17.5 C
Karnataka
Sunday, November 24, 2024

    ಕುಂಚದಲ್ಲಿ ಅರಳಿದ ಮಂಗಳೂರಿನ ಸೊಬಗು

    Must read

    ಬಳಕೂರ. ವಿ.ಎಸ್.ನಾಯಕ

    ಕಲಾವಿದನಾದವನಿಗೆ  ನಿಸರ್ಗವು ಒಂದಲ್ಲ ಒಂದು ರೀತಿಯಲ್ಲಿ ಪ್ರೇರಣೆಯಾಗುತ್ತದೆ. ನಿಸರ್ಗದಲ್ಲಿ  ಬದಲಾವಣೆಯಾದ  ಹಲವಾರು ವಿಚಾರಗಳು ಕಲಾವಿದನ ಕುಂಚದಲ್ಲಿ ಅರಳಿ ಅದ್ಭುತ ಕಲಾಕೃತಿಗಳಾಗಿ ಹೊರಹೊಮ್ಮುತ್ತವೆ. ಕಲಾವಿದನ ಕಲ್ಪನೆಗೆ ಗಡಿಯಿಲ್ಲ ಅವನ ಮನಸ್ಸಿನ ಪರದೆಯ ಮೇಲೆ ಮೂಡಿದ ಹಲವಾರು ವಿಚಾರಗಳು ಕಲಾ ರೂಪವನ್ನು ಪಡೆದಾಗ ಒಂದು ಉತ್ತಮವಾದ ಲೋಕಕ್ಕೆ ಅಡಿಯಿಟ್ಟ ಅನುಭವ ನಮಗಾಗುತ್ತದೆ.

    ಹೀಗೆ ಕಲಾವಿದ ತಾನು ಕಂಡ ಅನುಭವಿಸಿದ  ಹಲವಾರು ವಿಚಾರಗಳನ್ನು ಕಲಾತ್ಮಕವಾಗಿ ಬಿಂಬಿಸುತ್ತಾನೆ. ಹಾಗೆಯೇ ಇಲ್ಲಿ ತಾನು ಚಿಕ್ಕಂದಿನಿಂದಲೇ ಕಂಡ  ಹಲವಾರು ಘಟನೆ ವಿಚಾರ ನಿಸರ್ಗದ ಬದಲಾವಣೆಯ ಸನ್ನಿವೇಶಗಳನ್ನು ತಮ್ಮ ಕುಂಚದ ಮೂಲಕ ಅರಳಿಸಿದ್ದಾರೆ ಕಲಾ ಶಿಕ್ಷಕ ಸುಧೀರ್ ಕುಮಾರ್. ಜಿ. 

    ಮಂಗಳೂರಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಮಂಗಳೂರಿನ ಮಹಾಲಸಾ ಚಿತ್ರಕಲಾ  ಮಹಾವಿದ್ಯಾಲಯದಿಂದ ಎಂ. ಎಫ್. ಎ. ಪದವಿಯನ್ನು ಪಡೆದುಕೊಂಡಿದ್ದಾರೆ.ಇವರು ಹುಟ್ಟಿ ಬೆಳೆದಿದ್ದು ಎಲ್ಲಾ ಮಂಗಳೂರಿನಲ್ಲಿ. ಇವರಿಗೆ ಇಲ್ಲಿನ ಪರಿಸರ  ಒಂದಲ್ಲ ಒಂದು ರೀತಿಯಲ್ಲಿ ಕಾಡಿದೆ. ತಾವು ಕಲಾವಿದರದ್ದರಿಂದ ತಾವು ಕಂಡ ಅನುಭವಿಸಿದ ಎಲ್ಲಾ ವಿಚಾರ ವಿಷಯಗಳನ್ನು ತಮ್ಮ ಚಿತ್ರಗಳಲ್ಲಿ ಬಿಂಬಿಸಿದ್ದಾರೆ.

    ಮಂಗಳೂರು ವೇಗವಾಗಿ ಬೆಳೆಯುವ ನಗರ ಆದ್ದರಿಂದ ಅಲ್ಲಿಯ ಸುತ್ತಮುತ್ತಲಿನ ಹಳೆಯ ಕಟ್ಟಡಗಳೆಲ್ಲ ದೂರವಾಗಿ ನವನವೀನವಾದ ಮಂಗಳೂರು ನಗರ ಕಾಣುತ್ತಿದೆ. ಆದರೆ ಅಂದಿನ ಅದ್ಭುತ ವಿಚಾರಗಳು ಕಲಾ ಸ್ಪರ್ಶವನ್ನು ಪಡೆದಾಗ ನಮಗೆ ಅರಿವಿಲ್ಲದಂತೆ ಹಲವಾರು ಚಿತ್ರಗಳು ಹೊರಹೊಮ್ಮುತ್ತವೆ. ಇಂತಹ ಸಂದರ್ಭದಲ್ಲಿ ಆಧುನಿಕ ಕಟ್ಟಡಗಳು ತಲೆಯೆತ್ತುತ್ತಿರುವ ಸಂದರ್ಭ  ಆಗಿನ ಕಾಲದ ಹಳೆಯ ಕಟ್ಟಡಗಳನ್ನು ಸೌಂದರ್ಯವನ್ನು ತನ್ನ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ.

    ಅವರ ಕಲಾಕೃತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು  ವಿನೂತನವಾದ ವಿಚಾರಧಾರೆ ಕೊಡುವಂತಿದೆ.  ಸಾಮಾನ್ಯವಾಗಿ ಮಂಗಳೂರು ಹಳ್ಳಿಯ ಸುತ್ತಮುತ್ತಲಿನ ಎಲ್ಲಾ ವಿಚಾರಗಳನ್ನು ಚಿತ್ರಗಳಲ್ಲಿ ಬಿಂಬಿಸಿದ್ದಾರೆ.

    ಮಂಗಳೂರಿನ ಕಾಳಿಕಾಂಬಾ ರಸ್ತೆ. ಹಳೆಯ ಬಂದರು. ವೆಂಕಟರಮಣ ದೇವಾಲಯದ ಬೀದಿ. ಕ್ಲಾಕ್ ಟವರ್. ಭೈರವೇಶ್ವರ ದೇವಾಲಯ. ಸರ್ಕಾರಿ ಮಹಿಳಾ ಕಾಲೇಜು ಬಲ್ಮಟ್ಟ. ಮಾಲಿಂಗೇಶ್ವರ ದೇವಸ್ಥಾನ ಗಾಂಧಿನಗರ. ಮಂಗಳೂರಿನ ಮಣ್ಣಗುಡ್ಡ. ತುಂಬೆ ನದಿಯ ತೀರ ಹೀಗೆ ಎಲ್ಲ ವಿಚಾರಗಳನ್ನು ತಮ್ಮ ಜಲವರ್ಣ ಚಿತ್ರಗಳಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ. ಇವರ ಕಲಾತ್ಮಕತೆಯನ್ನು ಎಲ್ಲರೂ ಒಂದು ಕ್ಷಣ ಮೆಚ್ಚಲೇಬೇಕು.

    ಇವರು ಸಾಮಾನ್ಯವಾಗಿ ಏಕವ್ಯಕ್ತಿ ಕಲಾ ಪ್ರದರ್ಶನ ಸಮೂಹ ಕಲಾಪ್ರದರ್ಶನವನ್ನು ರಾಜ್ಯಮಟ್ಟದಲ್ಲಿ ಮಂಡಿಸಿದ್ದಾರೆ. ಇವರು ಹಲವಾರು ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಶಾಲಾ ಮಟ್ಟದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಮೂಲಕವಾಗಿ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಕಲಾತ್ಮಕ ಸೇವೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!