BENGALURU DEC 1
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೆಹಲಿಯಿಂದ ಬಂದ ಮೇಲೆ ವಿಧಾನ ಪರಿಷತ್ ಚುನಾವಣೆಯ ಮೈತ್ರಿ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಮೇಲ್ಮನೆ ಚುನಾವಣೆ ಹಿನ್ನೆಲೆಯಲ್ಲಿ ಬಿಡದಿಯ ತಮ್ಮ ತೋಟದಲ್ಲಿ ರಾಮನಗರ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಮತದಾರರ ಜತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಜೆಡಿಎಸ್ ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪನವರು ಬಹಿರಂಗವಾಗಿಯೇ ಮನವಿ ಮಾಡಿದ್ದಾರೆ. ಆದರೆ, ಕಾಂಗ್ರೆಸ್ʼನವರು ನಮಗೆ ಜೆಡಿಎಸ್ ಪಕ್ಷದ ಮತಗಳ ಅಗತ್ಯವಿಲ್ಲ. ಅವರ ಜತೆ ಹೊಂದಾಣಿಕೆ ಪ್ರಶ್ನೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಬೇಡ ಎಂದವರ ಮನೆ ಬಾಗಿಲಿಗೆ ಹೋಗಲಿಕ್ಕೆ ಆಗುತ್ತದೆಯೇ? ಹೀಗಾಗಿ ಯಡಿಯೂರಪ್ಪ ಅವರ ಮನವಿ ಬಗ್ಗೆ ಏನು ತೀರ್ಮಾನ ಕೈಗೊಳ್ಳಬೇಕೋ ಎಂಬುದನ್ನು ಶೀಘ್ರವೇ ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದರು.
ಮೋದಿ ಅವರ ಜತೆ ಗೌಡರು ಚುನಾವಣೆ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿರಬಹುದಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಮೊದಲಿನಿಂದಲೂ ಪ್ರಧಾನಮಂತ್ರಿಗಳು ಮತ್ತು ದೇವೇಗೌಡರ ನಡುವೆ ಉತ್ತಮ ಬಾಂಧವ್ಯವಿದೆ. ಗೌಡರ ಬಗ್ಗೆ ಮೋದಿ ಅವರಿಗೆ ವಿಶೇಷ ಗೌರವವಿದೆ. ಅವರಿಬ್ಬರೂ ಭೇಟಿಯಾಗುವುದು ಹೊಸದೇನಲ್ಲ. ನಾನು ಸಿಎಂ ಆಗಿದ್ದಾಗ ಭೇಟಿಯಾಗಿದ್ದ ಸಂದರ್ಭದಿಂದಲೂ ನನಗೆ ಗೊತ್ತಿದೆ. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ಹಾಸನಕ್ಕೆ ಐಐಟಿ ತರುವ ವಿಚಾರದ ಬಗ್ಗೆ ಮೋದಿ ಅವರ ಜತೆ ಚರ್ಚೆ ನಡೆಸಲು ಹೋಗಿದ್ದಾರೆಂಬ ಮಾಹಿತಿ ಗಮನಿಸಿದ್ದೇನೆ. ಜತೆಗೆ, ವಿಧಾನ ಪರಿಷತ್ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಿರಬಹುದು. ಗೌಡರು ದೆಹಲಿಯಿಂದ ವಾಪಸ್ ಬಂದ ಮೇಲೆ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡುವೆ ಎಂದರು.