23 C
Karnataka
Saturday, September 21, 2024

    Indian Stock Market News:ಹೂಡಿಕೆಗೂ ಮುಂಚೆ ಪರಿಶೀಲಿಸಿ, ನಿರ್ಧರಿಸುವುದೇ ಜಾಣತನ

    Must read

    ಷೇರುಪೇಟೆಯ ಹೆಗ್ಗುರುತಾದ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಸೆನ್ಸೆಕ್ಸ್‌ ಶುಕ್ರವಾರದಂದು ಕಂಡ 889 ಪಾಯಿಂಟುಗಳ ಕುಸಿತವು ಹೊರನೋಟಕ್ಕೆ ಭಾರಿಯಾಗಿ ಕಂಡರೂ, 58 ಸಾವಿರದ ಮಟ್ಟದಲ್ಲಿ ಅದು ಹೆಚ್ಚಾಗಲಾರದು. ಬ್ಲಡ್‌ ಬಾತ್‌, ಬಂಡವಾಳ ನಾಶ ಮುಂತಾದ ಭಯಾನಕ ಪದಗಳಿಗೆ ಹೆದರುವ ಆವಶ್ಯಕತೆಯಿಲ್ಲ. ಆದರೆ ಅದರೊಂದಿಗೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕಗಳು ಮತ್ತು ಇತರೆ ವಲಯದ ಷೇರುಗಳು ಕಂಡಿರುವ ಕುಸಿತವು ಸ್ವಲ್ಪ ಆತಂಕವನ್ನುಂಟುಮಾಡಬಹುದಾದ ವಿಚಾರವಾಗಿದೆ.

    ಡಿಸೆಂಬರ್ 17ರ ಸೆನ್ಸೆಕ್ಸ್ ಆರಂಭದ ಗ್ರಾಫ್

    ಇದಕ್ಕೆ ಮುಖ್ಯ ಕಾರಣ ಎಂದರೆ ಜನವರಿ 1, 2021 ರಂದು ರಿಜಿಸ್ಟರ್ಡ್‌ ಕ್ಲೈಯೆಂಟ್ಸ್‌ ಸಂಖ್ಯೆ 5.89 ಕೋಟಿ ಇದ್ದು ಶುಕ್ರವಾರ 17, ಡಿಸೆಂಬರ್‌ 2021 ರಂದು ಆ ಸಂಖ್ಯೆಯು 9.03 ಕೋಟಿಗೆ ತಲುಪಿದೆ. ಅಂದರೆ ಪೇಟೆಯ ಚಟುವಟಿಕೆಯಲ್ಲಿ ಭಾಗವಹಿಸುವವರ ಆಸಕ್ತಿ ಹೆಚ್ಚು ಹೆಚ್ಚು ವೃದ್ಧಿಯಾಗುತ್ತಿದೆ. ಇದರಲ್ಲಿ ಹೆಚ್ಚಿನವರು ಷೇರುಪೇಟೆಯ ಬಗ್ಗೆ ಅರಿವಿಲ್ಲದೆ ಪ್ರಲೋಭನೆಗೊಳಗಾಗಿ, ಪ್ರಚಾರಗಳಿಂದ ಪ್ರೇರಿತರಾಗಿ ಪ್ರವೇಶಿಸಿರುವವರಿರುತ್ತಾರೆ. ಸತತವಾಗಿ ಏರಿಕೆಯನ್ನು ಕಾಣುತ್ತಿದ್ದ ಪೇಟೆಯಲ್ಲಿ ಹೂಡಿಕೆಯು ಬೆಳೆಯುತ್ತಿದ್ದ ವೇಗಕ್ಕೆ ಹರ್ಷಿತರಾಗುತ್ತಿದ್ದ ಸಮಯದಲ್ಲಿ ಅನಿರೀಕ್ಷಿತ ಮಟ್ಟದ ಕುಸಿತವನ್ನು ಕಂಡಾಗ ಖಿನ್ನತೆಗೊಳಗಾಗುವುದು ಸಹಜ. ಹಾಗಾಗಿ ಹೂಡಿಕೆಗೆ ಮುಂಚೆ ಅವಶ್ಯವಿರುವ ಅರಿವು, ಅಧ್ಯಯನ, ಚಿಂತನೆಗಳ ಪ್ರಯೋಗ ಅತ್ಯಗತ್ಯ.

    ಷೇರುಪೇಟೆ ಹೂಡಿಕೆಗೆ ಮುಂಚೆ ಅವಶ್ಯವಿರುವ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರಬಯಸುತ್ತೇನೆ. ಷೇರುಪೇಟೆಯಲ್ಲಿ ಹೂಡಿಕೆಗೂ ಮುಂಚೆ ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಗಳ ಆಂತರಿಕ ಸಾಧನೆಗಳ ಬಗ್ಗೆ, ಆ ಕಂಪನಿಗಳ ಉತ್ಪನ್ನಗಳಿಗಿರುವ ಬೇಡಿಕೆ, ಲಾಭ ಗಳಿಸಲು ಇರುವ ಅವಕಾಶಗಳ ಬಗ್ಗೆ, ಕಂಪನಿಯ ಮೇನೇಜ್‌ ಮೆಂಟ್‌ ಗಳ ಚಿಂತನೆ ಮತ್ತು ಅವರು ಹೊಂದಿರುವ ಹೂಡಿಕೆದಾರ ಸ್ನೇಹಿ ಗುಣದ ಮಟ್ಟ ಮುಂತಾದ ವಿಚಾರಗಳ ಬಗ್ಗೆ ಸವಿವರವಾದ ಅಧ್ಯಯನದ ಅಗತ್ಯತೆ ನಮ್ಮ ಹೂಡಿಕೆಯ ಸುರಕ್ಷತೆಯ ದೃಷ್ಟಿಯಿಂದ ಬೇಕಾಗಿದೆ.

    ಕಂಪನಿಗಳ ಉತ್ಪನ್ನವು ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ತಾಂತ್ರಿಕತೆಯ ಅಭಿವೃದ್ಧಿಯ ಕಾರಣ ದೀರ್ಘಕಾಲೀನವಾಗಿ ಬೇಡಿಕೆಯಲ್ಲಿರಬಹುದೇ ಎಂಬ ಅಂಶವೂ ಮುಖ್ಯವಾಗಿರುತ್ತದೆ. ಕಾರಣ ತಾಂತ್ರಿಕತಾ ಯುಗಕ್ಕೂ ಮುಂಚೆ ಅಂದರೆ 80 ರ ದಶಕದಲ್ಲಿ ಟೈಪ್‌ ರೈಟರ್‌ ಗಳ ಯುಗದಲ್ಲಿ ರೆಮಿಂಗ್‌ ಟನ್‌ ರ್ಯಾಂಡ್‌ ಕಂಪನಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು, 86 ರಲ್ಲಿ 1:2 ಅನುಪಾತದ ಬೋನಸ್‌ ಷೇರು ಸಹ ವಿತರಿಸಿತು. ಆದರೆ ಟೈಪ್‌ ರೈಟರ್‌ ಗಳು, ಪರ್ಸನಲ್‌ ಕಂಪ್ಯೂಟರ್‌ ಗಳ ಪ್ರವೇಶದಿಂದ, ಮೂಲೆಗುಂಪಾದ ಕಾರಣ ಕಂಪನಿಯು ಕಣ್ಮರೆಯಾಯಿತು.

    1983 ರಲ್ಲಿ ನವದೆಹಲಿಯಲ್ಲಿ ಆರಂಭಿಸಲಾದ‌ ಡಿಜಿಟಲ್ ಸ್ಟೋರೇಜ್‌ ಕಂಪನಿ ಮೋಸರ್‌ ಬೇರ್‌ ತನ್ನ ಫ್ಲಾಪಿ ಡಿಸ್ಕ್ ಉತ್ಪಾದನೆಯನ್ನು ಕಾಲಕ್ಕೆ ತಕ್ಕಂತೆ ಬದಲಿಸಿ ಅಭಿವೃದ್ಧಿಪಡಿಸಿಕೊಂಡು ಬಂದು, ರೆಕಾರ್ಡಬಲ್‌, ಡಿಜಿಟಲ್‌ ವರ್ಸಟೈಲ್‌ ಡಿಸ್ಕ್‌ ಗಳನ್ನು ತಯಾರಿಸಿ ರಪ್ತುಮಾಡುವ ಹಂತಕ್ಕೆ ತಲುಪಿತಾದರೂ, ಬದಲಾದ ಪರಿಸ್ಥಿತಿಗೆ ಬಲಿಯಾಗಿ, 2018 ರಲ್ಲಿ ಸಮಾಪನಗೊಳಿಸಿಕೊಂಡಿತು (Liquidation). ಆರಂಭಿಕ ವರ್ಷಗಳಲ್ಲಿ ವಿಜೃಂಭಿಸಿದ ಚಟುವಟಿಕೆಯನ್ನು ಸ್ಟಾಕ್‌ ಎಕ್ಸ್‌ ಚೇಂಜ್‌ ಗಳಲ್ಲಿ ಪ್ರದರ್ಶಿಸಿ ನಂತರ ಮರೆಯಾಯಿತು.

    ಇನ್ನು ಕಂಪನಿಗಳ ಉತ್ಪನ್ನಗಳು ಸದಾ ಬೇಡಿಕೆಯಲ್ಲಿದ್ದಂತಹುದಾದರೆ ಮತ್ತು ಕಂಪನಿಗಳು ಷೇರುದಾರರ ಹಿತದ ನಿರ್ಣಯ ತೆಗೆದುಕೊಳ್ಳುವಂತಹವುಗಳಾದರೆ, ಷೇರಿನ ಬೆಲೆಗಳು ಕುಸಿತ ಕಂಡರೂ ಪುಟಿದೇಳುವ ಸಾಧ್ಯತೆ ಹೆಚ್ಚಿರುತ್ತದೆ.

