ನಿಷ್ಕಲ್ಮಶ ನಗುವಿನ ಸರದಾರ ಹೊರಟು ಹೋಗಿದ್ದಾನೆ.ಹಣ್ಣೆಲೆಯನ್ನೇ ಉಳಿಸಿ ಚಿಗುರೆಲೆಯೊಂದು ಉದುರಿಹೋಗಿದೆ. ಏನೋ ಮೋಡಿಯಾಗಿ ಆ ಚಿಗುರೆಲೆಯನ್ನು ಮರ ಮತ್ತೆ ತನ್ನ ಹರೆಗೆ ಅಂಟಿಸಿಕೊಳ್ಳಬಹುದಾ ಎನ್ನುವ ನಿರೀಕ್ಷೆ ಮತ್ತೂಮತ್ತೂ ಹುಟ್ಟುತ್ತಲೇ ಇದೆ.ಅದು ಹುಸಿ ನಿರೀಕ್ಷೆ ಎಂಬುದು ಗೊತ್ತಿದ್ದರೂ ಮನಸ್ಸು ಸುಳ್ಳನ್ನೇ ನೆಚ್ಚಿಕೂತಿದೆ.
ಆದರೂ..
ಕಲಾವಿದರ ಎದೆ ಮೇಲೆ ನಿರೀಕ್ಷೆಯ ಹೊರೆಯನ್ನು ಹೇರುವವರು ನಾವೇ ಅಲ್ಲವೇ?ಅವರ ಅಭಿಮಾನಿಗಳು?
ಅಪ್ಪುವಿನ ಸಿಕ್ಸ್ ಪ್ಯಾಕಿಗೆ ಥಿಯೇಟರ್ರೇ ಹಾರಿ ಹೋಗುವಂತೆ ಸಿಳ್ಳೆ ಚಪ್ಪಾಳೆ ಹೊಡೆದು ನೀವು ಹೀಗೇ ಇರಬೇಕು ಎನ್ನುವ ಭಾರ ಹೊರಿಸಿದವರು?
ಅವರ ಅತಿವೇಗದ ನೃತ್ಯಕ್ಕೆ ಇನ್ನಿಲ್ಲದಂತೆ ಹುಚ್ಚೆದ್ದವರು?
ಬ್ಯಾಕ್ ಕಿಕ್ಕನ್ನು ,ಫೈಟ್ ಮಾಡುವ ಸೊಗಸನ್ನು ಕಣ್ರೆಪ್ಪೆ ಮಿಟುಕಿಸದೆ ನೋಡಿ., ಆ ಮೂಲಕ ನೀವು ಹೀಗೇ ಇರಬೇಕು ಎಂಬ ಪರೋಕ್ಷ ಸಂದೇಶ ತಲುಪಿಸಿದವರು ನಾವೇ ಅಲ್ಲವೇ?
ಅಪ್ಪು, ನಿಮ್ಮ ಸಿಕ್ಸಪ್ಯಾಕ್ ಹೊರತಾಗಿಯೂ ನೀವು ನಮಗಿಷ್ಟ.
ಸಾದಾ ಡ್ಯಾನ್ಸ್ ಮಾಡಿದರೂ ನಿಮ್ಮನ್ನು ಆರಾಧಿಸುತ್ತೇವೆ.
ನಿಮ್ಮನ್ನು ಪ್ರೀತಿಸುವುದು ನಿಮ್ಮ ನಗುವಿಗೆ,ನಿಮ್ಮ ಮಗುತನಕ್ಕೆ,ನಿಮ್ಮ ಹಮ್ಮುಬಿಮ್ಮುಗಳಿಲ್ಲದ ನಡಾವಳಿಗೆ.
ಹೌದಲ್ಲವೇ?
ಯಾವುದೇ ಕಲಾವಿದನಿಗೂ ಅಭಿಮಾನಿಗಳು ಮನದಟ್ಟು ಮಾಡಬೇಕಾದ ಸಂಗತಿ ಇದು ತಾನೇ?
ಅಪ್ಪುವಿನ ಸಿನೆಮಾ ನೋಡಿದ ಯಾವುದೇ ಹೆಣ್ಣೂ ಅಂತಹ ಪಾರ್ಟನರ್ ಸಿಗಲಿ ಎಂದುಕೊಂಡಿದ್ದಕ್ಕಿಂತ ಇವನಂಥ ಜೀವದ ಗೆಳೆಯನೊಬ್ಬ ಸಿಕ್ಕರೆ ಎಂದುಕೊಂಡಿದ್ದೇ ಹೆಚ್ಚಲ್ಲವೇ?
