SANTHEBENNUR NOV 25
ಕಳೆದ ವಾರ ಸುರಿದ ಎಡಬಿಡದ ಮಳೆಗೆ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಕೋಡಿಯಲ್ಲಿ ಭರ್ಜರಿ ನೀರು.ಕೋಡಿಯಿಂದ ಧುಮಕುವ ಜಲಧಾರೆಯನ್ನು ನೋಡುವುದೇ ಆನಂದ. ಕೆರೆ ಕೋಡಿಗೆ ಹೊಂದಿಕೊಂಡಿರುವ ಮಾವಿನ ತೋಪಿನ ಆಳ ಪ್ರದೇಶದಲ್ಲಿ ಅಪರೂಪದ ಜೀವ ಪ್ರಬೇಧ ನೀರು ನಾಯಿಗಳ ಹಿಂಡು ಪ್ರತ್ಯಕ್ಷವಾಗಿದೆ.
ನೀಳ ದೇಹ, ನೀರಿನಲ್ಲಿ ತೋಯದ ತುಪ್ಪಳದ ಚರ್ಮ, ಚಪ್ಪಟೆ ತಲೆ, ಬಲವಾದ ಬಾಲ, ಹುಟ್ಟುಗಳಿಂತಿರುವ ಕಾಲು, ಸ್ವರ್ಶಸೂಕ್ಷ ಮೀಸೆ ಇದರ ದೈಹಿಕ ವಿಶೇಷತೆ. ವೈಜ್ಞಾನಿಕ ನಾಮಧೇಯ ಯುರೇಷಿಯನ ಒಟ್ಟರ್. ಶುದ್ಧ ನೀರಿನಲ್ಲಿ ವಾಸಿಸುವ ನೀರುನಾಯಿ ಚಾಣಾಕ್ಷ ಮೀನು ಬೇಟೆಗಾರ. ಕೆರೆ, ಹಳ್ಳ, ಕೊಳ್ಳದಲ್ಲಿ ಹರಿವ ನೀರಿಗೆ ಹಿಮ್ಮುಖ ಚಲಿಸುವ ಮೀನುಗಳ ಹುಡುಕಾಟದಲ್ಲಿ ಇವು ಸೂಳೆಕೆರೆಯತ್ತ ಧಾವಿಸಿರುವ ಸಾಧ್ಯತೆ ಹೆಚ್ಚು ಎಂದು ಇದರ ವಿಡಿಯೋ ಚಿತ್ರ ತೆಗೆದ ಕೆರೆಬಿಳಚಿಯ ಅಸ್ಲಂ ಷೇಕ್ ತಿಳಿಸಿದ್ದಾರೆ.
ತಕ್ಷಣಕ್ಕೆ ಮುಂಗಸಿ ಮುಖ ಹೋಲುವ ಇದು ವಿರಳ ಗೋಚರ ಜೀವಿ. ಶಬ್ದ, ಜನರಿಂದ ದೂರವಿರುವ ಅಂಜುಬುರುಕ. ಅಪರೂಪಕ್ಕೆ ಎದುರಾಗುವ ಜಲಚರ. ಮೀನು, ಏಡಿ, ಕಪ್ಪೆ, ಬಾತುಕೋಳಿ, ನೀರುಕೋಳಿ ಬೇಟಿ ಆಡುವಲ್ಲಿ ನಿಷ್ಣಾತ. ಈಚೆಗೆ ನಲ್ಲೂರು ಹಾಗೂ ಪುಟ್ಟಪ್ಪನ ಕೆರೆಯಲ್ಲಿಯೂ ನೀರು ನಾಯಿ ಪ್ರತ್ಯಕ್ಷವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ನಲ್ಲೂರು ಕೆರೆಯಲ್ಲಿ ಮುಂಜಾನೆ ಮಾತ್ರ ನೀರು ನಾಯಿಗಳ ಗುಂಪು ನೋಡಿದ್ದೇನೆ. ಕಳೆದೆರಡು ವರ್ಷದಿಂದ ಗಮನಿಸಿದ್ದೇನೆ. ವಿಡಿಯೋ, ಫೋಟೋ ತೆಗೆಯಲು ಸಾಧ್ಯವಾಗುತ್ತಿಲ್ಲ. ತಕ್ಷಣ ಮರೆಯಾಗುವ ಜೀವಿ. ಎರಡು ವರ್ಷದ ಹಿಂದೆ ಬಸ್ಸಿಗೆ ಸಿಕ್ಕಿ ಪ್ರಾಣ ಕಳೆದುಕೊಂಡ ನೀರು ನಾಯಿ ಗುರುತಿಸಲಾಗಿತ್ತು ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ ರವಿ.
