26.2 C
Karnataka
Thursday, November 21, 2024

    BSY ಕರೆ ಮಾಡಿ ಬೆಂಬಲ ಕೇಳಿದ್ದಾರೆ, ಶೀಘ್ರವೇ ಮೈತ್ರಿ ಬಗ್ಗೆ ನಿರ್ಧಾರ: HDK

    Must read

    MYSURU DEC 5

    ಪ್ರಸಕ್ತ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಅಥವಾ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ಈವರೆಗೆ ಅಧಿಕೃತವಾಗಿ ಚರ್ಚೆ ನಡೆದಿಲ್ಲ. ಆದರೆ, ಈ ಬಗ್ಗೆ ಅತಿ ಶೀಘ್ರವೇ, ಅಂದರೆ ಮಂಗಳವಾರದೊಳಗೆ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

    ಮೈಸೂರಿನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; “ಮೈತ್ರಿ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಹೊರಗೆ ಮುಕ್ತವಾಗಿಯೇ ಮಾತನಾಡಿದ್ದಾರೆ. ಅಲ್ಲದೆ, ಸ್ವತಃ ಅವರು ನನಗೆ ಮೊಬೈಲ್‌ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಎಲ್ಲಿ ಜೆಡಿಎಸ್‌ ಅಭ್ಯರ್ಥಿಗಳಲ್ಲವೋ ಅಂಥ ಕ್ಷೇತ್ರಗಳಲ್ಲಿ ಜೆಡಿಎಸ್‌ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ” ಎಂದರು.

    ಯಡಿಯೂರಪ್ಪ ಅವರ ಮಾತಿಗೆ ಪೂರಕವಾಗಿ ಮುಖ್ಯಮಂತ್ರಿಗಳು ಮತ್ತು ಬಿಜೆಪಿಯ ಇತರೆ ನಾಯಕರು ಮೈತ್ರಿ ಬಗ್ಗೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ತೀರ್ಮಾನ ಮಾಡಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ. ಅದು ವೈಯಕ್ತಿಕ ಮಟ್ಟದಲ್ಲಿ ತೀರ್ಮಾನ ಆಗುತ್ತದೆ ಎಂದು ಆ ಪಕ್ಷದಲ್ಲಿ ನಂಬಿದ್ದಾರೆ. ಇದರ ಜತೆಗೆ, ಕಾಂಗ್ರೆಸ್‌ ನಾಯಕರು ನಮಗೆ ಜೆಡಿಎಸ್‌ ಬೆಂಬಲದ ಅಗತ್ಯವಿಲ್ಲ ಎಂದು ಮುಕ್ತವಾಗಿ ಹೇಳಿಬಿಟ್ಟಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೆಂಬಲದ ವಿಷಯವನ್ನು ಅಂತಿಮಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.

    ಅಲ್ಲದೆ; ಮೈತ್ರಿ ಬಗ್ಗೆ ಕುಮಾರಸ್ವಾಮಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಈಗಾಗಲೇ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಇನ್ನು, ಕಾಂಗ್ರೆಸ್ ಪಕ್ಷ ನಮ್ಮ ಬೆಂಬಲ ಕೇಳಿಲ್ಲ. ಸ್ಥಳೀಯ, ರಾಜ್ಯಮಟ್ಟದಲ್ಲಿ ನಮ್ಮೊಂದಿಗೆ ಆ ಪಕ್ಷ ಗೌರವಯುತವಾಗಿ ನಡೆದುಕೊಂಡಿಲ್ಲ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಸಣ್ಣಪುಟ್ಟ ಸಮಸ್ಯೆಗಳಿರುವ ಜಿಲ್ಲೆಗಳಲ್ಲಿ ಪರಿಸ್ಥಿತಿ ಸರಿಪಡಿಸಿ 2023ರ ಚುನಾವಣೆಗೆ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.

    ಚುನಾವಣೆ ನಡೆಯುತ್ತಿರುವ ಅಷ್ಟೂ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳು, ಮುಖಂಡರ ಜತೆ ಮಾತುಕತೆ ನಡೆಸಿ ಪಕ್ಷಕ್ಕೆ ಅನುಕೂಲವಾಗುವ ಅಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ನಮ್ಮ ಗುರಿ 2023ರ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವುದೇ ಆಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ರಾಜ್ಯವ್ಯಾಪಿ ನಮ್ಮ ಪಕ್ಷಕ್ಕೆ ನೆಲೆ ಇರುವುದರಿಂದಲೇ ಬಿಜೆಪಿ ನಾಯಕರು ನಮ್ಮ ಬೆಂಬಲ ಕೇಳಿದ್ದಾರೆ. ಆದರೆ, ನಮ್ಮ ಬೆಂಬಲ ಕೇಳದೇ ಇರುವ ಇನ್ನೊಂದು ಪಕ್ಷಕ್ಕೆ ನಾವೇ ಮುಂದೆ ಹೋಗಿ ಬೆಂಬಲ ನೀಡುವ ಪ್ರಶ್ನೆ ಉದ್ಭವ ಆಗುವುದಿಲ್ಲ. ಇವೆಲ್ಲ ಅಂಶಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬೆಂಬಲದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

    ಪ್ರತೀ ತಾಲೂಕಿಗೆ ವೀಕ್ಷಕರ ನೇಮಕ:ಪರಿಷತ್‌ ಚುನಾವಣೆ ಎದುರಿಸಲು ಜೆಡಿಎಸ್‌ ವ್ಯವಸ್ಥಿತ ಸಿದ್ಧತೆ ಮಾಡಿಕೊಂಡಿದ್ದು, ಸ್ಪರ್ಧೆ ಮಾಡಿರುವ ಆರು ಕ್ಷೇತ್ರಗಳ ಪ್ರತೀ ತಾಲೂಕಿಗೂ ವೀಕ್ಷಕರ ತಂಡವನ್ನು ನೇಮಕ ಮಾಡಲಾಗಿದೆ. ಪಕ್ಷದ ಇತಿಹಾಸದಲ್ಲಿಯೇ ಮೊತ್ತ ಮೊದಲಿಗೆ ಇಂಥ ಕ್ರಮಕ್ಕೆ ಮುಂದಾಗಿದ್ದೇವೆ. ನಮ್ಮ ವೀಕ್ಷಕರ ತಂಡ ಆಯಾ ತಾಲೂಕುಗಳ ಸ್ಥಳೀಯ ಸಂಸ್ಥೆಗಳ ಎಲ್ಲ ಮತದಾರರನ್ನು ಖುದ್ದು ಭೇಟಿ ಮಾಡುತ್ತಿದೆ ಎಂದು ಅವರು ಹೇಳಿದರು.

    ಪಕ್ಷ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದೆ. ವೀಕ್ಷಕರ ತಂಡದ ಜತೆಗೆ ಆಯಾ ತಾಲೂಕಿನ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೂ ವೀಕ್ಷಕರ ತಂಡಗಳನ್ನು ನೇರವಾಗಿ ನಾನೇ ಪರಿವೇಕ್ಷಣೆ ಮಾಡುತ್ತಿದ್ದೇನೆ, ಹಾಗೂ ಬಿಡದಿಯಲ್ಲಿ ನಡೆದ ʼಜನತಾಪರ್ವ 1.Oʼ, ಮತ್ತು ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ʼಜನತಾ ಸಂಗಮʼ ಕಾರ್ಯಾಗಾರಗಳಲ್ಲಿ ನೀಡಲಾದ ಸೂಚನೆ- ನಿರ್ದೇಶನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ಪರಿಷತ್ ಚುನಾವಣೆ ಗೆಲ್ಲಲು ಪಕ್ಷ ರೂಪಿಸಿರುವ ಈ ವ್ಯವಸ್ಥೆಯನ್ನು ೨೦೨೩ರ ವಿಧಾನಸಭೆ ಚುನಾವಣೆಗೂ ರಾಜ್ಯವ್ಯಾಪಿ ಅನ್ವಯ ಮಾಡಲಾಗುವುದು. ಅದಕ್ಕೆ ಪೂರ್ವಭಾವಿಯಾಗಿ ಈಗ ಪ್ರಾಯೋಗಿಕವಾಗಿ ಅಳವಡಿಸಿಕೊಂಡಿದ್ದೇವೆ. ಈ ಮೂಲಕ ಮತದಾರರನ್ನು ನೇರವಾಗಿ ಪಕ್ಷ ತಲುಪುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ಅವರಿಗೆ ಎಲ್ಲ ಪಕ್ಷಗಳಲ್ಲೂ ಹಿತೈಷಿಗಳಿದ್ದ ಹಾಗೆಯೇ ನಮಗೂ ಇತರೆ ಎಲ್ಲ ಪಕ್ಷಗಳಲ್ಲೂ ಹಿತೈಷಿಗಳು, ವಿಶ್ವಾಸಿಗಳೂ ಇದ್ದಾರೆ. ನಮ್ಮ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಅವರೆಲ್ಲರ ಬೆಂಬಲವನ್ನೂ ನಾನೂ ಕೇಳುತ್ತಿದ್ದೇನೆ. ಇದರಲ್ಲಿ ತಪ್ಪೇನಿದೆ? ಆರೂ ಕ್ಷೇತ್ರಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಹಾಗೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ಜೆಡಿಎಸ್ ಸ್ಪರ್ಧೆ ಮಾಡಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಗಂಭೀರವಾಗಿ ಹೋರಾಟ ನಡೆಸುತ್ತಿವೆ. ಅದೇ ರೀತಿ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಇದೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಈಗಿನ ಪರಿಷತ್ ಚುನಾವಣೆ ಮುಖ್ಯವಾಗಿದೆ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

    ಮೈಸೂರಿನಲ್ಲಿ ನಮ್ಮ ಅಭ್ಯರ್ಥಿಗೆ ಗೆಲುವಿನ ಅವಕಾಶಗಳು ಹೆಚ್ಚಿದೆ. ಎರಡನೇ ಪ್ರಾಶಸ್ತ್ಯದ ಮತಗಳು ನಮಗೇ ಹೆಚ್ಚು ಬೀಳಲಿವೆ. ಬಿಜೆಪಿಗೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಅಭ್ಯರ್ಥಿಗಳು ಎರಡನೇ ಪ್ರಾಶಸ್ತ್ಯದ ಮತವನ್ನು ನಮ್ಮ ಅಭ್ಯರ್ಥಿಗೆ ಹಾಕುತ್ತಾರೆನ್ನುವ ಬಲವಾದ ನಂಬಿಕೆ ನನಗಿದೆ. ಹಾಗೆಯೇ, ಮೊದಲನೇ ಪ್ರಾಶಸ್ತ್ಯದ ಮತವನ್ನು ಜೆಡಿಎಸ್ ಅಭ್ಯರ್ಥಿಗೆ ಕೊಟ್ಟು ಎರಡನೇ ಪ್ರಾಶಸ್ತ್ಯದ ಮತವನ್ನು ಯಾವ ಪಕ್ಷದ ಅಭ್ಯರ್ಥಿಗಾದರೂ ಕೊಡಿ ಎಂದು ನಾನು ಈಗಾಗಲೇ ಮುಕ್ತವಾಗಿ ಹೇಳಿದ್ದೇನೆ ಎಂದು ಅವರು ಹೇಳಿದರು.

    ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್, ಪರಿಷತ್ ಚುನಾವಣೆಯ ಮೈಸೂರು ಅಭ್ಯರ್ಥಿ ಮಂಜೇಗೌಡ ಮುಂತಾದವರು ಹಾಜರಿದ್ದರು

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!