ಸುಮಾ ವೀಣಾ
ಅಬ್ದಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ– ಅಭಿನವ ಪಂಪನೆಂದು ಬಿರುದಾಂಕಿತನಾಗಿರುವ ನಾಗಚಂದ್ರನ ‘ರಾಮಚಂದ್ರಚರಿತ ಪುರಾಣ’ದಿಂದ ಪ್ರಸ್ತುತ ಕಾವ್ಯದಿಂದ ಆರಿಸಲಾಗಿದೆ.
ವಿಧಿಯ ಕಾರಣದಿಂದ ಸಮುದ್ರವೂ ಸಹ ತನ್ನ ಸೀಮಾ ರೇಖೆಯನ್ನು ಮೀರುತ್ತದೆ ಎಂಬ ಅರ್ಥ ಇಲ್ಲಿದೆ. ಸಮುದ್ರಕ್ಕೆ ನಿಶ್ಚಿತ ಎಲ್ಲೆ ಎಂಬುದು ಇರುತ್ತದೆ ಚಂಡಮಾರುತದ ಕಾರಣಕ್ಕೋ ಇಲ್ಲ ಸುನಾಮಿ ಮುಂತಾದ ಪ್ರಕೃತಿ ವೈಪರೀತ್ಯಗಳ ಸಂದರ್ಭದಲ್ಲಿ ಸಮುದ್ರವೂ ತನ್ನ ಪರಿಧಿಯನ್ನು ದಾಟಿ ಪ್ರಕ್ಷುಬ್ಧವಾಗಿ ಮುಂದುವರಿಯುತ್ತದೆ. ಕಾಲಾನಂತರದಲ್ಲಿ ಶಾಂತವಾಗಿ ಸೀಮಿತ ಪರಿಧಿಯಲ್ಲಿರುತ್ತದೆ. ಹಾಗೆ ರಾಮಚಂದ್ರಚರಿತ ಪುರಾಣದ ರಾವಣನೂ ಕೂಡ ಕ್ಷಣಕಾಲ ಚಿತ್ತಕ್ಷೋಭೆಗೆ ಒಳಗಾಗಿದ್ದ ಸೀತೆಯನ್ನು ನೋಡಿದ ಕೂಡಲೆ ಅವನ ಮನಸ್ಸು ನೀತಿಯ ಗೆರೆಯನ್ನು ದಾಟಿತು ಎಂಬುದನ್ನು ಕವಿ ಹೇಳಿದ್ದಾರೆ.
ಮನುಷ್ಯ ತಪ್ಪನ್ನೇ ಮಾಡುವುದಿಲ್ಲ ಎಂತಲ್ಲ ತಪ್ಪುಗಳನ್ನು ಮಾಡಿಯೇ ಮಾಡುತ್ತಾನೆ ಆ ತಪ್ಪು ಎಂದು ತಿಳಿದ ಬಳಿಕ ಆ ತಪ್ಪುಗಳನ್ನು ತಿದ್ದಿಕೊಳ್ಳುವುದು ಸಹಜ ಗುಣ ಸೀತೆಯುನ್ನು ಹೊತ್ತೊಯ್ದಂಥ ತಪ್ಪನ್ನು ತಿಳಿದ ಬಳಿಕ ರಾವಣ ಮತ್ತೆ ಸದ್ಭಾವವನ್ನೊಳಗೊಂಡ ಪುಣ್ಯಸತಿ ಎಂದು ಹೇಳುತ್ತಾನೆ ತಪ್ಪುಗಳು ಮನುಷ್ಯನನ್ನು ಗಟ್ಟಿಗೊಳಿಸುತ್ತದೆ. ಮಾಡಿದ ತಪ್ಪುಗಳನ್ನು ಸಮರ್ಥಿಸಿ ಕೊಳ್ಳುವುದರಲ್ಲಿ ಅರ್ಥವಿಲ್ಲ ಅಂದರೆ ಜಟ್ಟಿಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಹುಂಬರ ಹಾಗೆ ಇರಬಾರದಷ್ಟೆ.
ತಪ್ಪುಗಳನ್ನು ಮಾಡಿದವರೆಲ್ಲಾ ಕೆಟ್ಟವರು ಎಂದು ತೀರ್ಮಾನಕ್ಕೆ ಬಂದು ಅಪರಾದಿ ಸ್ತಾನದಲ್ಲಿ ನಿಲ್ಲಿಸುವುದಲ್ಲ. ಕೆಲವು ತಪ್ಪುಗಳು ಕ್ಷಮೆ ಮತ್ತು ಪ್ರಾಯಶ್ಚಿತ್ತದಿಂದ ಮಾಗುತ್ತವೆ. ತಪ್ಪುಗಳನ್ನು ಒಪ್ಪಿಕೊಂಡಲ್ಲಿ ಮುಂದಇನ ಅನಾಹುತಗಳು ಘಟಿಸುವುದಿಲ್ಲ ಹಾಗಾಗಿಯೇ ತಪ್ಪು-ಒಪ್ಪು ಎಂಬ ಜೋಡುನುಡಿ ಚಾಲ್ತಿಯಲ್ಲಿದೆಯೇನೋ….!
ತಪ್ಪುಗಳು ಇಂಥ ವಯಸ್ಸಿನವರೆ ಮಾಡಬೇಕೆಂದಿಲ್ಲ ಎಲ್ಲರೂ ತಪ್ಪು ಮಾಡುವವರೆ. ತಪ್ಪನ್ನೇ ಮಾಡದೆ ಇರುವವರನ್ನು ಹುಡುಕ ಹೊರಟರೆ ಅದುವೆ ದೊಡ್ಡ ತಪ್ಪಾಗುತ್ತದೆ. ತಪ್ಪುಗಳು ಕಹಿ ಅನುಭವಗಳ ತಡಿಕೆಗಳಾದಾಗ ಸ್ವಯಂ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಮನುಷ್ಯನನ್ನು ಪರಿಪಕ್ವವಾಗಿಸುತ್ತದೆ. ಹಾಗಾಗಿ ತಪ್ಪು ಮಾಡುವುದು ದೋಷವಲ್ಲ ಸಮರ್ಥನೆ ಮಾಡಿಕೊಳ್ಳುವುದು , ತಿದ್ದಿಕೊಳ್ಳದೆ ಇರುವುದು ದೋಷ.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.