ಷೇರುಪೇಟೆ ಚಲಿಸುತ್ತಿರುವ ರೀತಿ ಮತ್ತು ದಿನೇ ದಿನೇ ನಿರ್ಮಿಸುತ್ತಿರುವ ಗರಿಷ್ಠದಿಂದ ದಾಖಲೆಯ ಏರಿಕೆಯು ಹಲವರಿಗೆ ವಿಸ್ಮಯಕಾರಿಯಾಗಿರಬಹುದು. ಇದೇ ನಮ್ಮ ದೇಶದ ಆಸ್ತಿ ಎನಿಸಿಕೊಂಡಿರುವ ಜನಸಾಮಾನ್ಯರ ಶಕ್ತಿ. ಎಲ್ಲವೂ ವಿಚಿತ್ರ ಎಂದೆನಿಸಿದರೂ ಅದು ಕಟು ಸತ್ಯ.
ಸೆಪ್ಟೆಂಬರ್ ತಿಂಗಳಲ್ಲಿ ಮ್ಯೂಚುಯಲ್ ಫಂಡ್ ಗಳಿಂದ ವಿವಿಧ ಸಾಲ ನಿಧಿಯೋಜನೆ (Debt funds) ಗಳಾದ ಲಿಕ್ವಿಡ್ ಫಂಡ್, ಅಲ್ಟ್ರಾ ಷಾರ್ಟ್ ಡ್ಯುರೇಷನ್ ಫಂಡ್, ಲೋ ಡ್ಯುರೇಷನ್ ಫಂಡ್, ಮನಿ ಮಾರ್ಕೆಟ್ ಫಂಡ್, ಬ್ಯಾಂಕಿಂಗ್ ಅಂಡ್ ಪಿ ಎಸ್ ಯು ಫಂಡ್, ಕಾರ್ಪೊರೇಟ್ ಬಾಂಡ್ ಫಂಡ್ ಗಳ ಮೂಲಕ ಅತಿ ಹೆಚ್ಚಿನ ಹಣದ ಹೊರಹರಿವು ಸಾಮಾನ್ಯ ಪರಿಸ್ಥಿತಿಯಲ್ಲಿ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತಿತ್ತು. ಆದರೂ ಸಹ ಪೇಟೆಗಳು ಉತ್ತುಂಗಕ್ಕೇರುತ್ತಿರುವುದು ಸೋಜಿಗವೆನಸುವುದು.
ಇದಕ್ಕೆ ಕಾರಣ ಷೇರುಪೇಟೆಗಳತ್ತ ನೇರವಾಗಿಯೂ ಮತ್ತು ಮ್ಯುಚುಯಲ್ ಫಂಡ್ ಗಳ ಮೂಲಕ, ಎಸ್ ಐ ಪಿ ಗಳ ಮೂಲಕ ಬರುತ್ತಿರುವ ಹಣದ ಒಳಹರಿವು. ಈಕ್ವಿಟಿ ಫಂಡ್ ಗಳಲ್ಲಿ ಮಲ್ಟಿಕ್ಯಾಪ್ ಮತ್ತು ಫ್ಲೆಕ್ಸಿ ಫಂಡ್ ಗಳು ಒಟ್ಟು ಒಳಹರಿವು ಕಂಡರೆ ಇ ಎಲ್ ಎಸ್ ಎಸ್ ಮತ್ತು ಸ್ಮಾಲ್ ಕ್ಯಾಪ್ ಫಂಡ್ ಗಳಿಂದ ಹೊರಹರಿವು ದಾಖಲಾಗಿದೆ. ಮಾಸಿಕ ಎಸ್ ಐ ಪಿ ಗಳ ಮೂಲಕ ಸಂಗ್ರಹವಾದ ರೂ.10,351 ಕೋಟಿಯು ಹೊಸದಾಖಲೆಯನ್ನು ಸೃಷ್ಟಿಸಿದೆ. ಮ್ಯೂಚುಯಲ್ ಫಂಡ್ ಗಳ ಇಂಡೆಕ್ಸ್ ಫಂಡ್ ಮತ್ತು ಇಟಿಎಫ್ ಗಳ ಮೂಲಕವೂ ಸುಮಾರು ರೂ.10 ಸಾವಿರ ಕೋಟಿಗೂ ಹೆಚ್ಚಿನ ಹಣ ಒಳಹರಿದಿರುವುದು ಸಹ ಪೇಟೆಯ ಏರಿಕೆಗೆ ಪೂರಕ ಅಂಶವಾಗಿದೆ.
