26 C
Karnataka
Thursday, November 21, 2024

    ದಿಲ್ ವಾಲೆ ದಿಲ್ಲಿಯ ಜನರ ಉಮಂಗ್ ಭರಿ ತ್ಯೋಹಾರ್

    Must read

    ದಿಲ್ಲಿ-DELHI-ಯಲ್ಲಿ ದೀಪಾವಳಿ ಹಬ್ಬದ ಆಚರಣೆಯನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಮನೆಗಳ ಬಾಲ್ಕನಿಯಲ್ಲಿ ಅಂದವಾಗಿ ದೀಪಗಳನ್ನು ಹಚ್ಚಿ ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಒಳ್ಳೆಯ ಭಾವನೆಗಳನ್ನು ದೀಪದ ಮೂಲಕ ಅನಾವರಣ ಮಾಡುತ್ತಿದ್ದಾರೆ ಎಂದು ಇದನ್ನು ನೋಡಿದ ನನಗೆ ಅನ್ನಿಸುತ್ತಿತ್ತು. ಪರಸ್ಪರ ಸಿಹಿ ಹಂಚಿಕೊಂಡು, ಒಬ್ಬರನ್ನೊಬ್ಬರು ಅಪ್ಪಿಕೊಂಡು ದೀಪಾವಳಿಯ ಶುಭಾಶಯಗಳನ್ನು ಹೇಳುವ ದಿಲ್ ವಾಲೆ ದಿಲ್ಲಿಯ ಜನರನ್ನು ಮೆಚ್ಚಲೇಬೇಕು. ನಿಷ್ಕಲ್ಮಶವಾಗಿ ಒಬ್ಬರನ್ನೊಬ್ಬರು ಪ್ರೀತಿಯಿಂದ ಮಾತನಾಡಿಸಿ ಸಂತೋಷದಿಂದ ನಕ್ಕು-ನಲಿವ ಜನರಿದ್ದರೆ ಉಮಂಗ್ ಭರಿ ತ್ಯೋಹಾರುಗಳಿಗೆ ಮತ್ತಷ್ಟು ಸಂಭ್ರಮ.

    ಅವತ್ತು ಹೀಗೆಯೇ ದೀಪಾವಳಿ ಸಡಗರ. ಅಕ್ಕಪಕ್ಕದವರು ಸ್ನೇಹಿತರು ಗುರುತು ಪರಿಚಯವಿರುವವರು ಒಬ್ಬರಾದ ಮೇಲೆ ಒಬ್ಬರು ಮನೆಗೆ ಬರುತ್ತಲೇ ಇದ್ದಾರೆ . ನಾವು ನಮ್ಮ ಕಾಲೋನಿ ನಿವಾಸಿಗಳನ್ನು ಹಿಂದಿನ ದಿನವೇ ಭೇಟಿ ಮಾಡಿ ಹಬ್ಬದ ಶುಭಾಶಯಗಳನ್ನು ಹೇಳಿ ಬಿಟ್ಟಿದ್ದೆವು. ಹೀಗಾಗಿ ಇಂದು ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸಿ ಶುಭಾಶಯ ಸ್ವೀಕರಿಸುವ ಸಂಭ್ರಮ ನಮಗೆ.

    ಈ ಮಧ್ಯೆ ನಾನೇ ಸ್ವತಃ ಫ್ರಾಕ್ ಗಳನ್ನು ಹೊಲೆದು ಎಂಬ್ರಾಯ್ಡರಿ ಮಾಡಿ ಮುದ್ದಾಗಿರುವ ನನ್ನ ಮಗಳಿಗೆ ಹಾಕಲೇಬೇಕು ಎಂಬ ಆಸೆಯೂ ನನಗೆ. ಈ ಫ್ರಾಕುಗಳನ್ನು ನೋಡಿದ ಎಲ್ಲರೂ ತುಂಬಾ ಚೆನ್ನಾಗಿದೆ ಎಲ್ಲಿ ತೆಗೆದುಕೊಂಡಿರಿ ಎಂದು ಕೇಳಬೇಕು. ಅದೇ ರೀತಿ ಫ್ರಾಕುಗಳನ್ನು ಹೊಲಿದು ಮಗಳಿಗೆ ಹಬ್ಬದ ದಿನ ಹಾಕಿ ಬೀಗಿದ್ದು ಆಯಿತು. ಮಗಳು ಕೇಳಿದವರಿಗೆ ನನ್ನ ಅಮ್ಮನೆ ಹೊಲಿದಿದ್ದು ಎಂದು ಹಿಂದಿಯಲ್ಲಿ ಹೇಳುತ್ತಿದ್ದರೆ ನನಗೆ ಹಬ್ಬದ ಸಡಗರ ನೂರ್ಮಡಿಸುತ್ತಿತ್ತು.

