ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿರ್ಗಮನ ಎಲ್ಲರಲ್ಲೂ ದಿಗ್ಭ್ರಾಂತಿ ಮೂಡಿಸಿದೆ. ಇಡೀ ನಾಡನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಈ ಬಾರಿಯ ದೀಪಾವಳಿ ಮಂಕಾಗಿದೆ. ಈ ಶಾಕ್ ನಿಂದ ಹೊರಬರುವುದು ಸಾಧ್ಯವಾಗುತ್ತಿಲ್ಲ.
ದೇಹದಾರ್ಢ್ಯತೆ ಎನ್ನುವುದು ಅಪಾಯಕಾರಿಯೇ ಎಂಬ ಪ್ರಶ್ನೆಗಳನ್ನು ಈ ನಿರ್ಗಮನ ಹುಟ್ಟು ಹಾಕಿದೆ. ರಾಜ್ಯ ಸರ್ಕಾರವು ಜಿಮ್ ಗಳಿಗೆ ಮಾರ್ಗಸೂಚಿ ಹೊರಡಿಸುವಷ್ಟು ಆತಂಕ ಎಲ್ಲರಲ್ಲೂ ಹುಟ್ಟಿಸಿದೆ.ತಜ್ಞರೊಂದಿಗೆ ಚರ್ಚಿಸಿ ಮಾರ್ಗಸೂಚಿ ಹೊರಡಿಸುವುದಾಗಿ ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಸದೃಢರಾಗಿದ್ದೂ ಕ್ರೀಡಾಪಟುಗಳು ಹಾಗೂ ಫುಟ್ ಬಾಲ್ ಆಟಗಾರರು ಮರಣಿಸಿದ ಕುರಿತು ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ ಕೆಲವು ಅಂಶಗಳನ್ನುಇಲ್ಲಿ ಗಮನಿಸಬಹುದು.
* ಕ್ರೀಡಾಪಟುಗಳು ಮತ್ತು ಅತಿಯಾದ ವ್ಯಾಯಾಮ ಮಾಡುವವರು ಅವರ ಹೃದಯಕ್ಕೆ ಅಪಾರ ದಣಿವನ್ನುಂಟು ಮಾಡುತ್ತಾರೆ.
* ವ್ಯಾಯಾಮ ಹೆಚ್ಚು ಶ್ರಮದಾಯಕವಾದಂತೆ ಹೃದಯ ಅತಿಯಾಗಿ ಕೆಲಸ ಮಾಡಬೇಕಾಗುತ್ತದೆ ಏಕೆಂದರೆ ಅದು ರಕ್ತವನ್ನು ಪಂಪ್ ಮಾಡುತ್ತಿರುತ್ತದೆ. ಕೆಲವೊಮ್ಮೆ ಅದು ವಿಸ್ತರಣೆಯಾಗುತ್ತದೆ. ಅತಿಯಾದ ಕೆಲಸದ ಒತ್ತಡದಿಂದ ಅದು ಕೆಲಸ ಮಾಡುವುದನ್ನು ನಿಲ್ಲಿಸಬಹುದು.
ಆದ್ದರಿಂದ ಹೃದಯದ ಮೇಲೆ ಬೀಳುವ ಒತ್ತಡ ಸಾಮಾನ್ಯಕ್ಕಿಂತ ಹೆಚ್ಚಾಗಬಾರದು.
*ವರ್ಕೌಟ್ ನಿಂದ ವಿಸ್ತಾರಗೊಂಡ ಹೃದಯವು ಸಹಜ ಸ್ಥಿತಿಗೆ ಮರಳಲು ಒಂದು ವರ್ಷ ತೆಗೆದುಕೊಳ್ಳಬಹುದು. ಅತಿಯಾದ ವ್ಯಾಯಾಮಗಳನ್ನು ಕೈಗೊಳ್ಳುವ ಮುನ್ನ ಈ ವಿಷಯಗಳ ಕುರಿತು ಅರಿವನ್ನು ಹೊಂದಿರಬೇಕು.