ಯಾವುದೇ ಒಂದು ಸಾರ್ವಜನಿಕ ಕಾರ್ಯಕ್ರಮ, ಕ್ರಿಕೆಟ್, ಸಿನಿಮಾ ಯಶಸ್ಸು ಕಾಣಬೇಕಾದರೆ ಅದರ ಹಿಂದೆ ಜನಸಾಮಾನ್ಯರ ಭಾಗವಹಿಸುವಿಕೆ ಅತಿ ಮುಖ್ಯ. ಅಂತೆಯೇ ಷೇರುಪೇಟೆಯ ಈಗಿನ ವಾತಾವರಣಕ್ಕೆ ಮೂಲ ಕಾರಣ ಜನಸಾಮಾನ್ಯರ ಶಕ್ತಿ. ಈ ವಾತಾವರಣವನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ಧಾರಿತನವು ಸಧ್ಯ ಕಾರ್ಪೊರೇಟ್ ವಲಯ ಮತ್ತು ಸರ್ಕಾರಗಳ ಮೇಲಿದೆ.
ಕಾರ್ಪೊರೇಟ್ ಗಳು ಈ ವಾತಾವರಣವನ್ನು ಮುಂದುವರೆಸಿಕೊಂಡು ಹೋಗಬೇಕಿದ್ದಲ್ಲಿ ಉತ್ತಮ ಸಾಧನೆಯನ್ನು ಮತ್ತು ಬೆಂಬಲಿಸುತ್ತಿರುವ ಷೇರುದಾರರ ಹಿತವನ್ನು ಕಾಪಾಡುವತ್ತ ದಾಪುಗಾಲಿಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ನಿಯಂತ್ರಕರು ಮತ್ತು ಸರ್ಕಾರ ಈ ವಾತಾವರಣವನ್ನು ಕದಡುವಂತಹವರ ಮೇಲೆ ಕಣ್ಗಾವಲು ಇರಿಸಿ ನಂಬಿಕೆಯನ್ನು ಉಳಿಸಿಕೊಡುವಂತಹ ಗುರುತರ ಜವಾಬ್ಧಾರಿ ವಹಿಸಿಕೊಳ್ಳಲೇಬೇಕಾಗಿದೆ.
ಈ ವಾತಾವರಣಕ್ಕೆ ಪೂರಕವಾದ ಅಂಶವೆಂದರೆ ಹಿಂದಿನ ವರ್ಷದ ಅಕ್ಟೋಬರ್ 16 ರಂದು ಸೆನ್ಸೆಕ್ಸ್ -BSE SENSEX_39,982.98 ರಲ್ಲಿದ್ದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.158.37 ಲಕ್ಷ ಕೋಟಿಯಲ್ಲಿತ್ತು. ಅಂದು ನೋಂದಾಯಿತ ಗ್ರಾಹಕರ ಸಂಖ್ಯೆಯು 5.56 ಕೋಟಿ ಇತ್ತು. ಈ ವರ್ಷ ಅಕ್ಟೋಬರ್ 14 ರ ವಾರಾಂತ್ಯದಲ್ಲಿ ಸೆನ್ಸೆಕ್ಸ್ 61,305.95 ರಲ್ಲಿದೆ. ಅಂದರೆ 21,322.97 ಪಾಯಿಂಟುಗಳ ಏರಿಕೆ ಈ ಅವಧಿಯಲ್ಲಿ ಸೆನ್ಸೆಕ್ಸ್ ಕಂಡಿದೆ. ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.272.76 ಲಕ್ಷ ಕೋಟಿಯಾಗಿದೆ. ಮತ್ತೊಂದು ಪ್ರಮುಖ ಅಂಶ ಎಂದರೆ ಈಗ ನೋಂದಾಯಿತ ಗ್ರಾಹಕರ ಸಂಖ್ಯೆಯು 8,27ಕೋಟಿಯಲ್ಲಿದೆ. ಅಂದರೆ ಈ ಒಂದು ವರ್ಷದ ಅವಧಿಯಲ್ಲಿ 2.7 ಕೋಟಿ ನೋದಾಯಿತ ಹೂಡಿಕೆದಾರರ ಸಂಖ್ಯೆಯು ಹೆಚ್ಚಾಗಿದೆ. ಈ ಪ್ರಮಾಣದ ಹೂಡಿಕೆದಾರರ ಮೂಲಕ ಹರಿದುಬರುತ್ತಿರುವ ಹಣದ ಒಳಹರಿವು ಸಹ ಪೇಟೆಯ ಏರಿಕೆಗೆ ಪೂರಕ ಅಂಶವಾಗಿದೆ.
ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳ ಏರಿಳಿತಗಳ ಲಾಭವನ್ನು ವಹಿವಾಟುದಾರರು ಪಡೆದುಕೊಳ್ಳುತ್ತಿರುವಾಗ ಸಣ್ಣ ಹೂಡಿಕೆದಾರರು ಸಹ ಅಲ್ಪ ಪ್ರಮಾಣದಲ್ಲಿ ಲಾಭ ಗಳಿಸಲು ಪ್ರಯತ್ನಿಸಬಹುದು. ಆದರೆ ಸದಾ ನೆನಪಿನಲ್ಲಿಡಬೇಕಾದ ಅಂಶ ಎಂದರೆ ಈ ಚಟುವಟಿಕೆಯು ವ್ಯವಹಾರಿಕ ದೃಷ್ಠಿಯಿಂದ, ದೀರ್ಘಕಾಲೀನ ಎಂಬ ಮೋಹಕ ಪದದಿಂದ ದೊರೆಯುವ ಅವಕಾಶ ಕಳೆದುಕೊಳ್ಳದೆ, ʼಆನೆಯಾಗಿ ಸೊಪ್ಪು ತಿನ್ನುವುದಕ್ಕಿಂತ – ಇರುವೆಯಾಗಿ ಸಕ್ಕರೆ ತಿನ್ನುವುದು ಲೇಸುʼ ಎಂಬುದು. ಗಜಗಾತ್ರದ ವಹಿವಾಟಿನ ವ್ಯಾಮೋಹ ಬೇಡ, ಸೀಮಿತ ಲಾಭಕ್ಕೆ ಸೀಮಿತಗೊಳಿಸಿಕೊಂಡಲ್ಲಿ ಬಂಡವಾಳವೂ ಸುರಕ್ಷಿತ ಮತ್ತು ಮನಸ್ಸು ಮತ್ತು ದೇಹಗಳ ಸೌಖ್ಯವೂ ಸಾಧ್ಯ. ಸಾಧ್ಯವಾದಷ್ಠು ಹೂಡಿಕೆಗುಚ್ಚವನ್ನು ಹೆಚ್ಚು ಹೆಚ್ಚು ಕಂಪನಿಗಳಿಗೆ ವಿಸ್ತರಿಸಿರಿ ಮತ್ತು ಷೇರಿನ ದರಗಳ ಕುಸಿತಕ್ಕೆ ಕಾಯಿರಿ. ಖಂಡಿತಾ ಅವಕಾಶಗಳು ಸೃಷ್ಠಿಯಾಗುತ್ತವೆ. ಇತ್ತೀಚಿನ ಕೆಲವು ಉದಾಹರಣೆಗಳನ್ನು ಪರಿಶೀಲಿಸಿರಿ. ಇದು ಯಾವುದೇ ರೀತಿಯ ಶಿಫಾರಸ್ಸು ಅಲ್ಲ, ಕೇವಲ ನಿದರ್ಶನಕ್ಕೆ ಮಾತ್ರ.
ಬೊರೊಸಿಲ್‌ರಿನ್ಯೂವಬಲ್ಸ್‌ಲಿಮಿಟೆಡ್:ಈ ಕಂಪನಿಯು ಕಳೆದ ಒಂದು ತಿಂಗಳಿನಲ್ಲಿ ರೂ.293 ರ ಸಮೀಪದಿಂದ ರೂ.453 ರವರೆಗೂ ಜಿಗಿತ ಕಂಡಿದೆ. ಸೋಜಿಗವೆಂದರೆ ಹಿಂದಿನ ವರ್ಷದ ಅಕ್ಟೋಬರ್‌ನಂದು ರೂ.72 ರಲ್ಲಿದ್ದಂತಹ ಈ ಕಂಪನಿ ಷೇರಿನ ಬೆಲೆ ಈ ವರ್ಷದ ಅಕ್ಟೋಬರ್14 ರಂದು ರೂ.453 ನ್ನು ತಲುಪಿದೆ ಎಂದರೆ ಒಂದೇ ವರ್ಷದಲ್ಲಿ ರೂ.380 ಕ್ಕೂ ಹೆಚ್ಚಿನ ಏರಿಕೆ ಕಂಡು ವಿಜೃಂಭಿಸಿದೆ. ಈ ತಿಂಗಳ 21 ರಂದು ಕಂಪನಿಯು ತನ್ನ ಎರಡನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸುವ ಕಾರ್ಯಸೂಚಿ ಪ್ರಕಟಿಸಿದೆ.