    ಆ ಸಮಯದಲ್ಲಿ ಎಲ್ಲ ಮಕ್ಕಳು ಆಟವಾಡುತ್ತ ಒಬ್ಬರು ಮತ್ತೊಬ್ಬರ ಮನೆಗೆ ಹೋಗುವುದು ಸಾಮಾನ್ಯವಾಗಿತ್ತು. ಈಗಿನ ಮಕ್ಕಳಿಗೆ ಬಿಡಿ. ಕೈಯಲ್ಲಿ ಮೊಬೈಲ್ ಇದ್ದರೆ ಯಾರೂ ಬೇಡ. ಆಗತಾನೆ ದಿಲ್ಲಿಯಲ್ಲಿ ಡಯೋನೋರಾ, ವೆಸ್ಟ ನ್, ವಿಡಿಯೋಕಾನ್ ಟೀವಿಗಳು ಅಡಿ ಇಡುತ್ತಿದ್ದ ಕಾಲ. ನಮ್ಮ ಕಾಲೋನಿಯ ಕೆಲವರ ಮನೆಗೂ ಟೀವಿ ಬಂದಿತ್ತು. ಮಕ್ಕಳು ಒಂದಾಗಿ ಟೀವಿ ನೋಡಲು ಒಬ್ಬೊಬ್ಬರ ಮನೆಗೆ ಹೋಗುವುದು ಸಾಮಾನ್ಯವಾಗಿತ್ತು. ಮಕ್ಕಳು ಮನೆಗೆ ಬಂದರೆ ಯಾರೂ ಬೇಸರ ಪಡುತ್ತಿರಲಿಲ್ಲ. ಸಂತಸವನ್ನೇ ಪಡುತ್ತಿದ್ದರು.

    ನಾವಿಬ್ಬರೂ ಬಂದವರೊಡನೆ ಮಾತುಕತೆಯಲ್ಲಿ ಬಿಝಿ ಇದ್ದಾಗ ನನ್ನ ನಾಲ್ಕು ವರ್ಷದ ಮಗಳು ಯಾವಾಗ ಕಣ್ಣುತಪ್ಪಿಸಿ ಹೊರಗೆ ಹೋದಳೋ ಗೊತ್ತಾಗಲಿಲ್ಲ. ಪಕ್ಕದ ಸರ್ದಾರ್ ಜೀ ಮನೆಯಲ್ಲಿ ಮಕ್ಕಳಿಗೆ ಮದುವೆಯಾದ ಮೇಲೆ ಮೊದಲ ದೀಪಾವಳಿ ಆಚರಿಸುತ್ತಿದ್ದರು.ಅವರ ಪಟಾಕಿ ಸಡಗರವೂ ಜೋರಾಗಿಯಿ ಇತ್ತು. ಪಕ್ಕದ ಪಾರ್ಕಿನಲ್ಲಿ ಬೇರೆ ಆನೆ ಪಟಾಕಿ ಹಚ್ಚುತ್ತಿದ್ದಾರೆ. ಶಬ್ದಜೋರಾಗಿದೆ. ಪಟಾಕಿ ಸದ್ದಿನ ಆರ್ಭಟದಲ್ಲಿ ಮನೆಯ ಮನೆಯಿಂದ ಹೊರಗೆ ಹೋಗುವುದು ಸಾಧ್ಯವೇ ಇಲ್ಲ. ಬಾಲ್ಕನಿಯಲ್ಲಿಯೇ ನಿಂತು ಒಬ್ಬರಿಗೊಬ್ಬರು ಶುಭಾಶಯಗಳನ್ನು ಹೇಳಬೇಕಾದ ಅಂತಹ ಸ್ಥಿತಿ.

    ಈ ಗದ್ದಲದಲ್ಲಿಯೇ ಮಗಳು ಕಾಣದಿದ್ದಾಗ ಬಾಲ್ಕನಿಯಲ್ಲಿಯೇ ನಿಂತು ಅಕ್ಕಪಕ್ಕದವರನ್ನು ಮಗಳು ನಿಮ್ಮ ಮನೆಗೆ ಬಂದಿದ್ದಾಳ ಎಂದು ಕೇಳಿದೆ. ಮಕ್ಕಳ ಜೊತೆ ಪಾರ್ಕಿನಲ್ಲಿ ಆಟವಾಡುತ್ತಿದ್ದಾಳೆೆ ಎಂದರು ಒಬ್ಬರು. ಪಾರ್ಕಿಗೆ ಹೋದರೆ ಅಲ್ಲಿ ಒಬ್ಬ ಮಕ್ಕಳು ಕಾಣುತ್ತಿಲ್ಲ. ಗಾಬರಿಯಾಯಿತು.