ಮಳೆಯಿಂದ ಎಲ್ಲೆಡೆ ನೀರಿನ ಹರಿವು ಹೆಚ್ಚಾಗಿತ್ತು. ಭದ್ರಾ ಜಲಾಶಯದ ಹಿನ್ನೀರಿನ ಮೂಲಕ ಸೂಳೆಕೆರೆ ತಲುಪಿರುವ ಸಾಧ್ಯತೆ ಹೆಚ್ಚು. ಅಲ್ಲಿ ಇವುಗಳ ಸ್ವಾಭಾವಿಕ ನೆಲೆ ಇದೆ ಎಂದು ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ವೀರೇಶ್ ನಾಯ್ಕ್ ತಿಳಿಸಿದ್ದಾರೆ.
ನೀರು ನಾಯಿ ಬಗ್ಗೆ ಒಂದಿಷ್ಟು ಮಾಹಿತಿ (ಕನ್ನಡ ವಿಕಿಪಿಡಿಯಾದಿಂದ)
ನೀರುನಾಯಿ(Lutra lutra) ಭಾರದಲ್ಲಿ ಕಾಶ್ಮೀರ , ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಇದು ವ್ಯಾಪಕವಾಗಿದೆ.ಇದು ನದಿಗಳ ಸಮೀಪ ಬಂಡೆಗಳ ಪೊಟರೆಗಳಲ್ಲಿ ವಾಸಿಸುವುದು.ನೀಳ ದೇಹ,ನೀರಿನಲ್ಲಿ ತೋಯದ ತುಪ್ಪಳದ ಚರ್ಮ,ಚಪ್ಪಟೆಯಾದ ತಲೆ,ಬಲವಾದ ಬಾಲ,ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶಸೂಕ್ಷ್ಮ ಮೀಸೆಗೂದಲು ಇವು ನೀರುನಾಯಿಯ ಮುಖ್ಯ ಲಕ್ಷಣಗಳು.ಮುಖ್ಯ ಆಹಾರ ಮೀನು.ಏಡಿ,ಕಪ್ಪೆ,ಬಾತುಕೋಳಿ,ನೀರುಕೋಳಿ ಹಾಗೂ ಕೆಲವೊಮ್ಮೆ ಎಲೆಗಳು ಕೂಡಾ ಇದರ ಆಹಾರವಾಗುವವು.ಗರ್ಭಧಾರಣಾ ಅವದಿ ಸುಮಾರು 60 ದಿನಗಳು.
