ಜನವರಿ 26ರಂದು ಗ್ರಾಮೀಣ ಭಾಗಕ್ಕೂ ವಿಸ್ತರಣೆ
ಸದ್ಯಕ್ಕೆ 8 ಇಲಾಖೆಗಳ 58 ಸೇವೆಗಳು ಲಭ್ಯ
ಕೇವಲ 115 ರೂ ಶುಲ್ಕ ನಿಗದಿ
ಬೆಂಗಳೂರು:
ಆಧಾರ್ ಕಾರ್ಡ್, ವಿಧವಾ ಪಿಂಚಣಿ, ವೃದ್ಧಾಪ್ಯ ವೇತನ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ 58 ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವ ಜನ ಸೇವಕ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಮಲ್ಲೇಶ್ವರನಲ್ಲಿ ಚಾಲನೆ ನೀಡಿದರು.
ಪ್ಯಾಲೇಸ್ ಗುಟ್ಟಹಳ್ಳಿಯ 4 ಮತ್ತು 5ನೇ ಅಡ್ಡರಸ್ತೆಗಳಲ್ಲಿರುವ ಆಯ್ದ 10 ಮನೆಗಳಿಗೆ ಸ್ಥಳೀಯ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಜತೆ ತೆರಳಿದ ಮುಖ್ಯಮಂತ್ರಿಯವರು ವಿವಿಧ ಸೇವೆಗಳನ್ನು ಸಂಬಂಧಪಟ್ಟವರ ಮನೆಯೊಳಗೇ ಹೋಗಿ ತಲುಪಿಸಿದರು. ಇದರಿಂದ ಸ್ಥಳೀಯ ಜನರು ಹರ್ಷಚಿತ್ತರಾದರು. ಮುಖ್ಯಮಂತ್ರಿ ಮತ್ತು ಸಚಿವರಿಗೆ ಪುಷ್ಪವೃಷ್ಟಿ ಮಾಡಿ ಸಂಭ್ರಮಿಸಿದರು. ಪ್ರತಿ ಮನೆಯ ಒಳಗೆ ಹೋಗಿ, ಅವರಿಗೆ ಆಧಾರ್ ಕಾರ್ಡ್, ಆರೋಗ್ಯ ಕಾರ್ಡ್, ಎಪಿಎಲ್ ಕಾರ್ಡ್ ನೀಡಿದರು. ನಿರ್ಮಾಣ ಹಂತದ ಕಟ್ಟಡದೊಳಗೆ ಹೋಗಿ ಅಲ್ಲಿದ್ದ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ನೀಡಿದರು. ತಳ್ಳುವ ಗಾಡಿಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ಮಹಿಳೆಗೆ ಆರೋಗ್ಯ ಕಾರ್ಡ್ ನೀಡಿದರು. ಮುಖ್ಯಮಂತ್ರಿಯೇ ಬಂದು ಈ ರೀತಿ ಸೇವೆ ಒದಗಿಸಿದ್ದು ನಿಜಕ್ಕೂ ಸಂತಸ ತಂದಿದೆ ಎಂದು ಎಲ್ಲರೂ ಧನ್ಯತೆ ಮೆರೆದರು.
ಈ ಯೋಜನೆಯನ್ನು ಇಡೀ ಬೆಂಗಳೂರಿನಲ್ಲಿ ಜಾರಿ ಮಾಡುತ್ತಿದ್ದು, ಅದರ ಸಾಂಕೇತಿಕ ಉದ್ಘಾಟನೆ ಮಲ್ಲೇಶ್ವರದಲ್ಲಿ ಆಗಿದೆ. ಜನವರಿ 26ರಿಂದ ರಾಜ್ಯದ ಗ್ರಾಮೀಣ ಭಾಗಕ್ಕೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಜನರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದರ ಜತೆಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಆಲಿಸಲು ಕಾಲ್ ಸೆಂಟರ್ ಕೂಡ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಪಡಿತರ ಕೂಡ ನೇರವಾಗಿ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದರು. ಜನಪ್ರತಿನಿಧಿಗಳು, ತಮ್ಮನ್ನು ಆರಿಸಿದ ಜನರ ಬಳಿಗೆ ತಾವೇ ಹೋಗಬೇಕೆನ್ನುವುದು ಸರಕಾರದ ಆಶಯವಾಗಿದೆ. ಈ ಆಶಯಕ್ಕೆ ಅನುಗುಣವಾಗಿ
ಜನಸೇವಕ’ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ನಡೆದೇ ಹೋದ ಸಿಎಂ, ಸಚಿವರು!