    ಕ್ಲಾರಿಯಂಟ್‌ ಕಂಪನಿಯು, ಕೆಳಮಧ್ಯಮ ಶ್ರೇಣಿಯ ಕಂಪನಿಯಾದರೂ ಸಹ, ಎಷ್ಠರಮಟ್ಟಿಗೆ ಹೂಡಿಕೆದಾರ ಸ್ನೇಹಿ ಎಂದರೆ ಸುಮಾರು 20 ವರ್ಷಗಳಲ್ಲಿ ಪ್ರತಿ ಒಂದು ಷೇರಿಗೆ ರೂ.650 ಕ್ಕೂ ಹೆಚ್ಚಿನ ಲಾಭಾಂಶವನ್ನು ವಿತರಿಸಿದ ಕಂಪನಿಯಾಗಿದೆ. ಈ ಕಂಪನಿಯ ಷೇರಿನ ಬೆಲೆ ಒಂದು ತಿಂಗಳ ಹಿಂದಷ್ಠೇ ರೂ.520 ರ ಗರಿಷ್ಠದಲ್ಲಿದ್ದು, ನಂತರದಲ್ಲಿ ಶುಕ್ರವಾರ 17 ರಂದು ಷೇರಿನ ಬೆಲೆಯು ರೂ.499 ರವರೆಗೂ ಏರಿಕೆ ಕಂಡು ರೂ.482 ರ ಸಮೀಪಕ್ಕೆ ಅಂತ್ಯಗೊಂಡಿದೆ. 2020 ರಲ್ಲಿ ರೂ.151 ರೂಪಾಯಿಗಳ ಲಾಭಾಂಶ ವಿತರಿಸಿದರೆ, 2021 ರಲ್ಲಿ ಪ್ರತಿ ಷೇರಿಗೆ ರೂ.65 ರ ಲಾಭಾಂಶ ವಿತರಿಸಿದೆ. ಷೇರಿನ ಬೆಲೆಯು 2001 ರಲ್ಲಿ ರೂ.36 ರ ಕನಿಷ್ಠದ ಸಮೀಪವಿದ್ದ ಷೇರಿನ ಬೆಲೆಯು 2006 ರಲ್ಲಿ ರೂ.395 ಕ್ಕೆ ಏರಿಕೆ ಕಂಡು, 2009 ರಲ್ಲಿ ರೂ.144 ರ ಸಮೀಪಕ್ಕೆ ಇಳಿಯಿತು. 2011 ರಲ್ಲಿ ರೂ.854 ಕ್ಕೆ ಏರಿಕೆ ಕಂಡು 2013 ರಲ್ಲಿ ರೂ.371 ರವರೆಗೂ ಕುಸಿಯಿತು. 2015 ಕ್ಕೆ ರೂ.1,180 ಕ್ಕೆ ಜಿಗಿಯಿತು. 2019 ರಲ್ಲಿ ರೂ.265 ರ ಸಮೀಪಕ್ಕೆ ಕುಸಿದು 2020 ರಲ್ಲಿ ರೂ.193 ರ ಸಮೀಪಕ್ಕೆ ಜಾರಿತು. ಆದರೆ ಈ ವರ್ಷ ರೂ.642 ರವರೆಗೂ ಜಿಗಿದು ಈಗ ರೂ.482 ರ ಸಮೀಪವಿದೆ.

    ಹಿಂದೂಸ್ಥಾನ್‌ ಝಿಂಕ್‌ ಲಿಮಿಟೆಡ್ ಕಂಪನಿಯು ಆಗಷ್ಟ್‌ 17 ರಂದು ಮಧ್ಯಂತರ ಲಾಭಾಂಶ ವಿತರಣೆ ಪರಿಶೀಲನೆಯ ಕಾರ್ಯಸೂಚಿ ಪ್ರಕಟಿಸಿದಾಗ ಷೇರಿನ ಬೆಲೆ ರೂ.332 ರ ಸಮೀಪವಿದ್ದು, ಲಾಭಾಂಶ ಪರಿಶೀಲನೆಯನ್ನು ಮುಂದೂಡಿದ ಕಾರಣ ಷೇರಿನ ಬೆಲೆ ರೂ.311 ರ ವರೆಗೂ ಇಳಿದು ನಂತರದ ದಿನಗಳಲ್ಲಿ ಪುಟಿದೆದ್ದಿತು. ಸೆಪ್ಟೆಂಬರ್‌ 14 ರಂದು ಮತ್ತೊಮ್ಮೆ ಏರಿಕೆಯಿಂದ ರೂ.338 ನ್ನು ತಲುಪಿ ಅಕ್ಟೋಬರ್‌ 1 ರಂದು ರೂ.306 ಕ್ಕೆ ಕುಸಿದು 18 ರಂದು ರೂ.407.90 ರ ವಾರ್ಷಿಕ ಗರಿಷ್ಠಕ್ಕೆ ಜಿಗಿದು ರೂ.387 ರ ಸಮೀಪದಲ್ಲಿ ಕೊನೆಗೊಂಡಿದೆ. ಈ ತಿಂಗಳ 7 ರಂದು ಕಂಪನಿಯು ಪ್ರತಿ ಷೇರಿಗೆ ರೂ.18 ರಂತೆ ಲಾಭಾಂಶ ಪ್ರಕಟಿಸಿತು. ನಂತರದ ದಿನಗಳಲ್ಲಿ ರೂ.370 ರ ಸಮೀಪದವರೆಗೂ ಜಿಗಿತ ಕಂಡ ಷೇರು, ಲಾಭಾಂಶ ವಿತರಣೆಯ ನಂತರ ರೂ.335 ರ ಸಮೀಪದಲ್ಲಿ ಷೇರು ವಹಿವಾಟಾಗುತ್ತಿತ್ತು. ನಂತರ ಪೇಟೆಯ ಕುಸಿತದ ಒತ್ತಡದಿಂದ ರೂ.313 ರ ಸಮೀಪಕ್ಕೆ ಕುಸಿದಿದೆ.

    ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳ ಏರಿಳಿತಗಳ ಲಾಭವನ್ನು ವಹಿವಾಟುದಾರರು ಪಡೆದುಕೊಳ್ಳುತ್ತಿರುವಾಗ ಸಣ್ಣ ಹೂಡಿಕೆದಾರರು ಸಹ ಅಲ್ಪ ಪ್ರಮಾಣದಲ್ಲಿ ಲಾಭ ಗಳಿಸಲು ಪ್ರಯತ್ನಿಸಬಹುದು. ಆದರೆ ಸದಾ ನೆನಪಿನಲ್ಲಿಡಬೇಕಾದ ಅಂಶ ಎಂದರೆ ಪ್ರವೇಶದ ಸಂದರ್ಭದಲ್ಲಿ ದೀರ್ಘಕಾಲೀನ ಹೂಡಿಕೆಯ ದೃಷ್ಠಿಯಿದ್ದರೂ ನಂತರ ಚಟುವಟಿಕೆಯು ವ್ಯವಹಾರಿಕ ದೃಷ್ಠಿಯಿಂದ, ದೀರ್ಘಕಾಲೀನ ಎಂಬ ಮೋಹಕ ಪದದಿಂದ ದೊರೆಯುವ ಅವಕಾಶ ಕಳೆದುಕೊಳ್ಳದೆ, ʼಆನೆಯಾಗಿ ಸೊಪ್ಪು ತಿನ್ನುವುದಕ್ಕಿಂತ – ಇರುವೆಯಾಗಿ ಸಕ್ಕರೆ ತಿನ್ನುವುದು ಲೇಸುʼ ಎಂಬುದು. ಗಜಗಾತ್ರದ ವಹಿವಾಟಿನ ವ್ಯಾಮೋಹ ಬೇಡ, ಸೀಮಿತ ಲಾಭಕ್ಕೆ ಸೀಮಿತಗೊಳಿಸಿಕೊಂಡಲ್ಲಿ ಬಂಡವಾಳವೂ ಸುರಕ್ಷಿತ ಮತ್ತು ಮನಸ್ಸು ಮತ್ತು ದೇಹಗಳ ಸೌಖ್ಯವೂ ಸಾಧ್ಯ.

    ಸಾಧ್ಯವಾದಷ್ಠು ಹೂಡಿಕೆಗುಚ್ಚವನ್ನು ಹೆಚ್ಚು ಹೆಚ್ಚು ಕಂಪನಿಗಳಿಗೆ ವಿಸ್ತರಿಸಿರಿ ಮತ್ತು ಷೇರಿನ ದರಗಳ ಕುಸಿತಕ್ಕೆ ಕಾಯಿರಿ. ಖಂಡಿತಾ ಅವಕಾಶಗಳು ಸೃಷ್ಠಿಯಾಗುತ್ತವೆ. ಇವು ಕೆಲವು ಉದಾಹರಣೆಗಳಾಗಿ ಹೆಸರಿಸಲಾಗಿದೆ, ಹೂಡಿಕೆಗೂ ಮುಂಚೆ ಪರಿಶೀಲಿಸಿರಿ, ನಿರ್ಧರಿಸಿರಿ. ಇದು ಯಾವುದೇ ಶಿಫಾರಸ್ಸು ಅಲ್ಲ, ಕೇವಲ ನಿದರ್ಶನಕ್ಕೆ ಮಾತ್ರ.

    ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!