26.8 C
Karnataka
Sunday, September 22, 2024

    NEW EDUCATION POLICY :ಉನ್ನತ ಶಿಕ್ಷಣ: ಭವಿಷ್ಯದ ಕಾರ್ಯತಂತ್ರ

    Must read

    BENGALURU NOV 13

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಫಲವಾಗಿ ಇನ್ನು 20 ವರ್ಷಗಳಲ್ಲಿ ಭಾರತವು ಜಗತ್ತಿನಲ್ಲಿ ಅಗ್ರಸ್ಥಾನಕ್ಕೇರಲಿದ್ದು, ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ರಾಮಬಾಣವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದ್ದಾರೆ.

    ರಾಜ್ಯ ಸರಕಾರ ಮತ್ತು ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ISDC) ಜಂಟಿಯಾಗಿ ಎನ್ಇಪಿ ಕುರಿತು ಏರ್ಪಡಿಸಿದ್ದ ಪ್ರಪ್ರಥಮ ಸಮಾವೇಶ `ಉನ್ನತ ಶಿಕ್ಷಣ: ಭವಿಷ್ಯದ ಕಾರ್ಯತಂತ್ರ’ವನ್ನು ಉದ್ದೇಶಿಸಿ ಶನಿವಾರ ಅವರು ಮಾತನಾಡಿದರು.

    ಶಿಕ್ಷಣವನ್ನು ಬದಲಿಸುವ ಮೂಲಕ ದೇಶವನ್ನು ಬದಲಿಸಬಹುದು ಎನ್ನುವುದು ಪ್ರಧಾನಿ ಮೋದಿಯವರಿಗೆ ಗೊತ್ತಾಗಿದೆ. ಆದ್ದರಿಂದಲೇ ದೇಶದಲ್ಲಿ 34 ವರ್ಷಗಳ ನಂತರ ಎನ್ಇಪಿ ಜಾರಿಗೆ ತರಲಾಗುತ್ತಿದ್ದು, ದುರ್ಬಲ ವರ್ಗಗಳ ಮಕ್ಕಳಿಗೆ ಈಗ ಶಿಕ್ಷಣವನ್ನು ಪ್ರಧಾನ ಹಕ್ಕನ್ನಾಗಿ ಮಾಡಲಾಗಿದೆ. ಎನ್ಇಪಿ ನೂರಕ್ಕೆ ನೂರರಷ್ಟು ಸಕಾರಾತ್ಮಕವಾಗಿದೆ ಎಂದು ಅವರು ವಿವರಿಸಿದರು.

    ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗಕ್ಕೆ ಅರ್ಹರಾಗುತ್ತಿದ್ದರು. ಆದರೆ ಈಗ ಕೌಶಲ್ಯ ಮತ್ತು ಡಿಜಿಟಲ್ ಕಲಿಕೆಗೆ ಒತ್ತು ನೀಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉದ್ಯೋಗಕ್ಕೆ ಬೇಕಾದ ಅರ್ಹತೆ ಮತ್ತು ಸಾಮರ್ಥ್ಯಗಳನ್ನು ತನ್ನದಾಗಿಸಿಕೊಳ್ಳಲಿದ್ದಾನೆ ಎಂದು ಅವರು ನುಡಿದರು.

    ಎನ್ಇಪಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮೊದಲು ಲಾಭವಾಗಲಿದೆ. ಇಲ್ಲಿರುವ ಮಕ್ಕಳಲ್ಲಿ ಶೇ.95ರಷ್ಟು ವಿದ್ಯಾರ್ಥಿಗಳು ದುರ್ಬಲ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ. ಆದ್ದರಿಂದ ಎನ್ಇಪಿಯಿಂದ ಶಿಕ್ಷಣದ ವಾಣಿಜ್ಯೀಕರಣ ನಡೆಯುತ್ತಿದೆ ಎನ್ನುವ ಮಾತುಗಳನ್ನು ನಂಬಿ ದಿಕ್ಕು ತಪ್ಪಬಾರದು. ಅಲ್ಪಸಂಖ್ಯಾತರೂ ಸೇರಿದಂತೆ ಯಾರೂ ಅನಗತ್ಯ ಭಯ, ಸಂಶಯಗಳನ್ನು ಇಟ್ಟುಕೊಳ್ಳಬಾರದು ಎಂದು ಅಶ್ವತ್ಥನಾರಾಯಣ ಹೇಳಿದರು.

    ಹಳೆಯ ವ್ಯವಸ್ಥೆಯಲ್ಲಿ ಜ್ಞಾನದ ಒಂದು ತುಣುಕಷ್ಟೇ ಸಿಕ್ಕುತ್ತಿತ್ತು. ಈಗ ದೇಶೀಯವಾದ ಮತ್ತು ಪರಿಪೂರ್ಣವಾದ ಬೋಧನೆ ಸಾಧ್ಯವಾಗಲಿದೆ. ಜಾಗತೀಕರಣದ ಯುಗದಲ್ಲಿ ಶಿಕ್ಷಣ ಸಂಸ್ಥೆಗಳ ಸುಧಾರಣೆ ಮತ್ತು ಹೊಸ ಸಂಸ್ಥೆಗಳ ಅಗತ್ಯ ಎರಡೂ ಇದೆ. ಗುಣಮಟ್ಟದ ವಿಚಾರದಲ್ಲಿ ಸಬೂಬುಗಳನ್ನು ಇನ್ನು ಮುಂದೆ ಸಹಿಸಿಕೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

    ಎನ್ಇಪಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ಮತ್ತು ಸ್ವಾಯತ್ತೆ ನೀಡಲಿದೆ. ಇದು ಸಮಕಾಲೀನ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಂಡಿದ್ದು, ಎಲ್ಲರನ್ನೂ ಒಳಗೊಳ್ಳಲಿದೆ. ವಿಶ್ವ ಗುಣಮಟ್ಟದ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಜಾಗತಿಕ ಮಟ್ಟದ ಶಿಕ್ಷಣವು ಮಕ್ಕಳಿಗೆ ದೊರೆಯುವಂತೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ಐಎಸ್ ಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಟಾಮ್ ಜೋಸೆಫ್, ನಿರ್ದೇಶಕಿ ತೆರೇಸಾ ಜಾಕೋಬ್ಸ್, ಕಾಲೇಜು ಶಿಕ್ಷಣ ಆಯುಕ್ತ ಪಿ.ಪ್ರದೀಪ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಮುಂತಾದವರು ಉಪಸ್ಥಿತರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!