Indian Stock Market- ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ಈ ವರ್ಷದ ಆರಂಭದಲ್ಲಿ 47,700 ರ ಮಟ್ಟದಲ್ಲಿದ್ದು, ಆಗಿನ ಮಾರ್ಕೆಟ್ ಕ್ಯಾಪಿಟಲೈಸೇಷನ್ ಮೊತ್ತವು ರೂ.189 ಲಕ್ಷ ಕೋಟಿಯ ಸಮೀಪವಿತ್ತು. ಆ ಸಂದರ್ಭದಲ್ಲಿ ನೋಂದಾಯಿಸಿಕೊಂಡಿದ್ದ ರೀಟೇಲ್ ಗ್ರಾಹಕರ ಸಂಖೈ ಮಾತ್ರ ಕೇವಲ 5.89 ಕೋಟಿಯಷ್ಠೆ. ಸಧ್ಯ ಸೆನ್ಸೆಕ್ಸ್60,821 ಪಾಯಿಂಟುಗಳಲ್ಲಿದ್ದು, ರೂ.264.39 ಲಕ್ಷ ಕೋಟಿ ಮಾರ್ಕೆಟ್‌ಕ್ಯಾಪಿಟಲೈಸೇಷನ್‌ಹೊಂದಿದೆ.
ಈ ಭಾರಿ ಬೆಳವಣಿಗೆಯ ಹಿಂದೆ ಅಡಕವಾಗಿರುವ ನಮ್ಮ ದೇಶದ ಜನಶಕ್ತಿ. ನೋಂದಾಯಿತ ಗ್ರಾಹಕರ ಸಂಖ್ಯೆಯು 8.37 ಕೋಟಿಗೆ ಏರಿಕೆಯಾಗಿದೆ. ಇದೇ ರೀತಿಯ ರೀಟೇಲ್ ಗ್ರಾಹಕರ ಆಸಕ್ತಿ ಹೆಚ್ಚುತ್ತಾ ಹೋದರೆ ನಮ್ಮ ಷೇರುವಿನಿಮಯ ಕೇಂದ್ರಗಳಲ್ಲಿ ಲಿಸ್ಟಿಂಗ್‌ಆಗಿರುವ ಕಂಪನಿಗಳು ಅತಿ ವಿರಳವಾದಂತಾಗಿ, ಬೇಡಿಕೆಯನ್ನು ಪೂರೈಸಲಸಮರ್ಥವಾಗಿ, ಲಿಸ್ಟಿಂಗ್‌ಆಗಿರುವ ಕಂಪನಿಗಳಿಗೆ ಭಾರಿ ಬೇಡಿಕೆಯನ್ನುಂಟುಮಾಡಿ ಷೇರಿನ ಬೆಲೆಗಳನ್ನು ಮತ್ತಷ್ಟು ಏರಿಕೆಗೊಳಪಡಿಸಲೂಬಹುದು. ಹೊಸದಾಗಿ ನೋಂದಾಯಿಸಿಕೊಂಡಿರುವ ಗ್ರಾಹಕರ ಪಟ್ಟಿಯಲ್ಲಿ ಮಹರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಗುಜರಾತ್, ಉತ್ತರ ಪ್ರದೇಶ, ಕರ್ನಾಟಕಗಳು ಇವೆ. ಈ ಹೂಡಿಕೆದಾರರು, ಪೇಟೆಯ ಏರಿಳಿತಗಳಿಗೆ, ಎಷ್ಟರ ಮಟ್ಟಿಗೆ ಸ್ಥಿರವಾಗಿರುತ್ತಾರೆ ಎಂಬುದು ಮುಖ್ಯ.