ಮುಖ್ಯಮಂತ್ರಿಯವರು ಖುದ್ದು ಜನಸೇವಕರಂತೆ ಸ್ಕೂಟರಿನಲ್ಲಿ ಹೋಗಿಯೇ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕಿತ್ತು. ಆದರೆ, ಕಾರ್ಯಕ್ರಮಕ್ಕೆ ಭಾರೀ ಜನ ಸೇರಿದ್ದ ಕಾರಣ, ಅವರು ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ನಡೆದುಕೊಂಡು ಹೋಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕ್ಷಣದಲ್ಲಿ ಇಕ್ಕೆಲಗಳಲ್ಲೂ ಅಕ್ಕಪಕ್ಕದ ಮಹಡಿಯ ಮೇಲೆಲ್ಲ ನೆರೆದಿದ್ದ ಜನರು ಸಿಎಂ ಮತ್ತು ಸಚಿವರ ಮೇಲೆ ಪುಷ್ಪವೃಷ್ಟಿ ಮಾಡಿ, ಹರ್ಷಿಸಿದರು. ಒಟ್ಟಿನಲ್ಲಿ, ಕಾರ್ಯಕ್ರಮದ ಅಂಗವಾಗಿ ಮಲ್ಲೇಶ್ವರಂನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
8 ಇಲಾಖೆಗಳ 58 ಸೇವೆಗಳು ಲಭ್ಯ
`ಜನಸೇವಕ’ ಯೋಜನೆಯಡಿ ಸದ್ಯಕ್ಕೆ ರಾಜ್ಯ ಸರಕಾರದ 8 ಇಲಾಖೆಗಳ 58 ಸೇವೆಗಳು ಮನೆ ಬಾಗಿಲಿಗೇ ಬರಲಿವೆ. ಈ ಇಲಾಖೆಗಳಲ್ಲಿ ಕಂದಾಯ, ಆರೋಗ್ಯ, ಪೊಲೀಸ್, ವಸತಿ, ಶಿಕ್ಷಣ, ಜಲಮಂಡಲಿ, ಇಂಧನ, ಸಾರಿಗೆ, ಆಹಾರ ಇಲಾಖೆ ಸೇರಿವೆ. ಇದರ ವ್ಯಾಪ್ತಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಇಲಾಖೆ ಹಾಗೂ ಸೇವೆಗಳನ್ನು ಸೇರಿಸಲಾಗುವುದು. ವಿವರಗಳಿಗೆ www.janasevakakarnataka.gov.in ನೋಡಬಹುದು. ಅಥವಾ ಫೋನ್ ನಂ. 080-44554455ನ್ನು ಸಂಪರ್ಕಿಸಬಹುದು. ಮಲ್ಲೇಶ್ವರಂ ಕ್ಷೇತ್ರದ ನಾಗರಿಕರು ಸಂಪರ್ಕಿಸಬಹುದಾದ ಸಂಖ್ಯೆ 080-23563943.
ಯಾವ್ಯಾವ ಸೇವೆಗಳು ಸಿಗಲಿವೆ?
`ಜನಸೇವಕ’ ಯೋಜನೆಯಡಿ ಸದ್ಯಕ್ಕೆ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಿಧವಾ ವೇತನ, ವೃದ್ಧಾಪ್ಯ ವೇತನ, ಬಿಬಿಎಂಪಿ ಖಾತಾ ಸೇವೆಗಳು, ಹಿರಿಯ ನಾಗರಿಕರ ಕಾರ್ಡ್, ಆಧಾರ್ ಕಾರ್ಡ್, ಆಯುಷ್ಮಾನ್ ಭಾರತ- ಆರೋಗ್ಯ, ಕರ್ನಾಟಕ ಐಡಿ ಕಾರ್ಡ್ (ಹೆಲ್ತ್ ಕಾರ್ಡ್), ಮತದಾರರ ಗುರುತಿನ ಚೀಟಿಗಳು ಕೋರಿಕೆಯ ಮೇರೆಗೆ ಕ್ಷಿಪ್ರ ಗತಿಯಲ್ಲಿ ಮನೆ ಬಾಗಿಲಿಗೇ ತಲುಪಲಿವೆ. ಈ ಕೆಲಸವನ್ನು ನಿರ್ದಿಷ್ಟ ವಿನ್ಯಾಸದ ಟೀ-ಶರ್ಟ್ ಧಾರಿಗಳಾಗಿ ಸ್ಕೂಟರಿನಲ್ಲಿ ಬರುವ ಜನಸೇವಕರ ಪಡೆ ಮಾಡಲಿದೆ.
