MUMBAI DEC 1
ಕಾಂಗ್ರೆಸ್ ನಾಯಕತ್ವದಲ್ಲಿ ಪ್ರಾದೇಶಿಕ ಪಕ್ಷಗಳು ವಿಶ್ವಾಸ ಕಳೆದುಕೊಂಡು ನಿಧಾನವಾಗಿ ದೂರವಾಗುತ್ತಿವೆ. ಇದೀಗ ಯುಪಿಎ ಎಂಬುದೇ ಇಲ್ಲ ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಬುಧವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು ಯುಪಿಎ (ಯುನೈಟಡ್ ಪ್ರೊಗ್ರೆಸಿವ್ ಅಲೆಯನ್ಸ್ ) ಎನ್ನುವುದು ಈಗ ಇಲ್ಲ ಎಂದು ಸಾರಿದ್ದಾರೆ. What is UPA ? There is No UPA ಎಂದು ಕಿಡಿಕಾರಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಉದ್ದೇಶದಿಂದ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಹೊರಟಿರುವ ಮಮತಾ ನಿನ್ನೆಯಷ್ಟೆ ಶಿವಸೇನಾ ನಾಯಕರನ್ನು ಭೇಟಿ ಮಾಡಿದ್ದರು. ಇನ್ನು ಎರಡು ವರ್ಷ ಬಾಕಿ ಇರುವ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಗಿಂತ ಭಿನ್ನವಾದ ಪ್ರತಿಪಕ್ಷಗಳ ಒಕ್ಕೂಟ ರಚಿಸುವ ಉದ್ದೇಶವನ್ನು ಅವರು ಹೊಂದಿರುವಂತೆ ಕಾಣುತ್ತಿದೆ.
ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆಯ ಕೆಲವು ವಾರ್ಡ್ ಗಳಲ್ಲಿ ಸಿಪಿಐ-ಎಂ ಅನ್ನು ಹಿಂದಿಕ್ಕಿ ಮುಖ್ಯ ಪ್ರತಿಪಕ್ಷವಾಗಿ ಹೊರ ಹೊಮ್ಮಿದ ಟಿಎಂಸಿ ಬಂಗಾಲದ ಆಚೆೆಗೂ ತನ್ನ ವ್ಯಾಪ್ತಿ ವಿಸ್ತರಿಸುವ ಬಗ್ಗೆ ಎದ್ದಿರುವ ಟೀಕೆ ಟಿಪ್ಪಣಿಗಳ ಬಗ್ಗೆ ಹರಿಹಾಯ್ದ ಮಮತಾ, ಕಾಂಗ್ರೆಸ್ ಪಕ್ಷ ಬಂಗಾಳದಲ್ಲಿ ಸ್ಪರ್ಧಿಸಬಹುದಾದರೆ ನಾವೇಕೆ ಗೋವಾದಲ್ಲಿ ಸ್ಪರ್ಧಿಸ ಬಾರದು ಎಂದು ಕೇಳಿದರು.
ಶತಾಯ ಗತಾಯ ಬಿಜೆಪಿ ವಿರುದ್ಧ ಹೋರಾಡಲೇ ಬೇಕು, ಎಲ್ಲಾ ಪ್ರಾದೇಶಿಕ ಪಕ್ಷಗಳು ತಮ್ಮ ನೆೆಲೆಯಾಚೆಗಿಂದ ಹೊರಬಂದು ಬಿಜೆಪಿ ವಿರುದ್ಧ ಸಂಘಟಿತರಾಗಿ ಎದುರು ನಿಲ್ಲಬೇಕು ಎಂದರು.