MANGALURU NOV 30
ಓಡೋ ನೀರನ್ನು ನಡೆಯುವ ಹಾಗೆ ಮಾಡಿ,ನಡೆಯುವ ನೀರನ್ನು ತೆವಳುವ ಹಾಗೆ ಮಾಡಿ, ತೆವಳುವ ನೀರನ್ನು ನಿಲ್ಲಿಸಿ,ನಿಂತ ನೀರನ್ನು ಇಂಗಿಸಿ, ಜನಶಕ್ತಿಯಿಂದ ನದಿಗಳಿಗೆ ಮರುಜೀವವನ್ನು ನೀಡಬಹುದು ಎಂದು ಜಲ ಸಂರಕ್ಷಣಾ ತಜ್ಞ ಹಾಗೂ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಹೇಳಿದರು.
ಮಂಗಳೂರು ವಿವಿ ಆವರಣದಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಗಳ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಹ್ಯುಮಾನಿಟೀಸ್ ಬ್ಲಾಕ್ ಬಳಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮಳೆನೀರು ಕೊಯ್ಲು ವ್ಯವಸ್ಥೆ ಹಾಗೂ ಲೆಕ್ಚರ್ ಹಾಲ್ ಕಾಂಪ್ಲೆಕ್ಸ್ ಹಿಂದೆ ಎರಡು ಲಕ್ಷ ಲೀಟರ್ ಸಾಮರ್ಥ್ಯದ ಮಳೆನೀರು ಕೊಯ್ಲು ವ್ಯವಸ್ಥೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು .ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ (RUSA) ಅನುದಾನದ ಅಡಿಯಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.
ಸರಾಸರಿ ವಾರ್ಷಿಕ ಮಳೆ 3500 ಮಿ.ಮೀ ಸುರಿದರೆ ಒಂದು ಚ. ಮೀ. ಮೇಲೆ 3500 ಲೀಟರ್ ,ಒಂದೆಕ್ರೆಯ ಮೇಲೆ, 1.4 ಕೋಟಿ ಲೀಟರ್,ಐದು ಸೆಂಟ್ಸ್ ಮೇಲೆ , 7 ಲಕ್ಷ ಲೀಟರ್ ನಷ್ಟು ನೀರು ಸಂರಕ್ಷಿಸಿದರೆ ನೀರಿನ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಅವರು ವಿವರಿಸಿದರು. ಸ್ಥಳದಲ್ಲೇ ಮಾಡುವ ಮಳೆಕೊಯ್ಲಿನಿಂದ ಅನೇಕ ಲಾಭಗಳಿವೆ. ಇದು ಬಡವರಿಗೂ ಎಟಕುವಂಥದ್ದು. ಪೇಟೆ ಒಳಸುರಿ ಬೇಕಿಲ್ಲ. ‘ಒಂದು ಬಾರಿಯ’ ಕೆಲಸ ಅಷ್ಟೆ. ಏಜೆಂಟರು, ಗುತ್ತಿಗೆದಾರರು ಬೇಕಿಲ್ಲ. ಸುಸ್ಥಿರ ಮತ್ತು ಪರಿಸರಸ್ನೇಹಿ. ಉಳಿಸಿದ ನೀರು ಗಳಿಸಿದ್ದಕ್ಕೆ ಸಮ. ಆದುದರಿಂದ ನೀರು ಉಳಿಸುವ ಮೂಲಕ ಸಮೃದ್ಧಿಯನ್ನು ಕಾಣಬಹುದು ಎಂದರು .
ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ . ಎಸ್ . ಯಡಪಡಿತ್ತಾಯ ಅಧ್ಯಕ್ಷೀಯ ಭಾಷಣ ಮಾಡಿದರು, ” ಪರಿಸರ ಸ್ನೇಹಿ ಚಟುವಟಿಕೆಗಳು ಕೇವಲ ಬಾಯಿ ಮಾತಿನಲ್ಲಿ ಇರದೇ ಇಚ್ಛಾ ಶಕ್ತಿಯಿಂದ ಕಾರ್ಯರೂಪಕ್ಕೆ ತರಬೇಕು. ಶ್ರೀ ಪಡ್ರೆ ಅವರು ಸಲಹೆ ನೀಡಿರುವಂತೆ ವಿದ್ಯಾರ್ಥಿಗಳ ಮೂಲಕ ಮಂಗಳಗಂಗೋತ್ರಿ ಆವರಣದಲ್ಲಿ ನೀರಿನ ಸಂರಕ್ಷಣೆಯ ಸಾಕ್ಷ್ಯಚಿತ್ರವನ್ನು ಸಿದ್ಧತೆ ಮಾಡಲಾಗುವುದು; ಆ ಮೂಲಕ ವಿದ್ಯಾರ್ಥಿಗಳಿಗೆ ಅನುಭವಿಕ ಕಲಿಕೆಗೆ ಅವಕಾಶ ಮಾಡಿ ಕೊಡಲಾಗುವುದು. ಆದಷ್ಟು ಶೀಘ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ನ್ನು ಮಳೆನೀರು ಕೊಯ್ಲು ವಲಯವನ್ನಾಗಿ ರೂಪಿಸಲಾಗುವುದು. ನಾವು ಇಂದು ಮಾಡುವ ಸಮಾಜಮುಖಿ ಕೆಲಸಗಳು ಶಾಶ್ವತವಾಗಿ ಉಳಿಯುವಂತಿರಬೇಕು. ಈ ನಿಟ್ಟಿನಲ್ಲಿ ಮಳೆನೀರು ಕೊಯ್ಲು ಒಂದು ಅತ್ಯತ್ತಮ ಸಮಾಜಮುಖಿ ಮತ್ತು ಪರಿಸರ ಸ್ನೇಹಿ ಕೆಲಸ ಎಂದರು.
ಈ ಸಂದರ್ಭದಲ್ಲಿ ‘ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ’ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮ ಸಂಯೋಜಕ ಪ್ರೊ. ಪ್ರಶಾಂತ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕಾರಿ ಅಭಿಯಂತ ಲವ ಎಂ. ಡಂಬರ ಉಪಸ್ಥಿತರಿದ್ದರು.RUSA – ನೋಡಲ್ ಅಧಿಕಾರಿ, ಪ್ರೊ.ಕೆ.ಎಸ್.ಜಯಪ್ಪ ವಂದನಾರ್ಪಣೆ ಸಲ್ಲಿಸಿದರು. ಡಾ. ಸಬಿತಾ ಅವರು ಅತಿಥಿಗಳನ್ನು ಪರಿಚಯಿಸಿದರು. ಡಾ. ಧನಂಜಯ ಕುಂಬ್ಳೆ, ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರೊ. ಎಂ . ಕೃಷ್ಣಮೂರ್ತಿ, ವಿವಿಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ದತ್ತು ಸ್ವೀಕೃತ ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.