HUBBLLI DEC 18
ಬೆಳಗಾವಿಯಲ್ಲಿ ನಿನ್ನೆ ರಾತ್ರಿ ನಡೆದ ಪುಂಡಾಟಿಕೆಯನ್ನು ಖಂಡಿಸುತ್ತೇನೆ. ಆ ಪುಂಡರನ್ನು ಸೆದೆ ಬಡಿಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಗೃಹ ಸಚಿವರಿಗೆ ಸೂಚಿಸಿದ್ದೇನೆ. ಅವರೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಕಲ್ಲು ತೂರಾಟ ಮಾಡುವುದು , ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾಗೂ ಸರ್ಕಾರಿ ವಾಹನಗಳಿಗೆ ಹಾನಿ ಉಂಟುಮಾಡುವುದು ಕಾನೂನು ಬಾಹಿರ. ಇಂಥ ಘಟನೆ ಪುನಃ ಜರುಗದಂತೆ ಇನ್ನಷ್ಟು ಕಠಿಣ ಹಾಗೂ ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಪ್ರವೃತ್ತಿ ಸರಿಯಲ್ಲ ಎಂದರು.
ರಾಷ್ಟ್ರಭಕ್ತರ ಪ್ರತಿಮೆ ಭಗ್ನಗೊಳಿಸುವುದು ದೇಶಭಕ್ತರ ಕೆಲಸವಲ್ಲ. ದೇಶಭಕ್ತರು ಎಲ್ಲಾ ಸಮುದಾಯಕ್ಕೆ ಸೇರಿದವರು. ದೇಶಕ್ಕಾಗಿ ತ್ಯಾಗ ಮಾಡಿದವರು. ಪ್ರತಿಮೆ ಸ್ಥಾಪಿಸುವುದು ಅವರನ್ನು ಗೌರವಿಸಬೇಕೆಂದೇ ವಿನಃ ಅವರ ಮುಖಾಂತರ ಸಮಾಜದಲ್ಲಿ ಕ್ಷೋಭೇ ಉಂಟುಮಾಡುವುದಲ್ಲ. ಈ ವರ್ತನೆ ಎಳ್ಳಷ್ಟೂ ಸರಿಯಲ್ಲ. ಕೆಲವು ಪುಂಡರು ಈ ರೀತಿ ಮಾಡುತ್ತಿದ್ದು ಅವರನ್ನು ಸದೆ ಬಡಿಯಲಾವುದು. ಇದು ಉದ್ದೇಶಪೂರ್ವಕವೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಬಸವರಾಜ ಬೊಮ್ಮಾಯಿ
ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಬೆಳಗಾವಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರಕರಣದ ಬಗ್ಗೆ ಮಾತನಾಡಿದರು.
ಕೆಲವರು ಕಾನೂನು ಬಾಹಿರವಾಗಿ ಪುಂಡಾಟಿಕೆ ಮಾಡಿದ್ದಾರೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿ. ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ತೆ ಕಾಪಾಡಿಕೊಳ್ಳುವುದು ಅಲ್ಲಿನ ಸರ್ಕಾರದ ಜವಾಬ್ದಾರಿ. ಅಲ್ಲಿನ ಕನ್ನಡಿಗರ ರಕ್ಷಣೆ ಹಾಗೂ ಬಸ್ಸು ಇತ್ಯಾದಿ ವಾಹನಗಳ ರಕ್ಷಣೆ ಮಾಡಲು ನಮ್ಮ ಪೋಲಿಸ್ ವiಹಾ ನಿರ್ದೇಶಕರು ಅಲ್ಲಿನ ಪೊಲೀಸ್ ಮಹಾನಿರ್ದೇಶಕರೊಂದಿಗೆ ಹಾಗೂ ಗೃಹ ಸಚಿವರು ಮಹಾರಾಷ್ಟ್ರದ ಗೃಹ ಸಚಿವರು ರೊಂದಿಗೆ ಮಾತನಾಡಲಿದ್ದಾರೆ. ಮೊದಲು ಅಧಿಕಾರಿಗಳು ಮಾತನಾಡುತ್ತಾರೆ. ನಂತರ ಅಗತ್ಯ ಬಿದ್ದರೆ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು.
ಶಿವಸೇನೆಯ ಸಂಜಯ್ ರಾವತ್ ಅವರು ಮರಾಠಿಗಳು ಒಂದಾಗುವಂತೆ ಕರೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಜವಾಬ್ದಾರಿ ಇರುವ ಜನರು ಯಾರನ್ನೂ ಯಾವ ಸಮಯದಲ್ಲಿಯೂ ಪ್ರಚೋದನೆ ಮಾಡಬಾರದು. ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ದೇಶವನ್ನು ಒಗ್ಗೂಡಿಸಿದವರು. ಅವರ ಹೆಸರಿನಲ್ಲಿ ನಾವು ಜಗಳವಾಡಿಕೊಂಡು ಒಡಕು ಮೂಡಿಸಿದರೆ ಅದು ಅವರ ಹೋರಾಟಕ್ಕೆ ಅನ್ಯಾಯವೆಸಗಿದಂತಾಗುತ್ತದೆ. ಕಾನೂನನ್ನ ಕೈಗೆ ತೆಗೆದುಕೊಂಡು ಯಾರನ್ನೂ ಇಂತಹ ಕೆಲಸಗಳನ್ನು ಮಾಡಲು ಕುಮ್ಮಕ್ಕು ನೀಡಬಾರದು ಎಂದರು.