ಒಂದು ಚಲನಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಲು ನಾನಾ ದರ್ಜೆಯ ಪ್ರೇಕ್ಷಕರಿಗೆ ವೈವಿಧ್ಯಮಯ ಆಸನಗಳನ್ನುಒದಗಿಸಿ ಅದಕ್ಕನುಗುಣವಾಗಿ ಟಿಕೆಟ್ ದರಗಳನ್ನು ನಿಗದಿಪಡಿಸುವರು. ಬಾಲ್ಕನಿಗಳಲ್ಲಿನ ದರಗಳು ಅತಿ ಹೆಚ್ಚಾಗಿರುತ್ತದೆ. ಆದರೆ ಯಾವ ಆಸನಗಳಲ್ಲಿ ಕುಳಿತು ವೀಕ್ಷಿಸಿದರೂ ಚಲನಚಿತ್ರವು ಒಂದೇ. ಆದರೆ ಅದರಂತೆ ಷೇರುಪೇಟೆಯಲ್ಲಿ ಲಿಸ್ಟಿಂಗ್ ಆಗಿರುವ ಷೇರುಗಳನ್ನು ರೂ.100 ರ ಸಮೀಪ ವಹಿವಾಟಾಗುತ್ತಿರುವ ಎಲ್ಲಾ ಷೇರುಗಳೂ ಒಂದೇ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಉದಾಹರಣೆಗೆ ರೂ.147 ರ ಸಮೀಪ ವಹಿವಾಟಾಗುತ್ತಿರುವ ಒ ಎನ್ ಜಿ ಸಿ ಕಂಪನಿಯು ಶೇ.110 ರಷ್ಟು ಲಾಭಾಂಶ ವಿತರಿಸಿದರೆ ಪ್ರತಿ ಷೇರಿಗೆ ರೂ.5.50 ರಷ್ಟು ಲಭಿಸಿದರೆ, ಅದೇ ರೂ.147 ರ ಸಮೀಪ ವಹಿವಾಟಾಗುತ್ತಿರುವ ಎನ್ ಎಂ ಡಿ ಸಿ ಕಂಪನಿಯು ಶೇ.901 ರಷ್ಟು ಲಾಭಾಂಶ ವಿತರಿಸಿದಾಗ ಪ್ರತಿ ಷೇರಿಗೆ ರೂ.9.01 ಮಾತ್ರ ಲಭಿಸುತ್ತದೆ. ಅಂದರೆ ಶೇ.901 ಕ್ಕೂ ಮತ್ತು ಶೇ.110 ಕ್ಕೂ ಕೇವಲ ರೂ.3.51 ಮಾತ್ರ ವ್ಯತ್ಯಾಸವೇ? ಸೋಜಿಗವೆನಿಸುವುದಲ್ಲವೇ? ಇದೂ ಸಹ ಷೇರುಪೇಟೆಯ ವಿಸ್ಮಯಕಾರಿ ಗುಣ.
ಅದೇ ರೀತಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಶೇ.50 ರ ಲಾಭಾಂಶ ಪ್ರಕಟಿಸಿದ್ದಕ್ಕೆ ಪ್ರತಿ ಷೇರಿಗೆ ರೂ.5 ರಂತೆ, ಪವರ್ ಫೈನಾನ್ಸ್ ಕಾರ್ಪೊರೇಷನ್ ಶೇ.25 ರಂತೆ ಲಾಭಾಂಶ ಪ್ರಕಟಿಸಿ ಪ್ರತಿ ಷೇರಿಗೆ ರೂ.2.50 ಯಂತೆ ವಿತರಿಸಿವೆ. ಈ ಏರಡೂ ಕಂಪನಿಗಳು ರೂ.120 ರ ಸಮೀಪವಿದ್ದು ಪ್ರಕಟಿಸಿದ ಲಾಭಾಂಶದ ಶೇಕಡಾವಾರು ಪ್ರಮಾಣವು ಸರಿ ಹೊಂದುತ್ತದೆ. ಹಿಂದೂಸ್ಥಾನ್ ಝಿಂಕ್ ಕಂಪನಿ ಶೇ.900 ರಷ್ಟು ಲಾಭಾಂಶ ಪ್ರಕಟಿಸಿದ್ದು ರೂ.365 ರ ಸಮೀಪವಿರುವ ಈ ಷೇರಿಗೆ ನಿಗದಿತ ದಿನದ ನಂತರ ಪ್ರತಿ ಷೇರಿಗೆ ರೂ.18 ಲಭಿಸುವುದು, ಅದೇ ಸಮೂಹದ ವೇದಾಂತ ಕಂಪನಿಯು ಪ್ರತಿ ಷೇರಿಗೆ ಶೇ.1350 ರ ಲಾಭಾಂಶ ಪ್ರಕಟಿಸಿದೆ ಅಂದರೆ ನಿಗದಿತ ದಿನವಾದ 18 ನೇ ಡಿಸೆಂಬರ್ ನಂತರ ಪ್ರತಿ ಷೇರಿಗೆ ರೂ.13.50 ಮಾತ್ರ ಲಭಿಸುವುದು. ಇದು ಅಂಕಿ ಅಂಶಗಳನ್ನು ಪ್ರಸ್ತುತಪಡಿಸುವ ಶೈಲಿಯಾಗಿದೆ. ಅಂದರೆ ಈ ಶೇಕಡಾವಾರು ಲಾಭಾಂಶಗಳ ಅಂಕಿ ಅಂಶಗಳು ಹೂಡಿಕೆದಾರರನ್ನು ಗೊಂದಲಕ್ಕೀಡುಮಾಡುತ್ತದೆ. ಇದರ ಹಿಂದೆ ಅಡಕವಾಗಿರುವ ಅಂಶ ಎಂದರೆ ಕಂಪನಿಗಳ ಷೇರುಗಳ ಮುಖಬೆಲೆಯ ಪ್ರಭಾವವಾಗಿದೆ. ಒ ಎನ್ ಜಿ ಸಿ ಷೇರಿನ ಮುಖಬೆಲೆಯು ರೂ.5 ಆಗಿದ್ದರೆ, ಎನ್ ಎಂ ಡಿ ಸಿ ಷೇರಿನ ಮುಖಬೆಲೆ ರೂ.1. ಹಾಗೆಯೇ ಹಿಂದೂಸ್ಥಾನ್ ಝಿಂಕ್ ಷೇರಿನ ಮುಖಬೆಲೆ ರೂ.2 ಆಗಿದ್ದರೆ, ವೇದಾಂತ ಷೇರಿನ ಮುಖಬೆಲೆ ರೂ.1 ಆಗಿದೆ. ಇನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಪವರ್ ಫೈನಾನ್ಸ್ ಕಾರ್ಪೊರೇಷನ್ ಕಂಪನಿಗಳ ಷೇರುಗಳ ಮುಖಬೆಲೆ ರೂ.10 ಆಗದ್ದರಿಂದ ಶೇಕಡಾವಾರು ಪ್ರಮಾಣವನ್ನು ಸುಲಭವಾಗಿ ಹೋಲಿಕೆ ಮಾಡಲು ಸಾಧ್ಯ.
ಮತ್ತೆ ಕೆಲವು ಕಂಪನಿಗಳಲ್ಲಿ ಅಂದರೆ ರೂ.14,700 ರಲ್ಲಿರುವ ಯಮುನಾ ಸಿಂಡಿಕೇಟ್ ಲಿಮಿಟೆಡ್, ರೂ.14,135 ರ ಸಮೀಪವಿರುವ ಬಾಂಬೆ ಆಕ್ಸಿಜನ್ ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್, 2,900ರ ಸಮೀಪವಿರುವ ವಿಕ್ಟೋರಿಯಾ ಮಿಲ್ಸ್ ಲಿಮಿಟೆಡ್ ನಂತಹ ಕಂಪನಿಗಳಲ್ಲಿ ಪ್ರತಿ ಷೇರಿಗೆ ಶೇ.50 ಅಂದರೆ ರೂ.50 ರಂತೆ, ಶೇ.100 ಅಂದರೆ ರೂ.100 ರಂತೆ ಲಾಭಾಂಶ ದೊರೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಕಂಪನಿಗಳ ಷೇರುಗಳ ಮುಖಬೆಲೆಯು ರೂ.100 ಆಗಿದೆ. ಈ ಕಂಪನಿಗಳು ʼ X’ ಅಥವಾ ‘XT’ಗುಂಪಿನಲ್ಲಿ ವಹಿವಾಟಾಗುತ್ತಿವೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಪ್ರತಿ ತ್ರೈಮಾಸಿಕದಲ್ಲೂ ದಾಖಲೆಯ ಲಾಭ ಗಳಿಸುತ್ತಿರುವ ಅಗ್ರಮಾನ್ಯ ಕಂಪನಿಯಾಗಿದೆ. ಈ ಷೇರಿನ ಪೇಟೆಯ ಬೆಲೆ ರೂ.2,460 ರ ಸಮೀಪವಿದೆ. ಮತ್ತೆ ಇತ್ತೀಚೆಗಷ್ಠೆ ಹೆಚ್ಚಿನ ಪ್ರಚಾರದೊಂದಿಗೆ ಪೇಟೆ ಪ್ರವೇಶಿಸಿ ವಿಜೃಂಭಿಸಿದ (?) ಪೇಟಿಎಂ ಕಂಪನಿ ಯ ಷೇರಿನ ಬೆಲೆ ರೂ.1,567 ಸಮೀಪವಿದೆ. ಈ ಎರಡೂ ಕಂಪನಿಗಳ ಷೇರಿನ ಬೆಲೆಗಳನ್ನು ಸಮೀಕರಿಸಿದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರಿನ ಬೆಲೆ ತೀರಾ ಕಡಿಮೆ ಬೆಲೆಯಲ್ಲಿದೆ. ಇದಕ್ಕೆ ಕಾರಣ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ರೂ.2,460 ಇದ್ದರೂ ಷೇರಿನ ಮುಖಬೆಲೆ ರೂ.10 ಇದನ್ನು ರೂ.1 ಕ್ಕೆ ಪರಿವರ್ತಿಸಿದಾಗ ಅದರ ಬೆಲೆ ಕೇವಲ ರೂ.246 ಆಗುವುದು ಅಂದರೆ ರೂ.1 ರ ಮುಖಬೆಲೆಯ ಪೇಟಿಎಂ ಷೇರು ಇದಕ್ಕಿಂತ ಆರು ಪಟ್ಟು ಹೆಚ್ಚಿದೆ.
