2022 ರ ಹೊಸ ವರ್ಷದ ಶುಭಾಶಯಗಳು
ಷೇರುಪೇಟೆಯ ಚಟುವಟಿಕೆಯಲ್ಲಿ ಹೂಡಿಕೆಯ ಉದ್ದೇಶವಾಗಿದ್ದಲ್ಲಿ ಆಯ್ಕೆಗಳು ಅನೇಕ ವಿಧಗಳಲ್ಲಿ ಲಭ್ಯವಿರುತ್ತವೆ. ಕೆಲವರಿಗೆ ನಿಯತಕಾಲಿಕವಾಗಿ ಆದಾಯದ ನಿರೀಕ್ಷೆ ಇದ್ದರೆ, ಕೆಲವರಿಗೆ ಹೂಡಿಕೆಯು ದೀರ್ಘಕಾಲೀನವಾಗಿ ಉತ್ತಮ ಬೆಳವಣಿಗೆಯ ನಿರೀಕ್ಷೆ, ಮತ್ತೆ ಕೆಲವರಿಗೆ ವ್ಯವಹಾರಿಕ ರೀತಿ ಚಟುವಟಿಕೆ ನಡೆಸುವ ಹಂಬಲ. ಹೀಗೆ ಹತ್ತಾರು ಚಿಂತನೆಗಳು ಪೇಟೆಗೆ ಬಹುಮುಖ ಚಾಲನೆ ನೀಡುತ್ತವೆ. ಇವುಗಳೆಲ್ಲದರ ಮಧ್ಯೆ ಸುರಕ್ಷತೆಗೆ ಆಧ್ಯತೆ ನೀಡುವುದು ಅಗತ್ಯ. ಕಾರಣ ಷೇರುಪೇಟೆಯ ಚಟುವಟಿಕೆಯ ರಭಸದಲ್ಲಿ ಭಾವನಾತ್ಮಕ ನಿರ್ಧಾರಗಳಿಗೊಳಗಾದಲ್ಲಿ ಹೂಡಿಕೆ ಹಣವು ಕರಗುವುದರ ವೇಗ ಅತಿ ಹೆಚ್ಚು.
*2021 ರ ಜನವರಿ 1 ರಂದು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ನೋಂದಾಯಿತ ಗ್ರಾಹಕರ ಸಂಖ್ಯೆ 5.89 ಕೋಟಿ ಇತ್ತು. ಕಾಕತಾಳೀಯ ಎಂಬಂತೆ ಡಿಸೆಂಬರ್ 31 ರಂದು ಅದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯದಿನದಂದು 5.89 ಕೋಟಿಯಿದೆ. ಆದರೆ ಡಿಸೆಂಬರ್ 31 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.9.18 ಕೋಟಿಗೆ ಏರಿಕೆಯಾಗಿದೆ. ಅಂದರೆ ಶೇ.50 ಕ್ಕೂ ಹೆಚ್ಚಿನ ಬೆಳವಣಿಗೆಯಾಗಿದೆ. ಅಂದರೆ ನೋಂದಾಯಿತ ಗ್ರಾಹಕರ ಸಂಖ್ಯೆ ಈ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಪೇಟೆಯಲ್ಲಿ ವೈವಿಧ್ಯಮಯ ಚಿಂತನೆಯಿಂದ ಏರಿಳಿತಗಳನ್ನು ಕಾಣಬಹುದಾಗಿದೆ. ಈ ರಭಸದ ಏರಿಳಿತಗಳು ಸೃಷ್ಟಿ ಮಾಡುವ ಅನೇಕ ಅವಕಾಶಗಳು ಮಿಂಚಿನಂತೆ ಪ್ರತ್ಯಕ್ಷವಾಗಿ, ಸಿಡಿಲಿನಂತೆ ಮಾಯವಾಗುತ್ತಿರುವುದನ್ನು ಕಾಣುತ್ತಿದ್ದೇವೆ.
