ಸುಮಾ ವೀಣಾ
ಸೀಗೆಯೊಳಗಣ ಬಾಳೆಗೆಣೆ– ‘ಕರುಣಾ ರಸ’ಕ್ಕೆಂದೇ ಮೀಸಲಾಗಿರುವ ಕಾವ್ಯ ಎಂದರೆ ರಾಘವಾಂಕನ ‘ಹರಿಶ್ಚಂದ್ರಕಾವ್ಯ’.ಪ್ರಸ್ತುತ ‘ಸೀಗೆಯೊಳಗಣ ಬಾಳೆಗೆಣೆ’ಯಾದುದು ವಾಕ್ಯವನ್ನು ಚಂದ್ರಮತಿಯ ಪ್ರಲಾಪದಿಂದ ಆರಿಸಲಾಗಿದೆ.
ಸೀಗೆ ಸ್ವಭಾವತಃ ಮುಳ್ಳುಗಳನ್ನು ಹೊಂದಿರುತ್ತದೆ. ಇದು ಇರುವಿಕೆಯ ಜಾಗವನ್ನು ಪೊದೆ ಎಂದು ಕರೆಯುತ್ತಾರೆ. ಮೊದಲೆ ಮುಳ್ಳು ಅದೂ ಪೊದೆಯಾಗಿರುವುದು ಅದರ ನಡುವೆ ಬಾಳೆಗಿಡ ಗೊನೆಬಿಟ್ಟು ಎಡರು ತೊಡರುಗಳಿಲ್ಲದೆ ಹಣ್ಣಾಗಲು ಸಾಧ್ಯವೇ ಇಲ್ಲ ಎಂಬ ಅರ್ಥ ಇಲ್ಲಿ ಬರುತ್ತದೆ.
ಹಾಗೆ ಚಂದ್ರಮತಿಯ ಪ್ರಲಾಪದ ಸಂದರ್ಭದಲ್ಲಿ ಚಂದ್ರಮತಿಯ ಸಂಕಟವು ಒಳಹೊಕ್ಕ ಬಾಣದಂತೆ ಹೊರಗೆ ಕಾಣಿಸದೆ ಇದ್ದರೂ ಮನಸ್ಸಿನಲ್ಲೆ ಸಂಕಟವನ್ನು ಅನುಭವಿಸುತ್ತಿರುತ್ತಾಳೆ. ಮನೆಯೊಡತಿಗೆ ಅಂಜಿ, ಇನ್ನು ಬಾರದೆ ಇರುವ ಮಗನನ್ನು ನೆನಪಿಸಿಕೊಂಡು ನಿತ್ಯದ ಕೆಲಸವನ್ನು ಎಚ್ಚರದಿಂದ ಮಾಡುತ್ತಿದ್ದಳು. ಹೇಳಿಕೊಳ್ಳಲಾಗದೆ ಅನುಭವಿಸಲಾದೆ ಮಗನ ಕುರಿತಾದ ತಹತಹಗಳನ್ನು ಚಂದ್ರಮತಿ ಏಕಾಂಗಿಯಾಗಿ ಅನುಭವಿಸಿ ಸಂಕಟದ ತೀವ್ರತೆಯನ್ನು ಬೇರೆಯವರಿಗೆ ತೋರಗೊಡುವುದಿಲ್ಲ. .ಅವಳ ಸಂಕಟವನ್ನು ಓದುಗರಿಗೆ ಪರಿಣಾಮಕಾರಿಯಾಗಿ ವಿವರಿಸಲು ರಾಘವಾಂಕ ಇಂಥದ್ದೊಂದು ವಾಕ್ಯನ್ನು ನಿಬದ್ಧಗೊಳಿಸಿದ್ದಾನೆ ಎನ್ನಬಹುದು.
ಲೋಕಾಭಿರಾಮವಾಗಿ ನೋಡುವುದಾದರೂ ಮನಸ್ಸಿನಲ್ಲಿ ಬೆಟ್ಟದಷ್ಟು ಕಷ್ಟವನ್ನು ಮನಸ್ಸಿನಲ್ಲಿ ಆವಕಮಾಡಿಕೊಂಡು ಬೇರೆಯವರ ಕಣ್ಣಿಗೆ ಅತ್ಯಂತ ಸುಖಿಗಳೆಂದು ತೋರಿಸಿಕೊಳ್ಳುವ ಅನೇಕರನ್ನು ಕಾಣಬಹುದು.
ಕೆಲವರು ಹಾಗೆಯೇ ಕಷ್ಟವನ್ನು ಹೇಳಿಕೊಳ್ಳಲು ಇಚ್ಛಿಸದೆ ಸುಖವನ್ನು ಮಾತ್ರ ಇತರರಿಗೆ ನೀಡಬಯಸುತ್ತಾರೆ. ಹೊರನೋಟಕ್ಕೆ ಪರಿಪಕ್ವವಾದ ಹಣ್ಣೊಂದರ ರೂಪವನ್ನು ಇರಿಸಿಕೊಂಡಿದ್ದರೂ ಸುಲಿದು ನೋಡಿದರೆ ಸಂಪೂರ್ಣ ಹುಳುಕಾಗಿರುವ ಹಣ್ಣಿನಂತೆ ಕೆಲವರು ಇರಬಹುದು. ಇಲ್ಲವೇ ಸಮಾಜದ ವ್ಯಂಗ್ಯ ಕುಹಕ ಇತ್ಯಾದಿಗಳನ್ನು ಛಲಬಿಡದ ತ್ರಿವಿಕ್ರಮರಂತೆ ಸಹಿಸಿಕೊಳ್ಳುವ ಅನೇಕರನ್ನು ಕಾಣಬಹುದು.
ಸೀಗೆಯೊಳಗಣ ಬಾಳೆ ಈ ಮಾತಿಗೆ ಕೆಸರಿನಲ್ಲಿ ಅರಳಿದ ಕಮಲ ಎಂಬ ಮಾತನ್ನೂ ಸರಿಸುಮಾರು ಸಂವಾದಿಯಾಗಿ ತೆಗೆದುಕೊಳ್ಳಬಹುದು. ಎಂಥ ಕ್ಲಿಷ್ಟ ಪರಿಸ್ಥಿತಿ ಇದ್ದರೂ ಹೂವಿನಂತೆ ಅರಳುವುದರಲ್ಲಿಯೇ ಮನುಷ್ಯನ ಮಹತಿ ಅಡಗಿದೆ.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.