ಅನುವಂಶಿಕತೆಯ ಪಾತ್ರ
ಅನುವಂಶಿಕತೆ ಹೃದಯ ಸಂಬಂಧಿ ರೋಗಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಭಾರತೀಯರಲ್ಲಿ ಹೃದಯ ರೋಗಗಳ ಸಂಭವನೀಯತೆ ಹೆಚ್ಚಾಗಿದೆ. ಭಾರತೀಯರಲ್ಲಿ ಕಿರಿಯ ವಯಸ್ಸಿಗೆ ಹೃದಯಾಘಾತದ ಸಂಭವನೀಯತೆ ಹೆಚ್ಚು. ವೈದ್ಯರ ಪ್ರಕಾರ ಶೇ.45ರಷ್ಟು ಮಂದಿ ಸೈಲೆಂಟ್ ಇಷೆಮಿಯಾದಿಂದ ಬಳಲುತ್ತಿರಬಹುದು. ಅದು ತೀವ್ರ ಹೃದಯಾಘಾತವಾಗುವವರೆಗೂ ಗೊತ್ತಾಗುವುದೇ ಇಲ್ಲ.
ತೀವ್ರವಾದ ವ್ಯಾಯಾಮವು ಹೃದಯದ ಅಪಧಮನಿಗಳಿಗೆ ಒತ್ತಡ ಉಂಟು ಮಾಡುತ್ತದೆ. ಅದು ರಕ್ತನಾಳಗಳನ್ನು ಛಿದ್ರಗೊಳಿಸಿ ರಕ್ತ ಪ್ರಸಾರಕ್ಕೆ ಅಡಚಣೆ ತಂದೊಡ್ಡಬಹುದು. ಇದರಿಂದ ಹೃದಯಾಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಹಠಾತ್ ಸಾವಿನ ಸಂದರ್ಭದಲ್ಲಿ ವೆಂಟ್ರಿಕ್ಯುಲರ್ ಫೈಬ್ರಿಲಿಯೇಷನ್ (ಅಸಹಜ ಹೃದಯಬಡಿತದ ಒಂದು ಬಗೆ)ಎಂಬ ಸಮಸ್ಯೆ ಉಂಟಾಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ರೋಗಿಗೆ ಡಿಫಿಬ್ರಿಲಿಯೇಷನ್ ಮೆಷಿನ್ ಬಳಸಿ ನಾಲ್ಕು ನಿಮಿಷಗಳ ಒಳಗೆ ಶಾಕ್ ನೀಡಿದ್ದಲ್ಲಿ ಅವರನ್ನು ಉಳಿಸುವ ಸಾಧ್ಯತೆ ಇರುತ್ತದೆ. ಸೈಲೆಂಟ್ ಇಷೆಮಿಯಾದಿಂದ ಬಳಲುತ್ತಿರುವವರಿಗೆ ಯಾವುದೇ ಮುನ್ಸೂಚನೆಯೂ ಇರುವುದೇ ಇಲ್ಲ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.
ಕುಟುಂಬ ವೈದ್ಯರಿಂದ ಮಾರ್ಗದರ್ಶನ ಪಡೆದು ಐದೇ ನಿಮಿಷದಲ್ಲಿ ಆಸ್ಪತ್ರೆ ಸೇರಲು ಸಾಧ್ಯವಾಗಿದ್ದರೂ ಪುನೀತ್ ಅವರನ್ನು ಈ ಯಾವ ತಂತ್ರಜ್ಞಾನವೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ಅವರನ್ನು ಅಭಿಮಾನಿಸುವ ಪ್ರತಿಯೊಬ್ಬರಲ್ಲೂ ತೀವ್ರವಾದ ಕೊರಗಾಗಿ ಉಳಿದಿದೆ.
ಹೀಗಾಗಿ ಪ್ರತಿವರುಷಕ್ಕೊಮ್ಮೆ ಎಲ್ಲರೂ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಮತ್ತೊಬ್ಬ ತಜ್ಞ ವೈದ್ಯ ಡಾ.ದೇವಿ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
Informative 👍