    ನಾವಿಬ್ಬರೂ ಅಕ್ಕಪಕ್ಕದವರ ಮನೆಗೆ ಹೋಗಿ ಮಗಳು ರಂಜು ಬಂದಿದ್ದಾಳ ಕೇಳಿದಾಗ ಯಾರೂ ತಮ್ಮ ಮನೆಗೆ ಬಂದಿಲ್ಲವೆಂದರು. ನನಗೆ ಕಣ್ಣೀರು . ಮಕ್ಕಳ ಮೇಲೆ ಗಮನವೇ ಇರುವುದಿಲ್ಲ ಎಂದು ಯಜಮಾನರು ಬೇರೆ ರೇಗಾಡುತ್ತಾ ನನ್ನ ತಪ್ಪಿತಸ್ಥ ಭಾವನೆಗೆ ತುಪ್ಪ ಸುರಿಯುತ್ತಿದ್ದರು. ಸಾಧ್ಯವಾದಷ್ಟು ಬೇಗ ಪೊಲೀಸರಿಗೆ ದೂರು ಕೊಡಲು ಅವರು ಯೋಚಿಸುತ್ತಿದ್ದಾರೆ ಎಂದು ನನಗೆ ಅರಿವಾಯಿತು.

    ಈ ಸಮಯದಲ್ಲಿ ನಮಗೆ ಇನ್ನು ಪರಿಚಯ ಇರದ, ಕಾಲೋನಿಗೆ ಹೊಸದಾಗಿ ಬಂದವರ ಮನೆ ಮುಂದೆ ನಾಲ್ಕಾರು ಮಕ್ಕಳು ನಗುನಗುತ್ತಾ ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡು ಪಟಾಕಿ ಹೊಡೆದಿದ್ದು ಮುಗಿಯಲಿ ಮನೆಗೆ ಹೋಗೋಣ ಎಂದು ಮಾತನಾಡುತ್ತಿದ್ದು ನನ್ನ ಕಿವಿಗೆ ಬಿತ್ತು. ತಿರುಗಿ ನೋಡಿದರೆ ಆ ಮಕ್ಕಳ ಜೊತೆ ನನ್ನ ಮಗಳು ಇದ್ದಾಳೆ. ಹೋದ ಜೀವ ಮರಳಿ ಬಂದಂತೆ ಆಯ್ತು.

    ಎಲ್ಲಿಗೆ ಹೋಗಿದ್ದೇ ರಂಜು ಇಷ್ಟು ಹೊತ್ತು ಎಂದರೆ ಹೊಸ ಆಂಟಿ, ಅಂಕಲ್ ಮನೆಯಲ್ಲಿ ಟಾಮ್ ಆ್ಯಂಡ್ ಜೆರ್ರಿ ನೋಡುತ್ತಿದ್ದೆವು ಎನ್ನಬೇಕೆ. ಅವಳ ಮಾತು ಕೇಳಿ ನನಗೆ ನಗಬೇಕೋ ಅಳ ಬೇಕೋ ಗೊತ್ತಾಗಲಿಲ್ಲ.

    ಈಗ ಬೆಂಗಳೂರಿನ ಜಯನಗರದಲ್ಲಿ ನೆಲೆಸಿರುವ ನನಗೆ ಮೊಮ್ಮಗ ವಿಖ್ಯಾತನ ಪಟಾಕಿ ಸದ್ದು ಕೇಳುತಿದ್ದಂತೆ ಈ ಘಟನೆ ನೆನಪಾಯಿತು.

    ಶಶಿಕಲಾ ರಾವ್
    ಶಶಿಕಲಾ ರಾವ್
    ಬೆಂಗಳೂರಿನಲ್ಲಿ ವಾಸ. ಕನ್ನಡ ಬರವಣಿಗೆಯಲ್ಲಿ ಆಸಕ್ತಿ
    spot_img

    More articles

    3 COMMENTS

    1. ಶಶಿಕಲಾ ಅವರು ತಮ್ಮ ಅನುಭವವನ್ನು ಮೆಲುಕು ಹಾಕಿರುವುದು ಚೆನ್ನಾಗಿದೆ.👌👍

    2. ತುಂಬಾ ಚೆನ್ನಾಗಿದೆ.. ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು

    LEAVE A REPLY

    Please enter your comment!
    Please enter your name here

    Latest article

    error: Content is protected !!