ಈ ಸುದ್ಧಿಯೇ ಹೆಚ್ಚಿನ ನಿರೀಕ್ಷೆಯನ್ನು ಸೃಷ್ಠಿಸಿದೆಯೇ? ಕಾದು ನೋಡೋಣ. ಮತ್ತೊಂದು ಪ್ರಮುಖ ಅಂಶ ಎಂದರೆ ಈ ಕಂಪನಿಯು 65,250 ಷೇರುಗಳನ್ನು ಕೇಂದ್ರ ಸರ್ಕಾರದ ಇನ್ವೆಸ್ಟರ್ ಎಜುಕೇಷನ್‌ಅಂಡ್‌ಪ್ರೊಟೆಕ್ಷನ್‌ಫಂಡ್‌ಗೆ ವರ್ಗಾಯಿಸಿದೆ. ಸೋಮವಾರ ತನ್ನ ಏರಿಕೆಯನ್ನು ಮುಂದುವರೆಸಿ ರೂ.475 ರಲ್ಲಿದೆ.
ಗೋದಾವರಿ ಪವರ್‌ಅಂಡ್‌ಇಸ್ಪಾಟ್ ಲಿಮಿಟೆಡ್:
ಈ ಕಂಪನಿಯು ಆಗಸ್ಟ್ ತಿಂಗಳಲ್ಲಿ ಪ್ರತಿ ಷೇರಿಗೆ ರೂ.18.50 ಯಂತೆ ಲಾಭಾಂಶ ವಿತರಿಸಿದ ನಂತರ ರೂ.1,400 ರ ಸಮೀಪದಿಂದ ನಿರಂತರವಾಗಿ ಇಳಿಕೆ ಕಂಡು ರೂ.1,000 ದ ವರೆಗೂ ಕುಸಿಯಿತು. ಆ ಸಂದರ್ಭದಲ್ಲಿ ಕಂಪನಿಯು ಬೋನಸ್ ಷೇರು ಮತ್ತು ಮುಖಬೆಲೆ ಸೀಳಿಕೆಯ ಪರಿಶೀಲನೆ ಪ್ರಕಟಿಸಿದ ನಂತರ ಏರಿಕೆಯಿಂದ ರೂ. 1,400 ಕ್ಕೆ ಜಿಗಿದು ಮತ್ತೆ ಕುಸಿಯಿತು. 14ನೇ ಅಕ್ಟೋಬರ್ ಕಂಪನಿಯ ಷೇರುದಾರರು ಮುಖಬೆಲೆ ಸೀಳಿಕೆ ಮತ್ತು ಬೋನಸ್ ಷೇರಿಗೆ ಸಮ್ಮತಿಸಿದ್ದರಿಂದ ಸೋಮವಾರ ಷೇರಿನ ಬೆಲೆ ರೂ.1,425 ರ ಸಮೀಪದಲ್ಲಿ ಗರಿಷ್ಠ ಆವರಣಮಿತಿಯಲ್ಲಿತ್ತು. ಈ ತಿಂಗಳ 26 ನಿಗದಿತ ದಿನವಾಗಿದೆ.
