26.8 C
Karnataka
Sunday, September 22, 2024

    BENGALURU TECH SUMMIT:10 ತಿಂಗಳಲ್ಲಿ ಸೃಷ್ಟಿಯಾದ ಕೋವ್ಯಾಕ್ಸಿನ್ ಅಭಿವೃದ್ಧಿಯ ಯಶೋಗಾಥೆ

    Must read

    BENGALURU NOV 18

    ಕೋವಿಡ್ ಪಿಡುಗು ದೇಶದ ಮೇಲೆರಗಿದಾಗ ಯಾವುದೇ ಲಸಿಕೆ ಇರಲಿಲ್ಲ. ಇದೊಂದು ಕಂಡು ಕೇಳರಿಯದಂತಹ ಸವಾಲಾಗಿತ್ತು. ಏಕೆಂದರೆ, ಕೇವಲ 10 ತಿಂಗಳಷ್ಟೇ ನಮಗೆ ಕಾಲಾವಕಾಶವಿತ್ತು. ಆದರೆ ಮಿಂಚಿನ ವೇಗದಲ್ಲಿ ಕೆಲಸ ಮಾಡಿದ ನಾವು ಕೋವ್ಯಾಕ್ಸಿನ್-COVAXIN- ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆವು. ಇದು ನಿಜಕ್ಕೂ ಸವಾಲಿನಿಂದ ಕೂಡಿದ್ದ ಮತ್ತು ಅನನ್ಯ ಅನುಭವ.’

    ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಗುರುವಾರ ನಡೆದ `ಕೋವಿಡ್ ಲಸಿಕೆಯಲ್ಲಿ ಭಾರತದ ನಾಯಕತ್ವ ಗುಣದ ಪ್ರದರ್ಶನ’ ಗೋಷ್ಠಿಯಲ್ಲಿ, ಭಾರತ್ ಬಯೋಟೆಕ್-Bharath Bio Tech- ಕಂಪನಿಯ ನಿರ್ದೇಶಕ ಡಾ.ವಿ.ಕೃಷ್ಣಮೋಹನ್ ಆಡಿದ ಮಾತುಗಳಿವು.

    ಸಂವಾದಕ್ಕೆ ಚಾಲನೆ ನೀಡಿದ ಡಾ.ಮಹೇಶ್ ಬಾಲಘಾಟ್ ಅವರು `ಕೋವ್ಯಾಕ್ಸಿನ್ ಅಭಿವೃದ್ಧಿಯ ಪಯಣದ ಏಳುಬೀಳುಗಳ ಬಗ್ಗೆ’ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ ಅವರು, “ಕೇಂದ್ರ ಸರಕಾರ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಿಯಾದ ಹೆಜ್ಜೆಗಳನ್ನಿಟ್ಟಿತು; ಜೈವಿಕ ತಂತ್ರಜ್ಞಾನ ಇಲಾಖೆಯು ಮೈ ಕೊಡವಿಕೊಂಡು ಎದ್ದಿತು. ಕೆಲವು ವರ್ಷಗಳ ಹಿಂದೆ ಇಂತಹುದನ್ನು ನಾವು ಕಂಡುಕೇಳರಿಯುವುದು ಸಾಧ್ಯವಿರಲಿಲ್ಲ,’’ ಎಂದರು.

    “ಭಾರತ್ ಬಯೋಟೆಕ್ ಕಂಪನಿಯ ಮುಂದೆ ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತದಲ್ಲೇ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ಉತ್ಪಾದಿಸುವ ಗುರಿ ಇತ್ತು. ಇದಕ್ಕಾಗಿ ಪಟ್ಟಿರುವ ಪರಿಶ್ರಮಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ. ಆದರೆ, ಲಸಿಕೆ ಉತ್ಪಾದನೆಯಲ್ಲಿ ಗುಣಮಟ್ಟದೊಂದಿಗೆ ಯಾವುದೇ ರಾಜಿ ಮಾಡಿಕೊಂಡಿಲ್ಲ. ಒಟ್ಟಿನಲ್ಲಿ ದಾಖಲೆ ಸಮಯದಲ್ಲಿ ನಾವು ಕೋಟ್ಯಂತರ ಜನರ ಜೀವವನ್ನು ಉಳಿಸಬಲ್ಲ ಕೋವ್ಯಾಕ್ಸಿನ್ ಲಸಿಕೆಯು ಸುಲಭವಾಗಿ ಸಿಗುವಂತೆ ಮಾಡಿದೆವು” ಎಂದು ಅವರು ನೆನಪಿನ ಸುರುಳಿ ಬಿಚ್ಚಿದರು.