ಸೆನ್ಸೆಕ್ಸ್60 ಸಾವಿರದ ಗಡಿದಾಟಿ ನಿವೃತ್ತಿಯ ಹಂತ ತಲುಪಿದೆ ಎಂದು ಒಂದೆಡೆ ವಿಶ್ಲೇಷಿಸಬಹುದಾದರೆ, ನಿಫ್ಟಿಯು-NIFFTY- 18 ಸಾವಿರದ ಗಡಿದಾಟಿ ಯೌವನಕ್ಕೆ ಪಾದಾರ್ಪಣೆ ಮಾಡಿದೆ ಎನ್ನುವರು. ಈ ಮಧ್ಯೆ ಪೇಟೆಯು ಇಳಿಕೆಯಾದರೆ ದಣಿವಿನಿಂದ ನಿವೃತ್ತಿ ಎಂದಾದರೆ, ಷೇರುಪೇಟೆ ಏರಿಕೆ ಕಂಡಲ್ಲಿ ಯೌವನದ ಪ್ರಭಾವ ಎನ್ನಬಹುದು. ಅಂದರೆ ಪೇಟೆಯು ಯಾವ ದಿಶೆಯಲ್ಲಿ ಸಾಗಿದರೂ ಅದನ್ನು ವಿಶ್ಲೇಷಿಸಬಹುದಾದ ಪರಿಸ್ಠಿತಿಯಲ್ಲಿ ಈಗಿನ ಪೇಟೆಗಳು ತಲುಪಿವೆ. ಆದರೂ ಕಂಪನಿಗಳ ಷೇರುಗಳ ಬೆಲೆಗಳು ಪ್ರದರ್ಶಿಸುವ ಏರಿಳಿತಗಳು, ಕೆಲವು ಭಾರಿ ರಭಸದ ಏರಿಳಿತಗಳು ಹೂಡಿಕೆಗೆ ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ.
ಆದರೆ ಈ ಸಂದರ್ಭದಲ್ಲಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಉತ್ತಮ ಸಾಧನೆಯಾಧಾರಿತವಾದ, ಆಕರ್ಷಕ ಡಿವಿಡೆಂಡ್‌ಗಳನ್ನು ವಿತರಿಸುವ ಹೂಡಿಕೆದಾರ ಸ್ನೇಹಿ ಆಡಳಿತ ಮಂಡಳಿ ಹೊಂದಿರುವ, ಬೆಲೆಗಳು ಕುಸಿತಕಂಡಿರುವ ಕಂಪನಿಗಳನ್ನು ಮಾತ್ರ ಗಮನಿಸಬೇಕು. ನಂತರದಲ್ಲಿ ಆ ಷೇರು ಒದಗಿಸುವ ಲಾಭದತ್ತಲೇ ಗಮಿನವಿರಿಸಿ ನಿರ್ಗಮಿಸುವ / ಲಾಭಗಳಿಕೆಗಾಗಿ ನಗದೀಕರಣ ಮಾಡಿಕೊಳ್ಳುವಂತಿದ್ದಲ್ಲಿ ಮಾತ್ರ ಹೂಡಿಕೆ ಯಶಸ್ಸು ಕಾಣಲು ಸಾಧ್ಯ.
ಪೇಟೆಯಲ್ಲಿ ಕೆಲವು ದಿನಗಳಲ್ಲಿ ಪ್ರದರ್ಶಿತವಾದ ಕೆಲವು ಏರಿಳಿತಗಳ ಉದಾಹರಣೆಗಳನ್ನು ಪರಿಶೀಲಿಸೋಣ:
ಲೌರಸ್‌ಲ್ಯಾಬ್ಸ್‌ಲಿಮಿಟೆಡ್:ಈ ಕಂಪನಿಯು ತನ್ನ ಎರಡನೇ ತ್ರೈಮಾಸಿಕದ ಫಲಿತಾಂಶದೊಂದಿಗೆ ಈ ತಿಂಗಳ 28 ರಂದು ಲಾಭಾಂಶ ಪ್ರಕಟಿಸುವ ಕಾರ್ಯ ಸೂಚಿ ಪ್ರಕಟಿಸಿದೆ. ಆದರೆ ಕಳೆದ ಒಂದೇ ವಾರದಲ್ಲಿ ಷೇರಿನ ಬೆಲೆಯು ರೂ.660 ರ ಸಮೀಪದಿಂದ ರೂ.520 ರವರೆಗೂ ಕುಸಿದು ರೂ.537 ರ ಸಮೀಪದಲ್ಲಿದೆ. ಅಂದರೆ ಫಲಿತಾಂಶಕ್ಕೂ ಮುನ್ನ ಈ ರೀತಿ ಕುಸಿತಕ್ಕೊಳಗಾಗಿರುವುದು ಎರಡು ಕಾರಣವಿರಬಹುದು. ಒಂದು ಕಂಪನಿಯ ಸಾಧನೆಯು ಉತ್ತಮವಾಗಿರಲಾರದು ಎಂಬ ಉದ್ದೇಶದಿಂದ ಮಾರಾಟದ ಒತ್ತಡ ಬಂದಿರಬಹುದು, ಇಲ್ಲವೇ ಕಂಪನಿಯ ಸಾಧನೆಯ ಒಳ ಸುದ್ಧಿಯು ಸೋರಿಕೆಯಾಗಿರಬೇಕು, ಪರ್ಯಾಯವಾಗಿ ಸಣ್ಣ ಹೂಡಿಕೆದಾರರ ದಿಕ್ಕು ತಪ್ಪಿಸಲು ಭಾರಿ ಇಳಿಕೆ ಪ್ರದರ್ಶಿಸಿ ನಂತರ ಫಲಿತಾಂಶದ ಕಾರಣ ಏರಿಕೆಗೆ ದಾರಿ ಮಾಡಿಕೊಂಡಿರಲೂ ಬಹುದು. ಕಾದು ನೋಡೋಣ.
ಇಂಡಿಯನ್ ಎನರ್ಜಿ ಎಕ್ಸ್ ಚೇಂಜ್ ಲಿಮಿಟೆಡ್:ಹೊಸದಾಗಿ ʼಎಫ್ & ಒʼ ಸಮೂಹಕ್ಕೆ ಪ್ರವೇಶ ಪಡೆದ ಈ ಕಂಪನಿಯು ಕಳೆದ ಒಂದು ತಿಂಗಳ ಅವಧಿಯಲ್ಲಿ ರೂ.567 ರ ಸಮೀಪದಿಂದ ರೂ.956 ರವರೆಗೂ ಏರಿಕೆ ಕಂಡು, ರೂ.764 ರಲ್ಲಿ ಕೊನೆಗೊಂಡಿದೆ. ವಿಶೇಷವೆಂದರೆ ಕಂಪನಿಯು ಪ್ರತಿ ಒಂದು ಷೇರಿಗೆ ಎರಡು ಷೇರುಗಳ ಬೋನಸ್ ಘೋಷಿಸಿದ ಕಾರಣ ಶುಕ್ರವಾರ ಆರಂಭದಲ್ಲಿ ದಿನದ ಗರಿಷ್ಠ ಆವರಣ ಮಿತಿ ರೂ.833 ರಲ್ಲಿದ್ದು ಸ್ವಲ್ಪ ಸಮಯದ ನಂತರ ರೂ.760 ರವರೆಗೂ ಕುಸಿದು ರೂ.764 ರಲ್ಲಿ ಕೊನೆಗೊಂಡಿದೆ. ಆದರೆ ದಿನದ ಆರಂಭದಲ್ಲಿ ಗರಿಷ್ಠದಲ್ಲಿದ್ದಾಗ ಬೋನಸ್ ಷೇರು ಎಂಬ ಮಾಂತ್ರಿಕ ಪದಕ್ಕೆ ಮೋಹಿತರಾದವರಿಗೆ ಬೇಸರ ಮೂಡಿಸುವಂತಾಯಿತು. ಅಂದರೆ ಚಟುವಟಿಕೆಯಲ್ಲಿ ಯಾವುದೇ ಬೆಳವಣಿಗೆಗಳಿಗೆ ಆದ್ಯತೆ ನೀಡದೆ ಕೇವಲ ʼವ್ಯಾಲ್ಯು ಪಿಕ್ – ಪ್ರಾಫಿಟ್ ಬುಕ್ ʼ ಎಂಬುದು ಅನುಕೂಲಕರವೆಂದಾಯಿತು.
ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್:ಈ ಷೇರಿನ ಬೆಲೆಯು ಕಳೆದ ಒಂದು ತಿಂಗಳಿನಿಂದ ರೂ.222 ರ ಸಮೀಪದಿಂದ ರೂ.264 ರವರೆಗೂ ಏರಿಕೆ ಕಂಡು ರೂ.230 ರ ಸಮೀಪಕ್ಕೆ ಹಿಂದಿರುಗಿದೆ. ಸೆಪ್ಟೆಂಬರ್ 29 ರಂದು ರೂ.222 ರಲ್ಲಿದ್ದ ಷೇರಿನ ಬೆಲೆ ಅಕ್ಟೋಬರ್ 19 ರಂದು ರೂ.264 ರವರೆಗೂ ಜಿಗಿದು, 22 ರಂದು ರೂ.224 ರವರೆಗೂ ಕುಸಿದಿದೆ. ಅಂದರೆ ಸುಮಾರು 20 ದಿನಗಳಲ್ಲಿ ರೂ.42 ರಷ್ಟು ಏರಿಕೆ ಕಂಡು ರೂ.40 ರಷ್ಟು ಇಳಿಕೆ ಕಂಡಿದೆ. ಹಿಂದಿನ ತಿಂಗಳು ಈ ಕಂಪನಿ 1,650 ಕೋಟಿ ಅಮೇರಿಕನ್ ಡಾಲರ್ ಮೌಲ್ಯದ ಫಾರಿನ್ ಕರೆನ್ಸಿ ಕನ್ವರ್ಟಬಲ್ ಬಾಂಡ್ ಗಳನ್ನು ವಿತರಿಸಿದೆ. ನವೆಂಬರ್ 15 ರಂದು ಈ ಕಂಪನಿಯ ವಿಶೇಷ ಸಾಮಾನ್ಯ ಸಭೆ ನಡೆಯಲಿದೆ.
ಜುಬಿಲಿಯಂಟ್ ಇನ್ ಗ್ರೇವಿಯಾ ಲಿಮಿಟೆಡ್:ಈ ಕಂಪನಿಯ ಷೇರು ಒಂದೇ ವಾರದಲ್ಲಿ ಪ್ರದರ್ಶಿಸಿದ ಏರಿಳಿತಗಳನ್ನು ಬೆರಗುಗೊಳಿಸುವಂತಹುದಾಗಿದೆ. ಸೋಮವಾರದಂದು ಕಂಪನಿಯ ಷೇರಿನ ಬೆಲೆ ರೂ.877 ರ ವಾರ್ಷಿಕ / ಸರ್ವಕಾಲೀನ ಗರಿಷ್ಠ ತಲುಪಿತು. 19 ರಂದು ಕಂಪನಿಯು ತನ್ನ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿತು. ವಹಿವಾಟು ಉತ್ತಮವಾಗಿದ್ದರೂ ಲಾಭಗಳಿಕೆಯು ಸ್ವಲ್ಪ ಕುಸಿತದಲ್ಲಿದೆ ಎಂಬ ಅಂಶದಿಂದ ಷೇರಿನ ಬೆಲೆ ಕುಸಿತಕ್ಕೊಳಗಾಗಿ ರೂ.657 ರವರೆಗೂ ತಲುಪಿ ಶುಕ್ರವಾರ ರೂ.689 ಕ್ಕೆ ಜಿಗಿದು ರೂ.677 ರ ಸಮೀಪ ಕೊನೆಗೊಂಡಿದೆ.
ಸ್ಟೀಲ್ ಅಥಾರಿಟೀಸ್ ಆಫ್ ಇಂಡಿಯಾ ಲಿಮಿಟೆಡ್:ಈ ಕಂಪನಿಯ ಷೇರಿನ ಬೆಲೆ ಕೇವಲ ಹತ್ತೇ ದಿನಗಳಲ್ಲಿ ರೂ.115 ರ ಸಮೀಪದಿಂದ ರೂ.131 ರವರೆಗೂ ಜಿಗಿದು, ಅಲ್ಲಿಂದ ರೂ.115 ಕ್ಕೆ ಮರಳಿದೆ. ಕಂಪನಿಯ ಆಡಳಿತ ಮಂಡಳಿಯು ಈ ತಿಂಗಳ 29 ರಂದು ತನ್ನ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ ಎಂಬುದನ್ನು ಶುಕ್ರವಾರ ಸಂಜೆ ಪ್ರಕಟಣೆ ಹೊರಬಿದ್ದಿದೆ. ಇದು ಸೋಮವಾರ ಯಾವರೀತಿಯ ಪ್ರಭಾವ ಬೀರಬಹದೆಂಬುದನ್ನು ಕಾದು ನೋಡಬೇಕಾಗಿದೆ.
