ಷೇರುಪೇಟೆಯಲ್ಲಿ ಬದಲಾವಣೆಗಳು, ಚಿಂತನೆಗಳು, ವಿಶ್ಲೇಷಣೆಗಳು ಹೆಚ್ಚು ಪ್ರಭಾವಿಯಾಗಿರದೆ, ಪೇಟೆಯು ಮುನ್ಸೂಚನೆ ಇಲ್ಲದೆ ಭಾರಿ ಪ್ರಮಾಣದಲ್ಲಿ ಏರಿಳಿತಗಳನ್ನು ಪ್ರದರ್ಶಿಸುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ವಿದೇಶಿ ವಿತ್ತೀಯ ಸಂಸ್ಥೆಗಳು ನಿರಂತರವಾಗಿ ಮಾರಾಟದ ಹಾದಿಯಲ್ಲಿದ್ದರೂ ಪೇಟೆಗಳು ಸ್ವಲ್ಪ ಮಟ್ಟಿನ ಸ್ಥಿರತೆ ಕಾಣುತ್ತಿದೆಯೇನೋ ಎನಿಸುತ್ತಿದೆ.
ಕಾರ್ಪೊರೇಟ್ ವಲಯದಲ್ಲಿಯೂ ಹೆಚ್ಚಿನ ಕಂಪನಿಗಳು ಆಕರ್ಷಕ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿರುವುದು ಪೇಟೆಯನ್ನು ಮತ್ತಷ್ಟು ಆಕರ್ಷಣೀಯಗೊಳಿಸಿದೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು, ಮ್ಯುಚುಯಲ್ ಫಂಡ್ ಗಳು ನಿರಂತರವಾಗಿ ಹೂಡಿಕೆ ಮಾಡುತ್ತಿವೆ. ಆದರೆ ಇವು ಹೆಚ್ಚಾಗಿ ಸೆನ್ಸೆಕ್ಸೇತರ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಿರುವಂತಿದೆ. ಇತ್ತೀಚೆಗೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪನಿಗಳು, ವಿಶೇಷವಾಗಿ ಷೇರಿನ ಬೆಲೆಗಳು ಕುಸಿತಕ್ಕೊಳಗಾದಾಗ ದಿಢೀರನೆ ಏರಿಕೆಯನ್ನು ಕೆಲವು ಭಾರಿ 8 ರಿಂದ 12 % ವರೆಗೂ ಏರಿಕೆ ಪ್ರದರ್ಶಿಸಿವೆ. ಶುಕ್ರವಾರದಂದು ಇಂತಹ ಬೆಳವಣಿಗೆಗಳನ್ನು ಹೆಚ್ಚಿನ ಕಂಪನಿಗಳಲ್ಲಿ ಗುರುತಿಸಬಹುದು.
ರಾಂಕೋ ಸಿಸ್ಟಂಸ್ ಲಿಮಿಟೆಡ್ ಕಂಪನಿಯ ಸಾಧನೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಪ್ರೋತ್ಸಾಹದಾಯಕವಾಗಿಲ್ಲ ಎಂಬ ಕಾರಣಕ್ಕಾಗಿ ಷೇರಿನ ಬೆಲೆಯು ನಿರಂತರವಾಗಿ ಕುಸಿಯುತ್ತಾ ಬಂದು ಈ ಒಂದು ವಾರದಲ್ಲಿ ರೂ.366 ರ ಸಮೀಪಕ್ಕೆ ಕುಸಿದಿತ್ತು. ಆದರೆ ಕೇವಲ ಐದೇ ದಿನಗಳಲ್ಲಿ ಹೆಚ್ಚಿನ ಸಂಖ್ಯಾ ಗಾತ್ರದೊಂದಿಗೆ ರೂ.470 ರ ಸಮೀಪಕ್ಕೆ ಜಿಗಿತ ಕಂಡಿದೆ. ಶುಕ್ರವಾರದ ರೂ.470 ರ ಬೆಲೆಯಲ್ಲಿ ಮಾರಾಟಮಾಡುವವರಿರದೆ ದಿನದ ಗರಿಷ್ಠ ಆವರಣ ಮಿತಿಯಲ್ಲಿತ್ತು.