    ಭಾರತದ ವೈದ್ಯಕೀಯ ನಿಯಂತ್ರಣ ವ್ಯವಸ್ಥೆ ಕಳೆದ 10 ವರ್ಷಗಳಲ್ಲಿ ಸಕಾರಾತ್ಮಕವಾಗಿ ಬದಲಾಗಿದೆ. ಕೇಂದ್ರ ಸರಕಾರವು ಈಗ ಲಸಿಕೆ ಅಭಿವೃದ್ಧಿ ಯೋಜನೆಗಳಿಗೆ ಕನಿಷ್ಠ 50 ಲಕ್ಷ ರೂ.ಗಳಿಂದ ಹಿಡಿದು ಗರಿಷ್ಠ 50 ಕೋಟಿ ರೂ.ಗಳವರೆಗೂ ನೆರವು ನೀಡುತ್ತಿದೆ. ಆದ್ದರಿಂದ ಈಗ ಔಷಧ ತಯಾರಿಕೆ ಕಂಪನಿಗಳು ಸರಿಯಾದ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಕೃಷ್ಣ ಮೋಹನ್ ಪ್ರತಿಪಾದಿಸಿದರು.

    ಸಂವಾದದಲ್ಲಿ ಪಾಲ್ಗೊಂಡಿದ್ದ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಸಿಇಒ ಡಾ.ದೀಪಕ್ ಸಕ್ರಾ, “ಕೋವಿಡ್ ಸಂದರ್ಭವು ನಮ್ಮೆಲ್ಲರಿಗೂ ಒಳ್ಳೆಯ ಪಾಠ ಕಲಿಸಿತು. ರಷ್ಯಾದ ಕಂಪನಿಗಳಿಂದ ಸಿಕ್ಕಿದ ಸಹಭಾಗಿತ್ವದಿಂದಾಗಿ ನಾವು ಸ್ಪುಟ್ನಿಕ್ ಲಸಿಕೆಯನ್ನು ಅಭಿವೃದ್ಧಿ ಪಡಿಸುವುದು ಸಾಧ್ಯವಾಯಿತು. ಇದರಿಂದ ಭಾರತದ ಜೊತೆಗೆ ಇತರ ಅಭಿವೃದ್ಧಿಶೀಲ ದೇಶಗಳಿಗೂ ನೆರವಾಯಿತು. ಆದರೆ, ಸಂಶೋಧನೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಭಾರತ ಕ್ರಮಿಸಬೇಕಾದ ಹಾದಿ ಬಹಳಷ್ಟಿದೆ,’ ಎಂದರು.

    ಅರಬಿಂದೋ ಫಾರ್ಮಾದ ಹಿರಿಯ ಉಪಾಧ್ಯಕ್ಷೆ ಡಾ.ದಿವ್ಯಾ ಬಿಜಲ್ವಾನ್ ಅವರು, `ದೇಶದಲ್ಲಿ ವಿಜ್ಞಾನ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ಅದನ್ನು ಗುರುತಿಸಿ, ಸೂಕ್ತ ಸ್ಥಾನಮಾನಗಳನ್ನು ಕೊಡುವ ವಾತಾವರಣ ನಮ್ಮಲ್ಲಿಲ್ಲ. ಇದರ ಬಗ್ಗೆ ಲಸಿಕೆ ಮತ್ತು ಔಷಧ ಕಂಪನಿಗಳು ಅವಲೋಕನ ಮಾಡಿಕೊಂಡು, ತಮ್ಮ ಸಂಕುಚಿತ ಧೋರಣೆಯಿಂದ ಹೊರಬರಬೇಕು’ ಎಂದರು.

    ಸಂವಾದದಲ್ಲಿ ಯಾಪನ್ ಬಯೋಪ್ರೈವೇಟ್ ಲಿಮಿಟೆಡ್ ಸಹಸಂಸ್ಥಾಪಕ ಅತಿನ್ ತೋಮರ್ ಭಾಗವಹಿಸಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!