ಐಪಿಒ ಗಳನ್ನು ತೇಲಿಬಿಟ್ಟ ಸಂದರ್ಭದಲ್ಲಿ ವೈವಿಧ್ಯಮಯ ಸಮಾಚಾರಗಳನ್ನೂ ಸಹ ತೇಲಿಬಿಡಲಾಗುತ್ತದೆ. ಕೆಲವು ಕಂಪನಿಯ ಕಡೆಯಿಂದ ಬಂದರೆ ಮತ್ತೆ ಕೆಲವು ವಿಶ್ಲೇಷಕರ, ಮಾಧ್ಯಮಗಳ ಮೂಲಕ ಪ್ರಸ್ತುತಗೊಳ್ಳುತ್ತವೆ. ಇತ್ತೀಚಿನ ಐ ಪಿ ಒ ಗಳ ಸಂದರ್ಭದಲ್ಲಿ ಆ ಕಂಪನಿಯನ್ನು ಈಗಾಗಲೇ ಲಿಸ್ಟಿಂಗ್ ಆಗಿ ಚುರುಕಾಗಿರುವ ಕಂಪನಿಗಳಿಗೆ ಹೋಲಿಸುತ್ತಿದ್ದಾರೆ. ಇದನ್ನು ಕಣ್ಮುಚ್ಚಿ ಅನುಸರಿಸಿ, ಅಳವಡಿಸುವುದು ಸರಿಯಲ್ಲ. ಲಿಸ್ಟಿಂಗ್ ಆದ ಕಂಪನಿಗಳು ದೀರ್ಘಸಮಯದಲ್ಲಿ ಕಲ್ಪಿಸಿಕೊಟ್ಟಂತಹ ಲಾಭಗಳನ್ನೂ ಸಹ ಪರಿಶೀಲಿಸಿ ನಿರ್ಧರಿಸಬೇಕು.
ಪೇಟಿಎಂ ಕಂಪನಿಯ ಷೇರಿನ ಬೆಲೆ ಸುಮಾರು ಶೇ.27 ರಷ್ಟು ಕುಸಿದಿದೆ ಎಂದು ಅದನ್ನು 2010 ರಲ್ಲಿನ ಮತ್ತೊಂದು ಭಾರಿ ಗಾತ್ರದ ಷೇರು ವಿತರಣೆ ಮಾಡಿದ ಕೋಲ್ ಇಂಡಿಯಾ ಕಂಪನಿಗೆ ಹೋಲಿಸುವುದು ಸರಿಯಲ್ಲ.
ಪೇಟಿಎಂ ಕಂಪನಿಯು ರೂ.1 ರ ಮುಖಬೆಲೆಯ ಷೇರನ್ನು ರೂ.2,150 ಕ್ಕೆ ವಿತರಿಸಿದೆ. ಆದರೆ ಕೋಲ್ ಇಂಡಿಯಾ ವಿತರಿಸಿದ ಷೇರಿನ ಮುಖ ಬೆಲೆ ರೂ.10 ವಿತರಿಸಿದ ಬೆಲೆ ರೂ.245.00
ಪೇಟಿಎಂ ಕಳೆದ ಕೆಲವು ವರ್ಷಗಳಿಂದಲೂ ಉತ್ತಮ ಎನ್ನಬಹುದಾದ ಡಿವಿಡೆಂಡ್ ನ್ನು ಹೂಡಿಕೆದಾರರರಿಗೆ ನೀಡಿಲ್ಲ. ಆದರೆ ಕೋಲ್ ಇಂಡಿಯಾ ವಿತರಣೆಯಾದಾಗಲಿಂದಲೂ ಸತತವಾಗಿ ಲಾಭಗಳಿಸಿ ಷೇರುದಾರರಿಗೆ ಸುಮಾರು ರೂ.353 ಕ್ಕೂ ಹೆಚ್ಚಿನ ಡಿವಿಡೆಂಡ್ ವಿತರಿಸಿದೆ, 2016 ರಲ್ಲಿ ಮತ್ತು 2019 ರಲ್ಲಿ ಷೇರುದಾರಿಂದ ಹಿಂಕೊಳ್ಳುವ ಪ್ರಕ್ರಿಯೆ ನಡೆಸಿದೆ. ಅಂದರೆ ಮೊದಲಿನಿಂದಲೂ ಷೇರುದಾರರ ಹಿತ ಕಾಪಾಡಿದೆ.
2010 ರಲ್ಲಿ ಕೋಲ್ ಇಂಡಿಯಾ ಷೇರು ವಿತರಣೆ ಮೂಲಕ ಸಂಗ್ರಹಿಸುವ ಗುರಿ ಇದ್ದುದು ರೂ.15,000 ಕೋಟಿ ಆದರೆ ಆಗ ಸಂಗ್ರಹಣೆಯಾಗಿದ್ದು ರೂ.1.85 ಲಕ್ಷ ಕೋಟಿಯಷ್ಟು. ಲಿಸ್ಟಿಂಗ್ ಆದ ವರ್ಷ ರೂ.357 ರವರೆಗೂ ಏರಿಕೆ ಕಂಡು, 2011 ಮತ್ತು 2014, 2015 ರಲ್ಲಿ ರೂ.400 ರ ಗಡಿದಾಟಿದ ಸಂದರ್ಭಗಳಿವೆ.
2013 ರಲ್ಲಿ ರೂ.238 ರ ಸಮೀಪಕ್ಕೆ, 2014 ಲ್ಲಿ ರೂ.240 ರ ಸಮೀಪಕ್ಕೆ, 217 ರಲ್ಲಿ ರೂ.234 ರ ಸಮೀಪಕ್ಕೆ ತಲುಪಿ, 2018 ರಲ್ಲಿ ರೂ.228 ರ ಸಮೀಪ, 2019 ರಲ್ಲಿ ರೂ.177 ರ ಸಮೀಪಕ್ಕೆ 2020 ರಲ್ಲಿ ರೂ.109 ರ ಸಮೀಪಕ್ಕೆ ಕುಸಿದು, ರೂ.123 ರಿಂದ ರೂ.203 ರ ಅಂತರದಲ್ಲಿ ಏರಿಳಿತ ಕಂಡಿದೆ. ಐ ಪಿ ಒ ಮೂಲಕ ಅಲಾಟ್ ಆದವರಿಗೆ ಮಾರಾಟಮಾಡಲು ಅವಕಾಶ ಕಲ್ಪಿಸಿದೆ ಮತ್ತು ಆಕರ್ಷಕ ಡಿವಿಡೆಂಡ್ ಗಳನ್ನು ವಿತರಿಸಿ ಹೂಡಿಕೆದಾರರ ಹಿತ ಕಾಪಾಡಿದೆ.
ಮತ್ತೊಂದು ಪ್ರಮುಖ ಅಂಶ ಎಂದರೆ ಪೇಟಿಎಂ ಕಂಪನಿಯ ಷೇರಿನ ಮುಖಬೆಲೆಯನ್ನು ಜೂನ್ 2021 ರಲ್ಲಿ ರೂ.10 ರಿಂದ ರೂ.1 ಕ್ಕೆ ಸೀಳಲಾಗಿದೆ. ಅಂದರೆ ಐಪಿಒ ನಲ್ಲಿ ರೂ.10 ರ ಮುಖಬೆಲೆ ಷೇರು ರೂ.21,500 ರಲ್ಲಿ ವಿತರಿಸಲು ಸಾರ್ವಜನಿಕ ಸ್ಫಂದನೆ ಇರಲಾರದೆಂಬ ಕಾರಣಕ್ಕಾಗಿ ಈ ಕ್ರಮಕ್ಕೆ ಕಂಪನಿ ಮುಂದಾಗಿದೆ. ಇದು ಆಡಳಿತ ಮಂಡಳಿಯ ಉದ್ದೇಶಕ್ಕೆ ಹಿಡಿದ ಕನ್ನಡಿಯಾಗಿದೆ.
ಮತ್ತೊಂದೆಡೆ ಪೇಟಿಎಂ ಷೇರಿನ ಏರಿಳಿತವನ್ನು ಸಾರ್ವಜನಿಕ ವಲಯದ ಕಂಪನಿಯಾದ ನ್ಯೂ ಇಂಡಿಯಾ ಅಶುರನ್ಸ್ ನ ರೂ.800 ರಂತೆ ವಿತರಿಸಿದ ಐಪಿಒಗೆ ಹೋಲಿಸುತ್ತಾರೆ. ನ್ಯೂ ಇಂಡಿಯಾ ಅಶುರನ್ಸ್ ರೂ.5 ಮುಖಬೆಲೆ ಹೊಂದಿದೆ. ಆದರೆ ವಿತರಣೆ ನಂತರದಲ್ಲಿ ಅಂದರೆ 2018 ರಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿದೆ. ಇದರಿಂದ ಷೇರಿನ ಮೇಲಿನ ಹೂಡಿಕೆಯು ರೂ.400 ರಾಯಿತು. ಮೂರು ಬಾರಿ ಡಿವಿಡೆಂಡ್ ಸಹ ವಿತರಿಸಿದ್ದಾರೆ. ಜನರಲ್ ಇನ್ಶೂರನ್ಸ್ ಕಂಪನಿ ಆಫ್ ಇಂಡಿಯಾ ಸಹ ರೂ.5 ರಮುಖಬೆಲೆ ಷೇರನ್ನು 2017 ರಲ್ಲಿ ರೂ.912 ರಂತೆ ಐ ಪಿ ಒ ವಿತರಣೆ ಮಾಡಿ 2018 ರಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿದೆ. ಇನ್ನು ಹಿಂದೂಸ್ಥಾನ್ ಏರೋನಾಟಿಕ್ಸ್ ಕಂಪನಿ 2018 ರಲ್ಲಿ ರೂ.1,215 ರಂತೆ ಐಪಿಒ ಮೂಲಕ ವಿತರಣೆ ಮಾಡಿದರೂ ಇದುವರೆಗೂ ಪ್ರತಿ ಷೇರಿಗೆ ರೂ.93 ರಷ್ಠು ಡಿವಿಡೆಂಡ್ ವಿತರಿಸುವ ಮಟ್ಟದಲ್ಲಿದೆ.
ಷೇರು ವಿತರಣೆ ನಂತರದಲ್ಲಿ ವಿತರಣೆ ಬೆಲೆಗಿಂತ ಕಡಿಮೆ ದರದಲ್ಲಿ ವಹಿವಾಟಾಗುತ್ತಿತ್ತು. 2020 ರಲ್ಲಿ ಮತ್ತು ಈ ವರ್ಷ ವಿತರಣೆ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ವಹಿವಾಟಾಗುತ್ತಿದೆ. ಈ ವರ್ಷ ಈ ಷೇರನ್ನು ಡೆರಿವೇಟೀವ್ಸ್ ಗುಂಪಿಗೆ ಸೇರಿಸಿದ್ದು ಈ ಕಂಪನಿಯ ಷೇರಿನಲ್ಲಿ ಮಿಂಚು ಸಂಚರಿಸುವಂತೆ ಮಾಡಿತು.
ಒಂದು ಉತ್ತಮ ಕಂಪನಿಯ ಷೇರಿನ ಬೆಲೆಯು ಕುಸಿತ ಕಂಡರೂ, ಆಂತರಿಕ ಸಾಮರ್ಥ್ಯದ ಕಾರಣ ಪೇಟೆಯಲ್ಲಿ ರಭಸದ ಏರಿಕೆಯಿಂದ ಹೂಡಿಕೆದಾರರನ್ನು ಹರ್ಷಿತಗೊಳಿಸುತ್ತವೆ. ಆದರೆ ಆ ಸಮಯದವರೆಗೂ ಕಾಯಬೇಕಾದ ಗುಣವನ್ನು ಅಳವಡಿಸಿಕೊಳ್ಳಬೇಕು. ಪೇಟೆಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡುವ ವೈವಿಧ್ಯಮಯ ವಿಶ್ಲೇಷಣೆಗಳನ್ನು ತುಲನೆಮಾಡಿ ನಿರ್ಧರಿಸಿದರೆ ಮಾತ್ರ ಬಂಡವಾಳ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಬಹುದಲ್ಲವೇ?
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.