ಯುನಿಕೆಂ ಲ್ಯಾಬೊರೇಟರೀಸ್ ಲಿಮಿಟೆಡ್ ಕಂಪನಿಯ ತ್ರೈಮಾಸಿಕ ಫಲಿತಾಂಶವೂ ಸಹ ಆಕರ್ಷಕವಾಗಿರದೆ ಇರುವ ಕಾರಣ ಷೇರಿನ ಬೆಲೆ ರೂ.265 ರ ಸಮೀಪದಿಂದ ರೂ.198 ರವರೆಗೂ ಕುಸಿಯಿತು. ಆದರೆ ಗುರುವಾರದಂದು ರೂ.211 ರಿಂದ ರೂ.225 ರವರೆಗೂ ಏರಿಕೆ ಕಂಡು ಶುಕ್ರವಾರ ರೂ.256 ರವರೆಗೂ ಏರಿಕೆ ಕಂಡಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ 2018 ರಲ್ಲಿ ರೂ.370/380 ರ ಸಮೀಪ ಖರೀದಿಸಿದವರು ಈ ವರ್ಷದ ಮೇ ತಿಂಗಳಲ್ಲಿ ರೂ.370 ರಲ್ಲಿ, ಅವರ ಹೂಡಿಕೆಯ ಹಂತ ತಲುಪುವುದೆಂಬ ನಿರೀಕ್ಷೆಯು ಹುಸಿಯಾಯಿತಲ್ಲದೆ, ಭಾರಿ ಕುಸಿತಕ್ಕೊಳಗಾಗಿ ಪುಟಿದೆದ್ದಿದೆ.
ಎಲ್ ಜಿ ಈಕ್ವಿಪ್ ಮೆಂಟ್ಸ್ ಲಿಮಿಟೆಡ್ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯದಲ್ಲಿ ಆಕರ್ಷಕವಾದ ಸಾಧನೆಯನ್ನು ಪ್ರದರ್ಶಿಸಿರುವುದರಿಂದ ಕೇವಲ ಒಂದೇ ತಿಂಗಳಲ್ಲಿ ರೂ.199 ರ ಸಮೀಪದಿಂದ ರೂ.299 ರವರೆಗೂ ಜಿಗಿತ ಕಂಡಿದೆ. ಕೆಳಮಧ್ಯಮ ಶ್ರೇಣಿಯ ಈ ಕಂಪನಿಯು ಸರಿಯಾಗಿ ಹಿಂದಿನ ವರ್ಷದ 3/12/2020 ರಲ್ಲಿ ರೂ.133 ರರಲ್ಲಿದ್ದು, ಡಿಸೆಂಬರ್ 3ರಂದು ರೂ.299 ಕ್ಕೆ ತಲುಪಿರುವುದು ಕಾಕತಾಳೀಯವಾಗಿ ಕಂಡರೂ ಸತ್ಯಾಂಶವಾಗಿದೆ.
