21.4 C
Karnataka
Thursday, November 21, 2024

    INDIAN FESTIVAL: ಇಂದು ತುಳಸಿ ಕಲ್ಯಾಣ ಉತ್ಥಾನ ದ್ವಾದಶಿ

    Must read

    ಎಂ. ವಿ. ಶಂಕರಾನಂದ

    ತುಳಸಿಯೊಂದಿಗೆ ಶ್ರೀವಿಷ್ಣುವಿನ (ಬಾಲಕೃಷ್ಣನ ಮೂರ್ತಿಯ) ವಿವಾಹವನ್ನು ಮಾಡುವುದೇ ತುಳಸಿ ವಿವಾಹದ ವಿಧಿಯಾಗಿದೆ. ವಿವಾಹದ ಹಿಂದಿನ ದಿನ ತುಳಸಿ ಬೃಂದಾವನವನ್ನು ಬಣ್ಣ ಹಚ್ಚಿ ಅಲಂಕರಿಸುತ್ತಾರೆ. ಬೃಂದಾವನದಲ್ಲಿ ಕಬ್ಬು, ಚೆಂಡು ಹೂವುಗಳನ್ನು ಹಾಕುತ್ತಾರೆ ಮತ್ತು ಅದರ ಬುಡದಲ್ಲಿ ಹುಣಸೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಇಡುತ್ತಾರೆ. ಈ ವಿವಾಹದ ವಿಧಿಯನ್ನು ಸಾಯಂಕಾಲ ಮಾಡುತ್ತಾರೆ.

    ವೈಶಿಷ್ಟ್ಯ :ತುಳಸಿ ವಿವಾಹದ ಬಳಿಕ ಚಾತುರ್ಮಾಸದಲ್ಲಿ ಕೈಗೊಂಡ ಎಲ್ಲ ವ್ರತಗಳನ್ನು ಸಮಾಪ್ತಗೊಳಿಸುತ್ತಾರೆ. ಚಾತುರ್ಮಾಸದಲ್ಲಿ ಯಾವ ಪದಾರ್ಥಗಳನ್ನು ವರ್ಜ್ಯ ಮಾಡಿರುತ್ತಾರೆಯೋ, ಆ ಪದಾರ್ಥಗಳನ್ನು ಬ್ರಾಹ್ಮಣರಿಗೆ ದಾನ ಮಾಡಿ ನಂತರ ತಾವೂ ಸೇವಿಸುತ್ತಾರೆ.

    ದೀಪಾವಳಿ ಹಬ್ಬದ ನಂತರ ಬರುವ ಇನ್ನೊಂದು ಹಬ್ಬ ತುಳಸಿ ಹಬ್ಬ ಅಥವಾ ತುಳಸಿ ಮದುವೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಈ ಪವಿತ್ರದಿನವನ್ನು ತುಳಸಿ ಮದುವೆಯನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ. (ಈ ದಿನದ ವಿಶೇಷ ಹಾಡುಗಳು ಮತ್ತು ವಿವರಗಳಿಗೆ ನಮ್ಮ ಈ ವಿಡಿಯೋ ನೋಡಿ)

    ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಆ ಭಗವಂತನು ಹಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿ ವ್ರತವೆಂದೂ ಕರೆಯುವರು.

    ಕಾರ್ತಿಕ ಶುಕ್ಲ ಪಕ್ಷ ಏಕಾದಶಿಯಂದು ಪ್ರಾತಃಕಾಲದಲ್ಲಿ ಕುಂಭದಾನವನ್ನು ಮಾಡಿ ಉಪವಾಸ ವ್ರತವನ್ನಾಚರಿಸಬೇಕು. ಅಂದು ಸೋಮವಾರವಾಗಿದ್ದು, ಉತ್ತರಾಷಾಢ ನಕ್ಷತ್ರವಾಗಿದ್ದರೆ ತುಂಬಾ ಶ್ರೇಷ್ಠ. ಅಂದಿನ ರಾತ್ರಿಯಂದೇ ವಿಷ್ಣುವನ್ನು ಎಬ್ಬಿಸಬೇಕು. ಹಾಗೆ ಎಬ್ಬಿಸುವಾಗ ಈ ಕೆಳಕಂಡ ವೇದೋಕ್ತ ಮಂತ್ರವನ್ನು ಹೇಳಬೇಕು.

    ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್‌।
    ಸಮೂಢಮಸ್ಯ ಪಾಗೇಂಸುರೇ।।

    ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಮಳೆಯು ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸನ್ಯಾಸಿಗಳು ದೇಶ ಸಂಚಾರವನ್ನು ಮಾಡದೇ ಒಂದೆಡೆಯಲ್ಲಿ, ಚಾತುರ್ಮಾಸ್ಯ ವ್ರತವನ್ನು ಆಚರಿಸುವರು. ಆ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ನಿದ್ರಾವಸ್ಥೆಯಲ್ಲಿರುತ್ತಾನೆಂದೂ, ಚಾತುರ್ಮಾಸ್ಯ ಮುಗಿಯುವ ವೇಳೆಯಲ್ಲಿ ಅವನನ್ನು ಎಬ್ಬಿಸಲು ಸುಪ್ರಭಾತವನ್ನು ಹಾಡುವರು. ಅದು ಸಂಕ್ಷಿಪ್ತವಾಗಿ ಹೀಗಿದೆ.

    ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ।
    ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂಕುರು।।

    ಚಾತುರ್ಮಾಸ್ಯದ ಕೊನೆಯ ಹಂತದ ಏಕಾದಶಿಯ ರಾತ್ರಿ ಒಂದು ಕುಂಭದಲ್ಲಿ ಉದ್ದಿನಕಾಳಿನ ಪ್ರಮಾಣದ ಚಿನ್ನದ ಮೀನಿನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ, ಪೂಜಿಸಿ, ಅಂದು ಜಾಗರಣೆಯನ್ನು ಮಾಡಿ, ದ್ವಾದಶಿಯ ಬೆಳಗ್ಗೆ ಮತ್ತೆ ಪೂಜಿಸಿ ಬ್ರಾಹ್ಮಣರಿಗೆ ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.

    ಅಂದು ಧಾತ್ರೀ ದೇವಿಯ ಸ್ವರೂಪವಾದ ನೆಲ್ಲಿಯ ಮರವನ್ನು ಪೂಜಿಸಿ, ಧಾತ್ರೀ, ಶಾಂತಿ, ಮೇಧಾ, ಪ್ರಕೃತಿ, ವಿಷ್ಣುಪತ್ನೀ, ಮಹಾಲಕ್ಷ್ಮೀ, ರಮ್ಯಾ, ಕಮಲಾ, ಇಂದಿರಾ, ಲೋಕಮಾತಾ, ಕಲ್ಯಾಣೀ, ಕಮನೀಯಾ, ಸಾವಿತ್ರೀ, ಜಗದ್ಧಾತ್ರೀ, ಗಾಯತ್ರೀ, ಸುಧೃತೀ, ಅವ್ಯಕ್ತಾ, ವಿಶ್ವರೂಪಾ, ಸುರೂಪಾ ಮತು ಅಬ್ಧಿಭವಾ ಎಂಬ ಹೆಸರುಗಳಿಂದ ಅರ್ಚಿಸಬೇಕು. ಕೆಲವು ಮನೆಗಳಲ್ಲಿ ತುಲಸೀ ಮತ್ತು ಶ್ರೀಮನ್ನಾರಾಯಣನಿಗೆ ವಿವಾಹವನ್ನು ಮಾಡುವ ಪದ್ಧತಿಯೂ ಇದೆ.

    ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ತುಳಸಿ ದೇವಿಗೆ ಶ್ರೀಸೂಕ್ತದಿಂದಲೂ ಅರ್ಚನೆ ಮಾಡಬೇಕು. ತುಳಸಿಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುತ್ತಾರೆ. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಅದರ ಹಾರವನ್ನು ತುಳಸೀ ಮತ್ತು ನಾರಾಯಣನಿಗೆ ಹಾಕುವುದು ಪದ್ಧತಿ. ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಳಸಿ ವಿವಾಹವನ್ನು ಮಾಡುವರು.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!