ಇವನಂಥ ಅಣ್ಣ ತಮ್ಮ ಸಿಕ್ಕರೇ ಅದೆಷ್ಟು ಸೊಗಸು ಎಂದುಕೊಂಡೆವಲ್ಲವೇ? ಪ್ರತಿ ತಾಯಿಯೂ ಅಪ್ಪುವಿನಂತ ಮಗ ಹುಟ್ಟಲಿ ಎಂದುಕೊಂಡಿದ್ದರಲ್ಲವೇ?
ಹಾಗಿದ್ದರೆ
ಇನ್ಯಾವ ದೂರತೀರದ ಮೋಹದ ಮುರುಳಿ ನಿಮ್ಮನ್ನು ಆ ಮಟ್ಟಿಗೆ ದಂಡಿಸಿಕೊಳ್ಳುವಂತೆ ಮಾಡಿತು ಅಪ್ಪು?
ಪ್ರತಿ ಕಲಾವಿದನೂ ವೈಯುಕ್ತಿಕ ಆಸೆ ಹಂಬಲ ಗುರಿಗಳ ಜೊತೆಗೆ ಸಮಾಜದ ಜವಾಬ್ದಾರಿಯನ್ನು ಬೇಕಿಲ್ಲದಿದ್ದರೂ ಹೊತ್ತಿರುತ್ತಾನೆ.ಅವನನ್ನು ಹಿಂಬಾಲಿಸುವ ದೊಡ್ಡದೊಂದು ಯುವ ಸಮೂಹ ಇದ್ದೇ ಇರುತ್ತದೆ. ಅದರಲ್ಲೂ ಅಪ್ಪುವಿನಂಥ ಸಮಾಜಮುಖಿ ವ್ಯಕ್ತಿತ್ವದ ನಾಯಕನನ್ನು ನೂರಾರು ಜೀವಗಳು ನೆಚ್ಚಿಕೊಂಡಿರುತ್ತವೆ.
ಈ ನೆಚ್ಚುಗೆಯ ಋಣ ಅಪ್ಪುವನ್ನು ಎಚ್ಚರಿಸಬೇಕಿತ್ತು ಅಂತ ತೀವ್ರವಾಗಿ ಅನಿಸ್ತಿದೆ.
ಸಣ್ಣ ನೋವು ಕಾಣಿಸಿಕೊಂಡಾಗಲೇ ವೈದ್ಯರನ್ನು ಕಂಡಿದ್ದರೆ,ನೋವನ್ನು ಕಡೆಗಣಿಸದಿದ್ದರೆ ಅಥವಾ ಸುಮ್ಮನೆ ಆರಾಮು ಮಾಡಿದ್ದರೆ?ಅರಮನೆಯಲ್ಲಿ ರಾಜಕುಮಾರ ಉಳಿಯುತ್ತಿದ್ದ. ಲೋಕದ ಶೋಕ ಈ ಮಟ್ಟಿಗೆ ಹೆಚ್ಚುತ್ತಿರಲಿಲ್ಲ.ಪರಮ್ ಈ ಹೊತ್ತಿಗೆ ಪರಮಾತ್ಮನಾಗುತ್ತಿರಲಿಲ್ಲ.
ನಿಮ್ಮ ದಿನಚರಿ ,ನಿಮ್ಮ ಆಹಾರ ವಿಹಾರ, ನಿಮ್ಮ ಕುಟುಂಬ, ನಿಮ್ಮ ಮನಸ್ಥಿತಿ ಎಲ್ಲವನ್ನೂ ಕೇಳಿ, ಓದಿ ಅಷ್ಟೇ ಪರಿಚಿತರು ನಾವು. ಜಡ್ಜಮೆಂಟಲ್ ಆದ ಮಾತುಗಳನ್ನು ಹೇಳುವುದು ಒಳಗೊಂದು ಮುಳ್ಳುಮುರಿದ ಭಾವ ಹುಟ್ಟಿಸುತ್ತದೆ.
…
ಇದೆಲ್ಲದರ ಹೊರತಾಗಿಯೂ
‘ನಾವೇನ್ ತಿಂತಿವಿ..ಎಲ್ಲ್ ಮಲಗ್ತಿವಿ…ಎಲ್ಲ ಬರೆದುಬಿಟ್ಟಿದ್ದಾನೆ…ವಿಧಿ…ವಿಧಿಯ ಮುಂದೆ ನಮ್ದೇನಿಲ್ಲ..’
ಮನ ಮುಟ್ಟುವ ಹಾಗೆ ಬರೆದಿದ್ದೀರಿ ನಂದಿನಿಯವರೆ ಹಾಗೇ ಅಂತಿಮ ಸತ್ಯವನ್ನೂ ತಿಳಿಸಿದ್ದೀರಿ.