ಚಿಂತನೆಗಳನ್ನುಸಕಾರಾತ್ಮಕವಾಗಿರುವಂತೆ ಮಾಡಲು, ರಚನಾತ್ಮಕತೆಯತ್ತ ತೊಡಗಿಸುವುದರೊಂದಿಗೆ ಮಿತವಾದ ಸಂಪಾದನೆ ಗಳಿಸಲು ಸಹ ಸಾಧ್ಯವಿರುವ ಸುಲಭ ಮಾರ್ಗ ಎಂದರೆ ಷೇರುಪೇಟೆ. ಷೇರುಪೇಟೆಯ ಚಟುವಟಿಕೆಗೆ ತೊಡಗಿಸಿಕೊಂಡವರಲ್ಲಿ ಸಾಮಾನ್ಯವಾಗಿ ನಕಾರಾತ್ಮಕವಾದ ಅಭಿಪ್ರಾಯ ಹೊರಬರುವುದು, ಕಾರಣ ನಡೆಸುವ ಚಟುವಟಿಕೆ ಕೇವಲ ಭಾವನಾತ್ಮಕವಾಗಿದ್ದು, ವಾಸ್ತವಿಕತೆಯಿಂದ ದೂರವಿರುವುದಾಗಿದೆ.
ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು, ಈಗಿನ ದಿನಗಳಲ್ಲಿ ಹೆಚ್ಚು ಹೆಚ್ಚು ರೀಟೇಲ್ ಗ್ರಾಹಕರು, ಗೃಹಿಣಿಯರೂ ಸೇರಿದಂತೆ, ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ
ಹಿರಿಯ ನಾಗರೀಕರೂ ಸೇರಿ, ಸೀಮಿತವಾದ, ನಿಯಂತ್ರಿತ ರೀತಿಯಲ್ಲಿ, ಯಾವುದೇ ವ್ಯಾಮೋಹಕ್ಕೊಳಗಾಗದೆ ಕೇವಲ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮಾಡಿ ಆಕರ್ಷಕ ಲಾಭ ಪಡೆಯುವ ಮೂಲಕ ತಮ್ಮ ದೈಹಿಕ, ಮಾನಸಿಕ, ಬಾಧೆಗಳನ್ನು ಮರೆತು ಆರೋಗ್ಯವನ್ನ ವೃದ್ಧಿಸಿಕೊಂಡ ಹಲವಾರು ಉದಾಹರಣೆಗಳುಂಟು. ಕೇವಲ ಮನಿ ವಿಕಾಸಕ್ಕಿಂತ ಮನೋವಿಕಾಸದೊಂದಿಗೆ ಮನಿ ವಿಕಾಸ ಪಡೆದು ಉತ್ತಮ ಸ್ವಾಸ್ಥ್ಯದೊಂದಿಗೆ ಕಾಸುಗಳಿಕೆಯೂ ಆಗುವುದು. ಇದಕ್ಕೆ ಪೂರಕವಾದ ಶೈಲಿ ಎಂದರೆ ʼವ್ಯಾಲ್ಯು ಪಿಕ್ – ಪ್ರಾಫಿಟ್ ಬುಕ್ ʼ, ಇಲ್ಲಿ ಪೇಟೆಗಳು ಗರಿಷ್ಠದಲ್ಲಿರುವ ಕಾರಣ ಪ್ರಾಫಿಟ್ ಬುಕ್ ಗೆ ಹೆಚ್ಚು ಆದ್ಯತೆಯಿರಲಿ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು