CHIKKABALLAPURA NOV 25
ಪ್ರತಿ ಬಾರಿ ಚುನಾವಣೆ ಬಂದಾಗಲೂ ಕಾಂಗ್ರೆಸ್ ಪಕ್ಷದ ನಾಯಕರಿಗೆ ಜೆಡಿಎಸ್ ಜ್ವರ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.
ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿರುವ ಪಕ್ಷದ ಮುಖಂಡ ರವಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಯಾವ ಚುನಾವಣೆಯೇ ಬರಲಿ, ಕಾಂಗ್ರೆಸ್ ನಾಯಕರಿಗೆ ತಕ್ಷಣ ನೆನಪಾಗುವುದು ಜೆಡಿಎಸ್ ಪಕ್ಷ ಮಾತ್ರ. ಜೆಡಿಎಸ್-ಬಿಜೆಪಿ ಒಪ್ಪಂದ ಮಾಡಿಕೊಂಡಿವೆ ಎಂದು ಆ ಪಕ್ಷದ ನಾಯಕರು ಹೇಳುತ್ತಾರೆ. ಆ ಚುನಾವಣೆ ಮುಗಿದ ಮೇಲೆ ಆ ವಿಷಯವನ್ನು ಅಲ್ಲಿಯೇ ಕೈಬಿಡುತ್ತಾರೆ. ಅವರು ಪದೇಪದೆ ಯಾಕೆ ಈ ರೀತಿಯ ಅಪಪ್ರಚಾರ ನಡೆಸುತ್ತಿದ್ದಾರೆ ಎನ್ನುವುದು ನನಗಂತೂ ಅರ್ಥವಾಗುತ್ತಿಲ್ಲ” ಎಂದರು.
ಒಂದು ವೇಳೆ ನಮ್ಮ ಪಕ್ಷ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಿದ್ದರೆ ಜೆಡಿಎಸ್ ಸ್ಪರ್ಧೆ ಮಾಡಿರುವ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹಾಕುತ್ತಿತ್ತೇ? ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಮತಗಳೇ ಇಲ್ಲದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಲಾಗಿದೆ. ಚುನಾವಣೆಯಲ್ಲಿ ನಮ್ಮನ್ನು ಸೋಲಿಸಬೇಕು ಎಂದು ಬಿಜೆಪಿ ನಾಯಕರು ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೂಡ ಯತ್ನಿಸುತ್ತಿದೆ. ಹೀಗಿದ್ದರೂ ಕಾಂಗ್ರೆಸ್ ನಾಯಕರು ವಿನಾಕಾರಣ ನಮ್ಮ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆಂದು ಎಚ್‌ಡಿಕೆ ಬೇಸರ ವ್ಯಕ್ತಪಡಿಸಿದರು.
ಒಳ ಒಪ್ಪಂದ ಎಂದರೆ ಇದು!:
ಕಳೆದ ಲೋಕಸಭೆ ಚುನಾವಣೆ ವೇಳೆ ಹಾಸನದಲ್ಲಿ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿದ್ದ ನಾಯಕನನ್ನು ಬಿಜೆಪಿಗೆ ಕಳಿಸಿ ಅಭ್ಯರ್ಥಿಯನ್ನಾಗಿ ಮಾಡಿಸುತ್ತಾರೆ. ಈಗ ಅದೇ ನಾಯಕನ ಪುತ್ರ ಕೊಡಗಿನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಈಗ ಇಲ್ಲಿ ಅಪ್ಪ ಬಿಜೆಪಿ ಪಾರ್ಟಿ, ಮಗ ಕಾಂಗ್ರೆಸ್ ಪಾರ್ಟಿ! ಇದೇನು ಒಪ್ಪಂದ? ಜನರಿಗೆ ಎಲ್ಲವೂ ಚೆನ್ನಾಗಿ ಅರ್ಥವಾಗುತ್ತಿದೆ. ನಿಜಕ್ಕೂ ಒಳ ಒಪ್ಪಂದ ಎಂದರೆ ಇದೇ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಬಿಜೆಪಿ ಸರಕಾರದ ಮಂತ್ರಿಯೊಬ್ಬರಿಗೆ ಆಪ್ತ ಕಾರ್ಯದರ್ಶಿ ಆಗಿದ್ದ ವ್ಯಕ್ತಿಗೆ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿದೆ. ಒಳ ಒಪ್ಪಂದ ಜೆಡಿಎಸ್-ಬಿಜೆಪಿ ನಡುವೆ ಆಗಿದೆಯೋ ಅಥವಾ ಕಾಂಗ್ರೆಸ್-ಬಿಜೆಪಿ ನಡುವೆ ಆಗಿದೆಯೋ? ಎನ್ನುವುದನ್ನು ಜನತೆಯೇ ತೀರ್ಮಾನ ಮಾಡಲಿ. ಇನ್ನಾದರೂ ಕಾಂಗ್ರೆಸ್ ಪಕ್ಷದ ನಾಯಕರು ಜೆಡಿಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಅವರು ತಾಕೀತು ಮಾಡಿದರು.
ಕಳೆದ ಬಾರಿ ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಮತದಾರರು ಗೆಲ್ಲಿಸಿದ್ದರು. ಆದರೆ, ಪ್ರತಿ ಬಾರಿ ಚುನಾವಣೆ ಬಂದಾಗ ಕಾಂಗ್ರೆಸ್ ಪಕ್ಷದ ನಾಯಕರು ನಮ್ಮ ಪಕ್ಷದ ವಿರುದ್ಧ ಕುತಂತ್ರಗಳನ್ನು ಹೂಡುತ್ತಲೇ ಇದ್ದಾರೆ. ಈ ಚುನಾವಣೆ ಇಂಥ ಕುತಂತ್ರಗಳಿಗೆ ಮತದಾರರು ತಕ್ಕ ಉತ್ತರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿದರು.
ಮಂತ್ರಿಗಳ ನೆರೆ ವೀಕ್ಷಣೆ ವೈಖರಿಗೆ ತರಾಟೆ:
ಕಳೆದ ಅನೇಕ ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗಿ ಜನರು ಅತೀವ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಂತ್ರಿಗಳ ನೆರೆ ವೀಕ್ಷಣೆ ಹೇಗಿದೆ ಎಂದರೆ, ಬಂದ ಪುಟ್ಟಾ.. ಹೋದ ಪುಟ್ಟಾ ಎನ್ನುವಂತಿದೆ. ಹಿಂದೆ ನೆರೆ ಬಂದಾಗಲೇ ಮನೆ ಕಳೆದುಕೊಂಡವರಿಗೆ, ಬೆಳೆ ನಷ್ಟವಾದರಿಗೆ ಇನ್ನೂ ಪರಿಹಾರ ನೀಡಲಿಲ್ಲ. ಈಗ ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ಕೋಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಮೂರು ವರ್ಷಗಳ ಹಿಂದೆಯೇ ಘೋಷಣೆ ಮಾಡಿದ್ದ ಹಣವನ್ನೇ ಇನ್ನೂ ಬಿಡುಗಡೆ ಮಾಡಿಲ್ಲ. ಈಗ ಬಿಡುಗಡೆ ಮಾಡುತ್ತೆ ಅನ್ನುವುದಕ್ಕೆ ಖಾತ್ರಿ ಏನಿದೆ? ಈ ಸರಕಾರ ಬರೀ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಕಟುವಾಗಿ ಟೀಕಿಸಿದರು.