ವಾದಿರಾಜ ದೇಸಾಯಿ
‘ಆಫೀಸರ್ ಗಳ ಮನೆ ಮೇಲೆ ದಾಳಿಗಳನ್ನು ಮಾಡ್ತಾನೆ ಇರ್ತಾರೆ; ಅಲ್ಲಿ ಸಿಕ್ಕ ದುಡ್ಡು ಏನಾಗುತ್ತದೆ ? ಮುಂದೇನು…?’ಗೃಹಿಣಿಯರೂ ಸೇರಿದಂತೆ ಜನಸಾಮಾನ್ಯರನ್ನು ಈಗ ಕಾಡುತ್ತಿರುವ ಪ್ರಶ್ನೆ ಇದು.
ಈ ಪ್ರಶ್ನೆಯ ಹಿಂದೆ ಎರಡು ಅಂಶಗಳು ಅಡಗಿವೆ . ಒಂದು ಕುತೂಹಲ , ಇನ್ನೊಂದು ದಾಳಿ ಮಾಡುವ ಅಧಿಕಾರಿಗಳು ಆ ದುಡ್ಡನ್ನು ಪಡೆಯುತ್ತಾರಾ ಎಂಬ ಸಂಶಯ.
ಈ ವಿಷಯದ ಪ್ರಸ್ತಾಪಕ್ಕೆ ಕಾರಣ ಮೊನ್ನೆ ಮೊನ್ನೆ ನಡೆದ ಎಸಿಬಿಯ (ಭ್ರಷ್ಟಾಚಾರ ನಿಗ್ರಹ ದಳ ) ದಾಳಿಗಳು. ಕಳೆದವಾರ ಬಿಡಿಎ ಕಚೇರಿ ಮೇಲೆ ದಾಳಿ ಬೆನ್ನಲ್ಲೇ ರಾಜ್ಯಾದ್ಯಂತ 15 ಸರ್ಕಾರಿ ನೌಕರರ ಮನೆ ಮೇಲಿನ ದಾಳಿ ಮತ್ತು ಇದೇ ಸಮಯದಲ್ಲಿ ಕೊಬ್ಬರಿ ವರ್ತಕರ ಮನೆ ಹಾಗೂ ಅಂಗಡಿಗಳ ಮೇಲೆ ಆದಾಯ ತೆರಿಗೆ ದಾಳಿಯೂ ಸುದ್ದಿಯಾಯಿತು.
ಇಂತಹ ದಾಳಿಗಳ ಬಗ್ಗೆ ಜನರು ಈಗೀಗ ಹೆಚ್ಚು ಜಾಗೃತರಾಗುತ್ತಿದ್ದಾರೆ. ಆದರೆ ಕಲ್ಯಾಣ ಕರ್ನಾಟಕದ ಕೆಲವು (ಹಿಂದುಳಿದ) ಭಾಗಗಳಲ್ಲಿ ಜಾಗೃತಿ ಇನ್ನೂ ಅಷ್ಟಾಗಿಲ್ಲ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ದಾಳಿಯ ನಂತರದ ಪ್ರಕ್ರಿಯೆಗಳ ವಿಷಯ ಬಹುತೇಕವಾಗಿ ಜನರಿಗೆ ಗೊತ್ತಾಗದೇ ಇರುವುದರಿಂದ ನಿರೀಕ್ಷಿತ ಜಾಗೃತಿ ಆಗುತ್ತಿಲ್ಲ. ಭ್ರಷ್ಟಾಚಾರದ ಆರೋಪಿಗಳಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದ ಒಂದೆರಡು ಪ್ರಕರಣಗಳು ಪತ್ರಿಕೆಗಳಲ್ಲಿ ಸಣ್ಣ ಸುದ್ದಿಯಾಗಿ ಅಚ್ಚಾಗುವುದರಿಂದ ಜನರ ಗಮನ ಸೆಳೆಯುತ್ತಿಲ್ಲ.
ದಾಳಿ ನಂತರದ ತನಿಖೆಗಳು ” ಠುಸ್” ಆಗಿ ಬಿಡುತ್ತವೆ ಎಂದು ಬಿಂಬಿಸಲಾಗುತ್ತಿದೆಯಾದರೂ , ಆ ಪ್ರಕ್ರಿಯೆಗಳನ್ನು ಅರಿತುಕೊಳ್ಳುವ ಪ್ರಯತ್ನ ಇಲ್ಲಿದೆ.
ಸಂಪತ್ತು ಸುರಕ್ಷಿತ
ರೇಡ್ ಸಮಯದಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು “ತನಿಖೆಯು ಪೂರ್ಣಗೊಳ್ಳುವವರೆಗೂ ತನ್ನ ವಶಕ್ಕೆ ನೀಡಬೇಕು” ಎಂದು ಎಸಿಬಿಯು ನ್ಯಾಯಾಲಯದ ಅನುಮತಿ ಕೋರುತ್ತದೆ. ಈ ಬಳಿಕವೇ ಆ ವಸ್ತುಗಳನ್ನು ಎಸಿಬಿ ಕಚೇರಿಗಳಲ್ಲಿ ಅಥವಾ ಜಿಲ್ಲಾ ಖಜಾನೆ ಕಚೇರಿಗಳಲ್ಲಿ ಭದ್ರವಾಗಿ ಇರಿಸಲಾಗುತ್ತದೆ.
ಇದಕ್ಕೂ ಮುನ್ನ , ದಾಳಿ ನಡೆದ ಸ್ಥಳದಲ್ಲಿಯೇ, ಇಬ್ಬರು ಪಂಚರ (ಸರ್ಕಾರಿ ಉದ್ಯೋಗಿಗಳು) ಸಮ್ಮುಖದಲ್ಲೇ ಪಂಚನಾಮೆ ನಡೆಯುತ್ತದೆ. ಹೊಸ ನೋಟುಗಳಾದರೆ ಅವುಗಳ ಸೀರೀಸ್ ಸಂಖ್ಯೆ; ಹಳೆಯ ನೋಟ್ ಆದರೆ ಕಂತೆಗಳ ಸಂಖ್ಯೆ, ಒಡವೆಗಳ ತೂಕ ಎಲ್ಲವೂ ನಮೂದಿಸಲಾಗುತ್ತದೆ.
ಎಸಿಬಿ ದಾಳಿಗಳ ಪ್ರಕರಣಗಳು ಆಯಾ ಜಿಲ್ಲಾ ಸೆಷನ್ಸ್ ಕೋರ್ಟಿನ ವ್ಯಾಪ್ತಿಗೆ ಬರುತ್ತಿದ್ದು , ಪ್ರಿನ್ಸಿಪಲ್ ಜಡ್ಜ್ ಅವರ ಕಣ್ಗಾವಲಿನಲ್ಲಿ ವಿಚಾರಣೆಯಾಗುತ್ತದೆ. ಹೀಗಾಗಿ ಹಣ, ಒಡವೆ ವಸ್ತುಗಳೆಲ್ಲ ಸುರಕ್ಷಿತವಾಗಿರುತ್ತವೆ.
ಪೂರ್ವ ಸಿದ್ದತೆ
ಎಸಿಬಿ ಹಾಗೂ ಐಟಿ ದಾಳಿಗಳು “ರಾಜಕೀಯಪ್ರೇರಿತ” ಎಂಬ ವಾದಕ್ಕೆ ಪುಷ್ಟಿಗಳಿದ್ದಂತಿಲ್ಲ. ಸ್ವತಂತ್ರ ತನಿಖಾ ಸಂಸ್ಥೆಯಾದ ಎಸಿಬಿಯು ದಾಳಿಗೆ ಮೊದಲು ಆರೋಪಿ ಅಧಿಕಾರಿಯ (ಅಕ್ರಮ) ಗಳಿಕೆಯ ಬಗ್ಗೆ ಎಲ್ಲ ಮಾಹಿತಿಯನ್ನು ಕಲೆ ಹಾಕಿರುತ್ತದೆ. ಸುಮಾರು ಆರು ತಿಂಗಳು ಮೊದಲೇ ಕಾರ್ಯಾಚರಣೆ ಶುರುವಾಗುತ್ತದೆ.
ಕಚೇರಿಗೆ ಬರುವ ದೂರುಗಳನ್ನು, ಅಂದರೆ ಮೂಗರ್ಜಿ, ಸುಳ್ಳು ಹೆಸರಿನಲ್ಲಿ ಬರೆದ ಪತ್ರ (Pseudonymous petition) ಇವುಗಳನ್ನು “ಮಾಹಿತಿ” (Information) ಎಂದು ಗಣನೆಗೆ ತೆಗೆದುಕೊಳ್ಳುತ್ತಾರೆ.
ನೌಕರರ ಘೋಷಿತ ಆದಾಯ, (ದೂರಿನಲ್ಲಿ ತಿಳಿಸಿದ ) ಗಳಿಕೆಯ ತಾಳೆ ಹಾಕುತ್ತಾರೆ. ಮನೆ , ಕಾರು, ಜಮೀನು ಇವುಗಳನ್ನು ಹೋಲಿಸಿ ನೋಡಿ, ಅವುಗಳ ಅಂದಾಜು ಮೌಲ್ಯವನ್ನು ಎಸಿಬಿ ಅಧಿಕಾರಿಗಳು ನಿರ್ಧರಿಸುತ್ತಾರೆ. ತಮ್ಮದೇ ಆದ ವಿಧಾನಗಳ ಮೂಲಕ ಸತ್ಯಾಸತ್ಯತೆಗಳನ್ನು ಪರೀಕ್ಷಿಸಿ, ಆ ಅಧಿಕಾರಿಯನ್ನು “ಟಾರ್ಗೆಟ್” ಮಾಡುತ್ತಾರೆ.
ದೂರುದಾರರು ಯಾರು?
ಆ ಅಧಿಕಾರಿಯ ಸಂಬಂಧಿಕರು, ಆಪ್ತಮಿತ್ರರು, ಇಲ್ಲವೇ ಹತ್ತಿರದಲ್ಲಿರುವವರು ದೂರು ನೀಡುವ ಸಾಧ್ಯತೆಯೇ ಹೆಚ್ಚು. ಕೌಟುಂಬಿಕ ಕಲಹ , ಅಧಿಕಾರಿಯಿಂದ ಪಡೆಯುತ್ತಿದ್ದ ನೆರವು ಹಠಾತ್ ನಿಂತಾಗ ಹತಾಶರಾದ ಆಪ್ತರು ದೂರು ನೀಡುವುದು ರೋಚಕವೆನಿಸುವ ಕಾರಣವೂ ಹೌದು. ಕಚೇರಿಗಳಲ್ಲಿ ಕಿರುಕುಳಕ್ಕೆ ಒಳಗಾದ ಸಿಬ್ಬಂದಿಯ ಪಾತ್ರವನ್ನು ಸಹ ಅಲ್ಲ ಗಳೆಯುವಂತಿಲ್ಲ. ಹೀಗಾಗಿ “ರಾಜಕೀಯಪ್ರೇರಿತ” ಎಂಬ ವಾದಕ್ಕೆ ಪುಷ್ಟಿ ಸಿಗುವುದಿಲ್ಲ.
ಲಂಚ ಸ್ವೀಕರಿಸುವಾಗಿನ ( ಟ್ರ್ಯಾಪ್) ಕೇಸ್ ಗಳಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕ ಹಣವನ್ನು ಲೆಕ್ಕ ಹಾಕಲಾಗುತ್ತದೆ. ರೇಡ್ ಕೇಸ್ ಗಳಲ್ಲಿ, ಆಪಾದಿತನು ಸರ್ಕಾರಿ ಸೇವೆಗೆ ಸೇರಿದ ದಿನದಿಂದ ಪಡೆದ ಸಂಬಳವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ತನಿಖೆ ಪೂರ್ಣಗೊಳ್ಳಲು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಸಮಯಬೇಕು. ಲಿಖಿತ ಸಾಕ್ಷಗಳನ್ನು ಸಂಗ್ರಹಿಸಬೇಕಾಗುತ್ತದೆ.
ಆ ಮೇಲೆ, ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ (ಚಾರ್ಜ್ ಷೀಟ್) ಸಲ್ಲಿಸುವ ಮೊದಲು ಆರೋಪಿ ಅಧಿಕಾರಿಗೆ “ವಿವರಣೆ ನೀಡಲು” ಒಂದು ಅವಕಾಶವನ್ನೂ ನೀಡುತ್ತಾರೆ. ಅಮಾಯಕರಿಗೆ ಶಿಕ್ಷೆ ಆಗಬಾರದು ಎಂಬುದು ಇದರ ಉದ್ದೇಶ.
ನ್ಯಾಯಾಲಯದಲ್ಲಿ
ಭ್ರಷ್ಟಾಚಾರದ ಆರೋಪ ಸಾಬೀತಾದರೆ ಅಧಿಕಾರಿಗೆ ಜೈಲು ಶಿಕ್ಷೆಯಾಗುತ್ತದೆ (ಕನಿಷ್ಠ ಮೂರು ವರ್ಷ). ತನಿಖಾಧಿಕಾರಿಯು “ಬಿ” ರಿಪೋರ್ಟ್ ಸಲ್ಲಿಸಿದರೂ ಪ್ರಿನ್ಸಿಪಲ್ ಜಡ್ಜ್ ಅದನ್ನು ಒಪ್ಪದೇ ಇರಬಹುದು. ಆರೋಪಿ ನಿರ್ದೋಷಿ ಎಂದಾದರೆ, ವಶಪಡಿಸಿಕೊಂಡಿದ್ದ ವಸ್ತುಗಳನ್ನು ಆತನಿಗೆ ಹಿಂದಿರುಗಿಸಲಾಗುತ್ತದೆ.
ಬಹುತೇಕ ದಾಳಿ ಪ್ರಕರಣಗಳಲ್ಲಿ, ಹಣ-ಒಡವೆ ವಾಪಸ್ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಅಲ್ಲದೇ ಶಿಕ್ಷೆಗೆ ಗುರಿಯಾಗುವವರ ಪ್ರಮಾಣವೂ ಕಡಿಮೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆಯಾಗಿ ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿಯನ್ನು ಮೂಡಿಸಬೇಕಿದೆ. ಹಿಂದುಳಿದ ಪ್ರದೇಶಗಳ ಜನರು ಎಚ್ಚೆತ್ತು ಎಸಿಬಿ ಗೆ ದೂರು ನೀಡಲು ಮುಂದಾಗುವ ಅಗತ್ಯವಿದೆ.
ಇನ್ನು ಅಧಿಕಾರಿಗಳಿಗೂ ಎಸಿಬಿ ದಾಳಿ, ಶಿಕ್ಷೆಯ ಭೀತಿ ಇದ್ದರೆ ವ್ಯವಸ್ಥೆ ಯಲ್ಲಿ ಸುಧಾರಣೆ ಸಾಧ್ಯವಾದೀತು.
ಕಾನೂನಿನ ಕುಣಿಕೆ ಬಿಗಿಯಾಗಬೇಕಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?.
(ಪೂರಕ ಮಾಹಿತಿ : ಚಂದ್ರಕಾಂತ ಭಂಡಾರೆ, ನಿವೃತ್ತ ಪೊಲೀಸ್ ಅಧಿಕಾರಿ)
ಕನ್ನಡಪ್ರಭ , ವಿಜಯ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ವಾದಿರಾಜ ದೇಸಾಯಿ ನಾಡಿನ ಹಿರಿಯ ಪತ್ರಕರ್ತರು.