ಕರ್ನಾಟಕದಲ್ಲಿ ನೀರುನಾಯಿ
- ತುಂಗಭದ್ರಾ ನದಿಗುಂಟ ಅಪಾರ ಸಂಖ್ಯೆಯಲ್ಲಿ ಅಪರೂಪದ ‘ನೀರುನಾಯಿ’ಗಳಿವೆ (ಆಟರ್).ಕೊಪ್ಪಳ ಜಿಲ್ಲೆಯ ಮುದ್ಲಾಪುರ ಗ್ರಾಮದಿಂದ ಹೊಸಪೇಟೆ ತಾಲ್ಲೂಕಿನ ಹಂಪಿ, ಕಂಪ್ಲಿ ಪಟ್ಟಣದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೀರುನಾಯಿಗಳನ್ನು ಕಾಣಬಹುದು. ಈ ಭಾಗಗಳ ಮೂಲಕ ತುಂಗಭದ್ರೆ ಹರಿಯುವ ಕಾರಣದಿಂದ ಈ ಪ್ರದೇಶವನ್ನೇ ನೀರುನಾಯಿಗಳು ಆವಾಸ ಸ್ಥಾನ ಮಾಡಿಕೊಂಡಿವೆ. ಸ್ಥಳೀಯ ವನ್ಯಜೀವಿ ಮತ್ತು ಪರಿಸರ ಪ್ರೇಮಿಗಳ ಸತತ ಪ್ರಯತ್ನದಿಂದ 2015ರ ಏಪ್ರಿಲ್‌ನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯು 34 ಕಿ.ಮೀ. ಪ್ರದೇಶವನ್ನು ‘ನೀರು ನಾಯಿ ಸಂರಕ್ಷಿತ ಪ್ರದೇಶ’ ಎಂದು ಘೋಷಿಸಿದೆ.
- ‘ನದಿಯ ಎರಡೂ ಕಡೆ ಅಪಾರ ಸಂಖ್ಯೆಯಲ್ಲಿ ನೀರುನಾಯಿಗಳಿವೆ. ಆದರೆ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಮೀನುಗಾರಿಕೆ, ಮರಳುಗಾರಿಕೆಯಿಂದ ಅವುಗಳಿಗೆ ತೊಂದರೆ ಆಗುತ್ತಿದೆ. ತುಂಗಭದ್ರಾ ಕಾಲುವೆಗಳಲ್ಲೂ ನೀರುನಾಯಿಗಳು ಸುರಕ್ಷಿತವಿಲ್ಲ. ಮೀನುಗಾರಿಕೆಯೇ ಇದಕ್ಕೆಲ್ಲ ಕಾರಣ. ಮೀನುಗಾರಿಕೆಗೆ ನಿರ್ದಿಷ್ಟ ಜಾಗ ಗೊತ್ತು ಮಾಡಬೇಕು’ ಎಂದು ವನ್ಯಜೀವಿ ತಜ್ಞ ಸಮದ್ ಅಭಿಪ್ರಾಯ.
ನೀರುನಾಯಿಗಳು ಸಂಕಷ್ಟದಲ್ಲಿ
- ವಾಟರ್‌ಬಾಂಬ್ ಸಿಡಿಸಿ ಮೀನುಗಾರಿಕೆ ಮಾಡುತ್ತಿರುವ ಕಾರಣ ನೀರುನಾಯಿಗಳು ಸಾಯುತ್ತಿವೆ. ಇದಕ್ಕೆ ಕಡಿವಾಣ ಹಾಕಿ ಅವುಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಬೇಕು. ಕೇವಲ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದರೆ ಸಾಲದು. ಕಾವಲುಗಾರರು, ವೀಕ್ಷಣಾ ಗೋಪುರ, ದೋಣಿಗಳು ಸೇರಿದಂತೆ ಇತರ ಕೆಲಸಗಳು ಈಗಾಗಲೇ ಆಗಬೇಕಿತ್ತು. ‘ನೀರುನಾಯಿಗಳ ಸಂರಕ್ಷಣೆಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳಿಗೆ ಛಾಯಾಗ್ರಾಹಕರು ಪತ್ರ ಬರೆದಿದ್ದಾರೆ
- ನೀರುನಾಯಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರು ನೀರುನಾಯಿಗಳ ಸಂರಕ್ಷಣೆಗೆ ಸಂಬಂಧಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ. ಸಿಬ್ಬಂದಿ ನೇಮಕ, ವೀಕ್ಷಣಾ ಗೋಪುರ ಸೇರಿದಂತೆ ಇತರ ಕೆಲಸಗಳು ಆಗಬೇಕಿದೆ, ಎನ್ನುತ್ತಾರೆ.
. .