21.5 C
Karnataka
Saturday, September 21, 2024

    ಮಾತಾಡ್ ಮಾತಾಡ್ ಕನ್ನಡ;ಲಕ್ಷ ಕಂಠಗಳ ಗೀತ ಗಾಯನ

    Must read

    ಇಂದು ಕರ್ನಾಟಕದ ರಾಜಧಾನಿ ಬೆಂಗಳೂರಿನ ಆಡಳಿತ ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗ ಹಿಂದೆಂದೂ ಕಂಡು ಕೇಳರಿಯದ ಇತಿಹಾಸಕ್ಕೆ ಸಾಕ್ಷಿಯಾಯಿತು.

    ವಿಧಾನಸೌಧದ ಎಲ್ಲ ಮೆಟ್ಟಿಲುಗಳ ಮೇಲೆ ಬಣ್ಣಬಣ್ಣದ ಉಡುಗೆ-ತೊಡುಗೆ ತೊಟ್ಟ ಪುರುಷರು ಮಹಿಳೆಯರು ಅಧಿಕಾರಿಗಳು ಸಿಬ್ಬಂದಿ ವರ್ಗದವರು, ಆರಕ್ಷಕ ಅಧಿಕಾರಿಗಳು ಆರಕ್ಷಕ ಸಿಬ್ಬಂದಿ ಹೀಗೆ ಯಾವ ಭೇದ ಭಾವಗಳಿಲ್ಲದೆ, ಶಿಷ್ಟಾಚಾರಗಳ ಹಂಗಿಲ್ಲದೆ ಒಟ್ಟಿಗೆ ನಿಂತು ಕನ್ನಡದ ಗೀತೆಗಳನ್ನು ಹಾಡುವ ಮೂಲಕ ಕನ್ನಡಕ್ಕಾಗಿ ನಾವು ಅಭಿಯಾನ ಒಂದು ಚರಿತ್ರಾರ್ಹ ಘಟನೆಯಾಗಿ ದಾಖಲಾಯಿತು.

    ಬೆಳಿಗ್ಗೆ ಸರಿಯಾಗಿ ಹನ್ನೊಂದು ಗಂಟೆಗೆ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿರ್ಮಿಸಲಾಗಿದ್ದ ಬೃಹತ್ ಪರದೆಯ ಮುಂದೆ ನಿಂತು ಕನ್ನಡ ಗೀತ ಗಾಯನದ ಮಹತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರ ಜೊತೆಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳನ್ನು ಒಳಗೊಂಡಂತೆ ಎಲ್ಲಾ ಹಿರಿಯ ಭಾರತೀಯ ಆಡಳಿತ ಸೇವೆಯ ಹಾಗೂ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳು. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ವರ್ಗದವರು ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪೂರ್ವ ಕಾರ್ಯಕ್ರಮವನ್ನಾಗಿ ಮಾಡಲು ಸಹಕರಿಸಿದರು.

    ಹುಬ್ಭಳ್ಳಿಯಲ್ಲಿ ಮುಖ್ಯಮಂತ್ರಿ

    ಹುಬ್ಬಳ್ಳಿಯಲ್ಲಿಂದು ಮಹಾನಗರಪಾಲಿಕೆ ಏರ್ಪಡಿಸಿದ್ದ ಕನ್ನಡ ಸಂಸ್ಕೃತಿ ವೈಭವ, ಕನ್ನಡದ ಶ್ರೇಷ್ಟತೆ ಸಾರುವ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದರು.


    ಇದೇ ರೀತಿ ಇಡೀ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ತಾಲೂಕು ಕೇಂದ್ರಗಳಲ್ಲಿ ಹಾಗೂ ಎಲ್ಲ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮ ಭಾರಿ ಉತ್ಸಾಹ ,ಸಡಗರ ಸಂಭ್ರಮದಿಂದ ನಡೆಯಿತು.ಒಂದು ಅಂದಾಜಿನ ಪ್ರಕಾರ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಂಖ್ಯೆ ಸುಮಾರು 18 ಲಕ್ಷ ಎಂದು ವರದಿಗಳು ತಿಳಿಸಿವೆ.


    ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿ ಹಾಗೆಯೇ ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಈ ಗೀತಗಾಯನ ಅಭೂತಪೂರ್ವ ಜನಸ್ಪಂದನ ಯೊಂದಿಗೆ ಆಯೋಜನೆಗೊಂಡಿತ್ತು.
    ನೂರಾರು ಗಾಯಕರು ಕಲಾವಿದರು ಸಾಹಿತಿಗಳು ಜನಸಾಮಾನ್ಯರು ಇದರಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

    ವಿಶ್ವವಿಖ್ಯಾತ ಗೋಲ್ ಗುಂಬಜ್ ಮುಂಭಾಗದಲ್ಲಿ 50 ಕಲಾತಂಡಗಳು 250 ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
    ಮಂಡ್ಯದ ಸರ್ ಎಂ ವಿ ಕ್ರೀಡಾಂಗಣದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
    ಉಡುಪಿಯ ಶ್ರೀಕೃಷ್ಣ ದೇಗುಲದ ಮುಂಭಾಗ ಮತ್ತು ಹಂಪಿಯ ಐತಿಹಾಸಿಕ ಸ್ಮಾರಕಗಳ ಮುಂದೆ ಅಭೂತಪೂರ್ವ ಕನ್ನಡ ಗೀತೆಗಳ ಮಾರ್ದನಿಸಿದವು.

    ಬೆಂಗಳೂರು ವಿಭಾಗದ 125 ಸ್ಥಳಗಳಲ್ಲಿ 161232ಮಂದಿ ಕನ್ನಡ ಗೀತೆಗಳಿಗೆ ತಮ್ಮ ದನಿಗೂಡಿಸಿದರು.

    ಮೈಸೂರು ವಿಭಾಗದಲ್ಲಿ
    96 ಸ್ಥಳಗಳಲ್ಲಿ 541365ಜನ ಈ ಗೀತ ಗಾಯನದಲ್ಲಿ ಪಾಲ್ಗೊಂಡರು.

    ಬೆಳಗಾವಿ ವಿಭಾಗದ 105 ಸ್ಥಳಗಳಲ್ಲಿ 1074418ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಕಲಬುರ್ಗಿ ವಿಭಾಗದ 60 ಸ್ಥಳಗಳಲ್ಲಿ 77125ಜನ ಈ ಗೀತ ಗಾಯನ ದ ಮಾಧುರ್ಯಕ್ಕೆ ಜೊತೆಯಾದರು.

    ದೆಹಲಿ ಮುಂಬಯಿ ಕಾಸರಗೋಡು ಮತ್ತು ಪುಣೆ ಹೀಗೆ ಹೊರರಾಜ್ಯಗಳಿಂದ 31 ಸ್ಥಳಗಳಲ್ಲಿ 350 ಮಂದಿ ಈ ಗೀತ ಗಾಯನದ ಸಂಭ್ರಮಕ್ಕೆ ಜೊತೆಯಾದರು.

    ಒಟ್ಟಾರೆ ಇದು ದಾಖಲೆಯ ಮೇಲೆ ದಾಖಲೆ ಬರೆದ ಕಾರ್ಯಕ್ರಮವಾಗಿ ಕನ್ನಡ ಸಂಸ್ಕೃತಿಯ ಅಧ್ಯಾಯದಲ್ಲಿ ಅಚ್ಚಳಿಯದೆ ಉಳಿಯಿತು.

    spot_img

    More articles

    2 COMMENTS

    1. ರಾಜ್ಯೋತ್ಸವದ ಸಂದರ್ಭದಲ್ಲಿ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!