ದಣಿವಿನ ಉಸಾಬರಿ ಇಲ್ಲ, ಸುಲಭ ಶುಲ್ಕ
`ಜನಸೇವಕ’ ಯೋಜನೆಯಡಿ ಸಾರ್ವಜನಿಕರು ನಿಶ್ಚಿಂತೆಯಿಂದ ಇರಬಹುದು. ಅಂದರೆ, ಆಗಬೇಕಾದ ಕೆಲಸಗಳಿಗಾಗಿ ಹತ್ತಾರು ಸಲ ಸುತ್ತುವುದು, ಟ್ರಾಫಿಕ್ ಜಾಮ್ ನ ಕಿರಿಕಿರಿ, ವ್ಯರ್ಥ ಕಾಲಹರಣ ಏನೂ ಇಲ್ಲ. ಸರಕಾರವು ಇದರಡಿಯಲ್ಲಿ ಕೇವಲ 115 ರೂ.ಶುಲ್ಕ ನಿಗದಿಪಡಿಸಿದ್ದು, ಇದರ ಮೇಲೊಂದಿಷ್ಟು ಸೇವಾಶುಲ್ಕ ಸೇರಿಸಲಾಗಿದೆ ಅಷ್ಟೆ.
ಮೊದಲ ದಿನದ ಫಲಾನುಭವಿಗಳು
ಮೊದಲ ದಿನದಂದೇ ಮಲ್ಲೇಶ್ವರದ ಧನಲಕ್ಷ್ಮಿ (ಮನೆ ಪ್ರಮಾಣ ಪತ್ರ), ಶ್ರವ್ಯಾ (ಜಾತಿ ಮತ್ತು ಆದಾಯ ಪ್ರಮಾಣ ಪತ್ರ), ನಾಗೇಶ್ (ಖಾತಾ), ನಾಗರತ್ನ ಮತ್ತು ಮುಕ್ತಾ (ವಿಧವಾ ವೇತನ), ರಮೇಶ್ (ಲೇಬರ್ ಕಾರ್ಡ್), ನಜೀರ್ (ಹಿರಿಯ ನಾಗರಿಕರ ಕಾರ್ಡ್), ಶಿವಶಂಕರ್ (ಆಧಾರ್), ಶ್ರೀನಿವಾಸಮೂರ್ತಿ (ಎಪಿಎಲ್ ಕಾರ್ಡ್), ಜಯರಾಂ ಮತ್ತು ವೆಂಕಟಲಕ್ಷ್ಮಿ (ಎಆರ್ಕೆಎಚ್) ಸೇವೆಗಳನ್ನು ಪಡೆದುಕೊಂಡರು. ಇವರಲ್ಲಿ ಬೀದಿ ಬದಿಯಲ್ಲಿ ಹೂ ಮಾರುವವರು, ಗುಡಿಸಲಿನಲ್ಲಿ ವಾಸವಿರುವವರು, ಕಟ್ಟಡ ಕಾರ್ಮಿಕರು, ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರು ಎಲ್ಲರೂ ಇದ್ದುದೊಂದು ವಿಶೇಷ.
ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಬಸವರಾಜು, ಇಡಿಸಿಎಸ್ ನಿರ್ದೇಶಕಿ ದೀಪ್ತಿ ಕಾನಡೆ, ಜನಸೇವಕ ಯೋಜನೆಯ ನಿರ್ದೇಶಕ ವರಪ್ರಸಾದ್ ರೆಡ್ಡಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.