ಗುಜರಾತ್ ಆಲ್ಕಲೀಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ ಕಂಪನಿ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಉತ್ತಮ ಸಾಧನೆಯನ್ನು ಪ್ರದರ್ಶಿಸಿದರೂ ಷೇರಿನ ಬೆಲೆಯು ಒಂದೇ ತಿಂಗಳಲ್ಲಿ ರೂ.795 ರ ಸಮೀಪದಿಂದ ರೂ.569 ರವರೆಗೂ ಕುಸಿದಿದ್ದು, ಕೆಲವು ದಿನಗಳಿಂದ ರೂ.605 ರ ಸಮೀಪದಲ್ಲೇ ವಹಿವಾಟಾಗುತ್ತಿತ್ತು. ಆದರೆ ಶುಕ್ರವಾರ ಪೇಟೆಯಲ್ಲಿ ರೂ.606 ರ ಸಮೀಪದಲ್ಲಿ ಆರಂಭವಾಗಿ ಕೆಲವೇ ಕ್ಷಣಗಳಲ್ಲಿ ರೂ.665 ರಕ್ಕೆ ಜಿಗಿತ ಕಂಡು ರೂ.652 ರ ಸಮೀಪ ಕೊನೆಗೊಂಡಿತು. ಅಂದರೆ ಒಂದೇ ದಿನ ಷೇರಿನ ಬೆಲೆ ರೂ.60 ರಷ್ಟರ ಏರಿಕೆ ಪ್ರದರ್ಶಿಸಿದೆ.
ಷೇರುಪೇಟೆಯ ವಹಿವಾಟಿನಲ್ಲಿ ಅದು ಸೆನ್ಸೆಕ್ಸ್ 764 ಪಾಯಿಂಟುಗಳ ಕುಸಿತ ಕಂಡ ದಿನದಂದು ಕೆಳಮಧ್ಯಮ ಶ್ರೇಣಿಯ ಕಂಪನಿಗಳ ಷೇರುಗಳು ಪ್ರದರ್ಶಿಸಿರುವ ಏರಿಕೆಯ ಹಿಂದೆ ಮ್ಯುಚುಯಲ್ ಫಂಡ್ ಗಳ ಆಸಕ್ತಿ ಹೆಚ್ಚಿರಬಹುದಾಗಿದೆ. ವಿಶೇಷವಾಗಿ ಭಾರಿ ಕುಸಿತ ಕಂಡಂತಹ ಕಂಪನಿಗಳು ಉತ್ತಮ ಬ್ರಾಂಡ್ ಹೊಂದಿರುವ, ಸಾಧನೆಯಾಧಾರಿತ ಕಂಪನಿಗಳು ಅತ್ಯಂತ ತ್ವರಿತವಾದ ಏರಿಕೆ ಕಾಣುತ್ತಿವೆ.
ಒಂದು ವರ್ಷದ ಹಿಂದೆ ನೋಂದಾಯಿತ ಗ್ರಾಹಕರ ಸಂಖ್ಯೆಗಿಂತ ಸುಮಾರು ಅರ್ಧಕ್ಕೂ ಹೆಚ್ಚಿನ ಹೂಡಿಕೆದಾರರು ನೋಂದಾಯಿಸಿಕೊಂಡಿದ್ದು ಅವರ ಮೂಲಕ ಪೇಟೆಗೆ ಹರಿದುಬರುತ್ತಿರುವ ಈಗಿನ ದಿನಗಳಲ್ಲಿ ಪ್ರತಿ ಸಾಧನೆಯಾಧಾರಿತ ಕಂಪನಿಯ ಷೇರಿನ ಬೆಲೆಯು ಕುಸಿತ ಕಂಡಾಗ ಏರಿಕೆ ಕಾಣಲು ಸ್ಪರ್ಧಾತ್ಮಕ ಖರೀದಿಯ ಒತ್ತಡವು ಅನಿರೀಕ್ಷಿತ ಲಾಭಕ್ಕೆ ದಾರಿಯಾಗುತ್ತಿದೆ. ಆದರೆ ಕಣ್ಣಿಗೆ ಕಂಡದ್ದು ಸತ್ಯವಲ್ಲ, ಕೈಗೆ ದಕ್ಕಿಸಿಕೊಂಡಿದ್ದೇ ಸತ್ಯ ಎಂಬಂತೆ ಲಾಭದ ನಗದೀಕರಣಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯವಾಗಿದೆ. ಆಗಲೇ ಹೂಡಿಕೆ ಗುಚ್ಚ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.
ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು .