26 C
Karnataka
Thursday, November 21, 2024

    INDIAN STOCK MARKET :ಮನಿ ವಿಕಾಸ ಮಾಡದ ಕಾರ್ಪೊರೇಟ್ ಫಲಗಳು

    Must read

    ಷೇರುಪೇಟೆಯ ಸೂಚ್ಯಂಕಗಳು ಹೆಚ್ಚು ಹೆಚ್ಚು ವಿಜೃಂಭಿಸಿದರೂ ಪೇಟೆಯಲ್ಲಿ ಅನೇಕ ರೀತಿಯ ಹೂಡಿಕೆ ಅವಕಾಶಗಳು ಸೃಷ್ಟಿ ಯಾಗುತ್ತಿರುತ್ತವೆ. ಹೆಚ್ಚಿನ ಅಗ್ರಮಾನ್ಯ ಕಂಪನಿಗಳು ಉತ್ತಮ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸಿದರೂ, ಹೂಡಿಕೆ ಮಾಡಿರುವ ಷೇರುದಾರರಿಗೆ ಪ್ರಯೋಜನವಿಲ್ಲದಂತಾಗಿದೆ. ಕಾರಣ ಕಂಪನಿಗಳ ತ್ರೈಮಾಸಿಕದ ಲಾಭಗಳಿಕೆಯು ಹಲವು ಪಟ್ಟು ಹೆಚ್ಚಿದ್ದರೂ ಕಾರ್ಪೊರೇಟ್‌ ಫಲಗಳನ್ನು ವಿತರಿಸದೇ ಸಾಧನೆಯನ್ನು ಕೇವಲ ಭಾಷಣಕ್ಕೆ ಭೂಷಣ ಎನ್ನುವಂತೆ ಮಾಡಿವೆ.

    ಅವೆನ್ಯೂ ಸೂಪರ್‌ ಮಾರ್ಕೆಟ್ಸ್, ಬೊರೊಸಿಲ್‌ ರಿನ್ಯೂವಬಲ್ಸ್‌, ಟಾಟಾ ಪವರ್‌, ಟಾಟಾ ಸ್ಟೀಲ್‌, ಡಾಕ್ಟರ್‌ ರೆಡ್ಡೀಸ್‌ ಲ್ಯಾಬ್‌, ವೇದಾಂತ ಮುಂತಾದ ಕಂಪನಿಗಳು ಪ್ರಕಟಿಸಿದ ಸಾಧನೆಯ ಅಂಕಿ ಅಂಶಗಳು ಮನೋಲ್ಲಾಸಗೊಳಿಸುವ ಮಟ್ಟದ್ದಾದರೂ, ʼಮನಿʼ ವಿಕಾಸವಿಲ್ಲದಂತೆ ಕೇವಲ ಮೂಗಿನ ತುದಿಗೆ ತುಪ್ಪ ಸವರುವ ಕಾರ್ಯದಂತಿದೆ.

    ಕಂಪನಿಗಳಾದ ಭಾರತ್‌ ಪೆಟ್ರೋಲಿಯಂ ಮತ್ತು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಗಳು ಪ್ರತಿ ಷೇರಿಗೆ ರೂ.5 ರಂತೆ ಲಾಭಾಂಶ ಘೋಷಣೆ ಮಾಡಿವೆ. ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ ಪ್ರತಿ ಷೇರಿಗೆ ರೂ.4 ರಂತೆ, ಆರ್‌ ಇ ಸಿ ಲಿಮಿಟೆಡ್‌ ಪ್ರತಿ ಷೇರಿಗೆ ರೂ.2.50 ರಂತೆ, ಜಿ ಇ ಶಿಪ್ಪಿಂಗ್‌ ಪ್ರತಿ ಷೇರಿಗೆ ರೂ.4.50 ಯಂತೆ, ಜೊತೆಗೆ ಕೇರ್‌ ರೇಟಿಂಗ್ಸ್‌, ಕೇವಲ್‌ ಕಿರಣ್‌ ನಂತಹ ವಿವಿಧ ಕಂಪನಿಗಳು ಲಾಭಾಂಶ ಪ್ರಕಟಿಸಿವೆಯಾದರೂ, ಹೆಚ್ಚಿನ ಅಗ್ರಮಾನ್ಯ ಕಂಪನಿಗಳು ಉತ್ತಮ ಸಾಧನೆ ಪ್ರದರ್ಶಿಸಿದರೂ, ಹೂಡಿಕೆದಾರರನ್ನು ಹರ್ಷಿತಗೊಳಿಸಲು ವಿಫಲವಾಗಿವೆ. ಇದು ಷೇರುದಾರರು ಮತ್ತು ಕಂಪನಿಗಳ ನಡುವೆ ಇರುವ ಲಾಯಲ್ಟಿ ಅಂಶವನ್ನು ಕಡೆಗಣಿಸಿ, ಷೇರುದಾರರು ಪೇಟೆಯ ವಾತಾವರಣವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕೆಂದರೆ ಅವರು ಹೊಂದಿರುವ ಷೇರುಗಳನ್ನು ಮಾರಾಟಮಾಡಿದಲ್ಲಿ ಮಾತ್ರ ಹೂಡಿಕೆಯ ಲಾಭ ಪಡೆಯಬಹುದಾಗಿದೆ.

    ಹಿಂದೂಸ್ಥಾನ್‌ ಯೂನಿಲೀವರ್‌ ಕಂಪನಿ ಪ್ರತಿ ಒಂದು ಷೇರಿಗೆ ರೂ.15 ರೂಪಾಯಿಗಳಂತೆ, ಸುಮಾರು ಶೇ.2 ರಷ್ಟು ಕಳಪೆ ಸಾಧನೆ ಪ್ರದರ್ಶಿಸಿದೆ ಎಂಬ ಕಾರಣಕ್ಕೆ ಮಾರಾಟದ ಒತ್ತಡಕ್ಕೊಳಗಾಗಿರುವ ಕಾಲ್ಗೇಟ್‌ ಪಾಲ್ಮೊಲಿವ್‌ ಪ್ರತಿ ಷೇರಿಗೆ ರೂ.19 ರಂತೆ ಡಿವಿಡೆಂಡ್‌ ಘೋಷಿಸಿ, ನಿಗದಿತ ದಿನಾಂಕವೂ ಮುಗಿದಿದೆ. ಮುಂದಿನ ದಿನಗಳಲ್ಲಿ ಕುಸಿತದಿಂದ ಚೇತರಿಕೆ ಕಾಣಬಹುದೇ ಕಾದು ನೋಡೋಣ.

    ಈಚಿನ ದಿನಗಳಲ್ಲಿ ಕಂಪನಿಗಳು ಕೇವಲ ಅಲಂಕಾರಿಕವೆಂಬಂತೆ ಸಾಧನೆಯ ಅಂಶಗಳನ್ನು ವರ್ಣರಂಜಿತವಾಗಿ ಪ್ರಕಟಿಸುತ್ತವೆಯಾದರೂ, ಷೇರುದಾರರನ್ನು ಕಡೆಗಣಿಸುವುದು ಹವ್ಯಾಸವಾದಂತಾಗಿದೆ. ಇದು ಷೇರುದಾರರ ಮತ್ತು ಕಂಪನಿಗಳ ಬಾಂಧವ್ಯವು ಬದ್ಧತೆಮುಕ್ತವಾಗಿಸಿದೆ. ಅದಕ್ಕೆ ಪೂರಕವಾಗಿ ಸರ್ಕಾರದ ನಿಯಮಗಳೂ ಸಹ ಸಹಕಾರಿಯಾಗಿವೆ. ಷೇರುದಾರರು ಡಿವಿಡೆಂಡನ್ನು ಕಂಪನಿಗಳಿಂದ ಪಡೆಯುವುದಾದರೆ ಅದನ್ನು ನೇರವಾಗಿ ಷೇರುದಾರರ ತೆರಿಗೆಗೊಳಪಡುವ ಲಾಭವೆಂದು, ಯಾವುದೇ ರಿಯಾಯಿತಿ ಇಲ್ಲದೆ, ಪರಿಗಣಿಸಲಾಗುವುದು. ಆದರೆ ಷೇರಿನ ಬೆಲೆ ಏರಿಕೆಯಾದಾಗ ಮಾರಾಟಮಾಡಿದಲ್ಲಿ ಅದಕ್ಕೆ ಅಲ್ಪಕಾಲೀನ ಅವಧಿಯ ಲಾಭ ಎಂದು ವಿಂಗಡಿಸಿ ಅದಕ್ಕೆ ಶೇ.15 ರಂತೆ ತೆರಿಗೆಗೊಳಪಡಿಸುವರು. ಈ ಕ್ರಮವು ಷೇರುದಾರರಲ್ಲಿರುವ ದೀರ್ಘ ಕಾಲೀನ ಹೂಡಿಕೆ ಎಂಬ ಚಿಂತನೆಗೆ ತಿಲಾಂಜಲಿ ಹೇಳಿದಂತೆ.

