ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರು ಅದರಲ್ಲೂ ವಿಶೇಷವಾಗಿ ಸಣ್ಣ ಹೂಡಿಕೆದಾರರು ಷೇರುಪೇಟೆಯಲ್ಲಿ ಹೂಡಿಕೆ ಆರಂಭಿಸಿದಾಗ ಇದ್ದ ಮೂಲ ಉದ್ದೇಶವನ್ನು ಮರೆತು ಪೇಟೆಯ ಏರಿಳಿತಗಳೊಂದಿಗೆ ತೇಲಾಡಿ ಪರಿಸ್ಥಿತಿಯ ಕೈಗೊಂಬೆಯಂತೆ ಚಟುವಟಿಕೆ ನಡೆಸುವುದು ಹೆಚ್ಚಾಗಿದೆ. ಇದಕ್ಕೆ ಕಾರಣ ಆನ್ ಲೈನ್ ಟ್ರೇಡಿಂಗ್ ನ ವ್ಯಾಮೋಹಕ್ಕೆ ಒಲಿದು, ವೆಚ್ಚವನ್ನು ಉಳಿಸಿದೆನೆಂಬ ಭಾವನೆಯಿಂದ ಖುಷಿ ಪಡುತ್ತಾರೆ, ಆರಂಭದಲ್ಲಿ. ಆದರೆ ನಂತರದಲ್ಲಿ ಪೇಟೆಯು ಖರೀದಿಸಿದ ಷೇರಿಗೆ ಪೇಟೆಯು ಯಾವ ರೀತಿಯ ಸ್ಪಂದನವನ್ನು ನೀಡಿ ಅನುಕೂಲ ಕಲ್ಪಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಲಾಭಾಂಶ ಪ್ರಕಟಿಸಿದ ಕಂಪನಿಗಳು:
- ಗ್ಲೆನ್ ಮಾರ್ಕ್ ಲೈಫ್ ಸೈನ್ಸಸ್ :ರೂ.10.50 ( ನಿಗದಿತ ದಿನಾಂಕ: 23/11/2021)
- ಇರ್ಕಾನ್ ಇಂಟರ್ನ್ಯಾಶನಲ್ : ರೂ.0.70 ( ನಿಗದಿತ ದಿನಾಂಕ: 23/11/2021)
- ಒ ಎನ್ ಜಿ ಸಿ : ರೂ.5.50 ( ನಿಗದಿತ ದಿನಾಂಕ: 23/11/2021)
- ಟೈಡ್ ವಾಟರ್ ಆಯಿಲ್ : ರೂ.20.00 ( ನಿಗದಿತ ದಿನಾಂಕ: 23/11/2021)
- ಕೊಚ್ಚಿನ್ ಶಿಪ್ ಯಾರ್ಡ್ : ರೂ.6.00 ( ನಿಗದಿತ ದಿನಾಂಕ: 24/11/2021)
- ಹಿಂದೂಸ್ಥಾನ್ ಏರೋನಾಟಿಕ್ಸ್ : ರೂ.14.00 ( ನಿಗದಿತ ದಿನಾಂಕ: 24/11/2021)
- ನ್ಯಾಟ್ಕೋ ಫಾರ್ಮಾ : ರೂ.0.50 ( ನಿಗದಿತ ದಿನಾಂಕ: 24/11/2021)
- ಆಯಿಲ್ ಇಂಡಿಯಾ : ರೂ.3.50 ( ನಿಗದಿತ ದಿನಾಂಕ: 24/11/2021)
- ಅಮರರಾಜಾ ಬ್ಯಾಟರೀಸ್ : ರೂ.4.00 ( ನಿಗದಿತ ದಿನಾಂಕ: 25/11/2021)
- ಕ್ರಿಸಿಲ್ : ರೂ.9.00 ( ನಿಗದಿತ ದಿನಾಂಕ: 25/11/2021)
- ಗುಜರಾತ್ ಥೆಮಿಸ್ ಬಯೋ : ರೂ.7.00 ( ನಿಗದಿತ ದಿನಾಂಕ: 25/11/2021)
- ಹಿಂದುಜಾ ಗ್ಲೋಬಲ್ ಸೊಲೂಷನ್ಸ್ ರೂ.10.00 ( ನಿಗದಿತ ದಿನಾಂಕ: 25/11/2021)
- ಪವರ್ ಫೈನಾನ್ಸ್ ಕಾರ್ಪರೇಷನ್ : ರೂ.2.50 ( ನಿಗದಿತ ದಿನಾಂಕ: 25/11/2021)
- ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್: ರೂ.1.35 ( ನಿಗದಿತ ದಿನಾಂಕ: 25/11/2021)
- ರೈಟ್ಸ್ : ರೂ.4.00 ( ನಿಗದಿತ ದಿನಾಂಕ: 25/11/2021)
- ಭಾರತ್ ಫೋರ್ಜ್ : ರೂ.1.50 ( ನಿಗದಿತ ದಿನಾಂಕ: 26/11/2021)
- ಕಾವೇರಿ ಸೀಡ್ ಕಂಪನಿ : ರೂ.4.00 ( ನಿಗದಿತ ದಿನಾಂಕ: 26/11/2021)
- ಪಿ ಟಿ ಸಿ ಇಂಡಿಯಾ : ರೂ. 2.00 ( ನಿಗದಿತ ದಿನಾಂಕ: 26/11/2021)
ವಾರದ ವಿಸ್ಮಯಕಾರಿ ಬೆಳವಣಿಗೆಗಳು:
- ಟೈಡ್ ವಾಟರ್ ಆಯಿಲ್ ಕಂಪನಿ ತನ್ನ ತ್ರೈಮಾಸಿಕ ಫಲಿತಾಂಶವನ್ನು 12 ರಂದು ಪ್ರಕಟಿಸುವ ಕಾರ್ಯ ಸೂಚಿ ಪ್ರಕಟಿಸಿದ ದಿನ ಷೇರಿನ ಬೆಲೆ ರೂ.1622 ರಿಂದ ರೂ.1,686 ರವರೆಗೂ ಏರಿಕೆ ಪ್ರದರ್ಶಿಸಿ ನಂತರದ ದಿನ ರೂ.1789 ರವರೆಗೂ ಏರಿಕೆ ಕಂಡು ರೂ.1,717 ಕ್ಕೆ ಕುಸಿಯಿತು. ದಿನಾಂಕ 12 ರಂದು ಪ್ರಕಟಿಸಲಿರುವ ಫಲಿತಾಂಶಕ್ಕೂ ಮುನ್ನವೇ ಏರಿಳಿತಗಳು ಪ್ರದರ್ಶಿಸಿದಂತಾಗಿದೆ.
- ಲಕ್ಷ್ಮಿ ಆರ್ಗ್ಯಾನಿಕ್ ಕೆಮಿಕಲ್ಸ್ ಕಂಪನಿ ಷೇರಿನ ಬೆಲೆ ಸೋಮವಾರದಂದು ರೂ.409 ರ ಸಮೀಪ ಕೆಳಗಿನ ಸರ್ಕ್ಯುಟ್ ನಲ್ಲಿದ್ದು ಮಂಗಳವಾರದಂದು ಚಟುವಟಿಕೆ ಆರಂಭವಾದ ನಂತರ ಷೇರಿನ ಬೆಲೆ ಗರಿಷ್ಠ ಆವರಣ ಮಿತಿ ತಲುಪಿ ನಂತರ ರೂ.423 ರ ಸಮೀಪಕ್ಕೆ ಹಿಂದಿರುಗಿತು. ವಾರಾಂತ್ಯದಲ್ಲಿ ರೂ.413 ರ ಸಮೀಪ ಕೊನೆಗೊಂಡಿದೆ.
- ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಕಂಪನಿಯ ಷೇರಿನ ಬೆಲೆ ಬುಧವಾರದಂದು ರೂ.258 ನ್ನು ತಲುಪಿದ್ದು, ಶುಕ್ರವಾರ ರೂ.213 ರವರೆಗೂ ಇಳಿಕೆ ಕಂಡು ರೂ.230 ರ ಸಮೀಪ ಕೊನೆಗೊಂಡಿದೆ. ಶುಕ್ರವಾರ ಪ್ರಕಟಿಸಿದ ಫಲಿತಾಂಶ ಪ್ರೋತ್ಸಾಹದಾಯಕವಾಗಿಲ್ಲ ಎಂಬ ಕಾರಣಕ್ಕೆ ದಿನದ ಮದ್ಯಂತರದಲ್ಲಿ ಚಷೇರಿನ ಬೆಲೆ ರೂ.213 ರ ಸಮೀಪಕ್ಕೆ ಕುಸಿದಿತ್ತು.
*ಕಲ್ಯಾಣ್ ಜುವೆಲ್ಲರ್ಸ್ ಕಂಪನಿಯು ಈ ವರ್ಷ ಪ್ರತಿ ರೂ.10 ರ ಮುಖಬೆಲೆಯ ಷೇರಿಗೆ ರೂ.87 ರಂತೆ ಆರಂಭಿಕ ಷೇರು ವಿತರಣೆ ಮಾಡಿದೆ. ನಂತರದಲ್ಲಿ ಮೇ ತಿಂಗಳಲ್ಲಿ ರೂ.56 ರವರೆಗೂ ಕುಸಿದು ನಂತರ ಜೂನ್ ತಿಂಗಳಲ್ಲಿ ರೂ.89 ರವರೆಗೂ ಏರಿಕೆ ಕಂಡಿತು. ತದನಂತರದಲ್ಲಿ ಪೇಟೆಯು ಉತ್ತುಂಗಕ್ಕೆ ತಲುಪಿದರೂ ಸಹ ಅದು ವಿತರಣೆ ಬೆಲೆಯನ್ನೂ ಸಹ ತಲುಪದಾಗಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಪ್ರಕಟಿಸಿದರೂ ಅದು ವಿತರಣೆ ಬೆಲೆ ತಲುಪದಾಗಿದೆ. ರೂ.10 ರ ಮುಖಬೆಲೆ, ಲಾಭಗಳಿಸುವ ಕಂಪನಿಯು ಇಷ್ಠು ಕಡಿಮೆಬೆಲೆಯಲ್ಲಿದೆ ಎಂಬುದೂ ಸಹ ವಿಸ್ಮಯಕಾರಿ ಅಂಶವಾಗಿದೆ.
*ಕ್ಲಾರಿಯಂಟ್ ಕಂಪನಿಯು, ಕೆಳಮಧ್ಯಮ ಶ್ರೇಣಿಯ ಕಂಪನಿಯಾದರೂ ಸಹ, ಎಷ್ಠರಮಟ್ಟಿಗೆ ಹೂಡಿಕೆದಾರ ಸ್ನೇಹಿ ಎಂದರೆ ಸುಮಾರು 20 ವರ್ಷಗಳಲ್ಲಿ ಪ್ರತಿ ಒಂದು ಷೇರಿಗೆ ರೂ.650 ಕ್ಕೂ ಹೆಚ್ಚಿನ ಲಾಭಾಂಶವನ್ನು ವಿತರಿಸಿದ ಕಂಪನಿಯಾಗಿದೆ. ಈ ಕಂಪನಿಯ ಷೇರಿನ ಬೆಲೆ ಒಂದು ತಿಂಗಳ ಹಿಂದಷ್ಠೇ ರೂ.625 ರ ವರೆಗೂ ಏರಿಕೆ ಕಂಡು ನಂತರದಲ್ಲಿ ಶುಕ್ರವಾರ 12 ರಂದು ಕಂಪನಿಯ ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ ಷೇರಿನ ಬೆಲೆಯು ರೂ.534 ರವರೆಗೂ ಕುಸಿದು ರೂ.541 ರವರೆಗೂ ಏರಿಕೆ ಕಂಡಿದೆ. 2020 ರಲ್ಲಿ ರೂ.151 ರೂಪಾಯಿಗಳ ಲಾಭಾಂಶ ವಿತರಿಸಿದರೆ, 2021 ರಲ್ಲಿ ಪ್ರತಿ ಷೇರಿಗೆ ರೂ.65 ರ ಲಾಭಾಂಶ ವಿತರಿಸಿದೆ. ಷೇರಿನ ಬೆಲೆಯು 2001 ರಲ್ಲಿ ರೂ.36 ರ ಕನಿಷ್ಠದ ಸಮೀಪವಿದ್ದ ಷೇರಿನ ಬೆಲೆಯು 2006 ರಲ್ಲಿ ರೂ.395 ಕ್ಕೆ ಏರಿಕೆ ಕಂಡು, 2009 ರಲ್ಲಿ ರೂ.144 ರ ಸಮೀಪಕ್ಕೆ ಇಳಿಯಿತು. 2011 ರಲ್ಲಿ ರೂ.854 ಕ್ಕೆ ಏರಿಕೆ ಕಂಡು 2013 ರಲ್ಲಿ ರೂ.371 ರವರೆಗೂ ಕುಸಿಯಿತು. 2015 ಕ್ಕೆ ರೂ.1,180 ಕ್ಕೆ ಜಿಗಿಯಿತು. 2019 ರಲ್ಲಿ ರೂ.265 ರ ಸಮೀಪಕ್ಕೆ ಕುಸಿದು 2020 ರಲ್ಲಿ ರೂ.193 ರ ಸಮೀಪಕ್ಕೆ ಜಾರಿತು. ಆದರೆ ಈ ವರ್ಷ ರೂ.642 ರವರೆಗೂ ಜಿಗಿದು ಈಗ ರೂ.541 ರ ಸಮೀಪವಿದೆ.
*ಪೆಂಟಾ ಮೀಡಿಯಾ ಗ್ರಾಫಿಕ್ಸ್ ಕಂಪನಿಯು 2000 ದಲ್ಲಿನ ಷೇರುಪೇಟೆ ಹಗರಣದ ಸಮಯದಲ್ಲಿ ಪ್ರತಿ ಷೇರಿಗೆ ರೂ.3,000 ಕ್ಕೂ ಹೆಚ್ಚಿನ ದರದಲ್ಲಿ ವಹಿವಾಟಾಗುತ್ತಿದ್ದ ಷೇರಾಗಿದ್ದು, ಕಾಲಕ್ರಮೇಣ ಅದು ಕುಸಿಯುತ್ತಾ ಬಂದು ಸಧ್ಯ 30 ಪೈಸೆಗಳಲ್ಲಿದ್ದು, ಇದನ್ನು ವಹಿವಾಟಿನಿಂದ ಅಮಾನತುಗೊಳಿಸಲಾಗಿದೆ. ಆದರೂ ಗ್ರೇಡೆಡ್ ಸರ್ವೆಲನ್ಸ್ ಮೆಕ್ಯಾನಿಸಂ ಸ್ಟೇಜ್ 3 ರ ಅಡಿಯಲ್ಲಿ ಪ್ರತಿ ಸೋಮವಾರ ಹೆಚ್ಚಿನ ಸುರಕ್ಷಾ ಠೇವಣಿಯೊಂದಿಗೆ ವಹಿವಾಟಿಗೆ ಅನುಮತಿಸಲಾಗಿದೆ. ಈ ಕಂಪನಿ 2001 ರಲ್ಲಿ ಪ್ರತಿ ಷೇರಿಗ ರೂ.3 ರಂತೆ ಡಿವಿಡೆಂಡ್ ವಿತರಿಸಿದ ನಂತರ ಕಾರ್ಪೊರೇಟ್ ಫಲಗಳನ್ನು ವಿತರಿಸಿಲ್ಲ.
ಟಾಟಾ ಸ್ಟೀಲ್ ಬಿ ಎಸ್ ಎಲ್ ವಿಲೀನ ವಿಚಾರ:
ಈ ಹಿಂದೆ ಭೂಷಣ್ ಸ್ಟೀಲ್ ಎಂದಿದ್ದ ಈ ಕಂಪನಿಯು ಐಬಿಸಿ ನಿಯಮದಡಿ ಟಾಟಾ ಸ್ಟೀಲ್ ಕಂಪನಿಯು 2018 ರಲ್ಲಿ ತೆಕ್ಕೆಗೆ ಸೇರಿಕೊಂಡಿತು. ಈಗ ಈ ಕಂಪನಿಯನ್ನು ಟಾಟಾ ಸ್ಟೀಲ್ ಕಂಪನಿಯಲ್ಲಿ ವಿಲೀನಗೊಳ್ಳಿಸಲಿರುವ ಕಾರಣ ಸೋಮವಾರದಿಂದ ಟಾಟಾ ಸ್ಟೀಲ್ ಬಿ ಎಸ್ ಎಲ್ ಷೇರುಗಳು ವಹಿವಾಟಾಗುವುದಿಲ್ಲ. ಪ್ರತಿ 15 ಟಾಟಾ ಸ್ಟೀಲ್ ಬಿ ಎಸ್ ಎಲ್ ಗೆ ಒಂದು ಟಾಟಾ ಸ್ಟೀಲ್ ಷೇರುಗಳನ್ನು ವಿಲೀನ ಪ್ರಕ್ರಿಯಯಲ್ಲಿ ನೀಡಲಾಗುವುದು.
ಹೊಸ ಷೇರಿನ ವಿಚಾರ :
- ಎಫ್ ಎಸ್ ಎನ್ ಇ-ಕಾಮರ್ಸ್ ವೆಂಚರ್ಸ್ ಲಿ ( ನೈಕಾ) ಷೇರುಗಳು ನವೆಂಬರ್ 10 ರಂದು ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ. ಆರಂಭದ ದಿನ ರೂ.2001 ರ ಸಮೀಪ ಆರಂಭವಾಗಿ ರೂ.2,206 ರ ಸಮೀಪದಲ್ಲಿ ಕೊನೆಗೊಂಡಿತು. ಈ ಕಾರಣ ಕಂಪನಿಯ ಮಾರ್ಕೆಟ್ ಕ್ಯಾಪಿಟಲೈಸೇಷನ್ ರೂ.1 ಲಕ್ಷಕೋಟಿ ಮೀರಿತು ಆದರೆ 11 ರಂದು ರೂ.2,050 ರವರೆಗೂ ಕುಸಿದು ಮಾರ್ಕೆಟ್ ಕ್ಯಾಪಿಟಲೈಸೇಷನ್ ರೂ.1 ಲಕ್ಷ ಕೋಟಿಯೊಳಗೆ ಕುಸಿದರೂ, ಶೀಘ್ರವಾಗಿ ಚೇತರಿಕೆ ಕಂಡು ರೂ.2,216 ರಲ್ಲಿ ದಿನದ ಅಂತ್ಯಕಂಡಿತು. 12 ರಂದು ಷೇರಿನ ಬೆಲೆ ರೂ.2,409 ನ್ನು ತಲುಪಿ ರೂ.2,358 ರ ಸಮೀಪ ಕೊನೆಗೊಂಡು ಪರ್ಸನಲ್ ಉತ್ಪನ್ನಗಳ ದೈತ್ಯ ಕಂಪನಿ ಹಿಂದೂಸ್ಥಾನ್ ಯೂನಿಲೀವರ್ ಷೇರಿನ ಬೆಲೆ ಸಮೀಪದಲ್ಲಿದೆ. ಹಿಂದೂಸ್ಥಾನ್ ಯೂನಿಲೀವರ್ ಕಂಪನಿಯು ನೈಕಾ ಕಂಪನಿಯ ಉತ್ಪನ್ನವಾದ ಅಲಂಕಾರಿಕ ಸಾಮಾಗ್ರಿಗಳ ಜೊತೆಗೆ ನಿತ್ಯೋಪಯೋಗಿ ಪದಾರ್ಥಗಳಾದ ಸೋಪ್ ಗಳು, ಟೂತ್ ಪೇಸ್ಟ್ ಗಳು, ಕಾಫಿ ಮತ್ತು ಟೀ, ಹಾರ್ಲಿಕ್ಸ್ ನ ಹಲವು ವಿಧಗಳು ಮುಂತಾದವುಗಳನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಿರುವ ಕಂಪನಿಯಾಗಿದೆ. ಷೇರಿನ ಬೆಲೆಗಳು ಸರಿಸಮನಾಗಿರುವುದರಿಂದ ಷೇರುದಾರರು ಹೊಸ ಕಂಪನಿಯಿಂದ ಮತ್ತೊಂದು ಬಲಿಷ್ಠ ಕಂಪನಿಗೆ ಬದಲಾಗಲೂ ಸಹ ಉತ್ತಮ ಅವಕಾಶವೆನಿಸಬಹುದು.
- ಫಿನೋ ಪೇಮೆಂಟ್ ಬ್ಯಾಂಕ್
ಈ ಕಂಪನಿಯು ಪ್ರತಿ ಷೇರಿಗೆ ರೂ.577 ರಂತೆ ಅಕ್ಟೋಬರ್ ತಿಂಗಳಲ್ಲಿ ಆರಂಭಿಕ ಷೇರು ವಿತರಿಸಿತು. 12 ರಂದು ಶುಕ್ರವಾರದಂದು ಬಿ ಗುಂಪಿನಲ್ಲಿ ವಹಿವಾಟಿಗೆ ಬೆಡುಗಡೆಯಾಗಿದೆ. ಆರಂಭದ ದಿನ ರೂ.511 ರವರೆಗೂ ಕುಸಿದು ರೂ.545 ರ ಸಮೀಪ ಕೊನೆಗೊಂಡು ಆರಂಭಿಕ ಷೇರು ವಿತರಣೆಯಲ್ಲಿ ಹೂಡಿಕೆ ಮಡಿದವರಿಗೆ ಹಾನಿಯುಂಟುಮಾಡಿದೆ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.