ನಿರಂತರವಾಗಿ ಹಾನಿಗೊಳಗಾಗಿರುವ ಕಂಪನಿಗೆ ಹೆಚ್ಚಿನ ಆದ್ಯತೆ ಕೊಟ್ಟು ದಾಖಲೆ ಪ್ರಮಾಣದ ಲಾಭ ಗಳಿಸುತ್ತಿರುವ ಕಂಪನಿಗೆ ಕಳಪೆ ಬೆಲೆ ನೀಡುತ್ತಿರುವಂತೆ ಕಾಣುವ ಈ ಗುಣವು ಷೇರುಪೇಟೆಯ ವಿಸ್ಮಯಕಾರಿ ಗುಣವಾಗಿದೆ. ಇಂತಹ ಪರಿಸ್ಥಿತಿಗಳನ್ನು ತುಲನಾತ್ಮಕವಾಗಿ ವಿವೇಚಿಸಿ ಹೂಡಿಕೆ ಮಾಡಿದಲ್ಲಿ ಮಾತ್ರ ಹೂಡಿಕೆಯು ಸುರಕ್ಷತೆಯನ್ನು ಕಾಣಲು ಸಾಧ್ಯ. ಕೇವಲ ಪ್ರಚಾರಿಕ, ಅಲಂಕಾರಿಕ ಮಾತುಗಳಿಗೆ ಒಲವು ತೋರಿದಲ್ಲಿ ಫಲಿತಾಂಶ ಊಹೆಗೂ ನಿಲುಕದಂತಾಗುತ್ತದೆ.
ಷೇರುಪೇಟೆಯ ಅಖಾಡದಲ್ಲಿ ವಹಿವಾಟಿಗೆ ಬಿಡುಗಡೆಯಾಗಿರುವ ಕಂಪನಿಗಳ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ 4,000 ಕ್ಕೂ ಹೆಚ್ಚು, ನ್ಯಾಶನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ 2,000 ಕ್ಕೂ ಹೆಚ್ಚು. ಈ ಕಂಪನಿಗಳಲ್ಲಿ ಹೆಚ್ಚಿನ ಅಗ್ರಮಾನ್ಯ ಕಂಪನಿಗಳು ಎರಡೂ ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ವಹಿವಾಟಾಗುತ್ತವೆ. ಲೀಸ್ಟಿಂಗ್ ಆದ ಕಂಪನಿಗಳಲ್ಲಿ ರೂ.1 ರ ಮುಖಬೆಲೆಯ ಷೇರುಗಳಿಂದ ರೂ.100 ರವರೆಗೂ ವಿವಿಧ ಮುಖಬೆಲೆ ಷೇರುಗಳು ವಹಿವಾಟಾಗುತ್ತವೆ. ಷೇರುಪೇಟೆಯ ಚಟುವಟಿಕೆಗೂ ಮುನ್ನ ಕಂಪನಿಗಳ ಷೇರಿನ ಮುಖಬೆಲೆಯನ್ನು ಅರಿತು ಚಟುವಟಿಕೆ ನಡೆಸಿದಲ್ಲಿ ಮಾತ್ರ ಸುರಕ್ಷತಾ ಕ್ರಮವಾಗಿರುತ್ತದೆ ಮತ್ತು ಕಾರ್ಪೊರೇಟ್ ಫಲಾನುಭವಿಗಳಾಗಲೂ ಸಾಧ್ಯ.
ಲಾಭಾಂಶಗಳೊಂದಿಗೆ ಬೋನಸ್ ಷೇರುಗಳು ಹೂಡಿಕೆಯನ್ನು ಬೆಳೆಸುವುದಲ್ಲದೆ ಮುಂದೆ ಕಂಪನಿಗಳು ವಿತರಿಸಬಹುದಾದ ಲಾಭಾಂಶಗಳ ಪ್ರಮಾಣವು ಬೋನಸ್ ಷೇರುಗಳ ಕಾರಣ ಹೆಚ್ಚಾದ ಷೇರುಗಳ ಮೇಲೂ ಬರುವುದರಿಂದ ಹೂಡಿಕೆದಾರರಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಆದ್ದರಿಂದ ಹೂಡಿಕೆಗೂ ಮುನ್ನ ವಿವೇಚನೆ, ಅಧ್ಯಯನ, ಚಿಂತನೆ, ಸಮಾಲೋಚನೆಗಳ ಅಗತ್ಯ ಹೆಚ್ಚಿರುತ್ತದೆ.
ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು .