ಉಜ್ಜಿನಿ ರುದ್ರಪ್ಪ
KOTTUR NOV 18
ಆತನ ಶವಯಾತ್ರೆಗೆ ಇಡೀ ಹಡಗಲಿಯೇ ಸೇರಿತ್ತು. ಬೀದಿ ಬೀದಿಯಲ್ಲಿ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು.ಸೇರಿದವರೆಲ್ಲರೂ ಹೀಗಾಗಬಾರದಿತ್ತು ಎಂದು ಕಂಬನಿಗೆರೆಯುತ್ತಿದ್ದರು. ಬಡವರು ಶ್ರೀಮಂತರೆನ್ನದೆ ನಡೆದುಕೊಂಡು, ಬೈಕನ್ನೇರಿ, ಕಾರನ್ನೇರಿ ಸಾವಿರಾರು ಜನರು ಆತನ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು.
ಇಷ್ಟೊಂದು ಜನಪ್ರಿಯತೆ ಇರಬೇಕೆಂದರೆ ಈತ ಹಡಗಲಿಯ ರಾಜಕಾರಣಿಯೋ, ದೊಡ್ಡ ಶ್ರೀಮಂತನೋ,ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನೋ, ಸ್ವಾತಂತ್ರ್ಯ ಹೋರಾಟಗಾರನೋ ಅಥವಾ ಧಾರ್ಮಿಕ ಗುರುವೋ ಆಗಿರಬೇಕು ಎಂದು ನೀವು ಭಾವಿಸಿದ್ದರೆ ಅದು ತಪ್ಪು . ಈತ ಹಡಗಲಿಯಲ್ಲಿ ಅವರಿವರ ಹತ್ತಿರ ಬಿಕ್ಷೆ ಬೇಡಿ, ನೆರಳಿದ್ದಲ್ಲಿ ಮಲಗಿ , ಯಾರಾದರೂ ಕರೆದು ರೊಟ್ಟಿ ಅಥವಾಇನ್ನೇನಾದರೂ ತಿನ್ನಲು ಕೊಟ್ಟರೆ ತಿಂದು ಗುಡಿ ಗುಂಡಾರದಲ್ಲಿರುತ್ತಿದ್ದ ‘ಹುಚ್ಚ’ ಬಸ್ಯಾ!
ಒಬ್ಬ ಬುದ್ಧಿ ಮಾಂದ್ಯನ ಶವ ಸಂಸ್ಕಾರಕ್ಕೆ ಇಡೀ ಹಡಗಲಿ ಪಟ್ಟಣ ಜನತೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸಾವಿರ ಸಂಖ್ಯೆಯಲ್ಲಿ ಸೇರಿರುವುದು ಬಹುಶಃ ಜಿಲ್ಲೆ, ರಾಜ್ಯ,ದೇಶದಲ್ಲಿ ಎಲ್ಲಿಯೂ ಇರಲಿಕ್ಕೆ ಸಾಧ್ಯವಿಲ್ಲ. ಶರಣರ ಸಾವನ್ನು ಮರಣದಲ್ಲಿ ಕಾಣು ಎಂಬಂತೆ ಬಸ್ಯಾ ಸಾವಿನಲ್ಲಿ ಶರಣನಾದ.
ವೈದ್ಯಕೀಯ ಚಿಕಿತ್ಸೆ ಪಡೆಯದೇ ಬೀದಿ ಬೀದಿ ಅಲೆಯವು ಅನಾಥ ಬುದ್ಧಿಮಾಂದ್ಯರು ಎಲ್ಲಾ ಊರಿನಲ್ಲಿಯೂ ಇರುತ್ತಾರೆ. ಕೆಲವರು ಇಂಥವರಿಗೆ ಕಲ್ಲು ಹೊಡೆಯುವುದು. ಬಾಯಿಗೆ ಬಂದಂತೆ ಬೈಯುವುದು ಮಾಡುತ್ತಾರೆ. ಚಿಕಿತ್ಸೆ ಕೊಡಿಸುವ ಮಾತಿರಲಿ ಇಂಥ ಅನಾಥರನ್ನು ಮನುಷ್ಯರೆಂದೇ ಭಾವಿಸುವುದಿಲ್ಲ.
ಆದರೆ ಈ ಬಸ್ಯಾ ತುಸು ಭಿನ್ನ. ಈತನಿಗೆ ಬಸ್ಯಾ ಎಂದು ಯಾವಾಗ ನಾಮಕರಣವಾಯಿತೋ ಗೊತ್ತಿಲ್ಲ. ಹುಟ್ಟವಾಗಲೆ ಅರೆ ಹುಚ್ಚನಾಗಿದ್ದ ಬಸ್ಯಾನ ತಲೆ ಸ್ವಲ್ಪ ಚಿಕ್ಕದಾಗಿತ್ತು. ತಾಯಿಯ ಜೊತೆಗಿದ್ದ . ಇತ್ತೀಚಿಗೆ ಈತನ ತಾಯಿಯೂ ತೀರಿದ ಮೇಲೆ ತುಸು ಖಿನ್ನನಾಗಿದ್ದ. ತಾಯಿ ಸತ್ತ ಮೇಲೆ ಸಂಪೂರ್ಣ ಅನಾಥನೇ ಆಗಿ ಬಿಟ್ಟ.
ಯಾರೂ ಕಂಡರೂ ಪ್ರೀತಿಯಿಂದ ಅಪ್ಪಾಜಿ ಅನ್ನುತ್ತಿದ್ದ. ಮುಖ್ಯವಾಗಿ ತಮಗೆ ಇಷ್ಟವಾದರ ಹತ್ತಿರ ಹೋಗಿ ಕೇಳುತ್ತಿದ್ದದ್ದು ಕೇವಲ ಒಂದೇ ಒಂದು ರೂಪಾಯಿ ಮಾತ್ರ. ಅ ದಿನ ಒಂದು ರೂಪಾಯಿ ಕೊಟ್ಟ ವ್ಯಕ್ತಿಗೆ ಅದೃಷ್ಟವೊ ಅದೃಷ್ಟ. ಆಗದಿದ್ದ ಕೆಲಸಗಳೆಲ್ಲ ಆಗುತ್ತಿದ್ದವು.
ಈ ಬಸ್ಯಾ ಯಾವುದಾದರೂ ಅಂಗಡಿ. ಹೋಟಲ್ ಮುಂದೆ ನಿಂತು ಒಂದು ರೂಪಾಯಿ ಕೇಳಿದನಂದರೆ. ಆ ದಿನ ಅ ಅಂಗಡಿ. ಹೋಟಲ್ ಗೆ ಭರ್ಜರಿ ವ್ಯಾಪಾರ ಆಗಾಗಿ ಈತನ ಬರುವಿಕೆಗಾಗಿ. ಒಂದು ರೂಪಾಯಿ ಕೇಳಲಿ ಎಂದು ಜನರು ಸದಾ ಕಾಯುತ್ತಿರುವುದು ಹಡಗಲಿಯಲ್ಲಿ ಸಾಮಾನ್ಯ ದೃಶ್ಯ.
ಮಾಜಿ ಉಪ ಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ. ಮಾಜಿ ಸಚಿವ ಹಾಲಿ ಶಾಸಕ ಪಿ.ಟಿ. ಪರಮೇಶ್ವರ ಅಂದ್ರೆ ಈ ಬಸ್ಯಾನಿಗೆ ಅತಿ ಪ್ರೀತಿ ಅವರನ್ನು ಅಪ್ಪಾಜಿ ಅನ್ನುತ್ತಿದ್ದ ಬಸ್ಯಾ. ಯಾರೂ ಎಷ್ಟು ರೊಕ್ಕ ಕೊಟ್ಟರೂ ಬೇಡ ಎನ್ನುತ್ತಿದ್ದ ಈತನಿಗೆ ಬೇಕಾಗಿದ್ದು ಕೇವಲ ಒಂದು ರೂಪಾಯಿ ಮಾತ್ರ. ಅದು ಕೂಡ ನಾಣ್ಯವೇ ಆಗಬೇಕಿತ್ತು. ನೋಟು ಕೊಟ್ಟರೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ.
ಆಗಾಗಿ ಇಡೀ ಹಡಗಲಿ ಜನತೆಪಾಲಿಗೆ ಈ ಬಸ್ಯಾ ಒಂದು ರೀತಿಯಲ್ಲಿ ಅದೃಷ್ಟವಂತ. ವರಕೊಡುವ ದೇವರಾಗಿದ್ದ. ದಿನವೂ ಬಸ್ಯಾನಿಗಾಗಿ ಕಾಯುತ್ತಿದ್ದರು. ಮಾತನಾಡಿಸಲು ಹಂಬಲಿಸುತ್ತಿದ್ದರು. ಬಸ್ಯಾನಿಂದ ತನ್ನ ಸಂಕಷ್ಟ ಪರಿಹಾರವಾಗಲಿ. ಅದೃಷ್ಟ ಕುದುರಲಿ ಎಂದು ಕಾಯುತ್ತಿದ್ದರೂ ಈ ‘ದೇವ ಮಾನವ ‘ ಬಸ್ಯಾ ತನಗೆ ಇಷ್ಟವಾದಾಗ. ಇಷ್ಟವಾದವರಲ್ಲಿ ಮಾತ್ರ ಕೇವಲ ಒಂದು ರೂಪಾಯಿ ಕೇಳುವ ರೂಪಾಯಿ ರಾಜನಾಗಿದ್ದ.
ನವೆಂಬರ್ 15ರಂದು ಅ ದಿನ ಹಡಗಲಿಯಲ್ಲಿ ಜಿಟಿಜಿಟಿ ಮಳೆ. ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಸರ್ಕಲ್ ಹತ್ತಿರ ರಾತ್ರಿ ಅಪರಿಚಿತ ವಾಹನ ಕಾಲ ಮೇಲೆ ಹರಿದು ಹೋಗಿದೆ. ಮೊದಲೆ ನಿಶಕ್ತನಾಗಿದ್ದ. ನೋಡಿದವರು ಅಯ್ಯೊ ನಮ್ಮ ಬಸ್ಯಾ ಎಂದು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜವಾಗದೆ ಕೊನೆ ಉಸಿರು ಎಳೆದ. ಸತ್ತಾಗ ಅವನಿಗೆ 45 ವರ್ಷ.
ಬಸ್ಯಾನ ಕುರಿತು ಆತನ ಒಳ್ಳೆತನ,ಒಂದು ರೂಪಾಯಿ ಕೊಟ್ಟವರಿಗೆ ಒಲಿಯುತ್ತಿದ್ದ ಅದೃಷ್ಟ, ಹಡಗಲಿಯ ವರದಾದನ ಕುರಿತು ಇಂದಿಗೂ ಪಟ್ಟಣವಾಸಿಗಳು ಕಂಬನಿ ಸುರಿಸುತ್ತಾರೆ. ಶರಣನ ಸಾವನ್ನು ಮರಣದಲ್ಲಿ ಕಾಣು ಎಂಬಂತೆ ಬಸ್ಯಾ ಶರಣನಾಗಿದ್ದಾನೆ.
ಕನ್ನಡಪ್ರಭ ಸೇರಿದಂತೆ ನಾಡಿ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿರುವ ಉಜ್ಜಿನಿ ರುದ್ರಪ್ಪ ಮಾನವಾಸಕ್ತಿಯ ಸಂಗತಿಗಳನ್ನು ಹೆಕ್ಕಿ ತೆಗೆಯಬಲ್ಲ ಚತುರ ವರದಿಗಾರ. ಈಗ ಕೊಟ್ಟೂರಿನಲ್ಲಿ ನೆಲಸಿರುವ ಅವರು ಸ್ವತಂತ್ರ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Interesting personality 🙏 om shanthi
ಹೀಗೂ ಉಂಟೇ……ಅದೂ ಈ ಕಲಿಕಾಲದಲ್ಲಿ??!!!!
ಅತ್ಯಂತ ಅದ್ಭುತವಾದ ದೇವಾ ಮಾನವ ಬಸ್ಯಾ ಬಗ್ಗೆ ತಿಳಿಸಿದ್ದು ನಮಗೆ ಅವಿಸ್ಮರಣೀಯ ಆನಂದ ವಾಗಿದೆ
ಓಂ ಶಾಂತಿ, ಶರಣರಿಗೆ ಶರಣು ಶರಣಾರತಿ.
ಹೀಗೂ ಉಂಟೆ!…ಓಂ ಶಾಂತಿ