ಸುಮಾವೀಣಾ
ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾವುದೆ– ‘ಕರುಣಾ ರಸ’ಕ್ಕೆಂದೇ ಮೀಸಲಾಗಿರುವ ಕಾವ್ಯ ಎಂದರೆ ರಾಘವಾಂಕನ ‘ಹರಿಶ್ಚಂದ್ರಕಾವ್ಯ’ ಈ ಕಾವ್ಯದ ವಸಿಷ್ಠ ವಿಶ್ವಾಮಿತ್ರರ ಸಂವಾದದಲ್ಲಿ ಪ್ರಸ್ತುತ ಮಾತು ಬರುತ್ತದೆ. ವಿಶ್ವಾಮಿತ್ರರು ತಾವು ಒಡ್ಡುವ ಸವಾಲುಗಳಿಂದ ಹರಿಶ್ಚಂದ್ರ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳುವ ಮಾತು.
ಸಿಡಿಲು ಅಂದರೆ ಅಲ್ಲೊಂದು ಅಬ್ಬರ,ಅಪಾಯ ,ಕೋಪ ಇತ್ಯಾದಿಗಳೆ ನೆನಪಾಗುವುದು. ಬಿರುಗಾಳಿ ಸಹಿತ ಮಳೆಗೆ ಕೆಲವೊಮ್ಮೆ ನಾವು ಹಿಡಿಯುವ ಕೊಡೆಗಳು ತಡೆಯುವುದಿಲ್ಲ ಇನ್ನು ಸಿಡಿಲಿಗೆ ತಡೆಯುತ್ತದೆಯೇ ಖಂಡಿತಾ ಇಲ್ಲ ಎಂದೇ ಅರ್ಥ ಅಲ್ವೆ! ಉಪಮೆಯ ಮೂಲಕ ಲೋಕಾನುಭವವನ್ನು ಹೇಳುವ ಈ ಮಾತು ಮಾರ್ಮಿಕವಾಗಿದೆ.
ರಾಘವಾಂಕನೆ ಹರಿಶ್ಚಂದ್ರ ಕಾವ್ಯದಲ್ಲಿ ವಿಶ್ವಾಮಿತ್ರರನ್ನು ಮುನಿರಕ್ಕಸ ಎಂದು ಉಲ್ಲೇಖಿಸಿರುವಂತೆ ಅಂಥ ದೈತ್ಯ ಮುನಿಯ ಸವಾಲುಗಳನ್ನು ರಾಜನೊಬ್ಬ ಅದರಲ್ಲೂ ಉದ್ದೇಶಪೂರ್ವಕವಾಗಿ ಸವಾಲುಗಳನ್ನು ಒಡ್ಡುವಾಗ ಹರಿಶ್ಚಂದ್ರನ ಸಂಯಮ,ಸತ್ಯನಿಷ್ಟುರತೆ ಇತ್ಯಾದಿಗಳು ತಡೆಯಲಾರವು ಎನ್ನುವ ಅರ್ಥದಲ್ಲಿಯೇ ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾವುದೆ ಎಮಬ ಮಾತು ಬಂದಿದೆ
ಜೊತೆಗೆ ವಸಿಷ್ಟರಿಗೂ ಕೂಡ ನಾನು ಭೋರ್ಗರೆದರೆ ನಿನ್ನ ಬೋಧನೆಗಳೂ ಏನೂ ಮಾಡಲು ಸಾಧ್ಯವಿಲ್ಲ. ಸುಂಕದವರ ಹತ್ತಿರ ಕಷ್ಟ ಸುಖ ಹೇಳಿಕೊಳ್ಳಲಾಗದು, ಆಗುವ ಗಂಡಾಂತರಗಳನ್ನು ತಪ್ಪಿಸಲು ಸಾಧ್ಯವಿಲ್ಲ ನಿಮ್ಮ ಶಿಷ್ಯ ನನಗೆಷ್ಟರವನು ಎಂದು ಅಹಂಕಾರದಿಂದ ಬೀಗುತ್ತಾ ಹರಿಶ್ಚಂದ್ರನಿಂದ ಅನಿವಾರ್ಯವಾಗಿ ಸುಳ್ಳನ್ನು ಹೇಳಿಸುವ ಪ್ರಯತ್ನ ಮಾಡುತ್ತಾನೆ.
ಸಂಪೂರ್ಣ ಭೂಮಿಯೇ ಲಯವಾಗುತ್ತಿರುವಾಗ ಭೂಮಿಯ ಮೇಲೆ ನಿರ್ಮಿತವಾಗಿರುವ ಚಿಕ್ಕ ಮನೆಯೊಂದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬ ಅರ್ಥ ಇಲ್ಲಿದೆ.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.