KALABURGI OCT 19
ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಷ್ಟ್ರೀಯ ಪಕ್ಷಗಳ ಸರಕಾರಗಳು ಪರ್ಸೆಂಟೇಜ್ ಸರಕಾರಗಳಾಗಿದ್ದು, ಸ್ವತಃ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೇ ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ. ಈ ಮೂಲಕ ಆ ಪಕ್ಷಗಳ ಭ್ರಷ್ಟಮುಖ ಜನರ ಮುಂದೆ ಅನಾವರಣಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಸಿಂಧಗಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಲು ಇಂದು ಬೆಳಗ್ಗೆ ಕಲಬುರಗಿಗೆ ಆಗಮಿಸಿದ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು 10% ಸರಕಾರ ಎಂದು ಕರೆಯುತ್ತಿದ್ದರು. ಈಗ ಅವರದ್ದೇ ಪಕ್ಷದ ಸರಕಾರವನ್ನು ಕಾಂಗ್ರೆಸ್ ಪಕ್ಷದವರು 20% ಸರಕಾರ ಎಂದು ಕರೆಯುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ಜನರ ಹಣ ಲೂಟಿ ಹೊಡೆಯುವುದರಲ್ಲಿ ಹಾಗೂ ಪರ್ಸೆಂಟೇಜ್ ತೆಗೆದುಕೊಳ್ಳುವುದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ದೊಡ್ಡ ಪೈಪೋಟಿಯೇ ಇದೆ ಎಂದು ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.
ಪೊಲೀಸ್ ವಸತಿ ಸಮುಚ್ಛಯವೇ ಬೀಳುತ್ತಿದೆ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಬೆಂಗಳೂರಿನಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಪೊಲೀಸ್ ವಸತಿ ಸಮುಚ್ಛಯ ಈಗ ಬೀಳುವ ಹಂತದಲ್ಲಿದೆ. ಕಳಪೆ ಕಾಮಗಾರಿ, ಪರ್ಸಂಟೇಜ್ ವ್ಯವಹಾರ ಇತ್ಯಾದಿ ಅಕ್ರಮಗಳಿಂದ ರಾಜ್ಯವನ್ನು ರಕ್ಷಣೆ ಮಾಡುವ ಪೊಲೀಸ್ ಕುಟುಂಬಗಳು ಅಪಾಯಕ್ಕೆ ಸಿಲುಕಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ನಾಡನ್ನು ಕಾಪಾಡುವ ಪೊಲೀಸ್ ಸಿಬ್ಬಂದಿ ವಾಸ ಮಾಡುವ ಕ್ವಾಟ್ರಸ್ ನಿರ್ಮಾಣದಲ್ಲಿ ಕಳಪೆ, ಅವ್ಯವಹಾರ ನಡೆದಿದೆ ಎಂದರೆ ಉಳಿದ ಯೋಜನೆಗಳ ಕಥೆ ಏನು? ಎಷ್ಟು ಅಕ್ರಮ ನಡೆದಿದೆ? ಎಷ್ಟು ಪರ್ಸೆಂಟೇಜ್ ವ್ಯವಹಾರವಾಗಿದೆ ಎಂಬುದು ಜನರಿಗೆ ಗೊತ್ತಾಗಲಿ ಎಂದು ಅವರು ಹೇಳಿದರು.
ಕರ್ನಾಟಕಕ್ಕೆ ರಾಷ್ಟ್ರೀಯ ಪಕ್ಷಗಳು ಏನು ಮಾಡಿವೆ ಎಂಬುದು ಜನರಿಗೆ ಚೆನ್ನಾಗಿ ಅರ್ಥವಾಗಿದೆ. ಇನ್ನು ಮುಂದೆಯಾದರೂ ಜನರು ಎಚ್ಚೆತ್ತುಕೊಂಡು ನಾಡಿನ ಬಗ್ಗೆ ಕಾಳಜಿ ಇರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿ ಎಂದು ಕೋರಿದರು.