BELAGAVI DEC 13
ವಿರೋಧಪಕ್ಷದವರು ಪ್ರಸ್ತಾಪ ಮಾಡುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಮಾನ ನಿಲ್ದಾಣ ಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಹಲವಾರು ಕಾನೂನುಗಳನ್ನು ತರುವುದು , ಜನಪರವಾದ ಅಭಿವೃದ್ಧಿಯ ಕುರಿತು ಚರ್ಚೆ ಮಾಡಿ ಅದಕ್ಕೆ ಪರಿಹಾರ ದೊರಕಿಸುವುದು ಸರ್ಕಾರದ ಆದ್ಯತೆ. ಸಮಗ್ರ ಕರ್ನಾಟಕದ ಜೊತೆಗೆ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಚಾರ ಹಾಗೂ ಯೋಜನೆಗಳ ಬಗ್ಗೆ ಚರ್ಚೆ ಆಗಬೇಕೆನ್ನುವುದು ನಮ್ಮ ಉದ್ದೇಶ ಎಂದರು.
ವಿರೋಧ ಪಕ್ಷದವರಿಗೆ ವಿಧಾನ ಮಂಡಲದ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶವಿದೆ. ಅವರು ಯಾವುದೇ ವಿಚಾರಗಳನ್ನು ಎತ್ತಿದರೂ ಕೂಡ ವಾಸ್ತವದ ನೆಲೆಗಟ್ಟಿನ ಮೇಲೆ ಸರ್ಕಾರ ಸಮರ್ಪಕವಾಗಿ ಉತ್ತರ ನೀಡಲಿದೆ ಎಂದರು.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಹಲವಾರು ಅಭಿವೃದ್ಧಿ ಯೋಜನೆಗಳನ್ನು ತರಲು, ನಿರ್ಣಯಗಳನ್ನು
ತೆಗೆದುಕೊಳ್ಳಬೇಕೆಂದಿದೆ. ಬಹಳ ವರ್ಷಗಳಿಂದ ಬೇಡಿಕೆಯಲ್ಲಿರುವ ವಿಷಯಗಳನ್ನು ಪೂರೈಸಲು ಬಗ್ಗೆ ಸಕಾರಾತ್ಮಕವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಮತಾಂತರ ನಿಷೇಧ ಕಾಯ್ದೆ:ಮತಾಂತರ ಕಾಯ್ದೆ ಕಾನೂನು ಇಲಾಖೆಯ ಪರಿಶೀಲನಾ ಸಮಿತಿಯಲ್ಲಿದ್ದು, ಒಪ್ಪಿಗೆಯಾಗಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಬೇಕು ನಂತರ ಸದನದಲ್ಲಿ ಮಂಡಿಸಲಾಗುವುದು ಎಂದರು .
ಮತಾಂತರ ಕಾಯ್ದೆಯನ್ನು ವಿರೋಧಿಸುವುದಾಗಿ ವಿರೋಧ ಪಕ್ಷಗಳ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಮಂತ್ರಿಗಳು, ಹಲವಾರು ಕಾನೂನುಗಳ ಬಗ್ಗೆ ಪರ-ವಿರೋಧ ಇದ್ದೇ ಇರುತ್ತದೆ. ಸರ್ಕಾರ ಜನಹಿತಕ್ಕಾಗಿ ಕಾನೂನು ಗಳನ್ನು ತರಲೇಬೇಕಾಗುತ್ತದೆ. ಈ ಕುರಿತು ಚರ್ಚೆ ಮಾಡುತ್ತೇವೆ. ಎಂದರು.
ವಾರಣಾಸಿ ಭೇಟಿ:ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ವಾರಣಾಸಿಯಲ್ಲಿ ಬಿಜೆಪಿ ಮುಖ್ಯ ಮಂತ್ರಿಗಳ ಸಭೆಯಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕೆಂಬ ಚಿಂತನೆ ಇದೆ. ಸಭೆಯಲ್ಲಿ ಪಾಲ್ಗೊಂಡು ನಾಳೆ ಸಂಜೆ ಹಿಂದಿರುಗುವುದಾಗಿ ತಿಳಿಸಿದರು.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ರೈತ ಸಂಘಟನೆಗಳೊಂದಿಗೆ ಈ ಕುರಿತು ಮಾತನಾಡುವುದಾಗಿ ತಿಳಿಸಿದರು.