*20ನೇ ಡಿಸೆಂಬರ್ 2021 ರಂದು ಸೆನ್ಸೆಕ್ಸ್ 1,189 ಪಾಯಿಂಟುಗಳ ಕುಸಿತ ಕಂಡಾಗ ಹೆಚ್ಚಿನ ಹೂಡಿಕೆದಾರರ ಜಂಗಾಬಲವನ್ನೇ ಕುಸಿಯುವಂತೆ ಮಾಡಿತು. ಅಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.252.57 ಲಕ್ಷ ಕೋಟಿಗೆ ಜಾರಿತ್ತು. ಅದೇ 14 ನೇ ಡಿಸೆಂಬರ್ ನಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.265.97 ಲಕ್ಷ ಕೋಟಿಯಲ್ಲಿತ್ತು. 29, ಡಿಸೆಂಬರ್ 2021 ರಂದು ಮತ್ತೆ ರೂ.266 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ನವೆಂಬರ್ 17,2021 ರಂದು ರೂ.271.08 ಲಕ್ಷ ಕೋಟಿಯಲ್ಲಿದ್ದ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.252.57 ಲಕ್ಷಕ್ಕೆ ಕುಸಿದು ಮತ್ತೆ ರೂ.266 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಮಾರ್ಕೆಟ್ ನಲ್ಲಿ ವಹಿವಾಟು ಸೀಮಿತವಾದ ರೀತಿಯಲ್ಲಿ ನಡೆಯುತ್ತಿದ್ದು ಚಕ್ರಾಕಾರದ ಶೈಲಿಯಲ್ಲಿದೆ.
*ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಆಡಳಿತ ಮಂಡಳಿಯು ಈ ತಿಂಗಳ 8 ರಂದು ಬೋನಸ್ ಷೇರು ವಿತರಣೆಯನ್ನು ಪರಿಶೀಲಿಸಲಿದೆ. ಈ ಕಾರಣ ಈ ಷೇರಿನ ಬೆಲೆಯು ಹೆಚ್ಚು ತೂಗುಯ್ಯಾಲೆಯಲ್ಲಿ ಏರಿಳಿತ ಕಂಡಿತು. ಇದರ ಅಂಸ ಸಂಸ್ಥೆ ಸಿ ಡಿ ಎಸ್ ಎಲ್ ಸಹ ಹೆಚ್ಚಿನ ಏರಿಳಿತ ಪ್ರದರ್ಶಿಸಿತು.
*ಮಜ್ ಗಾಂವ್ ಡಾಕ್ ಶಿಪ್ ಬ್ಯುಲ್ಡರ್ಸ್ ಕಂಪನಿಯು ಪ್ರತಿ ಷೇರಿಗೆ ರೂ.7.10 ರ ಡಿವಿಡೆಂಡ್ ಘೋಷಿಸಿದೆ. ನಿಗದಿತ ದಿನಾಂಕ 7ನೇ ಜನವರಿ 2022.
* ಈ ತಿಂಗಳಲ್ಲಿ ಟಿಸಿಎಸ್, ವಿಪ್ರೋ, ಹೆಚ್ ಸಿ ಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಬಜಾಜ್ ಸಮೂಹದ ಕಂಪನಿಗಳು, ಡಾಕ್ಟರ್ ರೆಡ್ಡೀಸ್ ಲ್ಯಾಬ್ ಮುಂತಾದ ಅಗ್ರಮಾನ್ಯ ಕಂಪನಿಗಳು ತಮ್ಮ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸುವ ಕಾರ್ಯಸೂಚಿ ಘೋಷಿಸಿವೆ. ಟಿಸಿಎಸ್, ಎಚ್ ಸಿ ಎಲ್ ಟೆಕ್ನಾಲಜೀಸ್ ನಂತಹ ಕಂಪನಿಗಳು ಡಿವಿಡೆಂಡ್ ಘೋಷಿಸುವ ನಿರ್ಧಾರವನ್ನೂ ಸಹ ಪ್ರಕಟಿಸಿವೆ.
ವಿಸ್ಮಯಕಾರಿ ಗುಣ:
ಹೂಡಿಕೆ ಮಾಡುವಾಗ ಕಂಪನಿಯು ಉತ್ತಮ
ವಲಯದಲ್ಲಿದ್ದು, ಕಂಪನಿಯ ಆಡಳಿತ ಮಂಡಳಿಯು ಹೂಡಿಕೆದಾರರ ಸ್ನೇಹಿಯಾಗಿದ್ದರೆ ಯಾವ ರೀತಿ ಕಂಪನಿಯ ಷೇರುಗಳು ಕುಸಿತದಿಂದ ಪುಟಿದೇಳಬಹುದೆಂಬುದಕ್ಕೆ ಉದಾಹರಣೆ ಇಂತಿದೆ.
ಎವರೆಸ್ಟ್ ಕ್ಯಾಂಟೋ ಸಿಲಿಂಡರ್ ಲಿಮಿಟೆಡ್: ಈ ಕಂಪನಿ 2005 ರಲ್ಲಿ ಪ್ರತಿ ಷೇರಿಗೆ ರೂ.160 ರಂತೆ ರೂ.10 ರ ಮುಖಬೆಲೆಯ ಆರಂಭಿಕ ಷೇರು ವಿತರಣೆ ಮಾಡಿತು. 2007 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲಾಯಿತು. 2008 ರಲ್ಲಿ ಷೇರಿನ ಬೆಲೆಯು ರೂ,380 ರ ಸಮೀಪಕ್ಕೆ ಜಿಗಿದಿದ್ದು 2009 ರಲ್ಲಿ ರೂ.238 ರ ಸಮೀಪದಲ್ಲಿತ್ತು. ಅಲ್ಲಿಂದ ಏಕಮುಖವಾಗಿ ಇಳಿಕೆ ಕಂಡು 2013 ರಿಂದ 2015 ರವರೆಗೂ ಹಲವು ಬಾರಿ ಏಕ ಅಂಕಿಯ ಬೆಲೆಗೆ ಕುಸಿದಿತ್ತು. 2020 ರಲ್ಲಿ ರೂ.10 ರ ಸಮೀಪವೂ ಇತ್ತು. ಈ ವರ್ಷ ಷೇರಿನ ಕನಿಷ್ಠಬೆಲೆಯು ರೂ.40 ರ ಸಮೀಪವಿದ್ದು ಶುಕ್ರವಾರದಂದು ರೂ.239 ರ ವಾರ್ಷಿಕ ಗರಿಷ್ಠಕ್ಕೆ ಜಿಗಿತ ಕಂಡು ತನ್ನ ದಶಕದ ಹಿಂದಿನ ಬೆಲೆಗಳನ್ನು ದಾಟಿ ವಿಭಿನ್ನತೆಯನ್ನು ಪ್ರದರ್ಶಿಸಿದೆ.
- ಡಿಸೆಂಬರ್ ತಿಂಗಳಲ್ಲಿಯೂ ಜಿ ಎಸ್ ಟಿ ಸಂಗ್ರಹಣೆಯು ರೂ.1.29 ಲಕ್ಷ ಕೋಟಿಗೆ ತಲುಪಿದೆ. ಕಳೆದ ಆರು ತಿಂಗಳಿನಿಂದಲೂ ಸತತವಾಗಿ ರೂ.1.00 ಲಕ್ಷ ಕೋಟಿಗೂ ಹೆಚ್ಚು ಸಂಗ್ರಹಣೆಯಾಗುತ್ತಿದೆ.
ಕೊನೆಯದಾಗಿ ಈಗಾಗಲೇ ಪೇಟೆಗಳು ಉತ್ತುಂಗದಲ್ಲಿರುವುದರಿಂದ, ಸಧ್ಯ ಓಮೈಕ್ರಾನ್ ಸಾಂಕ್ರಾಮಿಕವು ಹೆಚ್ಚಾಗುತ್ತಿರುವುದರಿಂದ ಅತ್ತ ಕಡೆಯೂ ಗಮನಹರಿಸಿ ಎಚ್ಚರಿಕೆಯ ವಹಿವಾಟು ನಡೆಸುವುದು ಇಂದಿನ ಅಗತ್ಯವಾಗಿದೆ. ಶುಭವಾಗಲಿ.
ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.