ಸುಮಾವೀಣಾ
ಹೊಲಗೆಟ್ಟ ಕರು ತಾಯನರಸುವಂತೆ…ಹರಿಶ್ಚಂದ್ರ ಕಾವ್ಯದ ‘ರಾಜ್ಯ ಸಮರ್ಪ ಭಾಗದಲ್ಲಿ ಬರುವ ವಾಕ್ಯವಿದು. ವಿಶ್ವಾಮಿತ್ರರಿಗೆ ಸಮಸ್ತ ರಾಜ್ಯವನ್ನು ವಹಿಸಿಕೊಟ್ಟು ಹರಿಶ್ಚಂದ್ರ ಕಾಡಿನ ದಾರಿಯನ್ನು ಹಿಡಿದಾಗ ಪುರಜನರು ತಮ್ಮ ದೊರೆಯನ್ನು ಕಳೆದುಕೊಂಡು ದಾರಿತಪ್ಪಿದಂತಾದರು, ತಬ್ಬಲಿಗಳಾದರು ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ.
ಕರುವಿನ ಜವಾಬ್ದಾರಿಯನ್ನು ಹಸು ನೋಡಿಕೊಳ್ಳುತ್ತಿರುತ್ತದೆ. ಯಾವ ತೊಂದರೆಯೂ ಇಲ್ಲದೆ ಸುಖಭಾವದಿಂದ ಇದ್ದ ಕರುವನ್ನು ನಡುರಸ್ತೆಯಲ್ಲಿ ಬಿಟ್ಟು ಹಸು ಇನ್ನಿಲ್ಲವಾದರೆ ಕರುವಿಗೆ ಆಗುವ ಆಘಾತ ಹೇಳತೀರದು. ಅಂತೆಯೇ ಆದರ್ಶ ದೊರೆಯಾಗಿ ಅಯೋಧ್ಯೆಯ ಜನರನ್ನು ಸಾಕುತ್ತಿದ್ದ ಹರಿಶ್ಚಂದ್ರ ವಿಶ್ವಾಮಿತ್ರನ ಪ್ರತಿಷ್ಟೆಯ ಸವಾಲುಗಳಿಗೆ ಒಳಗಾಗಿ ರಾಜ್ಯವನ್ನು ಅವನಿಗೆ ಸಮರ್ಪಿಸಿ ಹೊರನಡೆದಾಗ ಸಹಜವಾಗಿ ಆತನ ಪ್ರಜೆಗಳಲ್ಲಿ ಅನಾಥಪ್ರಜ್ಞೆ ಕಾಡುತ್ತದೆ.
ಲೋಹಿತಾಶ್ವನ ಮರಣದ ವಾರ್ತೆಯನ್ನು ಕೇಳಿ ಅವನನ್ನು ಹುಡುಕುವಾಗ ಚಂದ್ರಮತಿ ಪಡುವ ಸಂಕಟವನ್ನು, ಆಕೆಯ ಆರ್ತನಾದವನ್ನು “ಬೀದಿ ಗರುವಿನಂತೆ’’ ಎಂಬ ಪದದ ಮೂಲಕ ವಿವರಿಸಿದ್ದಾನೆ. ಜಾನಪದ ತ್ರಿಪದಿಯಲ್ಲಿಯೂ ಕೂಡ “ತಾಯಿಯಿಲ್ಲದ ತವರಿಗೆ ಹೋಗದಿರು ನನ ಮನವೆ ನೀರಿಲ್ಲದ ಕೆರೆಗೆ ಕರುಬಂದು ತಿರುಗಾಗ ನೋಡವರ ದುಃಖಗಳ” ಎಂಬಲ್ಲಿಯೂ ತಾಯಿಯನ್ನು ಕಾಣದ ಕರುವಿನ ಸಂಕಟವನ್ನು ನೀರಿಲ್ಲದ ಕೆರೆಗೆ ಹೋಲಿಸಿದ್ದಾರೆ.
ಪ್ರಜೆಗಳಿಗೆ ರಾಜನೆಂದರೆ ಮಕ್ಕಳಿಗೆ ತಂದೆಯಿದ್ದಂತೆ. ಹಾಗಾಗಿ ರಾಜನಿಗೆ ಭೂಮಿಪಾಲಕ, ಭೂಭುಜ ಎನ್ನುವುದು ಹಾಗೆ ಅತ್ಯಂತ ಕಾಳಜಿಯಿಂದ ಪ್ರಜೆಗಳನ್ನು ನೋಡಿಕೊಂಡಿದ್ದು ಏಕಾಏಕಿ ನಡುನೀರಿನಲ್ಲಿ ಕೈ ಬಿಟ್ಟಂತೆ ಅರಸನಾದವನ್ನು ಎಲ್ಲವನ್ನು ಬಿಟ್ಟು ಹೊರಟರೆ ಆಗಬಹುದಾದ ಆಘಾತವನ್ನು, ಅವರಲ್ಲಿ ಕುಸಿಯುವ ನೈತಿಕ ಬೆಂಬಲವನ್ನು ಕವಿ ಇಲ್ಲಿ ಹೇಳಿದ್ದಾರೆ. ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲು ಎಂಬ ಮಾತಿದೆ ಹೀಗಿರುವಾಗ ಭೂಮಿಪಾಲನಾದ ಹರಿಶ್ಚಂದ್ರನೂ ಅರಸುತನವನ್ನು, ರಾಜ್ಯವನ್ನೂ ವಿಶ್ವಾಮಿತ್ರಗೆ ವಹಿಸಿಕೊಟ್ಟು ನಿರ್ಗಮಿಸುವಾಗ ಅಯೋಧ್ಯೆಯ ಪುರಜನರು ದಾರಿತಪ್ಪಿದವರಂತೆ, ತಾಯಿಯನ್ನು ಕಳೆದುಕೊಂಡಂತೆ ಮರವಟ್ಟಂತಾಗಿದ್ದರು. ತಾಯಿಯ ಆಸರೆಯನ್ನು ಹುಡುಕುವ ಕರುವಿನಂತೆ ತಮ್ಮ ದೊರೆಯ ಕಾಣ್ಕೆಗೆ ಸಮಸ್ತರೂ ಹಲುಬುತ್ತಿದ್ದರು ಎಂಬುದನ್ನು ಬಹಳ ಮಾರ್ಮಿಕವಾಗಿ ರಾಘವಾಂಕರು ವರ್ಣಿಸಿದ್ದಾರೆ.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.
Super suma veena Madam.