳು ಲೇಖಕರಿಗೆ
ಧನ್ಯವಾದಗಳು ಮೇಡಂ.
ನಿ ಮ್ಮ ಲೇಖನವನ್ನು ಓದಿ ಬಹಳ ವಿಷಯ ವನ್ನು ತಿಳಿ ದು ಕೊಂಡೆ.ವಂದನೆಗಳು.
ಧನ್ಯವಾದಗಳು ಮೇಡಂ.
ಆತ್ಹ್ಮಿಯರಾದ ಚಕ್ರಪಾಣಿಯವರೇ,
ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ದುರ್ಗಾಷ್ಟಮಿಯ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ವಿವಿಧ ದೇವಾಲಯಗಳ್ಳಲ್ಲಿ ಇರುವ ದುರ್ಗೆಯ ವೈವಿಧ್ಯ ಶಿಲ್ಪಗಳು, ಅವುಗಳ ಸಂಪೂರ್ಣ ಮಾಹಿತಿ ನಿಜಕ್ಕೂ ಅಚ್ಚರಿಯನ್ನೂ, ಆನಂದವನ್ನು ನೀಡುತ್ತದೆ. ನಿಮ್ಮ ಇತಿಹಾಸ ಜ್ಞಾನ, ಹಾಗೂ ಸುಂದರ ಛಾಯಾಚಿತ್ರಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಶುಭಾಶಯಗಳು.
ಧನ್ಯವಾದಗಳು ಸರ್.ಅವಕಾಶ ಒದಗಿಸಿಕೊಟ್ಟ ,Kannadapress.com ನವರಿಗೂ ಧನ್ಯವಾದಗಳು.
Details consolidated in a single article. Useful to history lovers