    ಈಗಿನ ಚಿಂತನೆಗಳು, ವಿಶ್ಲೇಷಣೆಗಳ ಪರಿಸ್ಥಿತಿ ಹೇಗೆ ಬದಲಾಗಿದೆ ಎಂಬುದನ್ನು ನೋಡೋಣ:

    ಪ್ರಕರಣ : 1

    2008 ರ ಡಿಸೆಂಬರ್‌ 16 ರಂದು ಸಂಜೆ ಕಂಪನಿಯೊಂದು ತನ್ನ ಮಕ್ಕಳ ಕಂಪನಿಯ ಭಾಗಿತ್ವವನ್ನು 1.6 ಶತಕೋಟಿ ಡಾಲರ್‌ ಗೆ ಖರೀದಿಸುವ ತೀರ್ಮಾನವನ್ನು ಪ್ರಕಟಿಸಿತು. ಇದರ ಪರಿಣಾಮವಾಗಿ ಅಮೇರಿಕಾದಲ್ಲಿ ಆ ಕಂಪನಿಯ ಎ ಡಿ ಆರ್‌ ಗಳು ಶೇ.50 ಕ್ಕೂ ಹೆಚ್ಚಿನ ಕುಸಿತಕ್ಕೊಳಗಾಯಿತು. ಕಂಪನಿಯ ತೀರ್ಮಾನಕ್ಕೆಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಈ ಕಾರಣಗಳಿಂದ ಕಂಪನಿಯು ರಾತ್ರೋರಾತ್ರಿ ಯೋಜನೆಯನ್ನು ಕೈಬಿಟ್ಟಿತಾದರೂ, ಈ ಜಾರಿಗೊಳಗಾಗದ ನಿರ್ಧಾರವು ಕಂಪನಿಯ ಕಾರ್ಪೊರೇಟ್ ನೀತಿ ಪಾಲನೆಯಲ್ಲಿನ ಲೋಪವೆಂದು ಪರಿಗಣಿಸಿ 17 ರಂದು ಷೇರಿನ ಬೆಲೆಯು ರೂ.222 ರ ಸಮೀಪದಿಂದ ರೂ.113 ರವರೆಗೂ ಕುಸಿಯುವಂತಾಯಿತು. ಆ ಸಂದರ್ಭದಲ್ಲಿ ಪ್ರವರ್ತಕರು ಹೊಂದಿದ್ದ ಶೇ.8.27 ರ ಭಾಗಿತ್ವವು ಒತ್ತೆ ಇಡಲಾಗಿದ್ದ ಕಾರಣ ಕುಸಿದಿಂದುಟಾದ ಪರಿಣಾಮದಿಂದ ಪಾವತಿಸಬೇಕಾದ ಮಾರ್ಜಿನ್‌ ಹಣದ ಕೊರತೆಯ ಕಾರಣ ಫೈನಾನ್ಶಿಯರ್‌ ಗಳು ಒತ್ತೆ ಇಟ್ಟ ಷೇರುಗಳನ್ನು ಮಾರ್ಜಿನ್‌ ಹಣಕ್ಕಾಗಿ ಮಾರಾಟ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಕಾರಣದಿಂದ ಪ್ರವರ್ತಕರ ಭಾಗಿತ್ವವು ಶೇ.4.4 ಕ್ಕೆ ಕುಸಿಯಿತು. ಒಂದು ಜಾರಿಗೊಳಿಸಲಾಗದ ನಿರ್ಧಾರವನ್ನು ಪೇಟೆಯು ಆರಂಭಕ್ಕೂ ಮುನ್ನವೇ ಹಿಂದಿರುಗಿಪಡೆದರೂ ಅದನ್ನು ಕಾರ್ಪರೇಟ್‌ ನೀತಿ ಪಾಲನೆಯ ಲೋಪವೆಂದು ಪರಿಗಣಿಸಲಾಯಿತು.

    ಪ್ರಕರಣ : 2.

