BENGALURU OCT 18
ಮಂಡ್ಯದ -MANDYA_ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಲೀಸ್ ಗೆ ನೀಡುವ ಸಚಿವ ಸಂಪುಟದ ನಿರ್ಣಯವನ್ನು ತಾತ್ಕಾಲಿಕವಾಗಿ ತಡೆ ಹಿಡಿದು, ಸರ್ಕಾರವೇ ನಡೆಸುವ ಪ್ರಯತ್ನ ಮಾಡಲಾಗುವುದು. ಕಾರ್ಖಾನೆಯ ಪುನರುಜ್ಜೀವನಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.
ಅವರು ಇಂದು ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಂಡ್ಯದ ರೈತ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.
ಮೈಶುಗರ್ ಗೆ ಒಬ್ಬ ಅನುಭವಿ ಹಿರಿಯ ತಜ್ಞರ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಲಾಗುವುದು. ತಜ್ಞರ ಸಮಿತಿ ಮೂರು ತಿಂಗಳಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ ವರದಿಯನ್ನು ಆಧಾರವಾಗಿಟ್ಟುಕೊಂಡು ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಕ್ರಮಗಳನ್ನು ವಹಿಸಲಾಗುವುದು. ಕಾರ್ಖಾನೆ ಕಬ್ಬು ನುರಿಸುವ ಸಾಮರ್ಥ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಯಂತ್ರೋಪಕರಣಗಳ ದುರಸ್ಥಿಗೆ ಆರ್ಥಿಕ ನೆರವು ನೀಡಲಾಗುವುದು. ಬರುವ ಹಂಗಾಮಿನಿಂದ ಕಬ್ಬು ನುರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಖಾನೆ ಪುನರಾರಂಭಕ್ಕೆ ಅಗತ್ಯವಿರುವ ಹಣಕಾಸಿನ ವಿವರ ಹಾಗೂ ದುಡಿಯುವ ಬಂಡವಾಳ ಕುರಿತಂತೆ ಮಾಹಿತಿ ಒದಗಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಡಿಸ್ಟಿಲರಿ, ಎಥಿನಾಲ್, ಮೊಲ್ಯಾಸಿಸ್, ಕೊ-ಜನರೇಷನ್ ಮತ್ತಿತರ ಉಪ ಉತ್ಪನ್ನಗಳ ತಯಾರಿಕೆ ಪ್ರಾರಂಭಿಸುವ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು. ತಜ್ಞರು ನೀಡುವ ವರದಿಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಈ ಎಲ್ಲಾ ಅಂಶಗಳ ಕುರಿತು ಚರ್ಚಿಸಿ, ಒಪ್ಪಿಗೆ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸರ್ಕಾರಗಳು ಮೈಷುಗರ್ ಪುನಶ್ಚೇತನಕ್ಕೆ ಸಾಕಷ್ಟು ವ್ಯಯಿಸಿದ್ದರೂ ಯಶಸ್ಸು ದೊರೆತಿಲ್ಲ. ಕಳೆದ ಮೂರು ವರ್ಷದಿಂದ ಫ್ಯಾಕ್ಟರಿ ಬಂದ್ ಕಬ್ಬು ಬೆಳೆಗಾರರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ ಆರ್ ಓ ಟಿ ಮೂಲಕ ನಡೆಸಲು ತೀರ್ಮಾನಿಸಿತ್ತು. ಆದರೆ ರೈತರು, ಜನಪ್ರತಿನಿಧಿಗಳು ಇದನ್ನು ವಿರೋಧಿಸಿದ್ದಾರೆ. ಹಾಗಾದರೆ ಮೈಷುಗರ್ ಪುನಶ್ಚೇತನಕ್ಕೆ ಮುಂದಿನ ನಡೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕಾರ್ಖಾನೆ ಪ್ರಾರಂಭಿಸಬೇಕು ಎನ್ನುವುದು ಸರ್ಕಾರದ ಆಶಯ. ಕಬ್ಬಿನ ಮೌಲ್ಯವರ್ಧನೆಗಾಗಿ ಸ್ಥಾಪಿಸಿದ ಕಾರ್ಖಾನೆ ಇದು. ರೈತರ ಕಬ್ಬಿಗೆ ನಿಗದಿತ ಸಮಯದಲ್ಲಿ ಹಣಪಾವತಿ ಮಾಡಿದರೆ, ಲಾಭ ಎನ್ನುವುದು ನನ್ನ ಭಾವನೆ ಎಂದು ಸಭೆಯಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.
ಮುಂದಿನ ಮೂರು ತಿಂಗಳಲ್ಲಿ ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗುವುದು. ವ್ಯವಸ್ಥೆಯಲ್ಲಿ ಲೋಪದೋಷ ಸರಿ ಪಡಿಸಿ, ಒಮ್ಮೆ ಪ್ರಾಯೋಗಿಕವಾಗಿ ನಡೆಸಲು ಸಿದ್ಧರಿದ್ದೇವೆ. ಆದರೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು..
ಸಚಿವರಾದ ಜೆ.ಸಿ. ಮಾಧುಸ್ವಾಮಿ, ನಾರಾಯಣಗೌಡ, ಶಂಕರ ಪಾಟೀಲ ಮುನೇನಕೊಪ್ಪ, ಎಸ್ ಟಿ ಸೋಮಶೇಖರ್, ಮಂಡ್ಯ ಸಂಸದೆ ಸುಮಲತಾ, ಮಂಡ್ಯ ಜಿಲ್ಲೆಯ ಶಾಸಕರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರೈತ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.