ಹಿಂದೂಸ್ಥಾನ್ ಝಿಂಕ್ ಲಿಮಿಟೆಡ್:
ಈ ಕಂಪನಿಯು ಆಗಷ್ಟ್ 17 ರಂದು ಮಧ್ಯಂತರ ಲಾಭಾಂಶ ವಿತರಣೆ ಪರಿಶೀಲನೆಯ ಕಾರ್ಯಸೂಚಿ ಪ್ರಕಟಿಸಿದಾಗ ಷೇರಿನ ಬೆಲೆ ರೂ.332 ರ ಸಮೀಪವಿದ್ದು, ಲಾಭಾಂಶ ಪರಿಶೀಲನೆಯನ್ನು ಮುಂದೂಡಿದ ಕಾರಣ ಷೇರಿನ ಬೆಲೆ ರೂ.311 ರ ವರೆಗೂ ಇಳಿದು ನಂತರದ ದಿನಗಳಲ್ಲಿ ಪುಟಿದೆದ್ದಿತು. ಸೆಪ್ಟೆಂಬರ್ 14 ರಂದು ಮತ್ತೊಮ್ಮೆ ಏರಿಕೆಯಿಂದ ರೂ.338 ನ್ನು ತಲುಪಿ ಅಕ್ಟೋಬರ್ 1 ರಂದು ರೂ.306 ಕ್ಕೆ ಕುಸಿದು 18 ರಂದು ರೂ.407.90 ರ ವಾರ್ಷಿಕ ಗರಿಷ್ಠಕ್ಕೆ ಜಿಗಿದು ರೂ.387 ರ ಸಮೀಪದಲ್ಲಿ ಕೊನೆಗೊಂಡಿದೆ. ಈ ತಿಂಗಳ 22 ರಂದು ಕಂಪನಿಯು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ. ಆದರೆ ಲಾಭಾಂಶದ ಬಗ್ಗೆ ಅಧಿಕೃತ ಪ್ರಕಟಣೆಯಿಲ್ಲ. ಕೇವಲ ಒಂದೆರಡು ತಿಂಗಳಲ್ಲಿ ಈ ಪರಿಯ ಏರಿಳಿತಗಳು ಪೇಟೆಯು ದಣಿದಿರುವುದರ ಸಂಕೇತವೇ ಎಂಬುದನ್ನು ಕಾದು ನೋಡಬೇಕಾಗಿದೆ.
ಮೈಂಡ್‌ಟ್ರೀ, ಬಿ ಇ ಎಂ ಎಲ್, ಹಿಕಾಲ್, ಕಮ್ಮಿನ್ಸ್, ಐಟಿಸಿ, ತಿರುಮಲೈ ಕೆಮಿಕಲ್ಸ್, ಗುಡ್‌ಇಯರ್, ಹೆಚ್‌ಐ ಎಲ್, ಟಾಟಾ ಮೋಟಾರ್ಸ್, ಮದರ್ಸನ್‌ಸುಮಿ, ಲೌರಸ್‌ಲ್ಯಾಬ್, ದಿಲೀಪ್‌ಬ್ಯುಲ್ಡ್‌ಕಾನ್, ಮೆಟ್ರೋಪೊಲಿಸ್‌ಹೆಲ್ತ್‌ಕೇರ್, ಇಪ್ಕಾ ಲ್ಯಾಬ್ಸ್, ಗಳಂತಹ ಕಂಪನಿಗಳು ಈಚಿನ ದಿನಗಳಲ್ಲಿ ಅತೀವ ಏರಿಳಿತಗಳನ್ನು ಪ್ರದರ್ಶಿಸಿವೆ. ಇವು ಕೆಲವು ಕಂಪನಿಗಳಲ್ಲಿ ದೀರ್ಘಕಾಲೀನದಲ್ಲೂ ಲಾಭದ ಇಳುವರಿ ಒದಗಿಸದ ಮಟ್ಟದಲ್ಲಿ ಅಲ್ಪಕಾಲೀನದಲ್ಲೇ ಅಧಿಕ ಲಾಭ ಗಳಿಸಿಕೊಟ್ಟಿವೆ. ಇವು ಹೂಡಿಕೆದಾರರು ಹೂಡಿಕೆ ಎಂಬ ಚಕ್ರವ್ಯೂಹದೊಳಗೆ ಅಭಿಮನ್ಯುಗಳಾಗದೆ, ಅರ್ಜುನರಾಗಬೇಕೆಂದು ತಿಳಿಸುತ್ತಿದೆಯೇ ನೀವೇ ನಿರ್ಧರಿಸಿರಿ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
ಉಪಯುಕ್ತ ಮಾಹಿತಿ. ಸಂಪಾದಕರಿಗೆ
ಕೃಪಾಲರಿಗೆ ಧನ್ಯವಾದಗಳು