    2021 ರ ಅಕ್ಟೋಬರ್‌ 28 ರಂದು ಸಂಜೆ, ಐ ಆರ್‌ ಸಿ ಟಿ ಸಿ ಕಂಪನಿಯು ಆನ್‌ ಲೈನ್‌ ಬುಕ್ಕಿಂಗ್‌ ಮಾಡುವ ಗ್ರಾಹಕರಿಂದ ಸಂಗ್ರಹಿಸಿದ ಶುಲ್ಕದಲ್ಲಿ ರೇಲ್ವೇಗೂ ಪಾಲು ಕೊಡಬೇಕೆಂಬ ಸುತ್ತೋಲೆಯ ಕಾರಣ ಕಂಪನಿಯ ಲಾಭಗಳಿಕೆಯು ಕುಸಿಯುವುದೆಂದು ಭಾವಿಸಲಾಯಿತು. ಈ ಕಾರಣದಿಂದ ನಂತರದ ದಿನ ಪೇಟೆಯು ಆರಂಭವಾಗುತ್ತಿದ್ದಂತೆಯೇ ಮಾರಾಟದ ಒತ್ತಡ ಹೆಚ್ಚಾಗಿ ಷೇರಿನ ಬೆಲೆ ರೂ.822 ರಿಂದ ರೂ.639 ರವರೆಗೂ, ಷೇರುದಾರರಿಗೆ ಮಾರಾಟಮಾಡಲೂ ಸಹ ಅವಕಾಶ ನೀಡದೆ ಏಕಮುಖವಾಗಿ ಕುಸಿಯಿತು. ಮಾಡಬೇಕಾಗಿದ್ದಷ್ಠು ಹಾನಿಯನ್ನು ಉಂಟುಮಾಡಿದ ಮೇಲೆ ಎಚ್ಚೆತ್ತುಕೊಂಡ ಸರ್ಕಾರ DIPAM (Department of Investment and Public Asset Management) ಕಾರ್ಯದರ್ಶಿಗಳು ಸಾರ್ವಜನಿಕ ಷೇರುದಾರರ ಹಿತದ ದೃಷ್ಟಿಯಿಂದ ಇಂಥ ಕ್ರಮ ಸರಿಯಲ್ಲವೆಂಬ ಕಾರಣಕ್ಕಾಗಿ ಈ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ದಿನದ ಚಟುವಟಿಕೆಯ ಮಧ್ಯೆ ಪ್ರಕಟಿಸಿದರು. ಆದರೂ ಅಷ್ಠೊತ್ತಿಗಾಗಲೇ ಆಗಬೇಕಾಗಿದ್ದ ಹಾನಿಯು ಪೂರ್ಣವಾಗಿತ್ತು. ಈ ಪ್ರಕಟಣೆಯ ನಂತರ ಷೇರಿನ ಬೆಲೆ ಮತ್ತೊಮ್ಮೆ ಚೇತರಿಕೆಯಿಂದ ರೂ.900 ರ ಗಡಿ ತಲುಪಿ ರೂ.845 ರ ಸಮೀಪ ದಿನದ ಅಂತ್ಯಗೊಂಡಿತು.

    ಈ ಮೇಲಿನ ಎರಡು ಪ್ರಕರಣಗಳನ್ನು ಪರಿಶೀಲಿಸಿದಾಗ ಮೊದಲನೆಯದರಲ್ಲಿ ಮಾರ್ಕೆಟ್‌ ಆರಂಭಕ್ಕೂ ಮುನ್ನವೇ ತೀರ್ಮಾನವನ್ನು ಹಿಂಪಡೆಯಲಾಯಿತಾದರೂ ಅದನ್ನ ಕಾರ್ಪೊರೇಟ್‌ ನೀತಿ ಪಾಲನೆ ಎಂದು ವಿಶ್ಲೇಷಿಸಲಾಯಿತು. ಎರಡನೆಯದರಲ್ಲಿ ಮಾರ್ಕೆಟ್‌ ಆರಂಭವಾಗಿ ಅರ್ಧದಿನದ ಸಮಯದಲ್ಲಿ ತೀರ್ಮಾನವನ್ನು ಹಿಂಪಡೆದು ಅನೇಕರಿಗೆ ಹಾನಿಯುಂಟುಮಾಡಿದರೂ ಅದು ನೀತಿ ಪಾಲನಾ ದೋಶ ಎಂದು ಗೋಚರಿಸಲಿಲ್ಲ. ಇದೂ ಒಂದು ರೀತಿಯ ಬದಲಾವಣೆ. ಇಂತಹ ಅನಿರೀಕ್ಷಿತ ಬೆಳವಣಿಗೆಗಳಿಂದಲೂ ಹೂಡಿಕೆದಾರರು ಎಚ್ಚರ ವಹಿಸಿಕೊಳ್ಳುವ ಕ್ರಮ ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!