18.1 C
Karnataka
Monday, November 25, 2024

    ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗಬೇಕು: ಸಿಎಂ

    Must read

    BELAGAVI DEC 22

    ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಬೆಳಗಾವಿಯ ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡದ ಹೊಸ ನಿವೇಶನದಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಟ್ಟಡಗಳ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

    ಇಂದಿನ ಸವಾಲುಗಳ ಹಾಗೂ ಬದಲಾವಣೆಯ ಯುಗದಲ್ಲಿ ಫ್ಲೆಕ್ಸಿಬಲ್ ಆದ ಶಿಕ್ಷಣ ವ್ಯವಸ್ಥೆ ಅತ್ಯಂತ ಅವಶ್ಯಕ. ಪಠ್ಯದಲ್ಲಿರುವ ವಿದ್ಯೆ ಹಾಗೂ ಜಗತ್ತಿನಲ್ಲಿ ಬಳಕೆಯಾಗುತ್ತಿರುವ ವಿದ್ಯೆಯಲ್ಲಿ ಬಹಳಷ್ಟು ಅಂತರ ಇದೆ. ಇವರೆಡರ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸಲು ಎನ್‍ಇಪಿಯನ್ನು ಜಾರಿಗೊಳಿಸಲಾಗಿದೆ. ಇಂದಿನ ಪೀಳಿಗೆ ಯಾವುದೇ ಸವಾಲುಗಳನ್ನು ಆತ್ಮಸ್ಥೈರ್ಯ, ಧೈರ್ಯದಿಂದ ಎದುರಿಸಲು ಜ್ಞಾನದ ಬಲ ಇರಬೇಕು. ಎನ್‍ಇಪಿ ಈ ಜ್ಞಾನದ ಬಲವನ್ನು ನೀಡುತ್ತದೆ ಎಂದು ತಿಳಿಸಿದರು.

    ವಿಶ್ವವಿದ್ಯಾಲಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಬದ್ಧತೆ :
    ಕಿತ್ತೂರು ರಾಣಿ ಚೆನ್ನಮ್ಮ ಆತ್ಮಸ್ಥೈರ್ಯ, ಧೈರ್ಯದಿಂದ ಹೋರಾಡಿದ ಮೊದಲನೆಯ ಮಹಿಳಾ ಸ್ವತಂತ್ರ ಹೋರಾಟಗಾರರಾಗಿ ಬ್ರಿಟಿಷರನ್ನು ಮೆಟ್ಟಿನಿಂತದ್ದು ಈಗ ಇತಿಹಾಸ. ಬ್ರಿಟೀಷರನ್ನು ಹಿಮ್ಮೆಟ್ಟಿಸುವಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಬಹಳ ದೊಡ್ಡದು. ರಾಣಿ ಚೆನ್ನಮ್ಮನೇ ಈ ವಿಶ್ವವಿದ್ಯಾಲಯದ ಸ್ಪೂರ್ತಿ. ಈ ವಿಶ್ವವಿದ್ಯಾಲಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಬದ್ಧತೆ, ಸ್ಪಷ್ಟತೆ ವಿಶ್ವವಿದ್ಯಾಲಯದ ಪ್ರತಿಯೊಬ್ಬರಿಗೂ ಇರಬೇಕು. ವಿಭಿನ್ನ, ವಿನೂತನ ಪ್ರಯೋಗ ಕಾರ್ಯಕ್ರಮಗಳನ್ನು ರೂಪಿಸಿ, ಸಮಕಾಲೀನ ಸವಾಲುಗಳನ್ನು ಎದುರಿಸುವ ಹಾಗೂ ವೈಚಾರಿಕತೆಯಿಂದ ಸಮಾಜದಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಕೇಂದ್ರಗಳಾಗಬೇಕು. ಕೇವಲ ಡಿಗ್ರಿ ಪಡೆಯಲು ಸೀಮಿತವಾಗಿರಬಾರದು. ಆಧುನಿಕ ತಂತ್ರಜ್ಞಾನ ಹಾಗೂ ಜ್ಞಾನ ಕ್ಷೇತ್ರದಲ್ಲಿನ ಬದಲಾವಣೆ ಹಾಗೂ ಬೆಳವಣಿಗೆಯ ವೇಗಕ್ಕೆ ಸರಿಸಮಾನವಾದ ಚಿಂತನೆಯನ್ನು ವಿಶ್ವವಿದ್ಯಾಲಯಗಳು ಮಾಡಬೇಕು. ಅವಿಷ್ಕಾರಗಳನ್ನು ಮಾಡುವ ಕೇಂದ್ರವಾಗಬೇಕು. ಸಂಶೋಧನೆಗಳಲ್ಲಿ ಸ್ವಂತಿಕೆ, ಹೊಸತನ ಹಾಗೂ ವಿಭಿನ್ನತೆ ಇರಬೇಕು ಎಂದು ತಿಳಿಸಿದರು.

    ತರ್ಕಬದ್ಧ ಚಿಂತನೆಗೆ ಅವಕಾಶ:ವಿಶ್ವವಿದ್ಯಾಲಯಗಳು ತರ್ಕಬದ್ಧ ಹಾಗೂ ಲ್ಯಾಟರಲ್ ಚಿಂತನೆಗೆ ಅವಕಾಶ ನೀಡುವ ಜ್ಞಾನದ ಕೇಂದ್ರವಾಗಬೇಕು. ವಿದ್ಯಾರ್ಜನೆಗೆ ಪೂರಕವಾದ ಪರಿಸರ ವಿಶ್ವವಿದ್ಯಾಲಯದಲ್ಲಿ ದೊರೆಯಬೇಕು.ವಿಶ್ವವಿದ್ಯಾಲಯದಲ್ಲಿರುವವರು ತಮ್ಮ ಸೀಮಿತ ಪ್ರಪಂಚದಿಂದ ಹೊರಗೆ ಬರಬೇಕು. ಸಂಶೋಧನೆಗಳನ್ನು ಸಮರ್ಥಿಸಿಕೊಳ್ಳದೇ ಉಳಿದವರು ಅದರ ಉಪಯುಕ್ತತೆಯನ್ನು ನಿರ್ಧರಿಸಲಿ. ವಿಶ್ವವಿದ್ಯಾಲಯಗಳಿಗೆ ಕುಲಪತಿಗಳೇ ಮುಂದಾಳತ್ವ ವಹಿಸುವ ನಾಯಕ. ಅವರು ಇತರರಿಗೆ ಉದಾಹರಣೆಯಾಗಬೇಕು. ಮಾರ್ಗದರ್ಶನ ತೋರಬೇಕು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಸರ್ಕಾರ ಬೆಂಬಲಕ್ಕೆ ನಿಲ್ಲುತ್ತದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ನನ್ನ ಹೃದಯಕ್ಕೆ ಬಹಳ ಹತ್ತಿರವಾದದ್ದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ವಿಶ್ವವಿದ್ಯಾಲಯ ಜಗತ್ತಿಗೆ ಜ್ಞಾನದ ಸಂಪರ್ಕ ಕೊಂಡಿ :
    ವಿಶ್ವವಿದ್ಯಾಲಯಕ್ಕೆ ಸುಂದರ ಪರಿಸರ, ರಸ್ತೆ, ಮೂಲಸೌಕರ್ಯಗಳನ್ನು ಒಳಗೊಂಡ ಕಟ್ಟಡವನ್ನು ಒಂದು ವರ್ಷದಲ್ಲಿ ಮುಗಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಕಟ್ಟಡದ ಪ್ರತಿಯೊಂದು ಕೊಠಡಿಯು ಡಿಜಿಟಲೈಸ್ ಆಗಬೇಕು. ಜಗತ್ತಿಗೆ ಜ್ಞಾನದ ಸಂಪರ್ಕ ಕೊಂಡಿಯಂತಿರಬೇಕು. ಇದು ಜ್ಞಾನದ ಶತಮಾನ. ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ. ವಿಶ್ವವಿದ್ಯಾಲಯಗಳ ಸಂಶೋಧನೆಯನ್ನು ಇಡೀ ವಿಶ್ವ ಒಪ್ಪಿಕೊಂಡರೆ ಅದರ ಉಪಯುಕ್ತತೆ ಹೆಚ್ಚುತ್ತದೆ. ವಿಶ್ವವಿದ್ಯಾಲಯದಲ್ಲಿ ಕಳೆದ 10 ವರ್ಷದಲ್ಲಿ ಕೈಗೊಂಡಿರುವ ಪಿಹೆಚ್‍ಡಿ ಸಂಶೋಧನೆ ಹಾಗೂ ಅದರ ಉಪಯುಕ್ತತೆ ಬಗ್ಗೆ ವಿಶ್ಲೇಷಣೆಯನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಸಿಎಂ ಅಶ್ವಥ್ ನಾರಾಯಣ, ಶಶಿಕಲಾ ಜೊಲ್ಲೆ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ ಮಹಾಂತೇಶ ಕವಟಗಿಮಠ, ಅರುಣ ಶಾಹಪೂರ, ಹನಮಂತ ನಿರಾಣಿ, ವಿಧಾನಪರಿಷತ್ ಚುನಾವಣೆಯಲ್ಲಿ ಜಯಶಾಲಿ ಯಾಗಿರುವ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!